Site icon Vistara News

ಇಂದು ಮೇಲುಕೋಟೆಯಲ್ಲಿ ವೈರಮುಡಿ ಉತ್ಸವ, ಮಂಡ್ಯ ಖಜಾನೆಯಿಂದ ಹೊರಟ ಕಿರೀಟ

vairamudi

ಮಂಡ್ಯ: ಇಂದು ಮೇಲುಕೋಟೆಯ ವಿಶ್ವವಿಖ್ಯಾತ, ಐತಿಹಾಸಿಕ ವೈರಮುಡಿ ಉತ್ಸವ ನಡೆಯಲಿದೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆಯ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ನಡೆಯಲಿರುವ ಉತ್ಸವಕ್ಕಾಗಿ ಇಂದು ಬೆಳಗ್ಗೆ 7.30ಕ್ಕೆ ಜಿಲ್ಲಾ ಖಜಾನೆಯಿಂದ ವೈರಮುಡಿ ಕಿರೀಟಾಭರಣ ಹೊರಟಿದೆ.

ಜಿಲ್ಲಾಡಳಿತದ ಖಜಾನೆಯಿಂದ ಹೊರತೆಗೆಯಲಾದ ರತ್ನಖಚಿತ ವೈರಮುಡಿಯನ್ನು ಖಜಾನೆ ಬಳಿಯ ಲಕ್ಷ್ಮಿ ಜನಾರ್ದನ ಸ್ವಾಮಿ ದೇವಾಲಯದಲ್ಲಿ ಪೂಜಿಸಲಾಯಿತು. ಡಿಸಿ, ಎಸ್‌ಪಿ ಸೇರಿದಂತೆ ಹಲವು ಅಧಿಕಾರಿಗಳು ಪೂಜಿಸಿದರು. ಸ್ಥಾನಿಕ ಅರ್ಚಕರು ಇದರಲ್ಲಿ ಪಾಲ್ಗೊಂಡರು. ಪೂಜೆಯ ನಂತರ ಪರಕಾಲ ಮಠದ ವಾಹನದಲ್ಲಿ ಭದ್ರತೆಯೊಂದಿಗೆ ವೈರಮುಡಿ ಕೊಂಡೊಯ್ಯಲಾಯಿತು. ವೈರಮುಡಿಯನ್ನು ಬಿಗಿ ಭದ್ರತೆಯಲ್ಲಿ ಮೆರವಣಿಗೆ ಮೂಲಕ ಮೇಲುಕೋಟೆಗೆ ರವಾನಿಸಲಾಗುತ್ತಿದೆ. ಮೆರವಣಿಗೆ ಬೆಂಗಳೂರು ಮೈಸೂರು ಹೆದ್ದಾರಿ ಮೂಲಕ ಹಾದುಹೋಗಲಿದೆ. ಶ್ರೀರಂಗಪಟ್ಟಣ ತಾಲೂಕಿನ ಬಾಬುರಾಯನಕೊಪ್ಪಲು, ಪಾಂಡವಪುರ ಪಟ್ಟಣ, ನಾಗಮಂಗಲ ರಸ್ತೆ ಮೂಲಕ ಹಾದು ಸಂಜೆ ವೇಳೆಗೆ ಮೇಲುಕೋಟೆ ತಲುಪಲಿದೆ.

ವೈರಮುಡಿ ಸಾಗುವ ಮಾರ್ಗದ ಪ್ರತಿ ಗ್ರಾಮದಲ್ಲೂ ವೈರಮುಡಿಗೆ ಗ್ರಾಮಸ್ಥರು ಪೂಜೆ ಸಲ್ಲಿಸಲಿದ್ದಾರೆ. ರಾತ್ರಿ 9 ಗಂಟೆಯ ಆಶ್ಲೇಷ ನಕ್ಷತ್ರದಲ್ಲಿ ಶ್ರೀ ಚೆಲುವನಾರಾಯಣಸ್ವಾಮಿಯ ಉತ್ಸವ ಮೂರ್ತಿಗೆ ಕಿರೀಟಧಾರಣೆ ಮಾಡಿದ ನಂತರ ಮೇಲುಕೋಟೆಯ ಪ್ರಮುಖ ಬೀದಿಗಳಲ್ಲಿ ವೈಭವೋಪೇತ ವೈರಮುಡಿ ಉತ್ಸವ ನಡೆಯಲಿದೆ. ವೈರಮುಡಿ ಉತ್ಸವಕ್ಕೆ ಬಣ್ಣ‌ಬಣ್ಣದ ವಿದ್ಯುತ್ ದೀಪಾಲಂಕಾರಗಳಿಂದ ಮೇಲುಕೋಟೆ ಕಂಗೊಳಿಸುತ್ತಿದೆ.

ಇದನ್ನೂ ಓದಿ: Bengaluru Karaga: ಬುಧವಾರ ಐತಿಹಾಸಿಕ ಬೆಂಗಳೂರು ಕರಗಕ್ಕೆ ಚಾಲನೆ; 9 ದಿನ ನಡೆಯಲಿದೆ ಉತ್ಸವ

Exit mobile version