ಬೆಂಗಳೂರು: ದೇವಾಲಯದ ಬಳಿ ಒತ್ತುವರಿಯಾಗಿದೆ ಎಂಬ ನೆಪವೊಡ್ಡಿ ಮಂಗಳವಾರ ಬೆಳಗ್ಗೆ ಪಾಲಿಕೆಯ ಜೆಸಿಬಿ ಗರ್ಜಿಸಿತ್ತು. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಎಸ್‌ಪಿ ರೋಡ್‌ನ ಧರ್ಮರಾಯ ದೇವಸ್ಥಾನ (Temple demolition) ಪಕ್ಕದಲ್ಲಿರುವ ಜಲಕಂಠೇಶ್ವರ ದೇವಸ್ಥಾನದ ಗೋಡೆಯನ್ನು ಸ್ಥಳೀಯ ಪಾಲಿಕೆಯ ಅಧಿಕಾರಿಗಳು ತೆರವು ಮಾಡಿದ್ದಾರೆ.
ಲೋಕಾಯುಕ್ತ ಕಛೇರಿಗೆ ದೂರು ಬಂದ ಹಿನ್ನೆಲೆ ದೇವಸ್ಥಾನಕ್ಕೆ ಹಾಕಿದ್ದ ಶೀಟ್‌ಗಳನ್ನು ಮಾತ್ರ ಪಾಲಿಕೆಯ ಅಧಿಕಾರಿಗಳು ತೆರವು ಮಾಡಬೇಕಿತ್ತು. ಆದರೆ ಶೀಟ್ ಕೆಡವಲು ಹೋಗಿ ದೇವಾಲಯದ ಗೋಡೆಯನ್ನೂ ಕೆಡವಿದ್ದಾರೆ. ಈ ವೇಳೆ ಗೋಡೆಯ ಹೊರ ಭಾಗದಲ್ಲಿದ್ದ ನಂದಿ ವಿಗ್ರಹಕ್ಕೆ ಹಾನಿಯಾಗಿದೆ.
ಇತಿಹಾಸ ಪ್ರಸಿದ್ಧ ಜಲಕಂಠೇಶ್ವರ ದೇವಾಲಯವನ್ನು ನೆಲಸಮ ಮಾಡಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಬಿಬಿಎಂಪಿ ಕೂಡಲೆ ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ. ಇತ್ತ ದೇವಸ್ಥಾನ ಬಿದ್ದ ಕ್ಷಣ ಪಾಲಿಕೆ ಅಧಿಕಾರಿಗಳು ಹಾಗು ಸಿಬ್ಬಂದಿ ಸ್ಥಳದಿಂದ ಪರಾರಿ ಆಗಿದ್ದಾರೆ.
ನಗರದಲ್ಲಿರುವ ಐತಿಹಾಸಿಕ ಹಾಗೂ ಪುರಾತನ ದೇವಸ್ಥಾನವೊಂದರ ಗೋಡೆಯನ್ನು ಬಿಬಿಎಂಪಿ ಕೆಡವಿ ಹಾಕಿದೆ. ಯಾರಿಗೂ ಮಾಹಿತಿ ನೀಡದೇ, ಯಾರ ಅನುಮತಿಯೂ ಪಡೆಯದೇ ಗೋಡೆ ಉರುಳಿಸಿರುವುದು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದೆ.
ಎಂಜಿನಿಯರ್ ವಿರುದ್ಧ ದೂರು ದಾಖಲು
ಸ್ಥಳದಲ್ಲಿ ಜನರ ಜಮಾವಣೆ ಆಗುತ್ತಿದ್ದಂತೆ ಮಾಜಿ ಶಾಸಕ ಆರ್.ವಿ ದೇವರಾಜ್ ಹಾಗೂ ಹಾಲಿ ಶಾಸಕ ಉದಯ್ ಗರುಡಚಾರ್ ಭೇಟಿ ನೀಡಿದರು. ಯಾವುದೇ ಮಾಹಿತಿಯನ್ನು ನೀಡದೇ ಪುರಾತನ ದೇವಸ್ಥಾನಕ್ಕೆ ಹಾನಿ ಮಾಡಿದ್ದಾರೆಂದು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಸಂಬಂಧಪಟ್ಟ ಎಂಜಿನಿಯರ್‌ಗಳ ವಿರುದ್ಧ ದೂರು ನೀಡಿದ್ದಾರೆ.
ಬಿಬಿಎಂಪಿ ನಡೆಗೆ ಶಾಸಕ ಉದಯ್ ಗರುಡಚಾರ್ ಗರಂ
ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಜಲಕಂಠೇಶ್ವರ ದೇವಸ್ಥಾನ ಬರಲಿದೆ. ಈ ದೇವಸ್ಥಾನದ ಪಕ್ಕದಲ್ಲಿಯೇ ಅಂಗಡಿಯೊಂದು ಇತ್ತು. ಅಂಗಡಿಯ ಶೀಟ್‌ಗಳನ್ನು ತೆರವು ಮಾಡಲು ಹೋಗಿ, ದೇವಸ್ಥಾನದ ಗೋಡೆಯನ್ನೇ ಒಡೆದು ಪಾಲಿಕೆಯ ಅಧಿಕಾರಿಗಳು ಯಡವಟ್ಟು ಮಾಡಿದ್ದಾರೆ. ಈ ಬಗ್ಗೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ದೀಪಾಶ್ರೀ ಮಾತನಾಡಿದ್ದು, ಬಿಬಿಎಂಪಿಯಿಂದ ಯಾವುದೇ ನೋಟಿಸ್ ನೀಡದೇ ದೇವಸ್ಥಾನದ ಗೋಡೆ ಕೆಡವಲಾಗಿದೆ. ಈ ಕುರಿತು ಈಗಾಗಲೇ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