Site icon Vistara News

KS Eshwarappa : ಅರ್ಚಕರ ವೇತನ ವಾಪಸ್‌ ಆದೇಶಕ್ಕೆ ಬಿಜೆಪಿ ಆಕ್ರೋಶ, ಇದು ಹುಚ್ಚು ಸರ್ಕಾರ ಎಂದ ಈಶ್ವರಪ್ಪ

Kodandarama Temple Hiremagaluru

ಶಿವಮೊಗ್ಗ: ಚಿಕ್ಕಮಗಳೂರು ಜಿಲ್ಲೆಯ ಹಿರೇಮಗಳೂರಿನ ಕೋದಂಡರಾಮ ಸ್ವಾಮಿ ದೇವಾಲಯದ (Kodandarama Swamy Temple) ಅರ್ಚಕರಾಗಿರುವ ಕನ್ನಡದ ಪೂಜಾರಿ, ಹಿರೇಮಗಳೂರು ಕಣ್ಣನ್‌ (Hiremagaluru Kannan) ಅವರಿಗೆ 10 ವರ್ಷದ ವೇತನ ವಾಪಸ್‌ (Reimbursement of 10 years salary) ನೀಡುವಂತೆ ಸೂಚಿಸಿ ನೋಟಿಸ್‌ ನೀಡಿರುವುದು ಈಗ ರಾಜಕೀಯ ಚರ್ಚೆಗೂ ಕಾರಣವಾಗಿದೆ. ಮಾಜಿ ಸಚಿವರಾಗಿರುವ ಬಿಜೆಪಿ ನಾಯಕ ಕೆ.ಎಸ್‌. ಈಶ್ವರಪ್ಪ (KS Eshwarappa) ಅವರು, ಇಲ್ಲಿರುವುದು ಹುಚ್ಚು ಸರ್ಕಾರ ಅನ್ನೋದಕ್ಕೆ ಮತ್ತೊಂದು ಉದಾಹರಣೆ ಎಂದು ಹೇಳಿದ್ದಾರೆ.

ದೇವಾಲಯದ ವಾರ್ಷಿಕ ಆದಾಯಕ್ಕಿಂತ ವೆಚ್ಚವೇ ಹೆಚ್ಚುವರಿಯಾಗಿದೆ ಎಂದು ದೇವಸ್ಥಾನದ ಅರ್ಚಕರಿಗೆ ನೀಡುತ್ತಿದ್ದ ಸಂಬಳವನ್ನು ರಾಜ್ಯ ಸರ್ಕಾರವು ವಾಪಸ್ ಕೇಳಿದೆ. ದೇವಾಲಯದ ಆದಾಯ ಕಡಿಮೆ ಇದ್ದು, ಸಂಬಳ ಹೆಚ್ಚುವರಿಯಾಗಿ ಪಾವತಿ ಆಗಿದೆ. ಹೀಗಾಗಿ 4,500 ರೂಪಾಯಿಯಂತೆ 10 ವರ್ಷದ 4,74,000 ರೂ. ಹಣವನ್ನು ವಾಪಸ್ ನೀಡಲು ಕಣ್ಣನ್‌ ಅವರಿಗೆ ಸೂಚನೆ ನೀಡಲಾಗಿದೆ. ಕಣ್ಣನ್ ಅವರ ಖಾತೆಗೆ ಪ್ರತಿ ತಿಂಗಳು 7,500 ರೂ. ಸಂಬಳ ಜಮೆಯಾಗುತ್ತಿತ್ತು. 7,500 ರೂಪಾಯಿ ನೀಡಿದ ಸಂಬಳದಲ್ಲಿ 4,500 ರೂ. ಅಂತೆ 10 ವರ್ಷದ ಹಣವನ್ನು ವಾಪಸ್ ನೀಡಲು ಸೂಚನೆ ನೀಡಲಾಗಿದೆ. ಸದ್ಯ ಪ್ರತಿ ತಿಂಗಳ ಬರುತ್ತಿದ್ದ ಸಂಬಳವನ್ನು ತಡೆ ಹಿಡಿಯಲಾಗಿದೆ. ಸರ್ಕಾರದ ಸೂಚನೆ ಮೇರೆಗೆ ಚಿಕ್ಕಮಗಳೂರು ತಹಸೀಲ್ದಾರ್ ಸುಮಂತ್ ನೋಟಿಸ್ ಜಾರಿ ಮಾಡಿದ್ದಾರೆ.

