ನಾಗರಾಜ ಜಿ.
ಪುಷ್ಯ ಶುಕ್ಲ ಏಕಾದಶಿಯು ಧನುರ್ಮಾಸದಲ್ಲಿ ಬಂದರೆ ಅದುವೇ ವೈಕುಂಠ ಏಕಾದಶಿಯಾಗುತ್ತದೆ. ಅದರಂತೆ ಸೋಮವಾರ ವೈಕುಂಠ ಏಕಾದಶಿ (Vaikuntha Ekadashi 2023). ಈ ದಿನದಂದು ಜನರು ವೆಂಕಟರಮಣಸ್ವಾಮಿಯ ದೇವಾಲಯಕ್ಕೆ ಹೋಗಿ ದೇವರ ದರ್ಶನ ಮತ್ತು ಸೇವೆ ಮಾಡಿ ಧನ್ಯತೆಯನ್ನು ಭಾವಿಸುತ್ತಾರೆ. ಈ ವೈಕುಂಠ ಏಕಾದಶಿಯ ಹಿನ್ನೆಲೆಯನ್ನು ವಿಶ್ಲೇಷಿಸುವುದು ಈ ಲೇಖನದ ಉದ್ದೇಶ.
ಒಂದು ವರ್ಷದ ಕೆಲವು ದಿನಗಳಲ್ಲಿ ದೇವತೆಗಳ ಅನುಗ್ರಹವು ವಿಶೇಷವಾಗಿ ಹರಿಯುತ್ತಿದ್ದು ಅಂತಹಾ ದಿನಗಳನ್ನು ಪರ್ವ ಅಥವಾ ಹಬ್ಬಗಳೆಂದು ಕರೆಯುತ್ತಾರೆ. ಆ ದಿನದಲ್ಲಿ ಯಾವ ದೇವತೆಯ ಅನುಗ್ರಹವು ವಿಶೇಷವಾಗಿ ಹರಿಯುತ್ತದೆಯೋ ಆ ದೇವತೆಯನ್ನು ವಿಶೇಷವಾಗಿ ಆರಾಧಿಸಿ ಆ ಪರ್ವಕ್ಕೆ ತಕ್ಕಂತೆ ಯೋಗ ಭೋಗಗಳನ್ನನು ಭವಿಸುವುದು ಭಾರತೀಯರ ಅಚರಣೆಯ ರೀತಿ. ಈ ನೇರದಲ್ಲಿ ವೈಕುಂಠ ಏಕಾದಶಿ ಪರ್ವದ ವಿಶೇಷತೆ ಏನು? ಈ ಪರ್ವದ ಆರಾಧ್ಯ ದೇವ ಯಾರು? ಈ ಹಬ್ಬದ ಆಚರಣೆ ಏನು ಎನ್ನುವುದು ಈ ಸಂದರ್ಭದಲ್ಲಿ ಪ್ರಸ್ತುತವಾದ ಪ್ರಶ್ನೆಗಳು.
ಹೆಸರಿನಲ್ಲೇ ಸೂಚಿತವಾಗಿರುವಂತೆ, ಮನಸ್ಸಿಗೆ ವಿಕುಂಠಿತವಾದ ಗತಿಯನ್ನುಂಟು ಮಾಡುವುದೇ ವೈಕುಂಠ ಏಕಾದಶಿಯ ವಿಶೇಷತೆ. ವೈಕುಂಠ ಎನ್ನುವ ಪದವು ‘ಕುಠ್’ ಎನ್ನುವ ಧಾತುವಿನಿಂದ ವ್ಯುತ್ಪತ್ತಿಯನ್ನು ಹೊಂದಿದೆ. ಕುಠ್ ಎಂದರೆ ತಡೆ ಅಥವಾ ನಿಲ್ಲಿಸು ಎಂದು ಅರ್ಥ. ತಡೆದು ತಡೆದು ಮುಂದೆ ಹೋಗುವ ಗತಿಯನ್ನು ಕುಂಠಿತವಾದ ಗತಿ ಎನ್ನುತ್ತಾರೆ ಮತ್ತು ಇದಕ್ಕೆ ವಿರುದ್ಧವಾದುದು ವಿಕುಂಠಿತವಾದ ಗತಿ. ನಮ್ಮ ಪ್ರಾಪಂಚಿಕ ಜೀವನವು ಯಾವಾಗಲೂ ಸುಖ ದುಃಖಗಳಿಂದ ಅಥವಾ ಏರುಪೇರುಗಳಿಂದ ಕೂಡಿರುವುದರಿಂದ ನಮ್ಮ ಮನಸ್ಸು ತಳಮಳವನ್ನು ಹೊಂದಿದ್ದು ಏರಿಳಿತಗಳಿಂದ ಕೂಡಿರುತ್ತದೆ.
