Site icon Vistara News

Temple Grant Stopped : ದೇಗುಲಗಳ ಅನುದಾನ ತಡೆ ಆದೇಶ ವಾಪಸ್‌; ಭುಗಿಲೆದ್ದ ಆಕ್ರೋಶಕ್ಕೆ ಮಣಿದ ಸರ್ಕಾರ

Temple grant stop order revoked

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ (Renovation of Temples) 2022-23ನೇ ಸಾಲಿನಲ್ಲಿ ಬಿಡುಗಡೆಯಾದ ಅನುದಾನವನ್ನು ತಡೆ (Temple Grant Stopped) ಹಿಡಿಯುವಂತೆ ಸೂಚಿಸಿದ್ದ ಆದೇಶವನ್ನು ಮುಜರಾಯಿ ಇಲಾಖೆ (Muzrai Department) ವಾಪಸ್‌ ಪಡೆದಿದೆ. ರಾಜ್ಯ ಸರ್ಕಾರ (Government of Karnataka) ಗ್ಯಾರಂಟಿ ಯೋಜನೆಗಳಿಗೆ (Congress Guarantee) ಹಣ ಹೊಂದಿಸಿಕೊಳ್ಳುವುದಕ್ಕಾಗಿ ದೇವಸ್ಥಾನಗಳ ಅನುದಾನಕ್ಕೇ ಕತ್ತರಿ ಹಾಕಿದೆ ಎಂಬ ಆಕ್ರೋಶ ಭುಗಿಲೆದ್ದ ಬೆನ್ನಿಗೆ ಸರ್ಕಾರ ತನ್ನ ನಿರ್ಧಾರವನ್ನು ವಾಪಸ್‌ ಪಡೆದಿದೆ. ಸ್ವತಃ ಮುಜರಾಯಿ ಮಂತ್ರಿ ರಾಮಲಿಂಗಾ ರೆಡ್ಡಿ (Ramalinga reddy) ಅವರೇ ಇದನ್ನು ಸ್ಪಷ್ಟಪಡಿಸಿದ್ದಾರೆ.

ಮುಜರಾಯಿ ಇಲಾಖೆಯ ಆಯುಕ್ತರು ರಾಜ್ಯದ ಎಲ್ಲ ಜಿಲ್ಲಾಡಳಿತಗಳಿಗೆ ಆದೇಶವೊಂದನ್ನು ಹೊರಡಿಸಿ ಮೂರು ಅಂಶಗಳನ್ನು ಗಮನಿಸಿ ಅನುದಾನ ವಾಪಸ್‌ಗೆ ಸೂಚಿಸಿದ್ದರು.

  1. 2022-23ನೇ ಸಾಲಿನಲ್ಲಿ ಬಿಡುಗಡೆಯಾಗಿರುವ ಅನುದಾನದಲ್ಲಿ, ದೇವಸ್ಥಾನ ಜೀರ್ಣೋದ್ದಾರ ಕಾಮಗಾರಿ ಇನ್ನೂ ಪ್ರಾರಂಭ ಆಗದಿದ್ದರೆ ಹಣ ಬಿಡುಗಡೆ ಮಾಡಬಾರದು.
  2. ಶೇ‌. 50ರಷ್ಟು ಹಣ ಬಿಡುಗಡೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದರೆ ತಕ್ಷಣ ಅನುದಾನ ತಡೆ ಹಿಡಿಯಬೇಕು
  3. ಅನುದಾನದ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದರೆ ಆಡಳಿತಾತ್ಮಕ ಮಂಜೂರಾತಿಯನ್ನು ತಡೆಹಿಡಿಯಬೇಕು
    ಎಂಬ ಮೂರು ವಿಚಾರಗಳನ್ನು ಪ್ರಸ್ತಾಪಿಸಿ ಜೀರ್ಣೋದ್ಧಾರ ಎನ್ನುವ ಮೂರು ವಿಷಯಗಳನ್ನು ಪ್ರಸ್ತಾಪಿಸಿ ದೇವಸ್ಥಾನಗಳ ಜೀರ್ಣೋದ್ಧಾರ ಅನುದಾನ ಬಿಡುಗಡೆ ತಡೆಹಿಡಿಯಲು ಸೂಚಿಸಲಾಗಿತ್ತು.
ಅನುದಾನ ತಡೆಗೆ ನೀಡಿದ ಆದೇಶದ ಪ್ರತಿ

