ಶಿರಸಿ: ೧೪ನೇ ವರ್ಷಕ್ಕೆ ಕಾಲಿಟ್ಟಿರುವ ಭಗವದ್ಗೀತಾ ಅಭಿಯಾನವು ನ.೪ರಿಂದ ರಾಜ್ಯಾದ್ಯಂತ ಆರಂಭಗೊಳ್ಳಲಿದ್ದು, ಡಿಸೆಂಬರ್ ೪ರಂದು ದಾವಣಗೆರೆಯಲ್ಲಿ ಸಂಪನ್ನಗೊಳ್ಳಲಿದೆ ಎಂದು ಭಗವದ್ಗೀತಾ ಅಭಿಯಾನದ ಮುಖ್ಯಸ್ಥರು, ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಪ್ರಕಟಿಸಿದರು.
ಸ್ವರ್ಣವಲ್ಲೀಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶ್ರೀಗಳು, ಗೀತಾ ಅಭಿಯಾನದ ಭಾಗವಾಗಿ ಪ್ರಸಕ್ತ ಬಾರಿ ಐದನೇ ಅಧ್ಯಾಯವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ೨೦೦೭ರಿಂದ ಈ ಅಭಿಯಾನವು ಆರಂಭಗೊಂಡಿದ್ದು, ಸಮಾಜದಲ್ಲಿ ಸುಖ-ಶಾಂತಿ ನೆಲೆಸಲು ಹಾಗೂ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಲಾಗಿದೆ. ರಾಯಚೂರು ಜಿಲ್ಲಾ ಕಾರಾಗೃಹದಲ್ಲಿ ತಪ್ಪದೆ ಗೀತಾಭಿಯಾನ ನಡೆದಿದೆ. ಇದೇ ರೀತಿ ಅನೇಕ ಜೈಲಿನಲ್ಲಿ ಕೈದಿಗಳ ಮೂಲಕ ಅಭಿಯಾನ ನಡೆಸಲಾಗಿದೆ. ಈ ಬಾರಿಯೂ ರಾಜ್ಯದ ಎಲ್ಲ ಜೈಲಿನಲ್ಲೂ ಅಭಿಯಾನ ನಡೆಸಲು ಯೋಜಿಸಿದ್ದೇವೆ. ರಾಜ್ಯದಲ್ಲಿ ಒಟ್ಟು ಮೂರು ಹಂತದಲ್ಲಿ ಗೀತಾ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು.
ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಗೀತೆ ಕುರಿತ ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡಿದ್ದು, ರಾಜ್ಯ ಮಟ್ಟದವರೆಗೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸಾರ್ವಜನಿಕವಾಗಿ ಮೂರು ಹಂತದ ಅಭಿಯಾನಕ್ಕೆ ನ.೪ರಿಂದ ೧೦, ನ.೧೨ರಿಂದ ೧೮, ನ. ೨೦ರಿಂದ ನ.೨೬ರ ತನಕ ನಡೆಸಲು ತೀರ್ಮಾನಿಸಲಾಗಿದೆ. ಒಟ್ಟು ೮ ದಿನಗಳ ಅಭ್ಯಾಸಗಳು ಇಲ್ಲಾಗಬೇಕಿದೆ. ನ.೨೮ರಂದು ತಾಲೂಕು ಮಟ್ಟದಲ್ಲಿ ಸ್ಪರ್ಧೆ ನಡೆದರೆ, ನ.೩೦ ಜಿಲ್ಲಾ ಮಟ್ಟಕ್ಕೆ ಹಾಗೂ ಡಿ.೪ರಂದು ರಾಜ್ಯ ಮಟ್ಟದ ಸ್ಪರ್ಧೆಗಳು ನಡೆಯಲಿವೆ ಎಂದು ಸ್ವರ್ಣವಲ್ಲೀ ಶ್ರೀಗಳು ತಿಳಿಸಿದರು.
ಇದನ್ನೂ ಓದಿ | Bhagavad Gita | 2,200 ಜನರಿಂದ ಸಾಮೂಹಿಕ ಭಗವದ್ಗೀತೆ ಪಾರಾಯಣ; ಡಲ್ಲಾಸ್‌ನಲ್ಲಿ ಗಿನ್ನೆಸ್ ದಾಖಲೆ
೫ನೇ ಅಧ್ಯಾಯ ಪಠಣ
ಅಭಿಯಾನ ಕುರಿತು ಮಾಹಿತಿ ನೀಡಿದ ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ, ನ.೨೭ರಿಂದ ಏಳು ದಿನಗಳ ಕಾಲ ಪ್ರತಿ ಮನೆಯಲ್ಲಿ ೫ನೇ ಅಧ್ಯಾಯವನ್ನು ಪಠಿಸಬೇಕು. ಡಿ.೩ರಂದು ಹದಿನೆಂಟೂ ಅಧ್ಯಾಯ ಪಠಣ ಮಾಡಿ ಗೀತಾ ಜಯಂತಿ ಆಚರಿಸಬೇಕು. ಈಗಾಗಲೇ ರಾಜ್ಯಮಟ್ಟದ ಅಭಿಯಾನ ಸಮಿತಿ ರಚನೆ ಮಾಡಲಾಗಿದೆ. ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ಪ್ರಮುಖರನ್ನು ನಿಯೋಜಿಸಲಾಗಿದೆ. ಸಂಪರ್ಕಕ್ಕೆ ವೆಂಕಟ್ರಮಣ ಹೆಗಡೆ ೮೨೭೭೩೮೩೫೦೦ ಅಥವಾ ೦೮೩೮೪ ೨೭೯೩೫೯ಗೆ ಸಂಪರ್ಕ ಮಾಡಬಹುದಾಗಿದೆ ಎಂದು ತಿಳಿಸಿದರು. ಈ ವೇಳೆ ಮಠದ ವ್ಯವಸ್ಥಾಪಕ ಎಸ್.ಎನ್.ಗಾಂವಕರ್ ಇತರರು ಇದ್ದರು.
ಇದನ್ನೂ ಓದಿ | ಶಿರಸಿಯಲ್ಲಿ ಸೆ.19ರಂದು ಸಂಸ್ಕೃತ ಪ್ರತಿಭಾ ಪುರಸ್ಕಾರ