ಅಂದರೆ, ಸಾಮಾನ್ಯವಾಗಿ ಮನಸ್ಸಿಗೆ ಕುಂಠಿತವಾದ ಸ್ಥಿತಿ ಗತಿಗಳು ಇರುತ್ತದೆ. ಆದರೆ, ಮನಸ್ಸನ್ನು ಅಂತ ರ್ಮುಖವಾಗಿಸಿ ಅಧ್ಯಾತ್ಮ ಸಾಧನೆಯನ್ನು ಮಾಡಿ ಭಗವತ್ಸಾಕ್ಷಾತ್ಕಾರ ಹೊಂದಿದರೆ ಆಗ ಮನಸ್ಸು ದೃಢವಾಗಿ, ಬಲಿಷ್ಠವಾಗಿ ಹೊರ ಜೀವನದ ಪ್ರಭಾವದಿಂದ ಏರಿಳಿತಕ್ಕೊಳಗಾಗದೇ ಶಾಂತವಾಗಿರುತ್ತದೆ. ಹೀಗಿದ್ದಾಗ, ಮನಸ್ಸು ಪ್ರಾಪಂಚಿಕ ವಿಷಯಗಳಿಂದ ಹಿಡಿದು ಅಧ್ಯಾತ್ಮ ಕ್ಷೇತ್ರದವರೆವಿಗೂ ತಡೆಯಿಲ್ಲದೇ ಸುಲಭವಾಗಿ ಹರಿಯಬಲ್ಲದ್ದಾಗಿದ್ದು ವಿಕುಂಠಿತವಾದ ಗತಿಯನ್ನು ಹೊಂದಿದೆ ಎಂದು ಹೇಳಬಹುದು. ಯಾವ ನೆಲೆಯಲ್ಲಿ ವಿಕುಂಠಿತವಾದ ಸ್ಥಿತಿಯಿರುತ್ತದೆಯೋ ಆ ನೆಲೆಯನ್ನು ವೈಕುಂಠ ಎಂದು ಕರೆಯುತ್ತಾರೆ. ಇಂತಹಾ ನೆಲೆ ಎಲ್ಲಿರುತ್ತದೆ? ಆ ನೆಲೆಗೂ ವೈಕುಂಠ ಏಕಾದಶಿಗೂ ಏನು ಸಂಬಂಧ ಎನ್ನುವುದು ಮುಂದೆ ತಿಳಿಯಬೇಕಾದ ವಿಷಯ.
ಯಾರ ಸಂಪರ್ಕ ಅಥವಾ ಯೋಗದಿಂದ ಮನಸ್ಸಿಗೆ ವಿಕುಂಠಿತವಾದ ಸ್ಥಿತಿ ಉಂಟಾಗುತ್ತದೆಯೋ ಆ ಭಗವಂತನಿರುವ ಲೋಕವನ್ನೇ ಮುಖ್ಯವಾಗಿ ವೈಕುಂಠ ಎಂದು ಕರೆಯುವುದು. ಯಾರು ಆ ವೈಕುಂಠಪತಿಯಾದ ವಿಷ್ಣುವನ್ನು ಇಲ್ಲಿರುವಾಗಲೇ ಸಾಕ್ಷಾತ್ಕರಿಸಿಕೊಂಡಿರುತ್ತಾರೆಯೋ ಅಂತಹವರು ದೇಹಾವಸಾನದ ನಂತರ ಈ ವೈಕುಂಠ ಲೋಕದಲ್ಲಿ ಶಾಶ್ವತವಾಗಿ ನೆಲೆಸುತ್ತಾರೆ. ಎರಡನೆಯದಾಗಿ ಹಾಗೆ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡ ಜ್ಞಾನಿಗಳು ಭೂಮಿಯ ಮೇಲೆ ಇರುವಾಗ ಅವರು ತಮ್ಮ ಮನಸ್ಸಿನ ಗತಿಯನ್ನು ವಿಕುಂಠಿತವಾಗಿಟ್ಟುಕೊಂಡು ಸುತ್ತಮುತ್ತಲಿನವರಿಗೂ ಅಂತಹಾ ಗತಿಯನ್ನು ದಯಪಾಲಿಸುತ್ತಿರುವಾಗ ಆ ಜ್ಣಾನಿಗಳ ಸನ್ನಿಧಿಯನ್ನೂ ಸಹಾ ಭೂವೈಕುಂಠ ಎಂದು ಕರೆಯಬಹುದು. ಆ ಜ್ಞಾನಿಗಳ ಸನ್ನಿಧಿ ಬೇರೆಯಲ್ಲಾ, ಭಗವಂತನ ಸನ್ನಿಧಿ ಬೇರೆಯಲ್ಲಾ!