ವ್ಯಕ್ತವಾಗಿತ್ತು ವ್ಯಾಪಕ ಆಕ್ರೋಶ, ಪ್ರತಿಭಟನೆ ಮಾಡ್ತೀವಿ ಎಂದ ಜೊಲ್ಲೆ

ಸರ್ಕಾರದ ಈ ಆದೇಶದ ವಿರುದ್ಧ ಹಿಂದು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಹಿಂದಿನ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದರು.

“ಭಾರತೀಯ ಸಂಸ್ಕೃತಿಯಲ್ಲಿ ದೇವಸ್ಥಾನಗಳಿಗೆ ಮಹತ್ವ ಇದೆ, ಜನರ ಅವಿನಾಭಾವ ಸಂಬಂಧ ಇದೆ, ನಾನು ಸಚಿವೆ ಆದಾಗ ಕರ್ನಾಟಕದ ಭಕ್ತಾದಿಗಳು ಹೋಗುವ ಮಹಾರಾಷ್ಟ್ರದ ದೇವಸ್ಥಾನಗಳಲ್ಲೂ ಯಾತ್ರಿ‌ ನಿವಾಸ ಮಾಡುವ ಪ್ರಯತ್ನ ಮಾಡಿದ್ದೆವು. ಕರ್ನಾಟಕದ ಭವ್ಯ ಪರಂಪರೆಯುಳ್ಳ ದೇವಸ್ಥಾನಗಳ ಅಭಿವೃದ್ದಿಗೆ ಅನುದಾನ‌ ಬಿಡುಗಡೆ ಮಾಡಿದ್ದೆವು. ಆದರೆ ಈಗಿನ ಸರ್ಕಾರ ದೇವಾಲಯಗಳ ಅನುದಾನವನ್ನು ತಡೆಹಿಡಿಯಲು ಆದೇಶ ಹೊರಡಿಸಿರುವುದು ಸರಿಯಲ್ಲʼʼ ಎಂದು ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ʻʻಯಾವ ದೇವಸ್ಥಾನಗಳಲ್ಲಿ ಕೆಲಸ ಹೇಗಾಗ್ತಿದೆ ಎಂದು ತಿಳಿದುಕೊಳ್ಳುವ ಆದೇಶವನ್ನೂ ಸಹ ಮಾಡಿದ್ದರೆ ಅದನ್ನು ಸ್ವಾಗತ ಮಾಡುತ್ತೇನೆ. ಮೊದಲನೇ ಕಂತು ಬಿಡುಗಡೆಯಾಗಿ ಎರಡನೇ ಕಂತು ಬಿಡುಗಡಯಾಗುವ ವೇಳೆ ಚುನಾವಣೆ ನೀತಿ ಸಂಹಿತೆ ಬಂತು. ಹೀಗಾಗಿ ಎರಡನೇ ಅನುದಾನ ಬಿಡುಗಡೆ ಆಗಿಲ್ಲ. ಸರ್ಕಾರದಿಂದ ಕೊಡುವ ಅನುದಾನದ‌ ಜತೆಗೆ ಅಲ್ಲಿನ ಕಮಿಟಿಯವರು ತಮ್ಮದೇ ಹಣ ಹಾಕಿ ಜೀರ್ಣೋದ್ಧಾರ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಎರಡನೇ ಎರಡನೇ ಕಂತು ಬಿಡುಗಡೆ ಮಾಡಬಾರದು ಎಂದು ಆದೇಶ ಮಾಡಿದ್ದಾರೆ. ಆಡಳಿತಾತ್ಮಕ ಮಂಜೂರಾತಿ ಮಾಡಲಾಗಿದೆ ಅದನ್ನೂ ಸಹ ಬಿಡುಗಡೆ ಮಾಡಬಾರದು ಎಂದು ಆದೇಶ ಮಾಡಿದ್ದಾರೆ. ಸರ್ಕಾರದ ಈ ನಡೆಯನ್ನು ನಾನು ಖಂಡಿಸುತ್ತೇನೆ” ಎಂದು ಜೊಲ್ಲೆ ಹೇಳಿದ್ದಾರೆ.

