Site icon Vistara News

Vaikuntha Ekadashi 2023 | ರಾಜ್ಯಾದ್ಯಂತ ವೈಕುಂಠ ಏಕಾದಶಿ ಸಂಭ್ರಮ;‌ ಎಲ್ಲೆಲ್ಲಿ ಹೇಗಿತ್ತು?

Vaikuntha Ekadashi 2023 5

ಬೆಂಗಳೂರು: ವೈಕುಂಠ ಏಕಾದಶಿ (Vaikuntha Ekadashi 2023) ಹಿನ್ನೆಲೆಯಲ್ಲಿ ವೆಂಕಟೇಶ್ವರನ ದರ್ಶನವನ್ನು ಭಕ್ತಾದಿಗಳು ಮಾಡಿದರು. ರಾಜ್ಯಾದ್ಯಂತ ವಿಷ್ಣುವಿನ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ವೈಕುಂಠ ಏಕಾದಶಿ ಹಿನ್ನೆಲೆ ಮೈಸೂರಿನ‌ ಒಂಟಿ ಕೊಪ್ಪಲಿನಲ್ಲಿರುವ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಸ್ಥಾನಕ್ಕೆ ಮಾಜಿ‌ ಸಿಎಂ ಕುಮಾರಸ್ವಾಮಿ ಭೇಟಿ ನೀಡಿದರು. ದಂಪತಿ ಸಮೇತ ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಇತ್ತ ದಾವಣಗೆರೆಯ ಎಂಸಿಸಿ ಬಿ ಬ್ಲಾಕ್​​​ನಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.

ಮಡಿಕೇರಿಯಲ್ಲಿ ಸಂಭ್ರಮದ ವೈಕುಂಠ ಏಕಾದಶಿ
ಕೊಡಗು ಜಿಲ್ಲೆ ಮಡಿಕೇರಿಯ ಮಹದೇವ ಪೇಟೆಯಲ್ಲಿನ‌ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವೈಕುಂಠ ಏಕಾದಶಿಯ ಪ್ರಯುಕ್ತ ಮುಂಜಾನೆಯಿಂದಲೇ ಶ್ರೀ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆ ಪುನಸ್ಕಾರ ನಡೆದವು. ಕ್ಷೀರಾಭಿಷೇಕ, ಎಳನೀರು ಅಭಿಷೇಕ, ತುಳಸಿ ಅರ್ಚನೆ, ಕುಂಕುಮಾರ್ಚನೆ ಹಾಗೂ ಮಹಾ ಪೂಜೆಗಳು ನಡೆದವು.

ಚಿಕ್ಕತಿರುಪತಿ, ಬಂಗಾರ ತಿರುಪತಿಯಲ್ಲಿ ಭಕ್ತಸಾಗರ
ಕೋಲಾರ ಜಿಲ್ಲೆಯ ಚಿಕ್ಕ ತಿರುಪತಿ, ಬಂಗಾರು ತಿರುಪತಿ, ವೀರ ವೆಂಕಟ ಸತ್ಯನಾರಾಯಣಸ್ವಾಮಿ, ವೆಂಕಟರಮಣ ದೇವಾಲಯ ಸೇರಿದಂತೆ ಜಿಲ್ಲೆಯ ಹಲವು ಕಡೆ ವಿಷ್ಣು ದೇವಾಲಯಕ್ಕೆ ಜನ ಸಾಗರವೇ ಹರಿದು ಬಂತು. ಏಕಾದಶಿ, ದ್ವಾದಶಿ ಪ್ರಯುಕ್ತ ಎರಡು ದಿನವೂ ನೆರೆಯ ಆಂಧ್ರ ಪ್ರದೇಶದಿಂದ ಲಕ್ಷಾಂತರ ಭಕ್ತರು ಆಗಮಸಿದ್ದಾರೆ.