ಎಂಥಾ ಅಪಮಾನ ಇದು? ಯಾವ ನ್ಯಾಯ ಇದು? ಎಂದ ಈಶ್ವರಪ್ಪ

ಚಿಕ್ಕಮಗಳೂರು ತಹಸೀಲ್ದಾರ್‌ ಅವರು ನೋಟಿಸ್‌ ನೀಡಿರುವುದು ಗೌರವಾನ್ವಿತ ಅರ್ಚಕರಿಗೆ ಮಾಡಿದ ದೊಡ್ಡ ಅಪಚಾರ. ಹಿರೇಮಗಳೂರು ಕಣ್ಣನ್‌ ಅವರಂಥವರಿಗೇ ಈ ರೀತಿ ನೋಟಿಸ್‌ ಬಂದ್ರೆ ಸಂಸ್ಕೃತಿಯ ಗತಿ ಏನು ಎಂದು ಶಿವಮೊಗ್ಗದಲ್ಲಿ ಮಾತನಾಡಿದ ಈಶ್ವರಪ್ಪ ಪ್ರಶ್ನೆ ಮಾಡಿದರು.

ʻʻಕಾಂಗ್ರೆಸ್ ಸರ್ಕಾರದ ಆದಾಯದ ಮೇಲೆಯೇ ಸಂಬಳ ನಿರ್ಧಾರ ಮಾಡುವುದಾದರೆ ಹೆಚ್ಚು ಆದಾಯ ಬರುವ ದೇವಾಲಯದಲ್ಲಿ ಹೆಚ್ಚು ಸಂಬಳ ಕೊಡ್ತಾರಾ?ʼʼ ಎಂದು ಪ್ರಶ್ನಿಸಿರುವ ಅವರು, ಈ ರೀತಿಯ ನೋಟಿಸನ್ನು ಹಿಂದೂ ಸಮಾಜ ಸಹಿಸಲ್ಲ ಎಂದರು.

ʻʻಮಂತ್ರಿಗಳ ಸಂಬಳವನ್ನು ವಾಪಾಸು ಕಟ್ಟಿ ಅಂದಾಗ ಸಿಟ್ಟು ಬರುತ್ತದೆ ಅಲ್ವಾ? ಆದಾಯಾದ ಮೇಲೆ ಸಂಬಳ ತಿರ್ಮಾನ ಮಾಡ್ತಾರೆ ಅಂದ್ರೆ ಹೇಗೆ? ಕಣ್ಣನ್‌ ಅವರು 44 ವರ್ಷಗಳಿಂದ ಪೂಜೆ ಮಾಡಿಕೊಂಡು ಬಂದಿದ್ದಾರೆ. ಅವರು ಹಣಕ್ಕಾಗಿ ಪೂಜೆ ಮಾಡಿಲ್ಲ. ಕನ್ನಡದಲ್ಲಿ ಪೂಜೆ ಮಾಡುತ್ತೀರುವ ಏಕೈಕ ವ್ಯಕ್ತಿ ಕಣ್ಣನ್‌. ಅವರಿಗೆ ಆಗಿರುವ ಅಪಮಾನ ಸಹಿಸಲಾಗದುʼʼ ಎಂದು ಹೇಳಿದರು.

ಮುಜರಾಯಿ ಸಚಿವರು ಕ್ಷಮೆ ಕೇಳಬೇಕು.

