Site icon Vistara News

Tulsi Plant Care: ತುಳಸಿ ಗಿಡ ಬೆಳೆಸುವುದೇ ಒಂದು ಸಾಹಸವೇ? ಹಾಗಾದರೆ ಈ ಟಿಪ್ಸ್‌ ನೆನಪಿರಲಿ!

Tulsi Plant Care

ಹಿಂದೂಗಳಿಗೆ ತುಳಸಿ ಗಿಡವೆಂದರೆ (Tulsi plant, Holy Basil) ಪೂಜ್ಯ. ಲಕ್ಷ್ಮಿಯ ಅವತಾರ ಎಂಬ ನಂಬಿಕೆ. ಮನೆಯಂಗಳದಲ್ಲಿ ತುಳಸಿಯೇ ಇಲ್ಲದಿದ್ದರೆ, ಆ ಮನೆಗೆ ಕಳೆಯೇ ಇಲ್ಲ ಎಂಬಷ್ಟು ತುಳಸಿಗೂ ಮನೆಗೂ ನಂಟು. ಪ್ರತಿ ಮನೆಯಲ್ಲಿ ತುಳಸಿಗೊಂದು ಪುಟ್ಟ ಕಟ್ಟೆ, ನಿತ್ಯವೂ ದೀಪವಿಡುವುದು, ದೀಪಾವಳಿಯ ಸಂದರ್ಭ ತುಳಸಿಗೆ ಪೂಜೆ ಇತ್ಯಾದಿಗಳೆಲ್ಲ ಸಾಮಾನ್ಯ. ಕೇವಲ ಧಾರ್ಮಿಕ ಕಾರಣಗಳಿಗಷ್ಟೇ ಅಲ್ಲ, ತುಳಸಿ ಔಷಧೀಯವಾಗಿಯೂ ಬಹಳ ಪವಿತ್ರ. ನಿತ್ಯವೂ ತುಳಸಿಯ ಎಲೆಗಳನ್ನು ತಿನ್ನುವುದರಿಂದ ಸಾಕಷ್ಟು ಆರೋಗ್ಯದ ಲಾಭಗಳೂ ಇವೆ. ಇಷ್ಟೇ ಅಲ್ಲ, ತುಳಸಿಯ ಬಹಳಷ್ಟು ಆರೋಗ್ಯಕರ ಲಾಭಗಳನ್ನು (Tulsi plant benefits) ನಾವೆಲ್ಲರೂ ಬಲ್ಲೆವು. ಆದರೆ ಇತ್ತೀಚೆಗಿನ ದಿನಗಳಲ್ಲಿ ಅಪಾರ್ಟ್‌ಮೆಂಟ್‌, ಅಂಗಳವೇ ಇಲ್ಲದ ಮನೆಗಳು, ಇಕ್ಕಟ್ಟಾದ ಕಟ್ಟಡಗಳೇ ಮನೆಗಳಾದ ಮೇಲೆ ತುಳಸಿಯನ್ನು ಅಂಗಳದಲ್ಲಿಡಲು ಅಂಗಳವೆಲ್ಲಿದೆ ಹೇಳಿ. ಹಲವರು, ತಮ್ಮ ತಮ್ಮ ಮನೆಯ ಪುಟ್ಟ ಬಾಲ್ಕನಿಗಳಲ್ಲಿ ಪುಟ್ಟ ಕುಂಡಗಳಲ್ಲಿ ತುಳಸಿಯನ್ನು ಬೆಳೆಸುತ್ತಾರೆ. ಕುಂಡಗಳಲ್ಲಿ ಬೆಳವಣಿಗೆಗೆ ಸರಿಯಾಗಿ ಜಾಗ ಸಾಲದೆ ಅವು ಸೊರಗುವುದುಂಟು. ಇನ್ನೂ ಕೆಲವರು, ಮನೆಯೊಳಗೆ ಕೂಡಾ ಇಡುವುದುಂಟು. ಆದರೆ ಸರಿಯಾಗಿ ಪೋಷಣೆ ಮಾಡಲಾಗದೆ, ಕೊನೆಗೆ ಕೈಚೆಲ್ಲುವುದೂ ಇದೆ. ಹಾಗಾದರೆ ಬನ್ನಿ, ತುಳಸಿ ಗಿಡ ಬೆಳೆಸುವಾಗ ಮುಖ್ಯವಾಗಿ ನಾವು ಗಮನಿಸಬೇಕಾದ ಅಂಶಗಳೇನು (Tulsi plant care) ಎಂಬುದನ್ನು ನೋಡೋಣ.

