ತುಮಕೂರು: ಇಲ್ಲಿನ ಶಿರಾ ಗೇಟ್ ಸಮೀಪವಿರುವ ಟಾಮ್ಲಿನ್‌ಸನ್ ಚರ್ಚ್ ಭೂ ವಿವಾದ ಧರ್ಮ ದಂಗಲ್‌ಗೆ ಎಡೆ ಮಾಡಿಕೊಟ್ಟಿದೆ. ಕೇವಲ ಭೂಮಿಯಷ್ಟೇ ಅಲ್ಲ, ಚರ್ಚ್ ಕಟ್ಟಡದ ಬಗ್ಗೆಯೂ ಹೊಸ ವಿವಾದ ಎದ್ದಿದೆ. ಮಂಗಳೂರಿನ ಮಳಲಿ ದರ್ಗಾ ವಿವಾದದಂತೆ ಚರ್ಚ್ ವಿವಾದವೂ ಮುನ್ನಲೆಗೆ ಬಂದಿದೆ.
ಶತಮಾನದ ಇತಿಹಾಸ ಇರುವ ಟಾಮ್ಲಿನ್‌ಸನ್ ಚರ್ಚ್ ಗೋಮಾಳದಲ್ಲಿ ಅಕ್ರಮವಾಗಿ ಕಟ್ಟಲಾಗಿದೆ ಎಂದು ಬಿಜೆಪಿ ಎಸ್ಟಿ ಮೋರ್ಚಾ ಕಾರ್ಯದರ್ಶಿ ರಾಕೇಶ್, ಮಹಾನಗರ ಪಾಲಿಕೆ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಕೇವಲ ಇದು ಸರ್ಕಾರದ ಜಾಗ ಅಷ್ಟೇ ಅಲ್ಲ ಚರ್ಚ್ ಇರುವ ಜಾಗದಲ್ಲಿ ಹಿಂದುಗಳ ದೇವಸ್ಥಾನ ಇದ್ದು, ಅಲ್ಲಿ ನಾಗರ ಪೂಜೆ ಕೂಡ ನಡಿಯುತ್ತಿತ್ತು ಎಂದು ರಾಕೇಶ್ ಆರೋಪಿಸಿದ್ದರು.
ದೂರಿನನ್ವಯ ಮಹಾನಗರ ಪಾಲಿಕೆ ಅಧಿಕಾರಿಗಳು, ಹೊಸದಾಗಿ ಕಟ್ಟಲಾಗುತಿದ್ದ ಚರ್ಚ್ ಕಾಂಪೌಂಡ್‌ಗೆ ತಡೆಯೊಡ್ಡಿ ನೋಟಿಸ್ ನೀಡಿದರು. ಈ ನಡುವೆ ಭಾನುವಾರ ಎರಡೂ ಕಡೆಯವರು ದಾಖಲಾತಿ ಬಿಡುಗಡೆ ಮಾಡಿದ್ದಾರೆ. ಹಿಂದು ಕಾರ್ಯಕರ್ತ ರಾಕೇಶ್ ಬಿಡುಗಡೆ ಮಾಡಿದ್ದ ಆರ್‌ಟಿಸಿಯಲ್ಲಿ ಚರ್ಚ್ ಇರುವ ಜಾಗ ಕರಾಬ್ ಅಂದರೆ ಗೋಮಾಳ ಎಂದಿದೆ. ಆದರೆ ಚರ್ಚ್‌ನವರು ಮೂಲ ದಾಖಲೆ ಯಾವುದನ್ನೂ ಬಿಡುಗಡೆ ಮಾಡಿಲ್ಲ. ಬದಲಾಗಿ ತಾವು ಚರ್ಚ್ ಹೆಸರಿನಲ್ಲಿ ಕಂದಾಯ ಕಟ್ಟಿಕೊಂಡು ಬಂದಿರುವ ದಾಖಲೆಯನ್ನು ಬಿಡುಗಡೆ ಮಾಡಿದ್ದಾರೆ.
