Site icon Vistara News

Vasant Panchami 2023 : ಸರಸ್ವತಿ ಅವತರಿಸಿದ ದಿನ ವಸಂತ ಪಂಚಮಿ

Vasant Panchami 2023

ಮಾಘ ಮಾಸದ ಶುಕ್ಲ ಪಂಚಮಿ ತಿಥಿಯನ್ನು ಅಂದರೆ ಇದೇ ಜನವರಿ 26ರ ಗುರುವಾರದಂದು “ವಸಂತ ಪಂಚಮಿ” (Vasant Panchami 2023) ಹಬ್ಬ ಆಚರಿಸಲಾಗುತ್ತದೆ. ವಿದ್ಯಾಧಿದೇವತೆ ಸರಸ್ವತಿಯನ್ನು ಪೂಜಿಸಿ, ಆರಾಧಿಸುವ ದಿನ ಇದಾಗಿದೆ. ಪುರಾಣ ಕತೆಗಳ ಪ್ರಕಾರ ಇದೇ ದಿನ ಸರಸ್ವತಿ ದೇವಿಯು ಕೈಯಲ್ಲಿ ಪುಸ್ತಕ, ವೀಣೆ ಮತ್ತು ಜಪ ಮಾಲೆಯನ್ನು ಹಿಡಿದುಕೊಂಡು, ಶ್ವೇತ ಕಮಲದ ಮೇಲೆ ಮೊದಲ ಬಾರಿಗೆ ಅವತರಿಸಿದಳಂತೆ. ಹೀಗಾಗಿ ಈ ದಿನವನ್ನು ಸರಸ್ವತಿ ಜಯಂತಿ ಎಂದೂ ಕೆಲವರು ಕರೆಯುತ್ತಾರೆ.

ಈ ದಿನ ಸರಸ್ವತಿ ಪೂಜೆಗೆ ಪ್ರಶಸ್ತವಾದ ದಿನವೆಂದು ಹೇಳಲಾಗುತ್ತದೆ. ಈ ವಸಂತ ಪಂಚಮಿಯನ್ನು ಬಸಂತ ಪಂಚಮಿ ಅಥವಾ ಶ್ರೀ ಪಂಚಮಿ ಎಂದು ಸಹ ಕರೆಯುತ್ತಾರೆ. ಈ ಹಬ್ಬವು ಸಾಮಾನ್ಯವಾಗಿ ಜನವರಿ ಅಥವಾ ಫೆಬ್ರುವರಿ ತಿಂಗಳಿನಲ್ಲಿ ಬರುತ್ತದೆ. ವಸಂತ ಪಂಚಮಿಯು ಉತ್ತರ ಭಾರತದಲ್ಲಿ ಚಳಿಗಾಲದ ಅಂತ್ಯದ ಸೂಚಕವೆಂದು ಹೇಳುತ್ತಾರೆ. ಈ ದಿನ ಸೂರ್ಯನ ಕಿರಣಗಳು ಗಿಡ ಮರಗಳ ಮೇಲೆ ತುಂಬಾ ಪ್ರಕಾಶಮಾನವಾಗಿ ಬೀಳುವುದಲ್ಲದೇ, ಎಲ್ಲವೂ ಹಸಿರಿನಿಂದ ಕಂಗೊಳಿಸುತ್ತದೆ ಹಾಗಾಗಿ ಭಾರತದ ಮಧ್ಯ ಮತ್ತು ಪಶ್ಚಿಮದ ಭಾಗಗಳಲ್ಲಿ ಈ ದಿನವನ್ನು ವಸಂತ ಕಾಲದ ಆರಂಭ ಎಂದು ಕರೆಯುತ್ತಾರೆ.

ವಸಂತ ಪಂಚಮಿಯು ಸರಸ್ವತಿ ದೇವಿಯ ಪೂಜೆಗೆ ಪ್ರಶಸ್ತವಾದ ದಿನವಾಗಿದೆ. ಹಾಗಾಗಿ ಸರಸ್ವತಿ ದೇವಿಯನ್ನು ಭಕ್ತಿ ಮತ್ತು ಶ್ರದ್ಧೆಯಿಂದ ಪೂಜಿಸಿದರೆ ಜ್ಞಾನ, ವಿವೇಕ, ಸಂಗೀತ, ಕಲೆ, ಯಶಸ್ಸು ಮತ್ತು ಬುದ್ಧಿವಂತಿಕೆ ಎಲ್ಲವನ್ನೂ ದಯಪಾಲಿಸುತ್ತಾಳೆ ಎಂಬ ನಂಬಿಕೆ ಇದೆ. ಹಾಗಾಗಿ ಈ ದಿನ ವಿಶೇಷವಾಗಿ ಮಕ್ಕಳು ಸರಸ್ವತಿ ದೇವಿಯನ್ನು ಆರಾಧಿಸಿವುದರ ಜೊತೆಗೆ ವಿದ್ಯೆ, ಬುದ್ಧಿ ಕೊಡೆಂದು ಪ್ರಾರ್ಥಿಸಿಕೊಳ್ಳಬೇಕೆಂದು ಶಾಸ್ತ್ರಗಳಲ್ಲಿ ಹೆಳಲಾಗಿದೆ. ಶಾಲೆಗಳಲ್ಲಿ ಇಂದು ವಿಶೇಷವಾಗಿ ಸರಸ್ವತಿ ಪೂಜೆ ನಡೆಸುವ ಪರಿಪಾಠವೂ ಕೆಲವೆಡೆ ಇದೆ.

