Site icon Vistara News

Vastu Tips: ವಾಸ್ತು ಪ್ರಕಾರ ನಿಮ್ಮ ಬಾಲ್ಕನಿ ಹೇಗಿರಬೇಕು? ಇಲ್ಲಿದೆ ಸಲಹೆ

home balcony

home balcony

ಬೆಂಗಳೂರು: ಮನೆಯ ಬಾಲ್ಕನಿ (Balcony) ಎನ್ನುವುದು ಬಹುತೇಕರ ನೆಚ್ಚಿನ ಸ್ಥಳ. ಬೆಳಗ್ಗೆ ಎದ್ದ ಕೂಡಲೇ ಬಾಲ್ಕನಿಗೆ ಬಂದು ಸ್ವಚ್ಛ ಗಾಳಿಯನ್ನು ಉಸಿರಾಡುತ್ತ ಚಾ/ಕಾಫಿ ಕುಡಿಯುವುದು ಬಹುತೇಕರ ದಿನಚರಿಯ ಭಾಗವೇ ಆಗಿದೆ. ಫ್ರೀ ಸಮಯ ಕಳೆಯಲು, ಸ್ನೇಹಿತರೊಂದಿಗೆ ಹರಟೆ ಹೊಡೆಯಲು, ಯೋಗ, ಧ್ಯಾನ ಮಾಡಲು, ವ್ಯಾಯಾಮ ಮಾಡಲು, ಸಿನಿಮಾ ನೋಡಲು ಬಾಲ್ಕನಿಗಿಂತ ಉತ್ತಮ ಜಾಗ ಇನ್ನೊಂದಿಲ್ಲ. ಇಂತಹ ನಿಮ್ಮ ನೆಚ್ಚಿನ ಬಾಲ್ಕನಿಯನ್ನು ವಾಸ್ತು ಪ್ರಕಾರ ಹೇಗೆ ಇನ್ನಷ್ಟು ಉತ್ತಮಗೊಳಿಸಬಹುದು? ಬಾಲ್ಕನಿಯಲ್ಲಿ ಯಾವ ಅಂಶಗಳತ್ತ ಗಮನ ಹರಿಸಬೇಕು? ಎನ್ನುವುದರ ವಿವರ ಇಂದಿನ ವಾಸ್ತುಟಿಪ್ಸ್‌ (Vastu Tips)ನಲ್ಲಿದೆ.

ದಿಕ್ಕು

ಮನೆಯಲ್ಲಿ ಬಾಲ್ಕನಿ ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿರಬೇಕು ಎಂದು ವಾಸ್ತು ತಜ್ಞರು ಹೇಳುತ್ತಾರೆ. ಇದು ಗರಿಷ್ಠ ಪ್ರಮಾಣದ ಸೂರ್ಯನ ಬೆಳಕನ್ನು ಪಡೆಯುವ ಪ್ರದೇಶವಾಗಿರುವುದರಿಂದ ಇದು ಆದರ್ಶ ದಿಕ್ಕು. ಬಾಲ್ಕನಿ ನಿರ್ಮಿಸಲು ದಕ್ಷಿಣ ಅಥವಾ ಪಶ್ಚಿಮವನ್ನು ನಕಾರಾತ್ಮಕ ದಿಕ್ಕುಗಳು ಎಂದು ಪರಿಗಣಿಸಲಾಗುತ್ತದೆ.

