Site icon Vistara News

Ugadi 2024: ಜನವರಿ 1ರ ಗದ್ದಲ ಮರೆಯೋಣ, ಯುಗಾದಿಯನ್ನು ಹೊಸ ವರ್ಷವೆಂದು ಸಂಭ್ರಮಿಸೋಣ

Ugadi 2024
ಪ್ರೊ. ವಿದ್ವಾನ್ ನವೀನಶಾಸ್ತ್ರಿ.ರಾ.ಪುರಾಣಿಕ
(ಲೇಖಕರು ಹಾಗೂ ಸಂಸ್ಕೃತ ಉಪನ್ಯಾಸಕರು, ಜ್ಯೋತಿಷಿಗಳು
)

ಯುಗಾದಿ (Ugadi 2024) ಅಥವಾ ಉಗಾದಿ, ಯುಗದ ಆದಿ, ಹಿಂದೂ ತಿಂಗಳ ಚೈತ್ರ ಮಾಸದ ಮೊದಲ ದಿನ ಕರೆಯಲ್ಪಡುವ ದಿನವೇ ಈ ಯುಗಾದಿ. ನಮ್ಮ ಭಾರತ ದೇಶದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. “ಯುಗಾದಿ” ಪದದ ಉತ್ಪತ್ತಿ “ಯುಗ+ಆದಿ” – ಹೊಸ ಯುಗದ ಆರಂಭ ಎಂದರ್ಥ.
ನಮ್ಮ ಭಾರತೀಯ ಜೋತಿಷ್ಯ ಶಾಸ್ತ್ರದ ಪರಂಪರೆಯಲ್ಲಿ ಭಾರತೀಯರು ಅನೇಕ ವಿಚಾರಗಳನ್ನು ಸಾಂಕೇತಿಕವಾಗಿ ಗ್ರಹಿಸುತ್ತಾರೆ. ಆಶ್ಚರ್ಯವಾದರೂ ಸತ್ಯ ಇದು ನಮ್ಮ ಭಾರತದ್ದೇ ಮೂಲ ಕಾಲಮಾನ ಎಂದು ಹೆಮ್ಮೆಯಿಂದ ಹೇಳಲು ಯಾರ ಮುಲಾಜೂ ಬೇಕಿಲ್ಲ. ವೇದ- ವೇದಾಂಗಗಳು ಸಂಸ್ಕೃತ ಭಾಷೆಯಲ್ಲಿ ಇದ್ದರೂ ಅವುಗಳನ್ನು ಅರ್ಥ ಮಾಡಿಕೊಳ್ಳುವುದು ಸುಲಭವಲ್ಲ‌. ಈ ಕಾರಣಕ್ಕಾಗಿಯೇ ವೇದಾಂಗಗಳನ್ನು ಪುರಾಣಾದಿಗಳನ್ನು ನಾವು ಅವಲಂಬಿಸಬೇಕಾಗುತ್ತದೆ. ಅದರ ಸಂಶೋಧನಾತ್ಮಕ ಅರಿವು, ಮೂಲವನ್ನು ಹುಡುಕುತ್ತಾ ಹೋದಾಗ ಒಂದು ವಿದ್ಯೆ ಇನ್ನೊಂದು ವಿದ್ಯೆಗೆ ಪೂರಕವೇ ಹೊರತು ಬಾಧಕವಲ್ಲ. ಆದರೆ ಪಾಶ್ಚಿಮಾತ್ಯರ ಈ ಗಾಳಿ ಇತ್ತೀಚೆಗೆ ಬಹಳಷ್ಟು ಬೀಸಲು ಪ್ರಾರಂಭವಾಗಿದೆ ಎಂದರೆ ತಪ್ಪಾಗಲಾರದು. ಅದು ಎಷ್ಟರಮಟ್ಟಿಗೆ ಎಂದು ನೀವೇ ಯೋಚಿಸಿ.

ಆಧುನಿಕತೆ ಹುಡುಕುವ ಪರಿಪಾಠ!

ನಮ್ಮಲ್ಲಿ ಇತ್ತೀಚೆಗೆ ಎಲ್ಲವಕ್ಕೂ ತಪ್ಪು ಹುಡುಕುವ ಅಥವಾ ಎಲ್ಲದರಲ್ಲಿಯೂ ಆಧುನಿಕತೆಯನ್ನು ಹುಡುಕುವ ಪರಿಪಾಠವಿದೆ. ಅದು ಇತ್ತಿಚೆಗೆ ಹೆಚ್ಚಾಗಿ ಕಂಡು ಬರುತ್ತಿದೆ. ಬಹು ಮುಖ್ಯವಾಗಿ ಪ್ರಾಚೀನತೆ, ನಮಗದು ಅಸಹ್ಯ. ನಾವು ಅಡ್ವಾನ್ಸ್‌ಡ್ ಆಗಬೇಕು ಎಂದು.
ಮಧ್ಯರಾತ್ರಿಯಲ್ಲಿ ಮಾರನೇ ದಿನದ ಕಲ್ಪನೆ. ಅಲ್ಲ ಈ ಮಧ್ಯರಾತ್ರಿಯಲ್ಲಿ ಮಾರನೇ ದಿನದ ಕಲ್ಪನೆಯಾದರು ಹೇಗೆ? ಸ್ವಲ್ಪ ಪರಿಜ್ಞಾನವಾದರೂ ಬೇಕಿನಿಸುತ್ತದೆ. ನಮ್ಮ ಜ್ಯೋತಿಷ್ಯಶಾಸ್ತ್ರದಂತೆ ಅದು ಸೂರ್ಯ ಸಿದ್ಧಾಂತವಿರಲಿ ದೃಕ್ ಸಿದ್ಧಾಂತವಿರಲಿ ದಿನದ ಆರಂಭವನ್ನು ಸೂರ್ಯೋದಯದಿಂದಲೇ ಆರಂಭಿಸುವುದು. ವಿದೇಶೀಯ ಆಕ್ರಮಣದ ದುಷ್ಪರಿಣಾಮ ಕಾಲನ ಅವಗಣನೆ. ಅಲ್ಲಿ ಮಧ್ಯರಾತ್ರಿಯಿಂದ ಕಾಲ ಗಣನೆಯಾದರು ಹೇಗೆ? ಇದನ್ನೇ ಸ್ವಲ್ಪ ಗಮನಿಸೋಣ.

ಸಮಾನೋ ಅಧ್ವಾ ಸ್ವಸ್ರೋರನಂತಸ್ತಮನ್ಯಾನ್ಯಾ ಚರತೋ ದೇವಶಿಷ್ಟೇ ।
ನ ಮೇಥೇತೇ ನ ತಸ್ಥತುಃ ಸುಮೇಕೇ ನಕ್ತೋಷಾಸಾ ಸಮನಸಾ ವಿರೂಪೇ ॥

ರಾತ್ರಿ ಮತ್ತು ಬೆಳಗ್ಗೆಗಳೆರಡಕ್ಕೂ ಸಂಚಾರ ಮಾರ್ಗ ಇರುವುದು ಒಂದೇ, ಅದಕ್ಕೆ ಅಂತ್ಯ ಎನ್ನುವುದೇ ಇಲ್ಲ. ಹಗಲು ಮತ್ತು ರಾತ್ರಿ ಇಬ್ಬರೂ ಸೂರ್ಯನ ನಿರ್ದೇಶನದಂತೆ ಸಂಚರಿಸುತ್ತಾರೆ. ರೂಪ ಮತ್ತು ಅವಸ್ಥೆಗಳು ಬೇರೆ ಬೇರೆಯಾದರೂ ಉದ್ದೇಶ ಮಾತ್ರ ಒಂದೇ, ಇಡೀ ಜಗತ್ತಿನ ನಿರ್ಮಾತೃರಾಗಿ ಜಗದ ಸೃಷ್ಟಿಯನ್ನು ನಿಯಂತ್ರಿಸುತ್ತಾ ನಿಲ್ಲದೇ ಸಂಚರಿಸುತ್ತೀರಿ ಎನ್ನುವುದಾಗಿ ಋಗ್ವೇದದ ಒಂದನೇ ಮಂಡಲದ ನೂರ ಹದಿಮೂರನೇ ಸೂಕ್ತದಲ್ಲಿ ಹೇಳಲಾಗಿದೆ.

