Site icon Vistara News

Ramjyoti: ಅಯೋಧ್ಯೆಯಿಂದ ಕಾಶಿಗೆ ರಾಮಜ್ಯೋತಿ ತರಲು ಮುಸ್ಲಿಂ ಮಹಿಳೆಯರು ಸಜ್ಜು; ಸಂದೇಶವೇನು?

Muslim Women

Two Muslim women set to bring Ramjyoti from Ayodhya To Kashi

ಅಯೋಧ್ಯೆ: ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ (Ram Mandir) ಲೋಕಾರ್ಪಣೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠಾಪನೆ ನೆರವೇರಿಸಲಿದ್ದಾರೆ. ದೇಶದ ಸಾವಿರಾರು ಗಣ್ಯರಿಗೆ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಅಯೋಧ್ಯೆಯಲ್ಲಿ ಹಬ್ಬದ ಕಳೆ ಮೂಡಿದ್ದು, ಬಿಗಿ ಬಂದೋಬಸ್ತ್‌ ವ್ಯವಸ್ಥೆಯನ್ನೂ ಮಾಡಲಾಗಿದೆ. ಇದರ ಬೆನ್ನಲ್ಲೇ, ಕಾಶಿಯ ಇಬ್ಬರು ಮುಸ್ಲಿಂ ಮಹಿಳೆಯರು (Muslim Women) ಅಯೋಧ್ಯೆಯಿಂದ ಕಾಶಿಗೆ ರಾಮಜ್ಯೋತಿಯನ್ನು (Ramjyoti) ಕೊಂಡೊಯ್ಯಲು ಮುಂದಾಗಿದ್ದಾರೆ. ಆ ಮೂಲಕ ಅವರು ಸೌಹಾರ್ದ ಸಂದೇಶ ರವಾನಿಸಲು ಸಜ್ಜಾಗಿದ್ದಾರೆ.

ಹೌದು, ವಾರಾಣಸಿಯ ನಜ್ನೀನ್‌ ಅನ್ಸಾರಿ ಹಾಗೂ ನಜ್ಮಾ ಪರ್ವೀನ್‌ ಎಂಬ ಮುಸ್ಲಿಂ ಮಹಿಳೆಯರು ಇಂತಹ ಸೌಹಾರ್ದ ಸಂದೇಶ ರವಾನೆಯ ತೀರ್ಮಾನ ಮಾಡಿದ್ದಾರೆ. ಇವರು ಶನಿವಾರ ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದು, ಅಯೋಧ್ಯೆಯಿಂದ ರಾಮಜ್ಯೋತಿ, ಅಯೋಧ್ಯೆಯ ಮಣ್ಣು ಹಾಗೂ ಸರಯೂ ನದಿಯ ನೀರನ್ನು ಕಾಶಿಗೆ ಕೊಂಡೊಯ್ಯಲಿದ್ದಾರೆ. ಇವರು ಭಾನುವಾರ ಕಾಶಿಯನ್ನು ತಲುಪಲಿದ್ದು, ಜನವರಿ 21ರಿಂದ ರಾಮಜ್ಯೋತಿಯನ್ನು ಹಸ್ತಾಂತರಿಸಲಿದ್ದಾರೆ ಎಂದು ತಿಳಿದುಬಂದಿದೆ. ಇಬ್ಬರೂ ಮುಸ್ಲಿಂ ಮಹಿಳೆಯರ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ram mandir ayodhya