ಚಾಲುಕ್ಯರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಾಣ
ಹಿಂದು ದೇವಾಲಯದ ಮಾದರಿಯಲ್ಲಿರುವ ಟಾಮ್ಲಿನ್‌ಸನ್ ಚರ್ಚ್, ಚಾಲುಕ್ಯರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ದೇವಾಲಯದ ಮಾದರಿಯಲ್ಲಿಯೇ ಚರ್ಚ್ ಇರುವುದನ್ನು ಸ್ವತಃ ಚರ್ಚ್ ಆಡಳಿತ ಮಂಡಳಿ ಒಪ್ಪಿಕೊಂಡಿದೆ. ದೇವಸ್ಥಾನ ಕೆಡವಿ ಚರ್ಚ್ ಕಟ್ಟಲಾಗಿದೆ ಎಂದು ಹಿಂದುಪರ ಕಾರ್ಯಕರ್ತ ರಾಕೇಶ್ ಆರೋಪಿಸಿದ್ದಾರೆ. ಚರ್ಚ್‌ನ ಪಾಯ ಕೂಡ ಹಿಂದು ದೇವಾಲಯದ ಪಾಯದಂತೆ ಇದೆ. ಹಿಂದೂ ದೇವಾಲಯದಲ್ಲಿ ಇರುವಂತೆಯೇ ಕಳಸ ಇಡುವ ಗುಮ್ಮಟ ಕೂಡ ಇದೆ. ಈ ರಚನೆಗಳು ರಾಕೇಶ್ ಆರೋಪಕ್ಕೆ ಪುಷ್ಟಿ ಕೊಡುತ್ತಿವೆ.
ಜ್ಯಾತ್ಯತೀತವಾಗಿ ಕಟ್ಟಿರುವ ದೇವಾಲಯ
ಈ ಸಂಬಂಧ ಪ್ರತಿಕ್ರಿಯಿಸಿರುವ ಚರ್ಚ್ ಏರಿಯಾ ಚೇರ್‌ಮ್ಯಾನ್ ಮನೋಜ್, ಇದು ಚಾಲುಕ್ಯರ ವಾಸ್ತುಶಿಲ್ಪದಲ್ಲಿ ಜ್ಯಾತ್ಯತೀತವಾಗಿ ಕಟ್ಟಿರುವ ದೇವಾಲಯ. ಹಾಗಾಗಿ ಹಿಂದೂ ದೇವಾಲಯದಂತೆ ಕಾಣುತ್ತದೆ ಎಂದಿದ್ದಾರೆ. ಸದ್ಯ
ಚರ್ಚ್ ಆಡಳಿತ ಮಂಡಳಿ ಆರಂಭಿಸಿದ್ದ ಕಾಂಪೌಂಡ್ ಕಾಮಗಾರಿಯನ್ನು ಮಹಾನಗರ ಪಾಲಿಕೆ ತಾತ್ಕಾಲಿಕವಾಗಿ ತಡೆಹಿಡಿದಿದೆ.
ಸ್ಥಳದಲ್ಲಿ ಯಾವುದೇ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗದಂತೆ ತಡೆಯಲು ಪೊಲೀಸರು ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೊಕ್ಕಾಂ ಹೂಡಿದೆ. ಚರ್ಚ್ ಭೂವಿವಾದ ಕೂಡ ಮಂಗಳೂರಿನ ಮಳಲಿ ದರ್ಗಾ ವಿವಾದದಂತೆ ತಿರುವು ಪಡೆದುಕೊಳ್ಳಲಿದೆಯಾ ಎಂಬ ಚರ್ಚೆ ಹುಟ್ಟುಹಾಕಿದೆ.
ಇದನ್ನೂ ಓದಿ | ಆರ್‌ಟಿಸಿಯಲ್ಲಿ ಮಳಲಿ ಮಸೀದಿ ಹೆಸರು; ತಹಸೀಲ್ದಾರ್ ಆದೇಶಕ್ಕೆ ಮಂಗಳೂರು ಎಸಿ ಕೋರ್ಟ್ ತಡೆಯಾಜ್ಞೆ