“ನ ಮೇಥೇತೇ ನ ತಸ್ಥತುಃ ಸುಮೇಕೇ ನಕ್ತೋಷಾಸಾ ಸಮನಸಾ ವಿರೂಪೇ”

ರಾತ್ರಿಯು ಅಂಧಕಾರದಲ್ಲಿರುವುದು ಆಗ ಇಡೀ ಜಗತ್ತು ಚೇತನಾ ರಹಿತವಾಗಿರುತ್ತದೆ ಅಂಥಹ ವಿರೂಪ, ಅಂದರೆ ತಮಸ್ಸಿನಕಾಲವೂ ಸಹ ಚೇತನಾ ಸಹಿತವಾದ ಹಗಲನ್ನು ಅನುಸರಿಸಿಕೊಂಡು ಹೋಗುತ್ತದೆ ಎನ್ನುವುದು ಇಲ್ಲಿನ ಮುಖ್ಯತಾತ್ಪರ್ಯ. ಹಾಗಾದರೆ ಈ ಹನ್ನೆರಡು ಗಂಟೆ ಮಧ್ಯರಾತ್ರಿಯನ್ನು ಮಾರನೇ ದಿನದ ಲೆಕ್ಕಕ್ಕೆ ಸೇರಿಸುವುದು ಸರಿಯೇ ಎಂದರೆ ಇದು ಅಶುದ್ಧ. ಜಡವಾದ ಸಮಯದಲ್ಲಿ ಅಥವಾ ತಮೋ ಗುಣವುಳ್ಳ ಸಮಯ ಮುಗಿಯುವುದೇ ಸೂರ್ಯೋದಯವಾದ ಮೇಲೆ ಹಾಗಿರುವಾಗ ಈ ರೀತಿ ಮಧ್ಯರಾತ್ರಿಯನ್ನು ಲೆಕ್ಕಿಸುವುದು ಪ್ರಾಯಶಃ ಪಾಶ್ಚಾತ್ಯ ಅಂಧಾನುಕರಣೆ ಅವರು ನಮಗೆ ಕೊಟ್ಟ ಬಳುವಳಿ.

ರಾತ್ರಿಯ ಅಧಿದೇವತೆ ವರುಣ

ಋಗ್ವೇದದ ಹೆಚ್ಚಿನ ಕಡೆ ರಾತ್ರಿಯ ಅಧಿದೇವತೆ ವರುಣ ಅನ್ನಲಾಗಿದ್ದರೆ; ಸೂರ್ಯನೇ ಹಗಲಿಗೆ ಅಧಿಪತಿ ಎನ್ನುವುದು ಕಂಡುಬರುತ್ತದೆ.
“ಮೈತ್ರಂ ವಾ ಅಹಃ | ವಾರುಣೀ ರಾತ್ರಿಃ” ಎನ್ನಲಾಗಿದ್ದು ಸಾಕ್ಷಿ ನಿಮಗೆ ಸಿಗುತ್ತದೆ. ಸೂರ್ಯನು ದೇವಲೋಕದ ಮಗ ಎನ್ನುವುದು ಋಗ್ವೇದದ ಹತ್ತನೇ ಮಂಡಲದಲ್ಲಿ ಕಾಣ ಸಿಗುತ್ತದೆ. ದಿವಸ್ಪುತ್ರಾಯ ಸೂರ್ಯಾಯ ಎಂದು ಅಲ್ಲಿ ಹೇಳಿದ್ದರೆ, ಅಲ್ಲಿಯೇ ಇನ್ನೊಂದು ಕಡೆ ’ಸೂರ್ಯಮಾದಿತೇಯಂ’ ಎನ್ನುವುದು ಅದಿತಿಯ ಮಗ ಎಂದು ಕರೆಯಲಾಗಿದೆ. ಸೂರ್ಯನಲ್ಲಿ ಒಂದು ಕಾಂತೀಯ ಗುಣವಿದೆ. ಆತ ಜಗತ್ತಿನ ಎಲ್ಲಾ ವಸ್ತುಗಳಿಗೂ ಆತ್ಮ, ಆತನೇ ನಿಯಂತ್ರಕ ಆತನು ಜಡವನ್ನೂ ಚೇತನಾಯುಕ್ತವನ್ನಾಗಿ ಮಾಡಬಲ್ಲ ಎನ್ನುವುದು ಇದೇ ವೇದಗಳು. ಈ ಸೂರ್ಯ ಎನ್ನುವ ಶಬ್ದದ ಹುಟ್ಟೇ ಹಾಗಿದೆ, ಸೃ ಎನ್ನುವ ಧಾತುವಿನಿಂದ ಸೂರ್ಯ ಶಬ್ದದ ನಿಷ್ಪತ್ತಿಯಾಗಿದ್ದು ಸೃ ಎನ್ನುವುದು ಸಂಚಾರವನ್ನು ಸೂಚಿಸುತ್ತದೆ. ಸದಾ ಸಂಚಾರವನ್ನು ಮಾಡುವ ಗುಣವುಳ್ಳವನು ಎಂದು ಅನೇಕ ಕಡೆ ಕಂಡುಬರುತ್ತದೆ.

ಇನ್ನು ತೈತ್ತಿರೀಯ ಆರಣ್ಯಕದಲ್ಲಿ ’ಯೋ ಸೌ ತಪನ್ನುದೇತಿ | ಸ ಸರ್ವೇಷಾಂ ಭೂತಾನಾಂ ಪ್ರಾಣಾನಾದಾಯೋದೇತಿ’ ಎನ್ನಲಾಗಿದೆ. ಇದು ಎಂತಹ ಮಾತು ರೀ ಮಧ್ಯ ರಾತ್ರಿಯಲ್ಲಿ ಮಾರನೇ ದಿನವನ್ನು ಆಚರಿಸಿಕೊಳ್ಳೋ ಮೂರ್ಖರಿಗೆ ಇದು ಛಾಟೀ ಏಟು ಹೊಡೆದಂತೆ ಇದೆ. ಸೂರ್ಯನು ಅಸ್ತಂಗತನಾಗುತ್ತಲೇ ಇಡೀ ಜಗತ್ತಿನ ವ್ಯವಹಾರಗಳು ನಿಧಾನವಾಗುತ್ತಾ ಚೈತನ್ಯದ ಶಕ್ತಿಗಳನ್ನು ಕಳೆದುಕೊಳ್ಳುತ್ತವಂತೆ. ನಮ್ಮಲ್ಲಿರುವ ಜ್ಞಾನಯುಕ್ತವಾದ ಕ್ರಿಯೆಯನ್ನು ತನ್ನೊಡನೆ ತೆಗೆದುಕೊಂಡು ಹೋಗುತ್ತಾನಂತೆ. ಅದಕ್ಕೇ ರಾತ್ರಿಯಾದೊಡನೆ ಮಂಪರು ಆವರಿಸುವುದು, ನಿದ್ದೆ ಬರುವುದು, ಅದೇ ಸೂರ್ಯ ಉದಯದ ಸಮಯದಲ್ಲಿ ಪುನಃ ಮರು ಸ್ಥಾಪಿಸುತ್ತಾನಂತೆ ಅದಕ್ಕೆ ಬೆಳಗಿನ ಸಮಯ ಆಹ್ಲಾದವಾಗಿರುತ್ತದೆ ಎಂದು ಈ ತೈತ್ತಿರೀಯ ಆರಣ್ಯಕ ಹೇಳುತ್ತದೆ. ಇದನ್ನೇ ಇಂದಿನ ವಿಜ್ಞಾನವೂ ಹೌದು ಎಂದಿದೆ ಸೂರ್ಯನಿಂದಲೇ ಇಡೀ ಜಗತ್ತು ನಿಯಂತ್ರಣವಾಗುತ್ತಿದೆ ಎಂದು. ಅದನ್ನೇ ಇನ್ನೊಂದು ರೂಪದಲ್ಲಿ ಶಕ್ತಿ (ಎನರ್ಜೀ) ಎಂದು ಕರೆಯಲಾಗಿದೆ. ಅಥರ್ವವೇದದಲ್ಲಿ ನಮ್ಮ ಕಣ್ಣುಗಳಿಗೆ ಒಡೆಯ ಸೂರ್ಯನೇ ಎಂದು ಹೇಳಿದೆ. ಇದು ಎಷ್ಟು ಸತ್ಯ!!, ಸೂರ್ಯನ ಸಂಚಾರದ ಮಾರ್ಗವನ್ನು ಸರಿಪಡಿಸಿ ಕೊಡುವವನು ವರುಣ ಆದುದರಿಂದ ಸೂರ್ಯನ ಜೊತೆ ವರುಣನನ್ನೂ ಗುರುತಿಸಿ ಮಿತ್ರಾವರುಣ ಎನ್ನಲಾಗುತ್ತದೆ.