ಇನ್ನೂ ಮುಂದುವರಿದು ಹೇಳುವುದಾದರೆ, ಅಂತಹಾ ಜ್ಞಾನಿಗಳು ಪ್ರತಿಷ್ಠಾಪಿಸಿ ಭಗವಂತನ ಸಾನ್ನಿಧ್ಯವನ್ನುಂಟು ಮಾಡಿರುವ ದೇವಾಲಯಗಳನ್ನೂ ಸಹಾ ಭೂವೈಕುಂಠವೆಂದು ಕರೆಯಬಹುದು ಏಕೆಂದರೆ ಈ ದೇವಾಲಯವಕ್ಕೆ ಹೋಗುವವರಿಗೂ ಸಹಾ ಅವರವರ ಪರಿಸ್ಥಿತಿ-ಸಂಸ್ಕಾರಗಳಿಗನುಗುಣವಾಗಿ ಕೊಂಚ ಮಟ್ಟಿಗಾದರೂ ಆ ವಿಕುಂಠಿತವಾದ ಸ್ಥಿತಿ ಉಂಟಾಗುತ್ತದೆ. ಅಂತಹಾ ದೇವಾಲಯಗಳಲ್ಲಿಯೂ ಸಹಾ ವೆಂಕಟರಮಣ ಸ್ವಾಮಿಯ ದೇವಾಲಯವು ವಿಶೇಷ. ಏಕೆಂದರೆ, ಕಲೌ ವೇಂಕಟನಾಥಃ ಎಂದು ಹೇಳುವಂತೆ, ವೈಕುಂಠಪತಿಯಾದ ವಿಷ್ಣುವಿನ ರೂಪಗಳಲ್ಲಿ, ಕಲಿಯುಗದಲ್ಲಿ ಬೇಗ ಒಲಿಯುವುದು ವೆಂಕಟರಮಣನ ರೂಪವೇ.
ಹೀಗಾಗಿ, ದಿನದ ಪ್ರಭಾವದ ದೃಷ್ಟಿಯಿಂದ ಗಮನಿಸಿದರೆ ಆ ದಿನಕ್ಕೆ, ವ್ಯಕ್ತಿಯ ಪಾತ್ರತೆಗನುಗುಣವಾಗಿ ಮನಸ್ಸಿಗೆ ವಿಕುಂಠಿತವಾದ ಸ್ಥಿತಿಯನ್ನುಂಟು ಮಾಡುವ ಯೋಗ್ಯತೆ ಇರುತ್ತದೆ. ಇಂತಹಾ ದಿನದಲ್ಲಿ ಆ ವೈಕುಂಠಪತಿಯ, ಅದರಲ್ಲೂ ಕಲಿಯುಗದಲ್ಲಿ ವಿಶೇಷವಾಗಿ ಅನುಗ್ರಹ ಹರಿಸುವ ವೆಂಕಟರಮಣ ಸ್ವಾಮಿಯ ದರ್ಶನ ಸೇವೆಗಳು ಇನ್ನಷ್ಟು ಹೆಚ್ಚು ಪರಿಣಾಮ ಬೀರುತ್ತದೆ. ಹೀಗಾಗಿ ವೈಕುಂಠ ಏಕಾದಶಿಯಂದು ವೆಂಕಟರಮಣಸ್ವಾಮಿಯ ದೇವಾಲಯ ಸಂದರ್ಶನ, ಸೇವೆ ಎನ್ನುವ ರೂಢಿಯು ಬೆಳೆದು ಬಂದಿದೆ.
ಆ ದಿನದಂದು ವೆಂಕಟರಮಣಸ್ವಾಮಿ ದೇವಾಲಯಗಳಲ್ಲಿ ವೈಕುಂಠದ್ವಾರ ಎನ್ನುವ ವಿಶೇಷ ವ್ಯವಸ್ಥೆಯನ್ನು ಮಾಡಿರುತ್ತಾರೆ. ಭಕ್ತರು ಭಗವಂತನ ದರ್ಶನ ಮಾಡಿ, ಪ್ರದಕ್ಷಿಣೆ ಮಾಡಿಕೊಂಡು ಈ ವೈಕುಂಠ ದ್ವಾರದಿಂದ ಹೊರಹೋಗುವುದು ರೂಢಿ. ಈ ಪದ್ಧತಿಯನ್ನು ಯೋಗಶಾಸ್ತ್ರ ಹಾಗೂ ತಂತ್ರಶಾಸ್ತ್ರದ ಹಿನ್ನೆಲೆಯಲ್ಲಿಯೂ ಗಮನಿಸಬಹುದು. ಈ ಶಾಸ್ಥ್ರಗಳ ಪ್ರಕಾರ, ಪ್ರತಿಯೊಬ್ಬ ಮಾನವನ ದೇಹದಲ್ಲಿಯೂ ಇಡಾ, ಪಿಂಗಳಾ ಮತ್ತು ಸುಷುಮ್ನಾ ಎಂಬ ಮೂರು ನಾಡಿಗಳು ಬೆನ್ನು ಮೂಳೆ ಹಾಗೂ ಅದರ ಸುತ್ತ ಇರುತ್ತದೆ. ಈ ಮೂರರಲ್ಲಿ ಮನಸ್ಸು ಇಡಾ, ಪಿಂಗಳಗಳಲ್ಲಿ ಸಂಚರಿಸುತ್ತಿರುವಾಗ ಅದಕ್ಕೆ ವೃದ್ಧಿ, ಕ್ಷಯಗಳಿದ್ದು, ಯೋಗ ಸಾಧನೆಯಿಂದ ಸುಷುಮ್ನಾ ನಾಡಿಯನ್ನು ಪ್ರವೇಶಿಸುತ್ತದೆ.
