Site icon Vistara News

Varamahalakshmi Festival | ಆಗಸ್ಟ್‌ 5ರ ಶುಕ್ರವಾರದಂದೇ ವ್ರತಾಚರಣೆ; ಗೊಂದಲ ಬೇಡ ಎಂದರು ರಾಜಗುರು

Varamahalakshmi Festival

ಬೆಂಗಳೂರು: ಈ ಬಾರಿ ವರಮಹಾಲಕ್ಷ್ಮೀ ಹಬ್ಬವನ್ನು (Varamahalakshmi Festival) ಆಗಸ್ಟ್‌ ೫ರ ಅಥವಾ ಆಗಸ್ಟ್‌ ೧೨ರ ಶುಕ್ರವಾರ ಆಚರಿಸಬೇಕೇ ಎಂಬ ಬಗ್ಗೆ ಧಾರ್ಮಿಕರಲ್ಲಿ ಗೊಂದಲ ಸೃಷ್ಟಿಯಾಗಿದೆ.

ರಾಜಗುರು ದ್ವಾರಕನಾಥ್‌

ಸಾಮಾನ್ಯವಾಗಿ ಶ್ರಾವಣ ಮಾಸದ 2ನೇ ಶುಕ್ರವಾರದಂದು ವರಮಹಾಲಕ್ಷ್ಮೀ ಪೂಜೆ ಮಾಡಲಾಗುತ್ತದೆ. ಆದರೆ ಈ ಬಾರಿ ಆಗಸ್ಟ್‌ ೫ರ ಶುಕ್ರವಾರ ಅಂದರೆ ಶ್ರಾವಣ ಮಾಸದ ಮೊದಲ ಶುಕ್ರವಾರ ಆಚರಿಸಬೇಕೆಂದು ಶಾಸ್ತ್ರಗಳು, ಪಂಚಾಂಗಗಳಲ್ಲಿ ಹೇಳಲಾಗಿದೆ. ಕೆಲ ಕ್ಯಾಲೆಂಡರ್‌ಗಳಲ್ಲಿ ಆಗಸ್ಟ್‌ ೧೨ರ ಶುಕ್ರವಾರದಂದು ವರಮಹಾಲಕ್ಷ್ಮೀ ವ್ರತಾ ಎಂದು ದಾಖಲಾಗಿದೆ. ಇದು ಗೊಂದಲಕ್ಕೆ ಕಾರಣವಾಗಿದೆ.

ಈ ಕುರಿತು ವಿಸ್ತಾರ ನ್ಯೂಸ್‌ ಜತೆ ಮಾತನಾಡಿದ ರಾಜಗುರು ಬಿ.ಎಸ್‌.ದ್ವಾರಕನಾಥ್‌, “ಕ್ಯಾಲೆಂಡರ್‌ಗಳಲ್ಲಿ ಆಗಸ್ಟ್‌ ೧೨ರಂದು ವರಮಹಾಲಕ್ಷ್ಮೀ ವ್ರತ ಎಂದು ತಪ್ಪಾಗಿ ಗುರುತಿಸಿರಬಹುದು. ಪಂಚಾಂಗದ ಪ್ರಕಾರ ಆಗಸ್ಟ್‌ ೫ರ ಶುಕ್ರವಾರದಂದೇ ವ್ರತಾಚರಣೆ ಮಾಡಬೇಕುʼʼ ಎಂದು ಸ್ಪಷ್ಟಪಡಿಸಿದ್ದಾರೆ.