’ಸಂವತ್ಸರಃ ಕಾಲಾತ್ಮಾ ಸರ್ವಸ್ಯ ಜನಿಮತಃ …….. ತಜ್ಜ್ಯೋತಿಷಾಂ ಜ್ಯೋತಿಃ ||
ಎನ್ನುವ ಶ್ಲೋಕದಲ್ಲಿ ಶಂಕರಾಚಾರ್ಯರು ವಿವರಿಸಿದ್ದಾರೆ. ಈ ಮೂಲ ತತ್ವದ ಆಧಾರದ ಮೇಲೆ ಸಂವತ್ಸರವೇ ಮೊದಲಾದವುಗಳು ಪುನಃ ಪುನಃ ಬರುತ್ತಿರುತ್ತವೆ. ಇದೇ ಸೂರ್ಯನ ಮತ್ತು ಕಾಲದ ಜೊತೆಗೆ ಜಗತ್ತು ನಡೆಯುತ್ತಿದೆ. ಇದೇ ಕಾಲವು ವಿಶ್ವದ ವ್ಯವಹಾರಕ್ಕೆ ಮೂಲ ಎಂದು ಬೃಹದಾರಣ್ಯಕ ಉಪನಿಷತ್ತಿಗೆ ಹೇಳುತ್ತಾರೆ.

’ಏತಸ್ಯ ವಾ ಅಕ್ಷರಸ್ಯ ಪ್ರಶಾಸನೇ’ ಎನ್ನುವಲ್ಲಿ ಸೂರ್ಯ ಮತ್ತು ಚಂದ್ರ ಅವರವರ ನಿಯಮಿತವಾದ ಸ್ಥಾನದಲ್ಲಿ ಇದ್ದಾರೆ. ದೇವ ಲೋಕ ಮತ್ತು ಈ ಭೂಮಿ ಎರಡೂ ತಮ್ಮ ಮೇರೆಯನ್ನು ಮೀರುವುದಿಲ್ಲ, ನಿಮಿಷಗಳು, ಮುಹೂರ್ತಗಳು, ಅಹೋರಾತ್ರಗಳು, ಅರ್ಧಮಾಸ ಮತ್ತು ಮಾಸ, ಋತು, ಸಂವತ್ಸರಗಳು ತಮ್ಮ ಪರಿಮಿತಿಯಲ್ಲಿಯೇ ದೃಶ್ಯ ಮತ್ತು ಅದೃಶ್ಯ ಎರಡೂ ಆಗುತ್ತವೆ. ನದಿಗಳೂ ಸಹ ಹಾಗೇ. ಇವೆಲ್ಲವೂ ಅಕ್ಷರಕ್ಕೆ ಅಧೀನವಾಗಿಯೇ ಇವೆ ಎನ್ನುವುದು ಬೃಹದಾರಣ್ಯಕದ ಮಾತು. ಇನ್ನು ಜಾಸ್ತಿ ಹೇಳಿದರೆ ಅದು ಜ್ಯೋತಿಷ್ಯ ಶಾಸ್ತ್ರಕ್ಕೆ ಹೋಗುತ್ತದೆ. ಇಲ್ಲಿಗೆ ಪ್ರಸ್ತುತವಾದದ್ದನ್ನು ಹೇಳುವೆ.

ಷಡ್ಭಾರಾಂ ಅಚರನ್ಬಿಭರ್ತ್ಯೃತಂ ವರ್ಷಿಷ್ಠಮುಪ ಗಾವ ಆಗುಃ |

ತಿಸ್ರೋ ಮಹಿರುಪರಾಸ್ತ ಸ್ಥುರತ್ಯಾ ಗುಹಾ ದ್ವೇ ನಿಹಿತೇ ದರ್ಶ್ಯೇಕಾ || ಇದು ಋಗ್ವೇದದ 3 ಮಂಡಲದ 56ನೇ ಸೂಕ್ತದ 2ನೇ ಋಕ್ಕು.