ಎಲ್ಲರೂ ಒಂದೇ ಎಂಬ ಸಂದೇಶ ರವಾನೆ

ಭಗವಾನ್‌ ರಾಮನು ನಮ್ಮ ಪೂರ್ವಜ. ಭಾರತೀಯರೆಲ್ಲರ ಡಿಎನ್‌ಎ ಕೂಡ ಒಂದೇ ಆಗಿದೆ ಎಂಬ ಸಂದೇಶವನ್ನು ಸಾರಲು, ಆ ಮೂಲಕ ಶಾಂತಿ-ಸೌಹಾರ್ದತೆಯಿಂದ ಎಲ್ಲರೂ ಒಗ್ಗೂಡಿ ಬಾಳುವಂತೆ ಪ್ರೇರೇಪಿಸಲು ನಜ್ನೀನ್‌ ಅನ್ಸಾರಿ ಹಾಗೂ ನಜ್ಮಾ ಪರ್ವೀನ್‌ ಅವರು ರಾಮಜ್ಯೋತಿಯನ್ನು ಕಾಶಿಯಲ್ಲಿ ಬೆಳಗಲಿದ್ದಾರೆ ಎಂದು ತಿಳಿದಬಂದಿದೆ. ಇಬ್ಬರೂ ಅಯೋಧ್ಯೆ ಯಾತ್ರೆ ಕೈಗೊಳ್ಳಲು ಕಾಶಿಯ ದೊಮ್ರಾಜ್‌ ಓಂ ಚೌಧರಿ ಹಾಗೂ ಮಹಾಂತ ಶಂಭು ದೇವಾಚಾರ್ಯ ಅವರು ಚಾಲನೆ ನೀಡಲಿದ್ದಾರೆ. ಅಯೋಧ್ಯೆಯಲ್ಲಿ ಮಹಾಂತ ಶಂಭು ದೇವಾಚಾರ್ಯ ಅವರೇ ಅಯೋಧ್ಯೆಯಲ್ಲಿ ಇಬ್ಬರೂ ಮಹಿಳೆಯರಿಗೆ ರಾಮಜ್ಯೋತಿ ಹಸ್ತಾಂತರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಬ್ಬರೂ ರಾಮನ ಭಕ್ತರು

ನಜ್ನೀನ್‌ ಅನ್ಸಾರಿ ಹಾಗೂ ನಜ್ಮಾ ಪರ್ವೀನ್‌ ಅವರು ಶ್ರೀರಾಮನ ಭಕ್ತರಾಗಿದ್ದಾರೆ. ನಜ್ನೀನ್‌ ಅನ್ಸಾರಿ ಅವರು ಬನಾರಸ್‌ ಹಿಂದು ವಿವಿಯಲ್ಲಿ ಮ್ಯಾನೇಜ್‌ಮೆಂಟ್‌ ಅಧ್ಯಯನ ಮಾಡಿದ್ದಾರೆ. ಇವರು ಹನುಮಾನ್‌ ಚಾಲೀಸಾ ಹಾಗೂ ರಾಮಚರಿತಮಾನಸವನ್ನು ಉರ್ದು ಭಾಷೆಗೆ ಭಾಷಾಂತರ ಮಾಡಿದ್ದಾರೆ. ಇನ್ನು ನಜ್ಮಾ ಪರ್ವಿನ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಅಧ್ಯಯನ ಮಾಡಿ ಮಂಡಿಸಿದ ಪ್ರಬಂಧಕ್ಕೆ ಪಿ.ಎಚ್‌ಡಿ ಪಡೆದಿದ್ದಾರೆ. ಇಬ್ಬರೂ ರಾಮನ ಭಕ್ತರಾಗಿದ್ದು, ಹಿಂದು-ಮುಸ್ಲಿಮರ ಮಧ್ಯೆ ಸೌಹಾರ್ದ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ನಜ್ಮಾ ಪರ್ವಿನ್‌ ಅವರು ತ್ರಿವಳಿ ತಲಾಕ್‌ ವಿರುದ್ಧದ ಹೋರಾಟದಲ್ಲೂ ಪಾಲ್ಗೊಂಡಿದ್ದರು.

ಇದನ್ನೂ ಓದಿ: Rama Mandir : ನಾನು ರಾಮ ಭಕ್ತ, ರಾಮನೇ ನನ್ನ ಮನೆದೇವರು ಅಂದ ಮುಸ್ಲಿಂ ಕಾಂಗ್ರೆಸ್‌ ಶಾಸಕ!

Exit mobile version