1. ತುಳಸಿ ಗಿಡ ಬೆಳೆಯಲು ಸಾಕಷ್ಟು ಬೆಳಕು ಬೇಕು. ಬೆಳಕಿಲ್ಲದ ಕಡೆ ತುಳಸಿ ಸೊರಗುತ್ತದೆ. ತುಳಸಿಯ ಬೆಳವಣಿಗೆಗೆ ಅಂಗಳ ಸೂಕ್ತ. ಆದರೆ, ಅನಿವಾರ್ಯ ಕಾರಣಗಳಿಂದ ಇಂದು ತುಳಸಿ ಬಾಲ್ಕನಿಗೆ, ಮನೆಯೊಳಗೆ ಬಂದಿದ್ದಾಳೆ. ಆದರೆ, ಎಲ್ಲೇ ಇಟ್ಟರೂ ಸರಿಯಾಗಿ ಗಾಳಿ ಬೆಳಕು ಬೀಳುವಂತೆ ನೋಡಿಕೊಳ್ಳಿ. ಚಂದ ಬಿಸಿಲು ಬೀಳುವ ಕಿಟಕಿಯ ಬಳಿಯೂ ಆದೀತು. ಸೂರ್ಯನ ಬೆಳಕು ಕನಿಷ್ಟ ನಾಲ್ಕೈದು ಗಂಟೆ ನೇರವಾಗಿ ಬೀಳುವ ಜಾಗದಲ್ಲಿ ತುಳಸಿಯ ಕುಂಡವನ್ನಿಡಿ.

2. ಸಾಮಾನ್ಯವಾಗಿ, ತುಳಸಿ ಬೇಸಿಗೆಯಲ್ಲಿ ಯಾವುದೇ ಸಮಸ್ಯೆಯಿಲ್ಲದೆ ಆರಾಮವಾಗಿ ಬೆಳೆಯುತ್ತದೆ. ಆದರೆ, ಚಳಿಗಾಲದಲ್ಲಿ ತುಳಸಿಯ ಆರೈಕೆ ಸರಿಯಾಗಿ ಮಾಡಬೇಕು. ತುಳಸಿ ಸಾಮಾನ್ಯ ಉಷ್ಣತೆಯಲ್ಲಿ ಸಮೃದ್ಧವಾಗಿ ಬೆಳೆಯುವ ಗಿಡವಾದ್ದರಿಂದ ಹೆಚ್ಚು ಚಳಿಯಿರುವ ಪ್ರದೇಶಗಳಲ್ಲಿ ತುಳಸಿ ಕಷ್ಟಪಡುತ್ತದೆ.

3. ರಾಮ ತುಳಸಿಯೇ ಆಗಲಿ, ಕೃಷ್ಣ ತುಳಸಿಯೇ ಆಗಲಿ, ಯಾವುದೇ ತುಳಸಿ ಗಿಡವನ್ನು ತಂದು ನೆಡುವಾಗ ಕೇವಲ ಮಣ್ಣು ಮಾತ್ರ ಹಾಕಬೇಡಿ. ಕುಂಡದಲ್ಲಿ ೭೦ ಶೇಕಡಾದಷ್ಟು ಮಣ್ಣು ಹಾಕಿದರೆ, ಉಳಿದ ೩೦ ಶೇಕಡಾದಷ್ಟನ್ನು ಮರಳು ತುಂಬಿಸಿಬೇಕು. ಎರಡನ್ನು ಚೆನ್ನಾಗಿ ಬೆರೆಸಿ, ಜೊತೆಗೆ ಸೆಗಣಿಯನ್ನೂ ಗೊಬ್ಬರದಂತೆ ಮಣ್ಣಿನ ಜೊತೆ ಬೆರೆಸಿ ನೆಡಬಹುದು.

4. ತೀರಾ ಚಿಕ್ಕ ಕುಂಡದಲ್ಲಿ ತುಳಸಿ ನೆಡಬೇಡಿ. ನೀರು ಅತಿಯಾಗಿ ಹಾಕಬೇಡಿ. ಹೆಚ್ಚಿನ ನೀರು ಬಸಿದು ಹೋಗಲು ಕುಂಡದ ಕೆಳಗೆ ಎರಡು ತೂತುಗಳಿರಲಿ.