ಪಂಚಾಂಗ ಸಿದ್ಧಪಡಿಸುವಾಗ ಶಾಸ್ತ್ರಬದ್ಧವಾಗಿ ಅಧ್ಯಯನ ನಡೆಸಿಯೇ ದಿನಾಂಕ ನಮೂದು ಮಾಡಲಾಗಿರುತ್ತದೆ. ಯಾವುದೇ ಹೆಸರಾಂತ ಕ್ಯಾಲೆಂಡರ್‌ನಲ್ಲಿ ಈ ರೀತಿಯ ವಿಚಾರಗಳು ದಾಖಲಾಗಿದ್ದರೂ ತಪ್ಪಾಗಿರುವ ಸಾಧ್ಯತೆಗಳಿವೆ. ಪಂಚಾಂಗ ಬರೆಯುವಾಗ ಮುಖ್ಯವಾಗಿ ನಕ್ಷತ್ರ, ರಾಶಿ, ತಿಥಿ, ಮಾಸ, ದಿನ ಇವೆಲ್ಲವನ್ನೂ ಪರಿಶೀಲಿಸಿಯೇ ಬರೆದಿರುತ್ತಾರೆ ಎಂದು ಅವರು ವಿವರಿಸಿದ್ದಾರೆ.

ಈ ಗೊಂದಲದ ಕುರಿತು ವಿವರಿಸಿದ ರಾಜಗುರು, ಈ ಬಾರಿ ಶ್ರಾವಣ ಮಾಸದ 2ನೇ ಶುಕ್ರವಾರ ತಿಥಿ ಹುಣ್ಣಿಮೆಯಾಗಿದೆ. ಆದರೆ ದಿನ ಪೂರ್ತಿ ಹುಣ್ಣಿಮೆ ಇರುವುದಿಲ್ಲ. ಉದಯಕಾಲದ 7.30ಕ್ಕೆ ಹುಣ್ಣಿಮೆ ಮುಗಿದು ಹೋಗಿ, ಕೃಷ್ಣಪಕ್ಷದ ಪಾಡ್ಯ ಆರಂಭವಾಗುತ್ತದೆ. ಯಾವಾಗ ಕೃಷ್ಣಪಕ್ಷ ಪಾಡ್ಯ ಆರಂಭವಾಗುತ್ತದೆಯೋ ಆಗ ಹಬ್ಬದಾಚರಣೆ ಮಾಡುವುದು ಸೂಕ್ತವಲ್ಲ. ಹೀಗಾಗಿಯೇ ಆಗಸ್ಟ್‌ ೫ರ ಶುಕ್ರವಾರವೇ ವ್ರತಾಚರಣೆ ಮಾಡಬೇಕೆಂದು ಪಂಚಾಂಗದಲ್ಲಿ ಹೇಳಲಾಗಿದೆ ಎಂದು ತಿಳಿಸಿದ್ದಾರೆ.

ಈ ವ್ರತಾಚರಣೆಯ ಸಂದರ್ಭದಲ್ಲಿ ಬೆಳಗ್ಗೆಯಿಂದ ಉಪವಾಸವಿದ್ದು ಭಕ್ಷ್ಯಗಳನ್ನು ಮಾಡಿ ದೇವಿಯನ್ನು ಪೂಜಿಸೋದು ಈ ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಆದರೀಗ ಆರೋಗ್ಯ ಸಮಸ್ಯೆಯಿಂದ ಕೆಲವರು ಬೆಳಿಗ್ಗೆಯೇ ಪೂಜೆ ಮಾಡುತ್ತಾರೆ. ಪೂಜೆ ಮಾಡುವುದರಲ್ಲಿ ತಪ್ಪಿಲ್ಲವಾದರೂ ಶಾಸ್ತ್ರಬದ್ಧವಾಗಿ ಮಾಡಬೇಕು. ಆಗಸ್ಟ್ 5ರಂದೇ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಬೇಕು. ವ್ರತ ಮಾಡುತ್ತಿರುವವರು ತಮ್ಮ ವ್ರತವನ್ನು ಆಗಸ್ಟ್ 12ರವರೆಗೂ ಮುಂದುವರಿಸಬಹುದಾಗಿದ್ದು, ಅದರಿಂದ ಯಾವುದೇ ಸಮಸ್ಯೆಯಿಲ್ಲ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ| Shravan| ಶ್ರಾವಣ ಮಾಸ ಬರಲು ಹಬ್ಬಗಳ ಸಾಲು ಸಾಲು!

Exit mobile version