Site icon Vistara News

Tirumala Vasanthotsavam: ಏಪ್ರಿಲ್ 21ರಿಂದ ತಿರುಮಲದಲ್ಲಿ ಹಲವು ಸೇವೆಗಳು ರದ್ದು

Tirumala Vasanthotsavam

ತಿರುಮಲೈ: ಪ್ರತೀ ವರ್ಷ ಚೈತ್ರ ಮಾಸದಲ್ಲಿ (chaitra month) ತಿರುಮಲ ಶ್ರೀವಾರಿ ದೇವಸ್ಥಾನದಲ್ಲಿ ( Tirumala Srivari Temple) ನಡೆಯುವ ವಸಂತೋತ್ಸವ (Tirumala Vasanthotsavam) ಈ ಬಾರಿ ಏಪ್ರಿಲ್ 21ರಿಂದ 23ರವರೆಗೆ ನಡೆಯಲಿದ್ದು, ಈ ಸಂದರ್ಭದಲ್ಲಿ ದೇವಾಲಯದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದರಿಂದ ಯಾವುದೇ ನಿಯಮಿತ ಸೇವೆಗಳನ್ನು ನಡೆಸಲಾಗುವುದಿಲ್ಲ.

ತಿರುಮಲ ಶ್ರೀವಾರಿ ದೇವಸ್ಥಾನದಲ್ಲಿ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಬರುವ ಚೈತ್ರ ಮಾಸದ ತ್ರಯೋದಶಿ, ಚತುರ್ದಶಿ ಮತ್ತು ಪೌರ್ಣಮಿಯ ಶುಭ ದಿನಗಳಲ್ಲಿ ವಾರ್ಷಿಕ ಸಲಕಟ್ಲ ವಸಂತೋತ್ಸವವನ್ನು (Salakatla Vasantotsavam) ನಡೆಸಲಾಗುತ್ತದೆ. ಅಂತೆಯೇ ಈ ಬಾರಿ ಮೂರು ದಿನಗಳ ಸಲಕಟ್ಲ ವಸಂತೋತ್ಸವವು ಏಪ್ರಿಲ್ 21ರಿಂದ 23ರವರೆಗೆ ವೈಭವದಿಂದ ನಡೆಯಲಿದೆ. ಚೈತ್ರ ಶುದ್ಧ ಹುಣ್ಣಿಮೆಯಂದು ಮುಕ್ತಾಯವಾಗುವ ಈ ಉತ್ಸವವನ್ನು ಮೂರು ದಿನಗಳ ಕಾಲ ಅದ್ಧೂರಿಯಿಂದ ನಡೆಸಲಾಗುತ್ತದೆ.

ಯಾಕೆ ಈ ಆಚರಣೆ?

ದೇವಾಲಯದ ದಂತಕಥೆಯ ಪ್ರಕಾರ ವಸಂತೋತ್ಸವ ಉತ್ಸವವು 1460ರ ದಶಕದಲ್ಲಿ ರಾಜ ಅಚ್ಯುತರಾಯನ ಆಳ್ವಿಕೆಯಲ್ಲಿ ಆರಂಭವಾಗಿತ್ತು. ವಸಂತ ಋತುವಿನ ಆರಂಭದ ನೆನಪಿಗಾಗಿ ಈ ವಾರ್ಷಿಕ ಆಚರಣೆಯನ್ನು ರಾಜ ಅಚ್ಯುತರಾಯ ಪ್ರಾರಂಭಿಸಿದ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: Tour Guide: ದೇವಾಲಯಗಳ ಪಟ್ಟಣ ತಿರುವಣ್ಣಾಮಲೈ; ಒಮ್ಮೆ ನೋಡಲೇಬೇಕಾದ ಸ್ಥಳ

ಈ ಮೂರು ದಿನಗಳ ಅವಧಿಯಲ್ಲಿ ಶ್ರೀನಿವಾಸನು ಪದ್ಮಾವತಿ ದೇವಿಯೊಂದಿಗೆ ಪರಿಮಳಯುಕ್ತ ಸ್ನಾನವನ್ನು ಸ್ವೀಕರಿಸುತ್ತಾರೆ. ಇದು ಸೂರ್ಯನ ತೀವ್ರ ಶಾಖದಿಂದ ದೇವತೆಗಳಿಗೆ ಹಿತವನ್ನು ನೀಡುತ್ತದೆ ಎಂದು ನಂಬಲಾಗಿದೆ.

ಏಪ್ರಿಲ್ 21ರಂದು ಆರಂಭ

ದೇವಾಲಯದಲ್ಲಿ ಏಪ್ರಿಲ್ 21ರಂದು ಬೆಳಗ್ಗೆ 6.30ಕ್ಕೆ ದೇವರಾದ ಭಗವಾನ್ ಮಲಯಪ್ಪ ಸ್ವಾಮಿ ಮತ್ತು ಶ್ರೀದೇವಿ ಭೂದೇವಿಯನ್ನು ನಾಲ್ಕು ಪಲ್ಲಕ್ಕಿಗಳ ಮೂಲಕ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಬಳಿಕ ವಸಂತೋತ್ಸವ ಮಂಟಪ ಉದ್ಘಾಟನೆ ನಡೆಯುತ್ತದೆ. ವಸಂತೋತ್ಸವ ಅಭಿಷೇಕದ ಮುಕ್ತಾಯದ ಬಳಿಕ ದೇವರನು ಮರಳಿ ದೇವಸ್ಥಾನಕ್ಕೆ ಕರೆತರಲಾಗುತ್ತದೆ.


