ಉಡುಪಿ: ಕರಾವಳಿಯಲ್ಲಿ ದೈವ ಮತ್ತು ದೇವರನ್ನು ಸಮಾನವಾಗಿ ಪೂಜಿಸುವ ಗೌರವಿಸುವ ಪರಿಪಾಠವಿದೆ. ಅದರಲ್ಲೂ ಕರಾವಳಿ ಭಾಗದಲ್ಲಿನ ಕೊರಗಜ್ಜ ದೈವ ಬೇಡಿದವರ ಇಷ್ಟಾರ್ಥ ನೆರವೇರಿಸುವುದರ ಜತೆಗೆ ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವ ಮೂಲಕ ಜನರ ನಂಬಿಕೆ ಉಳಿದುಕೊಂಡಿದ್ದಾನೆ. ಕರಾವಳಿ ಕೊರಗಜ್ಜನ ಮತ್ತೊಂದು ಪವಾಡದ ಬಗ್ಗೆ ಈ ಸುದ್ದಿ ಆಗಿದೆ. ನಂಬಿದವರನ್ನು ಹರಸಿ, ಇಷ್ಟಾರ್ಥಗಳನ್ನು ಈಡೇರಿಸುವ ಕೊರಗಜ್ಜ ಕುಟುಂಬವೊಂದರಲ್ಲಿ ಆರಿ ಹೋಗುತ್ತಿದ್ದ ನಂದಾದೀಪವನ್ನು ಬೆಳಗಿಸಿಕೊಟ್ಟಿರುವ ವಿದ್ಯಮಾನದ ಬಗ್ಗೆ ಚರ್ಚೆ ನಡೆಯುತ್ತಿದೆ.
ನಾಲ್ಕು ತಿಂಗಳ ಹಸುಗೂಸೊಂದು ಕೊರಗಜ್ಜನ ಕೃಪೆಯಿಂದ ಸಾವು ಗೆದ್ದು ಬಂದಿರುವ ಘಟನೆ ಇದು. ಸಾಗರ ಮೂಲದ ನಾಗಶ್ರೀ ಎಂಬುವರ ಹೆಣ್ಣು ಮಗುವಿಗೆ ವಿಪರೀತ ಜ್ವರ ಕಂಡು ಬಂದಿತ್ತು. ಎರಡು ದಿನ ಕಳೆದರೂ ಜ್ವರ ಕಡಿಮೆಯಾಗದೇ ಮಗು ಅಳು ನಿಲ್ಲಿಸುತ್ತಿರಲ್ಲಿಲ್ಲ. ಹೀಗಾಗಿ ಚಿಕಿತ್ಸೆ ನೀಡುವ ಸಲುವಾಗಿ ಕುಂದಾಪುರದ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಮಗುವನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದ ವೈದ್ಯರು, ಮಗುವಿಗೆ ಮೂರ್ಛೆ ರೋಗ ಇರುವುದಾಗಿ ತಿಳಿಸಿದ್ದರು.
ಇದಕ್ಕೆ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ತಕ್ಷಣಕ್ಕೆ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಅಸ್ಪತ್ರೆಗೆ ದಾಖಲಿಸುವಂತೆ ಕುಂದಾಪುರದ ವೈದ್ಯರು ತಿಳಿಸಿದ್ದರು. ವೈದ್ಯರ ಪರೀಕ್ಷಾ ವರದಿ ಹಿಡಿದು ಮಣಿಪಾಲ್ ಕೆಎಂಸಿ ಆಸ್ಪತ್ರೆಗೆ ಬಂದ ಪೋಷಕರು ಮಗುವನ್ನು ಚಿಕಿತ್ಸೆಗಾಗಿ ದಾಖಲಿಸಿದ್ದರು. ಅಷ್ಟರಲ್ಲಾಗಲೇ ಗಂಭೀರ ಸ್ವರೂಪದಲ್ಲಿದ್ದ ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಿದರೂ ಆರೋಗ್ಯ ಚಿಂತಾಜನಕವಾಗಿತ್ತು. ಪದೇಪದೇ ಮಗುವಿನ ಹೃದಯ ಬಡಿತ ಕ್ಷೀಣವಾಗುತ್ತಿರುವ ಬಗ್ಗೆ ವೈದರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ವೈದ್ಯರು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರೂ ಮಗುವಿನ ಪ್ರಾಣ ಉಳಿಯುವುದು ಕಷ್ಟ ಎಂದಿದ್ದರು.
ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗುವಿನ ಪರಿಸ್ಥಿತಿ ಕಂಡ ಕುಟುಂಬಸ್ಥರು ಕಂಗಾಲಾಗಿ ಹೋಗಿದ್ದರು. ಅಷ್ಟರಲ್ಲಿ ಆಸ್ಪತ್ರೆ ಬಳಿಯಿದ್ದ ಒಬ್ಬ ವ್ಯಕ್ತಿ ಕೊರಗಜ್ಜ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಸಲಹೆ ನೀಡಿದರು. ಕೂಡಲೇ ಇಂದ್ರಾಳಿ ಬಳಿಯಿರುವ ಕೊರಗಜ್ಜನ ಕ್ಷೇತ್ರಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿ ಗಂಧ, ಪ್ರಸಾದ ಪಡೆದು ತೆರಳಿದ್ದರು. ಯಾವಾಗ ಕೊರಗಜ್ಜ ಸನ್ನಿಧಾನಕ್ಕೆ ಪೋಷಕರು ಭೇಟಿ ನೀಡಿದ್ದರೊ ಆ ಕ್ಷಣದಿಂದ ಗಂಭೀರ ಸ್ಥಿತಿಯಲ್ಲಿದ್ದ ಪುಟ್ಟ ಕಂದಮ್ಮನ ಆರೋಗ್ಯ ದಿಢೀರ್ ಚೇತರಿಕೆ ಕಾಣಿಸಿಕೊಳ್ಳಲು ಪ್ರಾರಂಭಿಸಿತ್ತು. ವೈದರು ಕೂಡ ತಮ್ಮ ಪ್ರಯತ್ನಗಳನ್ನು ಮಾಡುವ ಮೂಲಕ 19 ದಿನಗಳಲ್ಲಿ ಮಗು ಆರೋಗ್ಯವಾಗಿ ಹೆತ್ತಮ್ಮಳ ಕೈಯಲ್ಲಿ ಮತ್ತೆ ಬಂದು ಸೇರಿದೆ ಎನ್ನುತ್ತಿದ್ದಾರೆ ಮಗುವಿನ ಕುಟುಂಬಸ್ಥರು.
ಇನ್ನೇನು ಹೃದಯ ಬಡಿತವೇ ನಿಂತು ಹೋಗುತ್ತದೆ ಎಂದಿದ್ದ ಮಗು, ಮತ್ತೆ ಕಿಲಕಿಲನೇ ಅಮ್ಮನ ಮಡಿಲಿನಲ್ಲಿ ನಗುತ್ತಿರುವುದನ್ನು ಕಂಡ ಕುಟುಂಬಸ್ಥರ ಸಂತೋಷ ಮುಗಿಲು ಮುಟ್ಟಿದೆ. ಇದಕ್ಕೆಲ್ಲ ಕಾರಣ ನಂಬಿದ ಕೊರಗಜ್ಜ ಎನ್ನುವುದು ಕುಟುಂಬಸ್ಥರ ನಂಬಿಕೆ. ಹೀಗಾಗಿ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆದ ತಕ್ಷಣ ನೇರವಾಗಿ ಕೊರಗಜ್ಜನ ಕ್ಷೇತ್ರಕ್ಕೆ ಮಗುವನ್ನು ಕರೆತಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಬದುಕಿರುವವರೆಗೂ ಈ ಮಗು ಕೊರಗಜ್ಜನ ಪ್ರಸಾದವೆಂದೇ ನಂಬಿ ಬದುಕುವುದಾಗಿ ಹೆತ್ತವರು ಆನಂದ ಭಾಷ್ಟದೊಂದಿಗೆ ಊರಿಗೆ ತೆರಳಿದ್ದಾರೆ.
ಇದನ್ನೂ ಓದಿ | Kantara controversy | ಭೂತ ಕೋಲ ಯಾವುದೇ ಸಮುದಾಯಕ್ಕೆ ಸೀಮಿತವಾದುದಲ್ಲ, ನಟ ಚೇತನ್‌ಗೆ ತಿಳಿವಳಿಕೆ ಇಲ್ಲ!