ಮನಸ್ಸು ಸುಷುಮ್ನಾ ನಾಡಿಯನ್ನು ಪ್ರವೇಶಿಸಿ ಮುಂದುವರೆದರೇನೇ ಕೊನೆಯಲ್ಲಿ ಭಗವತ್ಸಾಕ್ಷಾತ್ಕಾರವಾಗುವುದು. ಆದುದರಿಂದ ಮಾನವ ದೇಹದಲ್ಲಿ ಈ ಸುಷುಮ್ನಾ ನಾಡಿಯೇ ವೈಕುಂಠ ದ್ವಾರವಾಗಿದೆ. ಹೀಗೆ ಸಾಧಕನ ದೇಹದಲ್ಲಿ ಒಳಗೆ ನಡೆಯುವ ಕ್ರಿಯೆಯನ್ನು ಹೊರಗಡೆಯಲ್ಲಿಯೂ ಅನುಕರಣೆ ರೂಪದಲ್ಲಿ ತಂದಿದ್ದಾರೆ. ಈ ಹೊರ ಅನುಕರಣಾ ರೂಪವಾದ ಆಚರಣೆಯೂ ಸಹಾ ಒಂದು ಸಾಧನೆಯೇ ಆಗಿದ್ದು ಸೂಕ್ತ ಸಂಸ್ಕಾರಗಳ ಸಿದ್ಧತೆಯನ್ನು ಹೊಂದಿರುವ ವ್ಯಕ್ತಿಯ ಮನಸ್ಸು ಈ ಆಚರಣೆಯಿಂದಾಗಿಯೇ ಸುಷುಮ್ನಾ ನಾಡಿಯ ಪ್ರವೇಶ ಮಾಡುವ ಸಾಧ್ಯತೆಯೂ ಸಹಾ ಇರುತ್ತದೆ.
ಹೀಗೆ, ಆ ದಿನದ ಪ್ರಭಾವ, ಆ ದಿನದ ವಿಶೇಷ ಆರಾಧ್ಯ ದೈವ ಹಾಗೂ ಅಂದಿನ ಆಚರಣೆ, ಈ ಮೂರೂ ಅಂಶಗಳಲ್ಲಿ ಒಂದೊಂದೂ ಸಹಾ ಮನಸ್ಸಿಗೆ ವಿಕುಂಠಿತ ಸ್ಥಿತಿಯನ್ನುಂಟು ಮಾಡುವಂತಹದ್ದಾಗಿದ್ದು ವೈಕುಂಠ ಏಕಾದಶಿಯಂದು ಈ ಮೂರೂ ಅಂಶಗಳು ಒಟ್ಟಿಗೆ ಸೇರಿರುವುದು ಬಹಳ ವಿಶೇಷ ಯೋಗ. ಮನಸ್ಸಿಗೆ ವಿಕುಂಠಿತವಾದ ನಡೆಯನ್ನುಂಟು ಮಾಡಿಕೊಂಡು ತನ್ಮೂಲಕ ಪಾಪಗಳನ್ನು ಶಮನ ಮಾಡಿಕೊಂಡು ನಮ್ಮನ್ನು ಪಾವನರಾಗಿಸಿಕೊಳ್ಳಲು ವೈಕುಂಠ ಏಕಾದಶಿ ಆಚರಣೆಯು ಮಹರ್ಷಿಗಳು ಕೊಟ್ಟಿರುವ ಅಪೂರ್ವ ಕೊಡುಗೆಯಾಗಿದೆ.
– ಲೇಖಕರು ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು
ಅಷ್ಟಾಂಗಯೋಗ ವಿಜ್ಞಾನಮಂದಿರಂ
ಇದನ್ನೂ ಓದಿ | Prerane | ಚಲನೆ ಶಾಶ್ವತವಾದುದಲ್ಲ, ನಿಶ್ಚಲತೆಯು ಚಿರಂತನವಾದುದು