5. ಒಂದು ಲೀಟರ್‌ ನೀರಿಗೆ ಒಂದು ಚಮಚ ಎಪ್ಸಮ್‌ ಉಪ್ಪನ್ನು ಸೇರಿಸಿ ಆ ನೀರನ್ನು ತುಳಿಸಿಯ ಎಲೆಗಳ ಮೇಲೆ ಚಿಮುಕಿಸುವುದರಿಂದ ಎಲೆಗಳು ಚೆನ್ನಾಗಿ ಬೆಳೆಯುತ್ತದೆ. ಗಿಡ ದಷ್ಟಪುಷ್ಟವಾಗಿ ಹಸಿರಾಗಿ ಬೆಳೆಯುತ್ತದೆ. ಒಮ್ಮೆ ಚಿಮುಕಿಸಿದ ಮೇಲೆ ೨೦ರಿಂದ ೨೫ ದಿನಗಳ ನಂತರ ಮತ್ತೆ ಚಿಮುಕಿಸಿ. ಜೊತೆಗೆ ನೀವು ನಿತ್ಯವೂ ತುಳಸಿ ಎಲೆಯನ್ನು ಹಾಗೆಯೇ ತಿನ್ನುವ ಅಭ್ಯಾಸವಿದ್ದರೆ, ಹೀಗೆ ಚಿಮುಕಿಸಿದ ಎಲೆಯನ್ನು ಆ ದಿನ ತಿನ್ನಬೇಡಿ. ಒಂದು ದಿನ ಬಿಟ್ಟು ತಿನ್ನಿ.

Tulsi plant

6. ಆಗಾಗ ತುಳಸಿಯ ಚಿಗುರನ್ನು ಚಿಮುಟಿ ತೆಗೆಯಿರಿ. ಆಗ ಗೆಲ್ಲುಗಳು ಬೆಳೆಯುತ್ತವೆ. ಗಿಡ ದಷ್ಟಪುಷ್ಟವಾಗಿ ಚೆನ್ನಾಗಿ ಬೆಳೆಯುತ್ತದೆ.

7. ತುಳಸಿಯಲ್ಲಿ ಹೂಗಳಾಗಲು ಆರಂಭಿಸಿ ಬೀಜಗಳಾಗಲು ಶುರುವಾದರೆ, ಅವನ್ನೆಲ್ಲ ಕತ್ತರಿಸಿ ತೆಗೆಯಿರಿ. ಬೀಜಗಳು ಬರಲು ಶುರುವಾಯಿತೆಂದರೆ, ತುಳಸಿಯ ಆಯುಸ್ಸು ಮುಗಿದಂತೆ. ಆದರೆ, ಬೀಜಗಳನ್ನು ತೆಗೆಯುತ್ತಾ ಬಂದರೆ, ತುಳಸಿ ಹೆಚ್ಚು ಕಾಲ ಬದುಕಬಲ್ಲದು. ಹಾಗಾಗಿ ತುಳಸಿಯ ತುದಿಯನ್ನು ಚಿವುಟುತ್ತಲೇ ಇರಿ.

8. ತುಳಸಿಗೆ ಹುಳ ಹಿಡಿದಿದ್ದರೆ, ಸುಮಾರು 10-12 ಬಿಂದುಗಳಷ್ಟು ಕಹಿಬೇವಿನ ಎಣ್ಣೆಯನ್ನು ಒಂದು ಲೀಟರ್‌ ನೀರಿನ ಜೊತೆಗೆ ಬೆರೆಸಿ ಸ್ಪ್ರೇ ಬಾಟಲ್‌ನಲ್ಲಿ ಹಾಕಿ ರಭಸದಿಂದ ತುಳಸಿಯ ಎಲೆಗಳ ಮೇಲೆ ಸ್ಪ್ರೇ ಮಾಡಿ. ಕೈಯಿಂದ ಚಿಮುಕಿಸುವುದಲ್ಲ. ಹುಳಹಿಡಿದ ಎಲೆಗಳ ಮೇಲೆ ಸರಿಯಾಗಿ ಸ್ಪ್ರೇ ಮಾಡಿ. ಹುಳಗಳೆಲ್ಲ ಬಿದ್ದು ಹೋಗುತ್ತವೆ ಅಷ್ಟೇ ಅಲ್ಲ. ಹುಳಗಳ ಸಮಸ್ಯೆಯೂ ಬಾರದು.

ಇದನ್ನೂ ಓದಿ: Vastu Tips: ಈ ಐದು ವಸ್ತುಗಳನ್ನು ತುಳಸಿ ಗಿಡದ ಬಳಿ ಇಡಲೇ ಬೇಡಿ!

Exit mobile version