ಸಂವತ್ಸರಗಳು ಆರು ಋತುಗಳನ್ನು ಹೊಂದಿವೆ. ಸೂರ್ಯ ಸತ್ಯದ ಪ್ರತೀಕನಾಗಿದ್ದಾನೆ. ಶ್ರೇಷ್ಠನಾದ ಆತನಲ್ಲಿ ರಶ್ಮಿಗಳು ಸೇರಿಕೊಳ್ಳುತ್ತವೆ. ಇವುಗಳ ಆಧಾರದಲ್ಲಿಯೇ ಮೂರು ಲೋಕಗಳು ನಿಂತಿವೆ. ಮತ್ತು ಒಂದರ ಮೇಲೊಂದರಂತೆ ಇವೆ. ಆದರೆ ಭೂಮಿಯಿಂದ ಮಿಕ್ಕುಳಿದ ಲೋಕಗಳು ಕಾಣಿಸಿಕೊಳ್ಳುವುದಿಲ್ಲ. ಎಂತಹ ಋಕ್ಕು!! ಈ ಕಿರಣಗಳಿಗೂ ಸಂವತ್ಸರ ಮತ್ತು ಋತುಗಳಿಗೂ ಇರುವ ಸಂಬಂಧವನ್ನು ಸ್ಪಷ್ಟಗೊಳಿಸುತ್ತದೆ. ಸೂರ್ಯ ಈ ಕಾಲದ ಅಧಿಪತಿ ಎನ್ನುವುದು ಮೇಲ್ನೋಟಕ್ಕೆ ಕಂಡರೆ ಆರು ಋತುಗಳಲ್ಲಿಯೂ ಸೂರ್ಯನ ಕಿರಣಗಳಲ್ಲಿನ ವ್ಯತ್ಯಾಸವನ್ನು ತಿಳಿಸಿಕೊಡುತ್ತದೆ. ಇಂತಹ ಕಿರಣಗಳಿಂದಲೇ ಪ್ರಕೃತಿಯಲ್ಲಿನ ಬದಲಾವಣೆಗಳು ಆಗುತ್ತಿರುತ್ತವೆ. ಇನ್ನೂ ಬರೆಯಬಹುದು. ಆದರೆ ಇಷ್ಟೇ ಸಾಕು ನಮ್ಮ ಮೂರ್ಖತನವನ್ನು ಬಿಡಲು. ಯಾರೋ ಯಾವುದೋ ದೇಶದಲ್ಲಿ. ಅಥವಾ ಸಂಸ್ಕಾರವರಿಯದ ಯಾವುದೋ ಕಡೆ ಸೂರ್ಯನ ಕಿರಣಗಳು ಕಡಿಮೆಯಾಗಿ ಸೂರ್ಯಾಸ್ತದ ಸಮಯದ ನಂತರ ಜ್ಞಾನಗಳು ಕಳೆಗುಂದಿ ಹುಮ್ಮಸ್ಸಿಲ್ಲದ ಕಾಲದಲ್ಲಿ ಏನೇನೋ ತಿಂದು ಕುಡಿಯಬಾರದ್ದು ಕುಡಿದು ಅಂತಹ ಮತ್ತು ತಲೆಗೇರಿ ತಾವೀಗ ಉತ್ಸಾಹ ಭರಿತರು ಎಂದು ಅಪರಾತ್ರಿಯಲ್ಲಿ ಮಾರನೇ ದಿನ ಆಚರಿಸುವ ಕಾಲಕ್ಕೂ ಶುದ್ಧ ಶಾಸ್ತ್ರೀಯವಾದ ಸೂರ್ಯೋದಯದ ಕಾಲಕ್ಕೂ ಇರುವ ವ್ಯತ್ಯಾಸವನ್ನು ನಾನು ಹೇಳುವುದಕ್ಕಿಂತ ನಾವು ಆಲೋಚಿಸಬೇಕು. ಮಧ್ಯರಾತ್ರಿಯ ಹಸ್ತಾಂತರದಂತಹ ಕ್ರಿಯೆ ನಡೆಯುವುದು ಸುರರಲ್ಲಿಲ್ಲ ಅದು ಅಸುರರಲ್ಲಿ ಮಾತ್ರ. ಸೂರ್ಯೋದಯದ ನವೋಲ್ಲಾಸದಲ್ಲಿ ಕೆಲಸ ಆರಂಭಿಸಿದರೆ ಅದರ ಆನಂದ ನಾವೇ ಅನುಭವಿಸಬಹುದು. ಯಾವುದಕ್ಕೂ ಯೋಚಿಸೋಣವೇ ? ಯಾಕೆಂದರೆ ನಮ್ಮ ದೇಶದ ಋಷಿ ಪರಂಪರೆ ಇರಬಹುದು,ಸನಾತನ ಪರಂಪರೆ ಅಥವಾ ರಾಜಪರಂಪರೆ ಇರಬಹುದು ಮಧ್ಯರಾತ್ರಿಯಲ್ಲಿ ಯಾವ ವ್ಯವಹಾರವನ್ನೂ ಮಾಡಿದಂತಿಲ್ಲ. ಪ್ರಚಂಡ ಶಾಸನ ಬರೆಸಿದ ಯಾವ ರಾಜರೂ ನಮ್ಮ ಪರಂಪರೆಯನ್ನೋ ಅಥವಾ ಸಂಸ್ಕಾರವನ್ನೋ ಹಾಳು ಮಾಡಿಲ್ಲ. ಇದು ಬಂದದ್ದು ಇತ್ತೀಚೆಗೆ.

ಸಾಂಪ್ರದಾಯಿಕ ಆಚರಣೆ ಮತ್ತು ಮಹತ್ವ

ಯುಗಾದಿ ಹಬ್ಬದ ಸಾಂಪ್ರದಾಯಿಕ ಆಚರಣೆಗಳಲ್ಲಿ ಮುಖ್ಯವಾಗಿ ಸೂರ್ಯ ನಮಸ್ಕಾರ, ಪಂಚಾಂಗದ ಪೂಜೆ, ಪಂಚಾಂಗ ಶ್ರವಣ, ಗುಡಿ ಪೂಜೆ ಹಾಗೂ ಸರ್ವೇ-ಸಾಮಾನ್ಯವಾಗಿ “ಬೇವು – ಬೆಲ್ಲದ” ಸೇವನೆ.
ಜೀವನದ ಸಿಹಿ-ಕಹಿಗಳೆರಡನ್ನೂ ಪಡೆಯಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ತಿನ್ನಲಾಗುತ್ತದೆ. ಯುಗಾದಿಯೆಂದರೆ ಹೊಸವರ್ಷದ ಆರಂಭದ ದಿನವಾದರೂ ಭಾರತದಲ್ಲಿ ಈ ದಿನವನ್ನು ನಿರ್ಧರಿಸುವ ರೀತಿ ಹಲವಾರಿವೆ. ಮುಖ್ಯವಾಗಿ ಚಾಂದ್ರಮಾನ ಹಾಗೂ ಸೌರಮಾನ ಎಂಬ ಎರಡು ಪದ್ಧತಿಗಳು, ಹಿಂದೂ ಧರ್ಮದ ವೇದಾಂಗದ ಒಂದು ಅಂಗವಾದ ಜೋತಿಷ್ಯ ಶಾಸ್ತ್ರದಿಂದ ನಿರ್ಣಯಗೊಳ್ಳುತ್ತವೆ. ಚಂದ್ರನ ಚಲನೆಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಾಂದ್ರಮಾನ ಹಾಗೂ ಸೂರ್ಯನ ಗತಿಯಿಂದ ಎಣಿಕೆ ಮಾಡುವುದನ್ನು ಸೌರಮಾನ ಎನ್ನುತ್ತಾರೆ. ಕರ್ನಾಟಕದಲ್ಲಿ ಬಹುಮುಖ್ಯವಾಗಿ ಚಾಂದ್ರಮಾನ ಪದ್ಧತಿ ಮೊದಲಿನಿಂದ ಆಚರಿಸಿಕೊಂಡು ಬಂದಿರುವ ಪದ್ಧತಿ ರೂಢಿಯಲ್ಲಿದೆ.

ಭೂಮಿಯಿಂದ ನೋಡಿದಾಗ, ಸೂರ್ಯ ಚಂದ್ರ, ಗ್ರಹಗಳು ನಕ್ಷತ್ರಮಂಡಲದಿಂದಾದ ರಾಶಿಚಕ್ರದಲ್ಲಿ ದಿನೇದಿನೇ ಸ್ವಲ್ಪ ಸ್ವಲ್ಪವಾಗಿ ಸಂಚರಿಸಿದಂತೆ ಕಾಣುತ್ತವೆ. ವೇದಾಂಗದ ಭಾಗ ಜ್ಯೋತಿಷದ ಪ್ರಕಾರ, ಮೊದಲ ನಕ್ಷತ್ರ ಅಶ್ವಿನಿ – ಅಂದರೆ ಮೇಷ ರಾಶಿಯ- 13:20 ಭಾಗ (ಡಿಗ್ರಿ). ಅಲ್ಲಿ ಸೂರ್ಯನಿದ್ದಾಗ ಭೂಮಿಯ ಉತ್ತರಾರ್ಧಗೋಳದಲ್ಲಿ ಸಸ್ಯಗಳಲ್ಲಿ ಹೊಸಚಿಗುರು ಕಾಣುತ್ತದೆ; ಅಂದರೆ ಹೊಸಹುಟ್ಟು.
ಆದ್ದರಿಂದ ಅಶ್ವಿನೀ ನಕ್ಷತ್ರಕ್ಕೆ ರವಿಯು ಪ್ರವೇಶಿಸುವ ಕಾಲವನ್ನು ಹೊಸವರ್ಷ ಎಂದು ಪರಿಗಣಿಸುತ್ತಾರೆ. ಇದೇ ಸೌರಮಾನ ಯುಗಾದಿ. ಚಂದ್ರನ ಗತಿ ಅತಿವೇಗವಾದ್ದರಿಂದ ಪ್ರತಿ ಪ್ರದಕ್ಷಿಣೆಗೂ ಒಂದೊಂದು ತಿಂಗಳಾಗಿ, ಹನ್ನೆರಡು ಪ್ರದಕ್ಷಿಣೆಗಳಿಗೆ ಸರಿಯಾಗಿ ಒಂದು ಚಾಂದ್ರಮಾನ ಸಂವತ್ಸರವಾಗುತ್ತದೆ.
ರವಿಚಂದ್ರರ ಗತಿಯನ್ನವಲಂಬಿಸಿ, 11ರಿಂದ 13 ಪೂರ್ಣಿಮೆ/ಅಮಾವಾಸ್ಯೆಗಳಿಗೊಂದು ಚಾಂದ್ರಮಾನ ಯುಗಾದಿಯಾಗುತ್ತದೆ. ಈ ಯುಗಾದಿನಿರ್ಣಯದ ಹಿಂದೆ ವೇದಾಂಗ ಜ್ಯೋತಿಷದ ಮಹತ್ತರ ಸಾಧನೆಗಳೇ ಅಡಗಿವೆ; ಅದರಿಂದ ನಮ್ಮ ಪೂರ್ವಿಕರ ಖಗೋಲಗಣಿತದ ಅಪಾರವಾದ ಜ್ಞಾನ ಇಲ್ಲಿ ವ್ಯಕ್ತವಾಗುತ್ತದೆ.

