ಬೆಂಗಳೂರು: ವೈಕುಂಠ ಏಕಾದಶಿಯಂದು (Vaikuntha Ekadashi 2023) ಸ್ವರ್ಗದ ಬಾಗಿಲು ತೆರೆಯುವ ದಿನ. ಈ ದಿನದಂದು ವಿಷ್ಣುವಿಗೆ ವಿಶೇಷ ಪೂಜೆ-ಪುನಸ್ಕಾರಗಳನ್ನು ಸಲ್ಲಿಸಲಾಗುತ್ತದೆ. ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ನಗರದ ವೈಯ್ಯಾಲಿಕಾವಲ್‌ನಲ್ಲಿನ ವೆಂಕಟೇಶ್ವರ ದೇವಸ್ಥಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಸಚಿವರಾದ ಡಾ. ಸಿ.ಎನ್.ಅಶ್ವಥ್ ನಾರಾಯಣ್, ಮುನಿರತ್ನ ಉಪಸ್ಥಿತರಿದ್ದರು.
ದೇವರ ದರ್ಶನದ ಬಳಿಕ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ವೈಕುಂಠ ಏಕಾದಶಿ ನಮ್ಮ ಹಿಂದು ಧರ್ಮದಲ್ಲಿ ಪವಿತ್ರವಾದ ದಿನ. ತಿರುಪತಿಯಲ್ಲಿ ಕೋಟಿ ಜನ ಬಂದು ದರ್ಶನ ಮಾಡುತ್ತಾರೆ. ಹೀಗಾಗಿ ನಾನು ವೆಂಕಟೇಶ್ವರನ ದರ್ಶನ ಪಡೆದಿದ್ದೇನೆ. ಇಡೀ ಕರ್ನಾಟಕದ ಜನತೆಗೆ ಅಭಿವೃದ್ಧಿ, ಸಂವೃದ್ಧಿಯಾಗಲಿ ಎಂದು ಬೇಡಿಕೊಂಡಿದ್ದೇನೆ ಎಂದರು.
ವಿಷ್ಣುವಿನ ಸ್ಮರಣೆ ಮಾಡಿದ ಭಕ್ತಗಣ
ಧರ್ನುರ್ಮಾಸದ ವೈಕುಂಠ ಏಕಾದಶಿ ಪ್ರಯುಕ್ತ ಹಲವು ವಿಷ್ಣು ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯುತ್ತಿದೆ. ಬೆಂಗಳೂರು ಗ್ರಾಮಾಂತರದ ನೆಲಮಂಗಲ ನಗರದ ಶ್ರೀಲಕ್ಷ್ಮೀವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿಗೆ ಸುಪ್ರಭಾತ ಸೇವೆಯಿಂದ ಪ್ರಾರಂಭವಾಗಿ ಪೂಜಾ ಕೈಂಕರ್ಯಗಳು ಮುಂಜಾನೆ 5 ಗಂಟೆಯಿಂದಲೇ ಶುರುವಾಯಿತು. ಭಕ್ತಾಧಿಗಳು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಮಾಡಿದರು.
ಇಸ್ಕಾನ್, ಟಿಟಿಡಿಯಲ್ಲಿ ಅದ್ಧೂರಿ ಆಚರಣೆ
ಬೆಂಗಳೂರು ನಗರದಾದ್ಯಂತ ವೈಕುಂಠ ಏಕಾದಶಿ ಸಂಭ್ರಮ ಮನೆ ಮಾಡಿತ್ತು. ರಾಜಾಜಿನಗರದಲ್ಲಿರುವ ಇಸ್ಕಾನ್, ಮಹಾಲಕ್ಷ್ಮೀ ಲೇಔಟ್‌ನ ವೆಂಕಟೇಶ್ವರ ದೇವಾಲಯ, ಮಲ್ಲೇಶ್ವರಂನ ಟಿಟಿಡಿ ಹಾಗೂ ಲಕ್ಷ್ಮೀನರಸಿಂಹ ದೇವಾಲಯದಲ್ಲಿ ಅದ್ಧೂರಿಯಾಗಿ ಏಕಾದಶಿಯನ್ನು ಆಚರಿಸಲಾಯಿತು. ವೈಕುಂಠ ಏಕಾದಶಿಯಂದು ವಿಷ್ಣುವಿನ ಸ್ಮರಣೆ ಮಾಡಿದರೆ ಮೋಕ್ಷ ಲಭಿಸುತ್ತದೆ ಎಂಬ ನಂಬಿಕೆ ಇದೆ.
ನಗರದ ಇಸ್ಕಾನ್ ದೇವಸ್ಥಾನದಲ್ಲಿ ರಾತ್ರಿ 3 ಗಂಟೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ಸಾಧ್ಯತೆ ಇದ್ದು ಸೋಮವಾರ ರಾತ್ರಿ 11ರ ವರೆಗೂ ವಿಶೇಷ ಪೂಜೆಗಳು ನಡೆಯಲಿದೆ. ಇತ್ತ ಮಲ್ಲೇಶ್ವರಂನ ಟಿಟಿಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದು, ಕಬ್ಬು ಸೇರಿ ವಿವಿಧ ಹಣ್ಣುಗಳಿಂದ ವಿಶೇಷ ಅಲಂಕಾರ ಮಾಡಲಾಗಿದೆ. ಈ ಬಾರಿ 200 ರೂ. ವಿಶೇಷ ದರ್ಶನ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ | Vaikuntha Ekadashi 2023 | ಮನಸ್ಸಿಗೆ ವಿಕುಂಠಿತವಾದ ಗತಿಯನ್ನುಂಟು ಮಾಡುವುದೇ ವೈಕುಂಠ ಏಕಾದಶಿ