Site icon Vistara News

ಟಿಪ್ಪು ವಿವಾದ | ಕೊಲ್ಲೂರು ದೇವಾಲಯದಲ್ಲಿ ಸಲಾಂ ಆರತಿ ನಡೆಯುತ್ತಿರಲಿಲ್ಲ: ಶಾಸಕ ಸುಕುಮಾರ ಶೆಟ್ಟಿ ಸ್ಪಷ್ಟೋಕ್ತಿ

sukumar shetty -kollur temple

ಉಡುಪಿ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲ ಸೇರಿದಂತೆ ರಾಜ್ಯದ ಹಲವು ದೇವಸ್ಥಾನಗಳಲ್ಲಿ ಸಂಜೆ ವೇಳೆ ನಡೆಯುತ್ತಿದ್ದ ದೀವಟಿಗೆ ಸಲಾಂ ಪೂಜೆಯನ್ನು (ಟಿಪ್ಪು ವಿವಾದ) ನಿಲ್ಲಿಸಲು ರಾಜ್ಯ ಧಾರ್ಮಿಕ ಪರಿಷತ್‌ ಬ್ರೇಕ್‌ ಹಾಕಿದೆ ಎಂಬ ಸುದ್ದಿಗಳ ಬೆನ್ನಲ್ಲೇ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಅವರು ಸ್ಪಷ್ಟನೆಯೊಂದನ್ನು ನೀಡಿದ್ದಾರೆ. ಕೊಲ್ಲೂರು ದೇವಸ್ಥಾನದಲ್ಲಿ ದೀವಟಿಕೆ ಸಲಾಂ ಪೂಜೆ ನಡೆಯುತ್ತಲೇ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ʻʻರಾಜ್ಯವನ್ನಾಳುವ ರಾಜನ ಪರವಾಗಿ ಮಾಡುತ್ತಿದ್ದ ಈ ಪೂಜೆ ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು, ಪುತ್ತೂರು ಮಹಾಲಿಂಗೇಶ್ವರ ಮೊದಲಾದ ದೇವಸ್ಥಾನಗಳಲ್ಲಿ ಇಂದಿಗೂ ನಡೆದುಕೊಂಡು ಬರುತ್ತಿದೆ. ಆದರೆ, ಇನ್ನು ಮುಂದೆ ಈ ದೀವಟಿಕೆ ಸಲಾಂ ಪೂಜೆ ನಡೆಸದಂತೆ ಧಾರ್ಮಿಕ ಪರಿಷತ್ ನಿಂದ ಸುತ್ತೋಲೆ ಹೊರಡಿಸಲಾಗಿದೆʼʼ ಎಂದು ಪ್ರಕಟಿಸಲಾಗಿತ್ತು. ಟಿಪ್ಪು ಕಾಲದಲ್ಲಿ ಆರಂಭವಾಗಿದ್ದ ದೀವಟಿಗೆ ಸಲಾಂನ್ನು ನಿಲ್ಲಿಸಿ ಅದರ ಬದಲು ಸಂಧ್ಯಾ ಕಾಲದಲ್ಲಿ ದೀಪ ನಮಸ್ಕಾರ ಪೂಜೆ ನೆರವೇರಿಸಲು ದೇವಸ್ಥಾನಗಳಿಗೆ ಸೂಚನೆ ನೀಡಲಾಗಿದೆ ಎಂದು ಧಾರ್ಮಿಕ ಪರಿಷತ್‌ ಹೇಳಿತ್ತು.

ಸಲಾಮ್ ಮಂಗಳಾರತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕೊಲ್ಲೂರು ದೇವಳ ಪ್ರದೇಶವನ್ನು ಒಳಗೊಂಡ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಕೊಲ್ಲೂರಿನಲ್ಲಿ ಇಂಥಹುದೊಂದು ಆರತಿಯೇ ನಡೆಯುತ್ತಿದ್ದ ದಾಖಲೆಗಳಿಲ್ಲ ಎಂದಿದ್ದಾರೆ.

ʻʻನಾನು 40 ವರ್ಷಗಳಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿ ಭಕ್ತನಾಗಿದ್ದೇನೆ. 1980ರಿಂದ 84ರವರೆಗೆ ಮತ್ತು 2000ದಿಂದ 2005ರ ಎರಡು ಅವಧಿಗೆ ಮೊಕ್ತೇಸರನಾಗಿ ಸೇವೆ ಸಲ್ಲಿಸಿದ್ದೇನೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವರ ದೇವಳದ ಬಗ್ಗೆ ಸಂಪೂರ್ಣ ಮಾಹಿತಿ ಇರುವ ವ್ಯಕ್ತಿ ನಾನು. ಕೊಲ್ಲೂರು ದೇವಳದಲ್ಲಿ ಸಲಾಂ ಮಂಗಳಾರತಿ ಇಲ್ಲ. ಸಂಜೆ ಪ್ರದೋಷ ಕಾಲ ಪೂಜೆ ಇರುತ್ತದೆ. ಈ ಪೂಜೆ ಸಲಾಂ ಮಂಗಳಾರತಿ ಎನ್ನುವ ಬಗ್ಗೆ ಯಾವುದೇ ದಾಖಲೆ ಇಲ್ಲʼʼ ಎಂದು ಸ್ಪಷ್ಟಪಡಿಸಿದ್ದಾರೆ.

ʻʻಅದು ಕೇವಲ‌ ಪ್ರದೋಷ ಕಾಲದಲ್ಲಿ ನಡೆಯುವ ಮಂಗಳಾರತಿ ಎಂದೇ ಹೆಸರು ಇರಲಾಗಿದೆ. ಅದನ್ನು ಸಲಾಂ ಮಂಗಳಾರತಿ ಎಂದು ಪರಿಗಣಿಸಿಲ್ಲ, ಸಲಾಂ ಆಗಲು ಸಾಧ್ಯವೂ ಇಲ್ಲʼʼ ಎಂದಿದ್ದಾರೆ ಸುಕುಮಾರ ಶೆಟ್ಟಿ.

ಇದನ್ನೂ ಓದಿ | ಟಿಪ್ಪು ವಿವಾದ | ದೇವಾಲಯಗಳಲ್ಲಿ ಟಿಪ್ಪು ಆರಂಭಿಸಿದ್ದ ದೀವಟಿಕೆ ಸಲಾಮ್‌ಗೆ ಬ್ರೇಕ್‌, ಮುಜರಾಯಿ ಇಲಾಖೆ ಹೆಸರೂ ಬದಲು

Exit mobile version