ಹಬ್ಬದ ಆಚರಣೆಯ ವಿಧಾನ

ಈ ಹಬ್ಬವನ್ನು ಹೆಚ್ಚಾಗಿ ಕರ್ನಾಟಕ ,ಆಂಧ್ರ ಮತ್ತು ಮಹಾರಾಷ್ಟ್ರಗಳಲ್ಲಿ ಆಚರಿಸುತ್ತಾರೆ. ಆಂಧ್ರ ಮತ್ತು ಕರ್ನಾಟಕಗಳಲ್ಲಿ ಇದು ಯುಗಾದಿಯಾದರೆ, ಮಹಾರಾಷ್ಟ್ರದಲ್ಲಿ ಗುಡಿಪಾಡವಾ ಪಾಡ್ಯ ದಿವಸ ಗುಡಿಯನ್ನು ಏರಿಸುವುದೇ ಗುಡಿಪಾಡ್ವ – ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಆ ಕೋಲಿಗೆ ಸುಣ್ಣ, ಕೆಂಪುಮಣ್ಣು ಹಚ್ಚಿ ತಳಿರು ತೋರಣಗಳಿಂದ ಸಿಂಗರಿಸಿ, ಹೂವಿನ ಹಾರವನ್ನು ಏರಿಸಿ ಅದರ ತುದಿಯ ಮೇಲೆ ಒಂದು ಕಂಚಿನ, ಅಥವಾ ತಾಮ್ರದ ಒಂದು ಗಿಂಡಿ (ಕಳಶ)ವನ್ನು ‘ಗುಡಿ’ ಎಂದು ತಲಬಾಗಿಲ ಒಂದು ಮೂಲೆಯಲ್ಲಿ ಇರಿಸುವರು. ಇದು ಹೊಸ ವರುಷದ ಆಗಮನಕ್ಕೆ ಬಾವುಟವನ್ನು ಹಾರಿಸುವುದರ ಸಂಕೇತವಾಗಿದೆ.

ಯುಗಾದಿಯ ದಿನದಂದು ಅಭ್ಯಂಜನ ಸ್ನಾನ:
ವತ್ಸರಾದೌ ವಸಂತಾದೌ ಬಲಿರಾಜ್ಯೇ ತಥೈವ ಚ ।
ತೈಲಾಭ್ಯಂಗಮಕುರ್ವಾಣೋ ನರಕಂ ಪ್ರತಿಪದ್ಯತೇ।।
ಹೊಸ ವರ್ಷದ ಮೊದಲ ದಿನ (ಚೈತ್ರ ಶುಕ್ಲ ಪ್ರತಿಪದ ಯುಗಾದಿ ದಿನ)
ಫಾಲ್ಗುಣ ಕೃಷ್ಣ ಪ್ರತಿಪದ(ಹೋಳಿ ಹುಣ್ಣಿಮೆ ಮಾರನೆಯ ದಿನ) ಕಾರ್ತಿಕ ಶುಕ್ಲ ಪ್ರತಿಪದ (ದೀಪಾವಳಿ ಪಾಡ್ಯ) ಈ ಮೂರು ದಿವಸಗಳಲ್ಲಿ ನರಕವಾಸ ತಪ್ಪಿಸಲು ತೈಲಾಭ್ಯಂಗ (ಎಣ್ಣೆ ಹಚ್ಚಿಕೊಂಡು) ಸ್ನಾನ ಮಾಡಬೇಕು.
ಬೇವಿನ ಎಲೆಗಳನ್ನು ನೀರಿಗೆ ಹಾಕಿ ಸ್ನಾನ ಮಾಡುವುದು,ಮುಂಜಾನೆ ಬೇಗನೆದ್ದು ಅಭ್ಯಂಜನ (ಎಣ್ಣೆ ಹಚ್ಚಿ ಸ್ನಾನ ಮಾಡುವುದು) ಸೀಗೇಕಾಯಿಯಿಂದ ತಲೆಯನ್ನು ತೊಳೆದುಕೊಳ್ಳುವುದು) ಮಾಡಿ ಪುಣ್ಯಾಹ ಮಂತ್ರಗಳನ್ನು ಉಚ್ಚರಿಸಿ ಮಾವಿನೆಲೆಯಿಂದ ಮನೆಯ ಎಲ್ಲ ಕಡೆ ಕಳಶದ ನೀರನ್ನು ಸಿಂಪಡಿಸುವರು. ನಂತರ ಹೊಸ ಬಟ್ಟೆ ಧರಿಸಿ ತಳಿರು ತೋರಣವನ್ನು (ಎಳೆಯ ಹಸಿರು ಮಾವಿನೆಲೆ ಮಧ್ಯೆ ಮಧ್ಯೆ ಬೇವಿನ ಎಲೆ ಹೂಗಳ ಗೊಂಚಲು) ಮನೆಗಳ ಮುಂಬಾಗಿಲಿಗೆ ಮತ್ತು ದೇವರ ಮನೆಯ ಬಾಗಿಲಿಗೆ ತಳಿರು ತೋರಣವಾಗಿ ಕಟ್ಟುವರು.

ಮನೆಯ ಮುಂದಿನ ಅಂಗಳದಲ್ಲಿ ಬಣ್ಣ ಬಣ್ಣದ ರಂಗೋಲಿಯನ್ನು ಹಾಕಿ ಅಂಗಳವನ್ನು ಸಿಂಗರಿಸುವ ಮೂಲಕ ಹಬ್ಬದ ಸಂಭ್ರಮ ಹೆಚ್ಚಿಸುತ್ತಾರೆ. ಬೇವು ಮತ್ತು ಬೆಲ್ಲದ ಹಿಂದೆ ಅಡಗಿದೆ ವೈಜ್ಞಾನಿಕ ಹಿನ್ನಲೆ. ಬೇವಿನ ಹೂಗಳನ್ನು ಬೆಲ್ಲದೊಂದಿಗೆ ಬೆರಸಿ ತಿನ್ನುವುದು. ಅಂದರೆ ಬೇಸಿಗೆ ಬಿಸಿಲಿನ ತಾಪದಿಂದ ದೇಹದಲ್ಲಿ ಉಷ್ಣತೆಯ ಪ್ರಮಾಣ ಹೆಚ್ಚಾಗಿ ಚರ್ಮಕ್ಕೆ ಸಂಬಂಧಿಸಿದ ಅನೇಕ ಖಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ಇಂತಹ ಚರ್ಮಕ್ಕೆ ಸಂಬಂಧಿಸಿದ ಅನೇಕ ಖಾಯಿಲೆಗಳಿಗೆ ಈ ಬೇವಿನ ಎಲೆ,ಹೂ ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಬಹಳ ಮಹತ್ವ ಪಡಿದಿದೆ,ಬೆಲ್ಲವು ನಮ್ಮ ದೇಹದಲ್ಲಿ ನೀರಿನ ಅಂಶವನ್ನು ಸಮತೋಲನಗೊಳಿಸಿ ಉತ್ಸಾಹವನ್ನು ತುಂಬುತ್ತದೆ. ಅಲ್ಲದೆ ಬಳಲಿದ ದೇಹಕ್ಕೆ ಆರಾಮವೆನಿಸುತ್ತದೆ.ಇಂದಿಗೂ ಅನೇಕ ಕಡೆಗಳಲ್ಲಿ ಮಧ್ಯಾಹ್ನ ಅತಿಥಿಗಳನ್ನು ಉಪಚರಿಸಲು ಈ ಪದ್ಧತಿ ಇನ್ನೂ ರೂಡಿಯಲ್ಲಿದೆ.