ಇತಿಹಾಸ ಪ್ರಸಿದ್ಧ ಚೆನ್ನಕೇಶವ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ
ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಚೆನ್ನಕೇಶವ ಸ್ವಾಮಿ ದೇವಾಲಯ ಹಾಗೂ ತಿಮ್ಮರಾಯಸ್ವಾಮಿ ದೇವಾಲಯಗಳಲ್ಲಿ ಅದ್ಧೂರಿಯಾಗಿ ವೈಕುಂಠ ಏಕಾದಶಿಯನ್ನು ಆಚರಣೆ ಮಾಡಲಾಯಿತು. ನೂರಾರು ವರ್ಷಗಳ ಇತಿಹಾಸವಿರುವ ಚೆನ್ನಕೇಶವ ಸ್ವಾಮಿ ದೇವಾಲಯದಲ್ಲಿ ಹೂಗಳಿಂದ ಹಾಗೂ ಲೈಟಿಂಗ್ ಮೂಲಕ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ವೈಕುಂಠ ದ್ವಾರದ ಮೂಲಕ ಸಾವಿರಾರು ಮಂದಿ ಭಕ್ತರು ಶ್ರೀ ಚೆನ್ನಕೇಶವ ಸ್ವಾಮಿಯ ದರ್ಶನ ಪಡೆದುಕೊಂಡರು. ದೇವಾಲಯದಲ್ಲಿ ಪಂಚ ಗಣಪನಿಂದ ವಿವಿಧ ವಾದ್ಯಗಳನ್ನು ನುಡಿಸುತ್ತಿರುವ ಹಾಗೂ ಆನೆ ಅಂಬಾರಿ ಮೇಲೆ ಕುಳಿತಿರುವ ಚೆನ್ನಕೇಶವ ಸ್ವಾಮಿ ಮೂರ್ತಿಯ ವಿಶೇಷ ಅಲಂಕಾರವನ್ನು ಭಕ್ತರು ಕಣ್ತುಂಬಿಕೊಂಡರು.

12ನೇ ಶತಮಾನದ ದೇವಸ್ಥಾನದಲ್ಲಿ ವೈಕುಂಠ ಆರಾಧನೆ
12ನೇ ಶತಮಾನದ ಬಳ್ಳಾರಿ ತಾಲೂಕಿನ ರೂಪನಗುಡಿಯ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿರುವ ಮೂರ್ತಿಯು ತಿರುಪತಿ ವೆಂಕಟೇಶ್ವರಸ್ವಾಮಿ ಮೂರ್ತಿಯನ್ನು ಹೋಲುತ್ತದೆ. ಈ ದೇವಸ್ಥಾನವನ್ನು ಇಮ್ಮಡಿ ಪುಲಿಕೇಶಿ ಕಾಲದಲ್ಲಿ ಗ್ರಾಮವನ್ನು ಆಳುತ್ತಿದ್ದ ರೂಪಣ್ಣ ನಾಯಕ ಎಂಬುವವರು ಕಟ್ಡಿಸಿದ್ದರು. ಇವರ ಹೆಸರಿನ ಮೇಲೆಯೇ ರೂಪನ ಗುಡಿ ಎಂಬ ಹೆಸರು ಬರಲು ಕಾರಣವಾಗಿದೆ ಎಂದೂ ಹೇಳಲಾಗುತ್ತದೆ‌. ಈ ದೇವಸ್ಥಾನದ ವಿಶೇಷವೆಂದರೆ ಉತ್ತರಕ್ಕೂ ಬಾಗಿಲು ಇದೆ.

ಚಿನ್ನದ ಹೊಳಪಿನ ಸಪ್ತದ್ವಾರದೊಳಗೆ ವೈಕುಂಠನಾಥನ ದರ್ಶನ
13ನೇ ಶತಮಾನದಲ್ಲಿ ಹೊಯ್ಸಳರಿಂದ ನಿರ್ಮಾಣಗೊಂಡ ಪುರಾಣ ಪ್ರಸಿದ್ಧ ಶ್ರೀಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ವೈಕುಂಠ ಏಕಾದಶಿಯ ಪುಣ್ಯದ ದಿನದಂದು ದೇವಾಲಯ ಆವರಣದಲ್ಲಿ ವಿಶೇಷ ಅಲಂಕೃತ ವೈಕುಂಠ ದರ್ಶನ ಏರ್ಪಡಿಸಲಾಗಿತ್ತು. ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಈ ದೇವಾಲಯದಲ್ಲಿ ಸಾವಿರಾರು ಭಕ್ತರು ಬೆಳಗ್ಗೆ ಎರಡು ಗಂಟೆಯಿಂದಲೇ ಮೈಲು ಉದ್ದದ ಕ್ಯೂನಲ್ಲಿ ನಿಂತು ಉತ್ಸಾಹ ಮತ್ತು ಭಕ್ತಿ ಭಾವದಿಂದ ಸಪ್ತದ್ವಾರಗಳ ಹಿಂದೆ ಪ್ರತಿಷ್ಠಾಪಿಸಲಾಗಿದ್ದ ವೈಕುಂಠನ ದರ್ಶನ ಪಡೆದರು. ರಾಜ್ಯದ ಹಲವು ಕಡೆ ವಿವಿಧ ದೇವಾಲಯಗಳಲ್ಲಿ ರಾತ್ರಿವರೆಗೂ ಪೂಜೆಗಳು ಮುಂದುವರಿಯಲಿದೆ.

ಇದನ್ನೂ ಓದಿ | Vaikuntha Ekadashi 2023 | ಇಸ್ಕಾನ್‌ನಲ್ಲಿ ಸಂಭ್ರಮದಿಂದ ವೈಕುಂಠ ಏಕಾದಶಿ ಆಚರಣೆ

Exit mobile version