ಆಚರಣೆ ಹೇಗೆ?
ವಸಂತ ಪಂಚಮಿಯಂದು ಬೆಳಗ್ಗೆ ಬೇಗನೇ ಎದ್ದು ಶುಚಿರ್ಭೂತರಾಗಿ ಹಳದಿ ಬಟ್ಟೆಗಳನ್ನು ಧರಿಸಬೇಕು. ನಂತರ ಸರಸ್ವತಿ ದೇವಿಯ ಫೋಟೋವನ್ನು ಪ್ರತಿಷ್ಠಾಪಿಸಿ ಹೂವು, ಹಣ್ಣು , ಅರಿಶಿನ, ಅಕ್ಷತೆ, ಕುಂಕುಮ, ಗಂಧಗಳನ್ನು ಅರ್ಪಿಸಬೇಕು. ಸರಸ್ವತಿ ದೇವಿಯನ್ನು ಪೂಜೆ ಮಾಡುವ ಮೊದಲು ಪ್ರಥಮ ಪೂಜಕನಾದ ಗಣೇಶನನ್ನು ಆರಾಧಿಸಬೇಕು. ನಂತರ ಸರಸ್ವತಿ ದೇವಿಯನ್ನು ಪೂಜಿಸಬೇಕು. ದೇವಿಗೆ ನವ ಧಾನ್ಯಗಳನ್ನು ಅರ್ಪಿಸುವ ಪದ್ಧತಿ ಕೂಡಾ ಕೆಲವು ಕಡೆ ಇದೆ. ಈ ದಿನ ಹಳದಿ ಬಣ್ಣದ ಸಿಹಿ ಪದಾರ್ಥವನ್ನು ನೈವೇದ್ಯವಾಗಿ ಅರ್ಪಿಸಬೇಕೆಂದು ಕೆಲವು ಶಾಸ್ತ್ರಗಳಲ್ಲಿ ಹೇಳಲಾಗಿದೆ.

ಈ ದಿನ ಸರಸ್ವತಿ ದೇವಿಯ ಚಾಲೀಸವನ್ನು ಮತ್ತು ಸರಸ್ವತಿ ದೇವಿಯ ಶ್ಲೋಕಗಳನ್ನು ಪಠಿಸಿದರೆ ಉತ್ತಮ ಫಲ ಪಡೆಯಬಹುದು. ಸರಸ್ವತಿ ದೇವಿಯ ಆರಾಧನೆಗೆ ಪ್ರಶಸ್ತವಾದ ದಿನವಾದ್ದರಿಂದ ಈ ದಿನ ಅಕ್ಷರಾಭ್ಯಾಸ ಮಾಡಿಸಿದರೆ ತುಂಬಾ ಒಳ್ಳೆಯದಂತೆ.

ಸರಸ್ವತಿ ದೇವಿಯ ಶ್ಲೋಕ
ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಮಿಣಿ |
ವಿದ್ಯಾರಂಭಂ ಕರೀಷ್ಯಾಮಿ ಸಿದ್ಧಿರ್ಭವತು ಮೇ ಸದಾ||

ಸರಸ್ವತಿ ದೇವಿಯ ಪೂಜಾ ಮಂತ್ರ
ಓಂ ಶ್ರೀ ಸರಸ್ವತ್ತ್ಯೈ ನಮಃ ll
ಓಂ ಐಮ್ ಹ್ರೀಂ ಕ್ಲೀಮ್ ಮಹಾ ಸರಸ್ವತಿ ದೇವ್ಯೈ ನಮಃ” ll

ಈ ಹಬ್ಬ ಹಿಂದೂಗಳು ಮಾತ್ರವಲ್ಲ, ಸಿಖ್ಖರ ಸಾಂಪ್ರದಾಯಿಕ ಹಬ್ಬಗಳಲ್ಲಿ ಸಹ ಒಂದಾಗಿದೆ. ದಕ್ಷಿಣ ರಾಜ್ಯಗಳಲ್ಲಿ ಈ ದಿನವನ್ನು ಶ್ರೀ ಪಂಚಮಿ ಎಂದು ಆಚರಿಸುತ್ತಾರೆ. ಬಾಲಿ ದ್ವೀಪ ಮತ್ತು ಇಂಡೋನೇಷ್ಯಾದ ಹಿಂದೂಗಳು ಇದನ್ನು “ಹರಿ ರಾಯ ಸರಸ್ವತಿ” ಎಂದು ಕರೆಯುತ್ತಾರೆ.

ರಾಮಾಯಣದ ಪ್ರಕಾರ ಇದೇ ದಿನ ರಾಮನು ತನಗಾಗಿ ಕಾಯುತ್ತಿದ್ದ ಶಬರಿಯನ್ನು ಭೇಟಿಯಾಗಿ ಆಕೆ ನೀಡಿದ ಬುಗರಿ ಹಣ್ಣು ತಿನ್ನುವ ಮೂಲಕ ಆಕೆಗೆ ಮುಕ್ತಿ ನೀಡಿದ ದಿನವೂ ಇದಾಗಿದೆ.

ಇದನ್ನೂ ಓದಿ : Sharada Devi Idol: ಶೃಂಗೇರಿಯಿಂದ ತೀತ್ವಾಲ್‌ನತ್ತ ಹೊರಟಿದ್ದಾಳೆ ʻಕಾಶ್ಮೀರ ಪುರವಾಸಿನಿʼ; ಮಾ. 24ರಂದು ಪ್ರತಿಷ್ಠಾಪನೆ

Exit mobile version