ಹುಣಿಸೇಹಣ್ಣು, ಬೆಲ್ಲ, ಮಾವಿನಕಾಯಿ

ಉಪ್ಪು , ಮೆಣಸು, ಬೇವು ಇತ್ಯಾದಿಗಳ ಮಿಶ್ರಣ ಮಾಡಿ ಯುಗಾದಿ ಪಚ್ಚಡಿ ಎಂಬ ಹೆಸರಿನ ಪದಾರ್ಥವನ್ನು ಅಥವಾ ಪಾನಕ ಕೋಸಂಬರಿಯನ್ನು ನೈವಿಧ್ಯಮಾಡಿ ಸೇವಿಸುವರು. ಅಂದು ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಅಲಂಕಾರ ಮಾಡಿ ಇಷ್ಟದ ದೇವರ ದರ್ಶನ ಮಾಡಿ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ.
ಪಂಚಾಂಗ ಪುಜೆಯನ್ನು ಮಾಡಿದ ನಂತರ ಪಂಚಾಂಗ ಶ್ರವಣ ಮನೆಯ ಹಿರಿಯರು ಓದುವರು ಮತ್ತೆಲ್ಲರೂ ಅದನ್ನು ಕೇಳುವರು.

ಪಂಚಾಂಗ ಶ್ರವಣ ಹಾಗೂ ರಾಶಿ ಫಲ

ಪಂಚಾಂಗ ದಿನಸೂಚಿಯಷ್ಟೆ ಅಲ್ಲದೇ ಆ ವರುಷದಲ್ಲಿ ಮಳೆ ಬೆಳೆ ಹೇಗಿದೆ, ರಾಶಿಫಲ, ಮದುವೆ ಉಪನಯನಗಳಿಗೆ ಒಳ್ಳೆಯ ಮುಹೂರ್ತಗಳು,ರಾಶಿಗಳ ಆಯ-ವ್ಯಯ ಒಟ್ಟಾರೆಯಾಗಿ ಜನಜೀವನದ ಸ್ಥಿತಿಯನ್ನು ತಿಳಿಯಲು ವರ್ಷ ಭವಿಷ್ಯ ಕೇಳುವ ಪದ್ಧತಿ ಇದೆ. ಅಂದು ಮನೆ ಮಂದಿ (ನವ ವಸ್ತ್ರ ಧಾರಣೆ) ಹೊಸ ಬಟ್ಟೆಗಳನ್ನು ಧರಿಸಿ ಸಂತೋಷದಿಂದ ಹಾಡಿ ನಲಿವರು.

ಖಣಿ ಇಡುವುದು

ಕರಾವಳಿಯ ಸೌರಮಾನ ಯುಗಾದಿಯ ವಿಶೇಷತೆ ಖಣಿ ಇಡುವುದು. ಬಾಳೆ ಎಲೆ, ತಟ್ಟೆಯಲಿ ಅಕ್ಕಿ ಹಾಕಿ ಅದರ ಮೇಲೆ ತೆಂಗಿನಕಾಯಿ, ಸೌತೇಕಾಯಿ, ರವಿಕೆ ಕಣ, ಹೊಸ ಬಟ್ಟೆ, ಚಿನ್ನ, ಬತ್ತದ ತೆನೆ, ಹಣ್ಣು, ಇಷ್ಟದ ದೇವರ ಪ್ರತಿಮೆ ಅದರ ಮುಂದೆ ಒಂದು ಕನ್ನಡಿ ಆ ಕನ್ನಡಿಯಲಿ ದೇವರ ಪ್ರತಿಮೆ ಹಾಗೂ ತಟ್ಟೆಯಲಿ ಇಟ್ಟಂತಹ ವಸ್ತುಗಳನ್ನು ಕಾಣುವ ಹಾಗೆ ಇಡುತ್ತಾರೆ. ಯುಗಾದಿ ಹಬ್ಬದಂದು ಬೆಳಿಗ್ಗೆ ಬೇಗ ಎದ್ದು ದೇವರ ದೀಪ ಹಚ್ಚಿ ಖಣಿಯಲ್ಲಿನ ಕನ್ನಡಿಯಲಿ ದೇವ ದರ್ಶನ ಪಡೆಯುವುದು ಅಂದಿನ ವಿಶೇಷ. ನಂತರ ಸ್ನಾನ, ವೈವಿಧ್ಯಮಯ ರುಚಿ ರುಚಿಯಾದ ಅಡುಗೆ ಮಾಡಿ ನೈವೇದ್ಯ ಅರ್ಪಿಸಿ, ದೇಗುಲಕ್ಕೆ ಹಾಗೂ ಹಿರಿಯರ ಆಶೀರ್ವಾದ ಪಡೆದು , ಪಂಚಾಂಗ ಶ್ರವಣ ಮಾಡುವರು ಅಂದಿನ ವಿಶೇಷವೇ ಒಬ್ಬಟ್ಟು ಅಥವಾ ಹೋಳಿಗೆ.
ತೆಂಗಿನಕಾಯಿ ಹೂರಣದಲ್ಲಿ ಮಾಡಿದ ಹೋಳಿಗೆ ಬಹಳ ದಿನ ಇರದೇ ಕೆಡುವುದೆಂದು ಕಡಲೆ ಅಥವಾ ತೊಗರೀ ಬೇಳೆಯ ಹೂರಣದಲ್ಲಿ ಮಾಡುವರು. ಇದನ್ನೇ ಮರಾಠಿಯಲ್ಲಿ ಪೂರಣ ಪೋಳಿ ಎಂದು ಕರೆವರು.
ಸಂಜೆಯ ವೇಳೆಯಲ್ಲಿ ಗುರು ಹಿರಿಯರ ಮನೆಗಳಿಗೆ ಹೋಗಿ ಅವರಿಗೆ ಕಾಲುಮುಟ್ಟಿ ನಮಸ್ಕರಿಸಿ ಅವರ ಆಶೀರ್ವಾದ ಪಡೆವರು. ಮನೆಯ ಹೆಂಗಸರು ಹೊಸದಾಗಿ ಬರುವ ಮಾವಿನಕಾಯಿಯಿಂದ ಉಪ್ಪಿನಕಾಯಿಯನ್ನು ಮಾಡುವರು.

ಬೇವು-ಬೆಲ್ಲ

ಯುಗಾದಿಯ ದಿನ ಸುಖದ ಸಂಕೇತವಾದ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ಸ್ವೀಕರಿಸುವರು. ತಿಂದ ಮೇಲೆ ಬೆಲ್ಲವು ಹೊಟ್ಟೆಯೊಳಗೆ ಉರಿಯ ಅಥವಾ ಶಾಖವನ್ನು ಉಂಟು ಮಾಡಿದರೆ ಬೇವು ಆ ಉರಿಯ ಶಮನಕಾರಿ.