ʻʻಎರಡನೇ ಕಂತನ್ನು ಬಿಡುಗಡೆ ಮಾಡಬೇಕುʼʼ ಎಂದು ಸಚಿವರಲ್ಲಿ ಮನವಿ ಮಾಡಿದ ಮಾಜಿ ಸಚಿವೆ ಜೊಲ್ಲೆ, ಒಂದು ವೇಳೆ ಅನುದಾನ‌ ಬಿಡುಗಡೆ ಮಾಡದಿದ್ದರೆ ಪ್ರತಿಭಟನೆ‌ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಆದೇಶ ವಾಪಸ್‌ ಪಡೆಯಲು ರಾಮಲಿಂಗಾ ರೆಡ್ಡಿ ಸೂಚನೆ

ಇತ್ತ ದೇಗುಲಗಳ ಅನುದಾನ ವಾಪಸ್‌ ಆದೇಶದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಪ್ರತಿಕ್ರಿಯಿಸಿದ ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ, ದೇಗುಲಗಳ ಅನುದಾನಕ್ಕೆ ತಡೆ ನೀಡಿದ್ದ ಆದೇಶ ವಾಪಸ್ ಪಡೆಯುವಂತೆ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದರು.

ಸ್ಟೇಟಸ್‌ ರಿಪೋರ್ಟ್‌ ಕೇಳಿದ್ದಕ್ಕೆ ಸ್ಟೇ ಕೊಟ್ಟರು!

ಮುಜರಾಯಿ ಇಲಾಖೆ ಆಯುಕ್ತರು ಸ್ವಲ್ಪ ಗೊಂದಲಕ್ಕೊಳಗಾಗಿ ಆದೇಶ ಹೊರಡಿಸಿದ್ದಾರೆ. ದೇವಾಲಯಗಳ ಕಾಮಗಾರಿಯ ಪ್ರಗತಿ ಬಗ್ಗೆ ವರದಿ ಪಡೆಯುವಂತೆ ಸೂಚಿಸಲಾಗಿತ್ತು. ಸ್ಟೇಟಸ್‌ ರಿಪೋರ್ಟ್‌ ಕೇಳಿದ್ದಕ್ಕೆ ಸ್ಟೇ ಆರ್ಡರ್‌ ಕೊಟ್ಟಿದ್ದಾರೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ದೇವಾಲಯಗಳಿಗೆ ಅನುದಾನ ನೀಡುವ ವಿಚಾರದಲ್ಲಿ ಅಕ್ರಮ ನಡೆದಿದೆ ಎನ್ನುವ ಬಗ್ಗೆ ಯಾವುದೇ ಅನುಮಾನ ಇಲ್ಲ. ಆದರೆ, ಸದ್ಯಕ್ಕೆ ಯಾವ ದೇವಸ್ಥಾನದ ಕೆಲಸವನ್ನೂ ನಿಲ್ಲಿಸುವುದಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸಚಿವರ ಸೂಚನೆಯಂತೆಯೇ ಆಯುಕ್ತರು ತಮ್ಮ ಹಿಂದಿನ ಆದೇಶವನ್ನು ಹಿಂಪಡೆದಿರುವ ಸುತ್ತೋಲೆಯನ್ನು ಹೊರಡಿಸಿದ್ದಾರೆ.

ಹಿಂದಿನ ಸುದ್ದಿ: Temple Grant stopped : ದೇವಸ್ಥಾನಗಳಿಗೆ ಘೋಷಿಸಿದ್ದ ಅನುದಾನಗಳಿಗೆ ಸರ್ಕಾರ ತಡೆ; ಹಿಂದು ಸಂಘಟನೆಗಳ ಆಕ್ರೋಶ

Exit mobile version