ʻʻಸಚಿವ ರಾಮಲಿಂಗಾ ರೆಡ್ಡಿ ಅವರು ಇದೊಂದು ಸಣ್ಣ ವಿಷಯ ಎಂದು ಹೇಳಿದ್ದಾರೆ. ರೆಡ್ಡಿ ಅವರು ತಮಗೆ ಈ ರೀತಿ ಅಪಮಾನ ಆಗಿದ್ದರೆ ಸಹಿಸಿಕೊಳ್ಳುತ್ತಿದ್ದರಾ? ಅರ್ಚಕರು ಪೂಜೆ ಮಾಡುತ್ತಿರುವುದರಿಂದ ಸಂಸ್ಕೃತಿ ಉಳಿದಿದೆ. ಕಾಂಗ್ರೆಸ್ ಸರ್ಕಾರ ಸಂಸ್ಕೃತಿಗೆ ಮಾಡುತ್ತಿರುವ ಅಪಮಾನ ಇದು. ಹೀಗಾಗಿ ಮುಜರಾಯಿ ಸಚಿವರು ರಾಜ್ಯದ ಜನರ ಬಳಿ ಕ್ಷಮೆ ಕೇಳಬೇಕು. ಮುಂದೆ ಹೀಗೆ ನೋಟಿಸ್ ಕೋಡಲ್ಲ ಅಂತ ಹೇಳಬೇಕು. ಇಲ್ಲವಾದರೆ ಬಿಜೆಪಿ ಹೋರಾಟ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತದೆʼʼ ಎಂದು ಈಶ್ವರಪ್ಪ ನುಡಿದರು.

ಇದು ಕೇವಲ ಒಬ್ಬ ಅರ್ಚಕರಿಗೆ ಮಾಡಿದ ಅಪಮಾನ ಅಲ್ಲ. ಹಿಂದುಗಳಿಗೆ ಮಾಡಿದ ಅಪಮಾನ. ಹೀಗಾಗಿ ನೋಟಿಸ್‌ ನೀಡಿದ ತಹಸೀಲ್ದಾರ್‌ ಅವರನ್ನು ವಜಾಗೊಳಿಸಬೇಕುʼʼ ಎಂದು ಆಗ್ರಹಿಸಿದ ಈಶ್ವರಪ್ಪ ಅವರು, ರಾಜ್ಯದಲ್ಲಿ 50 ಸಾವಿರ ಅರ್ಚಕರಿದ್ದಾರೆ. ಅವರನ್ನು ಗೌರವದಿಂದ ನಡೆಸಿಕೊಳ್ಳಬೇಕು. ದೇವಸ್ಥಾನಗಳ ಬಗ್ಗೆ ಭಕ್ತಿಯಿಂದ ಯೋಚನೆ ಮಾಡಬೇಕು ಎಂದರು.

ದೇವಸ್ಥಾನಗಳ ಆದಾಯಕ್ಕೂ ಅರ್ಚಕರಿಗೂ ಸಂಬಂಧವಿಲ್ಲ

ʻʻದೇವಸ್ಥಾನಗಳ‌ ಅಭಿವೃದ್ಧಿ ಆದರೆ ಹೆಚ್ಚಿನ ಆದಾಯ ಬರುತ್ತದೆ. ಹಾಗಂತ ಅಭಿವೃದ್ಧಿ ವಿಚಾರದಲ್ಲಿ ಅರ್ಚಕರಿಗೆ ಜವಾಬ್ದಾರಿ ಕೊಡುವುದು ಸರಿಯಲ್ಲ. ಬೇರೆ ಯಾರಿಗಾದರೂ ನೋಟಿಸ್ ನೀಡಿದ್ದಾರಾ ಎಂದು ನೋಡಬೇಕುʼʼ ಎಂದು ಹೇಳಿದರು.

ದೇವಾಲಯದ ಆದಾಯ ಹೆಚ್ಚಳದ ಬಗ್ಗೆ ಮಾತನಾಡುವ ಸರ್ಕಾರ ದೇವಸ್ಥಾನದ ಆದಾಯವನ್ನು ಬೇರೆ ಉದ್ದೇಶಗಳಿಗೆ ಬಳಸುತ್ತಿದೆಯಾ ಎನ್ನುವುದರ ತನಿಖೆಯೂ ಆಗಬೇಕು. ದೇವಸ್ಥಾನದ ಆದಾಯವನ್ನು ದೇವಸ್ಥಾನಕ್ಕೇ ಬಳಸಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version