ಬೇವುಬೆಲ್ಲದ ಮಿಶ್ರಣವನ್ನು ತಿನ್ನುವಾಗ ಹೇಳುವ ಶ್ಲೋಕ:
ಶತಾಯುವ್ರಜ್ರದೇಹತ್ವ ಸರ್ವಸಂಪತ್ ಪ್ರದಂ ತಥಾ।
ಸರ್ವಾರಿಷ್ಟ ಹರಂ ಕುರ್ವೇ ನಿಂಬಪತ್ರಾಶನಂ ಶುಭಂ।। –

ಅದರರ್ಥ ಹೀಗಿದೆ: ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ ಎಂದರ್ಥ.

ಪಾರಿಭದ್ರಸ್ಯ ಪತ್ರಾಣಿ ಕೋಮಲನಿ ವಿಶೇಷತಃ।
ಸಪುಷ್ಪಾಣಿ ಸಾಮಾನೀಯ ಚೂರ್ಣಂ ಕೃತ್ವಾ ವಿಧಾನತಃ।।
ಮರೀಚಿ-ಹಿಂಗು ಲವಣಮಜೋದಾಃ ಸಶರ್ಕರಾಃ।
ತಿಂತ್ರಣೀಮೇಲನಂ ಕೃತ್ವಾ ಭಕ್ಷಯೇದ್ ರೋಗಶಾಂತಯೇ।।

ಅತ್ಯಂತ ಕೋಮಲವಾದ ನಿಂಬ(ಬೇವಿನ ಚಿಗುರೆಲೆಗಳನ್ನು) ಪತ್ರಗಳನ್ನು ಹೂವು ಸಹಿತವಾಗಿ ತಂದು ವಿಧಿಯಿಂದ ಚೂರ್ಣ ಮಾಡಿ, ಮೆಣಸು,ಇಂಗು, ಸೈಂದಲವಣ, ಅಜವಾನ, ಹುಣಸೆಹಣ್ಣು, ಸಕ್ಕರೆ ಕೊಡಿಸಿ ರೋಗ ಶಮನಕ್ಕಾಗಿ ಭಕ್ಷಿಸಬೇಕು.

ಜನೆವರಿ ನ್ಯೂ ಇಯರ್ ಡೇ?

ಜನವರಿ 1ರಂದು New Year Day (ಪಾಶ್ಚಿಮಾತ್ಯರ ಹೊಸ ವರ್ಷ)ಆಚರಣೆಗೆ ಬಂದಿದ್ದಾರೂ ಹೇಗೆ ಎನ್ನುವುದನ್ನ ನಾವು ಭಾರತೀಯರು ತಿಳಿದುಕೊಳ್ಳಲೇಬೇಕಾದ ಮುಖ್ಯ ವಿಷಯವಾಗಿದೆ. ಇತಿಹಾಸದ ಕಾಲ ಘಟ್ಟವನ್ನು ಅವಲೋಕಿಸುತ್ತ ಕೆಲವು ವಿಚಾರಗಳನ್ನು ಅವಲೋಕಿಸಿ ನೋಡಿದಾಗ 1753ರಲ್ಲಿ ಇಂಗ್ಲೆಂಡಿನಲ್ಲಿ ಪ್ರಥಮ ಬಾರಿಗೆ New Year Day (ಪಾಶ್ಚಿಮಾತ್ಯರ ಹೊಸ ವರ್ಷ)ವನ್ನು ಆಚರಿಸಲಾಯಿತು. ಮತ್ತದರ ಹಿಂದಿನ ರಹಸ್ಯವನ್ನು ಜಾಲಾಡುತ್ತಾ ಹೋದಾಗ ಆಶ್ಚರ್ಯಕಾರಿ ವಿಷಯಗಳು ಹೊರ ಹೊಮ್ಮುತ್ತವೆ.
ಪ್ರಾಚೀನ ಕಾಲದಿಂದಲೂ ಕಾಲಮಾನ ಪದ್ಧತಿ, ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯಶಾಸ್ತ್ರಗಳ ಬಳಕೆಯಲ್ಲಿ ಭಾರತೀಯರು ಮತ್ತು ರೋಮನ್ನರದ್ದು ಮೇಲುಗೈ. ಅದೇ ತರಹ ಭಾರತೀಯರು ಕಾಲ ನಿರ್ಣಯವನ್ನು ಗ್ರಹ ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿ, ತಿಥಿ, ಯೋಗ,ಕರ್ಣ, ನಕ್ಷತ್ರ, ವಾರ, ಮಾಸ, ಸಂವತ್ಸರಗಳನ್ನು ನಿಖರವಾಗಿ ಸಿದ್ಧಗೊಳಿಸುವ ಪಂಚಾಂಗಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೆ ಪ್ರಾಚೀನ ರೋಮ್ ಸಾಮ್ರಾಜ್ಯದ ಕಾಲ ನಿರ್ಣಯ ಪದ್ದತಿ ಹೇಗಿತ್ತು? ಒಂದು ವರ್ಷಕ್ಕೆ ಹತ್ತೇ ತಿಂಗಳೆಂದು ರೋಮನ್ನರು ನಂಬಿದ್ದರು. ‘ಭಾರತಿಯ ಕಾಲಶಾಸ್ತ್ರ ನಿರ್ಣಯ ಪದ್ಧತಿಯಿಂದ ಕಲಿತು ರೋಮನ್ನರು ರೋಮನ್ ಕ್ಯಾಲೆಂಡರಿಗೆ ಜನವರಿ ಮತ್ತು ಫೆಬ್ರವರಿಗಳನ್ನು ಸೇರಿಸಿ ಅವರ ಪ್ರಕಾರದ ವರ್ಷಕ್ಕಿರುವ ಒಟ್ಟು ತಿಂಗಳುಗಳನ್ನು ಹತ್ತರಿಂದ ಹನ್ನೆರಡಕ್ಕೆ ಏರಿಸಿದರು. ಜೂನ್ ತಿಂಗಳಲ್ಲಿ 29 ದಿವಸಗಳು ಮಾತ್ರ ಇದ್ದು ಅದನ್ನು 30ಕ್ಕೆ ಏರಿಸಿದರು. ನಂತರ ರೋಮ್ ದೊರೆ ‘ಜೂಲಿಯಸ್ ಸೀಸರ್’ ಆತನ ಹೆಸರಿನಲ್ಲಿಯೇ “ಜುಲೈ” ತಿಂಗಳನ್ನು ನಾಮಕರಣ ಮಾಡಿದನು. ಆತನ ಉತ್ತರಾಧಿಕಾರಿ “ಆಗಸ್ಟಸ್” ಆತನ ಹೆಸರಿನಲ್ಲಿ ಮುಂದಿನ ತಿಂಗಳನ್ನು ‘ಆಗಸ್ಟ್’ ಎಂದು ಕರೆದನು. ಭಾರತೀಯ ಶಾಸ್ತ್ರದಿಂದ ರೋಮನ್ನರು ಅವರ ಮುಂದಿನ ತಿಂಗಳುಗಳನ್ನು; ಸೆಪ್ಟೆಂಬರ್ (ಸಂಸ್ಕೃತ – ಸಪ್ತ = 7 ನೇ+ ಅಂಬರ= ತಿಂಗಳು/ ಆಕಾಶ), ಅಕ್ಟೋಬರ್ (ಅಷ್ಟ= 8ನೇ), ನವೆಂಬರ (ನವ= 9ನೇ) ಮತ್ತು ದಶಂಬರ (ದಶ= 10ನೇ) ಅಂಬರ /ತಿಂಗಳು ಎಂದು ಕರೆದರು. ಜನೆವರಿ ಮತ್ತು ಫೆಬ್ರವರಿ ನೂತನ ಎರಡು ಮಾಸಗಳನ್ನು ಸೇರಿಸುವ ಮೊದಲು ಇವುಗಳು ಕ್ರಮವಾಗಿ 7, 8, 9, 10 ನೇ ತಿಂಗಳುಗಳು ಆಗಿದ್ದವು. ಆದರೆ ನೂತನ ಎರಡು ತಿಂಗಳುಗಳನ್ನು ಅವರ ತಿಂಗಳುಗಳ ಪಟ್ಟಿಯಲ್ಲಿ ಕೊನೆಗೆ ಸೇರಿಸುವ ಬದಲು ಮೊದಲಿಗೆ ಸೇರಿಸಿದರು. ಈ ಸೇರ್ಪಡೆಯಿಂದ ಮಾರ್ಚಿನಿಂದ ಡಿಸೆಂಬರದವರೆಗಿನ ಎಲ್ಲಾ ತಿಂಗಳುಗಳು 2 ಸ್ಥಾನ ಕೆಳಗೆ ಜಾರಿದವು. ಆದ ಕಾರಣ ಈಗ ಸೆಪ್ಟಂಬರ್, ಅಕ್ಟೋಬರ್, ನವೆಂಬರ್, ದಶಂಬರ್ ತಿಂಗಳುಗಳು ನಿಜವಾದ ಅರ್ಥ ಕಳೆದು ಕೊಂಡು ವಿರೋಧವಾಗಿ 9, 10, 11, 12ನೇ ತಿಂಗಳುಗಳಾಗಿವೆ. ನವೆಂಬರ (ನವ ಅಂಬರ) 9ರ ಬದಲಿಗೆ 11ಕ್ಕೆ ಬಂದಿದ್ದು, ಡಿಸೆಂಬರ (ದಶ ಅಂಬರ 10)ರ ಬದಲಿಗೆ 12ಕ್ಕೆ ಬಂದಿದೆ.