ಎರಡನೇ ದಿನವಾದ ಏಪ್ರಿಲ್ 22ರಂದು ಮಲಯಪ್ಪ ಸ್ವಾಮಿಗೆ ಚಿನ್ನದ ರಥೋತ್ಸವ ನಡೆಯಲಿದೆ. ಬೆಳಗ್ಗೆ 8ರಿಂದ 10ರವರೆಗೆ ತಿರುಮಲದ ಬೀದಿಗಳಲ್ಲಿ ರಥದ ಮೆರವಣಿಗೆ ನಡೆಸಲಾಗುತ್ತದೆ. ಬಳಿಕ ವಸಂತ ಮಂಟಪದಲ್ಲಿ ಪುರೋಹಿತರು ವಸಂತೋತ್ಸವ ನೆರವೇರಿಸುವರು.

ಅಂತಿಮ ದಿನವಾದ ಏಪ್ರಿಲ್ 23ರಂದು ಶ್ರೀರಾಮ, ಸೀತಾ, ಲಕ್ಷ್ಮಣ ಮತ್ತು ಆಂಜನೇಯನೊಂದಿಗೆ ರುಕ್ಮಿಣಿ, ಸತ್ಯಭಾಮೆಯೊಂದಿಗೆ ಶ್ರೀಕೃಷ್ಣನನ್ನು ಶ್ರೀನಿವಾಸ ಸ್ವಾಮಿ ಮತ್ತು ಭೂದೇವಿ, ಪದ್ಮಾವತಿ ದೇವಿಯೊಂದಿಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ.

ಮೆರವಣಿಗೆಯ ಕೊನೆಯಲ್ಲಿ ಎಲ್ಲಾ ವಿಗ್ರಹಗಳನ್ನು ವಸಂತ ಮಂಟಪಕ್ಕೆ ತಂದು ಇರಿಸಲಾಗುತ್ತದೆ. ಅಲ್ಲಿ ಧಾರ್ಮಿಕ ಉತ್ಸವವನ್ನು ಸಂಪನ್ನಗೊಳಿಸಲಾಗುತ್ತದೆ.

ಈ ಮೂರು ದಿನಗಳಲ್ಲಿ ಪ್ರತೀ ದಿನ ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ಸ್ವಾಮಿ ಮತ್ತು ಅಮ್ಮನವರ ಉತ್ಸವಮೂರ್ತಿಗಳಿಗೆ ವಿವಿಧ ಅಭಿಷೇಕಗಳನ್ನು ಅದ್ಧೂರಿಯಾಗಿ ನಡೆಸಲಾಗುತ್ತದೆ. ಹಾಲು, ಮೊಸರು, ಜೇನುತುಪ್ಪ, ತೆಂಗಿನ ನೀರು, ಅರಿಶಿನ ಮತ್ತು ಶ್ರೀಗಂಧದಿಂದ ಅಭಿಷೇಕ ಮಾಡಲಾಗುತ್ತದೆ.

ಸಾಮಾನ್ಯ ಸೇವೆಗಳು ರದ್ದು

ಈ ಎಲ್ಲ ಆಚರಣೆಯ ಕಾರಣದಿಂದ ಈ , ಮೂರು ದಿನಗಳ ಕಾಲ ತಿರುಮಲ ದೇವಸ್ಥಾನದಲ್ಲಿ ಕೆಲವು ಸಾಮಾನ್ಯ ಸೇವೆಗಳನ್ನು ರದ್ದುಗೊಳಿಸಲಾಗುತ್ತದೆ.

ವಸಂತೋತ್ಸವದ ಪ್ರಯುಕ್ತ ಏಪ್ರಿಲ್ 21 ರಿಂದ 23ರವರೆಗೆ ನಡೆಯಲಿರುವ ಕಲ್ಯಾಣೋತ್ಸವ, ಊಂಜಲಸೇವೆ, ಆರ್ಜಿತ ಬ್ರಹ್ಮೋತ್ಸವ ಮತ್ತು ಸಹಸ್ರದೀಪಾಲಂಕರಣ ಸೇವೆಗಳನ್ನು ಹಾಗೂ ಏಪ್ರಿಲ್ 23 ರಂದು ನಿಗದಿಪಡಿಸಿದ ಅಷ್ಟದಳ ಪಾದ ಪದ್ಮಾರಾಧನೆಯನ್ನು ರದ್ದುಗೊಳಿಸಲು ಟಿಟಿಡಿ ನಿರ್ಧರಿಸಿದೆ.

Exit mobile version