ಭಾರತೀಯ ಸಂಸ್ಕೃತಿಯ ಪ್ರಕಾರ

ಅದೇ ಪ್ರಾಚೀನ ಭಾರತೀಯ ಸಂಸ್ಕೃತಿಯ ಪ್ರಕಾರ ಯುಗಾದಿಯ ದಿನದಂದು ಹೊಸ ವರ್ಷವೆಂದು ಆಚರಿಸುತ್ತಿದ್ದರು. ಇದು ಸರಿಸುಮಾರು ಪಾಶ್ಚಿಮಾತ್ಯರ (ರೋಮನ್ನರ ) ಮಾರ್ಚ್ ತಿಂಗಳಿನಲ್ಲಿ ಬರುತ್ತದೆ. ಮತ್ತು ರೋಮನ್ನರ ಹಳೆಯ ಕ್ಯಾಲೆಂಡರ್ ನಲ್ಲೂ ಕೂಡ ನ್ಯೂ ಇಯರ್ ಮಾರ್ಚ್ ನಿಂದ ಪ್ರಾರಂಭವಾಗುತ್ತಿತ್ತು. ಆದರೆ ಅವರು ಹೆಚ್ಚುವರಿಯಾಗಿ ಸೇರಿಸಿದ ಜನೆವರಿ ಮತ್ತು ಫೆಬ್ರವರಿಗಳನ್ನು ಕೊನೆಯ ತಿಂಗಳಾದ ಡಿಸೆಂಬರ್‌‌ ನಂತರ ಸೇರಿಸುವ ಬದಲು ಪ್ರಥಮ ತಿಂಗಳು ಮಾರ್ಚ್ ಗಿಂತ ಮೊದಲು ಸೇರಿಸಿ ಜನೆವರಿಯಿಂದ ತಿಂಗಳುಗಳ ಲೆಕ್ಕ ಹಾಕಿದರು. ಹಾಗಾಗಿ ಅಂದಿನಿಂದ ಅವರ ಹೊಸದಾಗಿ ತಯಾರಾದ ಕ್ಯಾಲೆಂಡರ್ ಜನೆವರಿ ಯಿಂದ ಪ್ರಾರಂಭವಾಗಿ ಡಿಸೆಂಬರ್‌ಗೆ ಕೊನೆಗೊಳ್ಳುತ್ತದೆ. ಆದರೆ ದುರದೃಷ್ಟ ಏನೆಂದರೆ ನಾವಿಂದು ನಮ್ಮ ಮೂಲ ಕಾಲಮಾನ ಪದ್ಧತಿ ಗೊತ್ತಿದ್ದರೂ ಸಹ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ ನಮ್ಮ ಮೂಲತನವನ್ನೇ ಕಳೆದುಕೊಂಡು ಅವರ ಕ್ಯಾಲೆಂಡರ್ ನಂತೆ ಹೊಸವರ್ಷವನ್ನು ಆಚರಿಸುತ್ತಿರುವುದು. ಮಾರ್ಚ್ ತಿಂಗಳಿನಲ್ಲಿ ಬರುವ ಯುಗಾದಿಯ ಸಮಯದಲ್ಲಿ ಹವಾಮಾನದಲ್ಲಿ ಬದಲಾವಣೆಯನ್ನು ಕಾಣಬಹುದು. ಅದೇ ಕಾರಣಕ್ಕೆ ಯುಗಾದಿಯ ನಂತರ ನಮ್ಮ ರೈತರು ಬೆಳೆ ಬಿತ್ತುವುದು. ಆದರೆ ಈಗಿನ ನಮ್ಮ ಯುವ ಜನರು ಪಾಶ್ಚಾತ್ಯ ಸಂಸ್ಕೃತಿಯ DAYಯನ್ನು ಆಚರಿಸುವ ಮೂಲಕ ನಮ್ಮ ಭಾರತೀಯ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಅಷ್ಟೇ ಅಲ್ಲದೇ ಈ New Year Day ಸಂದರ್ಭದಲ್ಲಿ ಹಲವಾರು ಯುವಕ, ಯುವತಿಯರು ಕುಡಿತ, ಸಲುಗೆ, ಕಾಮಕೇಳಿಯಂತಹ ದುಶ್ಚಟಕ್ಕೆ ಬಿದ್ದು, ತಮ್ಮ ಪ್ರಾಣ, ಮಾನವನ್ನು ಹಾಳು ಮಾಡಿ ಕೊಳ್ಳುತ್ತಿದ್ದಾರೆ. New Year Day ಆಚರಣೆಯಲ್ಲಿ ಕುಡಿತದ ಮತ್ತಿನಲ್ಲಿ ಎಷ್ಟೋ ಅಪಘಾತ ಆಗಿರುವುದನ್ನು , ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯ ಕೆಡಿಸಿಕೊಂಡವರನ್ನು ನೋಡಿದ್ದೇವೆ. ಅದೇ ರೀತಿಯಾಗಿ ಈ ಸಂದರ್ಭದಲ್ಲಿ ಬಹಳಷ್ಟು ರಾಷ್ಟ್ರಗಳಲ್ಲಿ (ಭಾರತವೂ ಸೇರಿ) ಅನ್ಯಮತೀಯರ ಮತಾಂತರ ಎಂಬ ದೊಡ್ಡ ಸಾಮಾಜಿಕ ರೋಗ ಆಗುತ್ತವೆ. ಭವ್ಯ ಭಾರತೀಯ ಸಂಸ್ಕೃತಿಯ, ಸಂಪ್ರದಾಯಗಳನ್ನು ಆಚರಿಸಿ, ಆರೋಗ್ಯವನ್ನು ಕಾಪಾಡಿಕೊಂಡು ಮುಂದಿನ ತಲೆಮಾರಿಗೆ ಮಾದರಿ ಆಗುವ ನಿಟ್ಟಿನಲ್ಲಿ ಇನ್ನಾದರೂ ಯೋಚನೆ ಮಾಡೋಣ. ನಮ್ಮ ಯುಗಾದಿಗೆ ಮಹತ್ವವನ್ನು ಕೊಡೋಣ. ಕ್ರೋಧಿನಾಮ ಸಂವತ್ಸರ ಸಕಲರಿಗೂ ಶುಭವನ್ನುಂಟು ಮಾಡಲಿ.

Exit mobile version