ಪೀಠೋಪಕರಣಗಳ ಸ್ಥಾನ

ಪೀಠೋಪಕರಣಗಳು ಬಾಲ್ಕನಿಯ ಪ್ರಮುಖ ಭಾಗ. ಕುಳಿತುಕೊಳ್ಳಲು, ವಿಶ್ರಾಂತಿ ಪಡೆಯಲು ವಿವಿಧ ರೀತಿಯ ಪೀಠೋಪಕರಣಗಳನ್ನು ಇಲ್ಲಿ ಜೋಡಿಸಿಡುತ್ತೇವೆ. ಹೀಗಾಗಿ ನಿಮ್ಮ ಬಾಲ್ಕನಿಗೆ ಸೂಕ್ತವಾದ ಪೀಠೋಪಕರಣಗಳು ಯಾವುವು ಎನ್ನುವುದರತ್ತ ಗಮನ ಹರಿಸಬೇಕು. ಕುರ್ಚಿಗಳು, ಸ್ಟೂಲ್‌ಗಳು ಮತ್ತು ಟೇಬಲ್‌ಗಳಂತಹ ಭಾರವಾದ ಪೀಠೋಪಕರಣಗಳನ್ನು ಬಾಲ್ಕನಿಯ ನೈಋತ್ಯ ಮೂಲೆಯಲ್ಲಿ ಇಡಬೇಕು ಎಂದು ವಾಸ್ತು ತಜ್ಞರು ಹೇಳುತ್ತಾರೆ.

ಚಾವಣಿ ಹೀಗಿರಲಿ

ನಿಮ್ಮ ಬಾಲ್ಕನಿಯ ಚಾವಣಿ ಯಾವಾಗಲೂ ಉತ್ತರ ಅಥವಾ ಪೂರ್ವ ದಿಕ್ಕಿನ ಕಡೆಗೆ ಇಳಿಜಾರಾಗಿರಬೇಕು. ಯಾವುದೇ ಕಾರಣಕ್ಕೂ ದಕ್ಷಿಣ ಅಥವಾ ಪಶ್ಚಿಮದ ಕಡೆಗೆ ಅಲ್ಲ. ಚಾವಣಿಯ ಎತ್ತರವು ಮುಖ್ಯ ಕಟ್ಟಡದ ಛಾವಣಿಗಿಂತ ಕಡಿಮೆ ಇರಬೇಕು ಎಂದು ವಾಸ್ತು ತಜ್ಞರು ಹೇಳುತ್ತಾರೆ. ಅಲ್ಲದೆ ನಿಮ್ಮ ಬಾಲ್ಕನಿಯ ಚಾವಣಿಗೆ ಟಿನ್ ಬಳಕೆ ಬೇಡ.

ಅಲಂಕಾರ

ಬಾಲ್ಕನಿಯಲ್ಲಿ ಸಣ್ಣ ಹೂವಿನ ಕುಂಡಗಳನ್ನು ಇರಿಸಲು ವಾಸ್ತು ಶಾಸ್ತ್ರ ಸಲಹೆ ನೀಡುತ್ತದೆ. ಯಾಕೆಂದರೆ ಅವು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ತುಂಬಾ ದೊಡ್ಡ ಸಸ್ಯಗಳನ್ನು ಇಡುವುದನ್ನು ತಪ್ಪಿಸಿ. ಅಲ್ಲದೆ ನಿಮ್ಮ ಬಾಲ್ಕನಿಗೆ ವರ್ಣರಂಜಿತ ಹೂವಿನ ಗಿಡಗಳನ್ನು ಆರಿಸಿ ಮತ್ತು ಬಳ್ಳಿಗಳನ್ನು ಎಂದಿಗೂ ಇಡಬೇಡಿ. ಇವು ಸೂರ್ಯನ ಬೆಳಕನ್ನು ತಡೆಯುತ್ತವೆ. ನಿಮ್ಮ ಬಾಲ್ಕನಿಯ ಪಶ್ಚಿಮ, ದಕ್ಷಿಣ ಅಥವಾ ನೈಋತ್ಯ ಭಾಗದಲ್ಲಿ ಯಾವಾಗಲೂ ಹೂವಿನ ಕುಂಡಗಳನ್ನು ಇರಿಸಿ. ಮಧ್ಯ ಭಾಗ ಖಾಲಿಯಾಗಿರಲಿ.

ಇದನ್ನೂ ಓದಿ: Vastu Tips: ನಿಮ್ಮ ಜೀವನ ಸಮೃದ್ಧಿಗಾಗಿ ಈ ಗಿಡಗಳನ್ನು ಬೆಳೆಸಿ

ಸೂಕ್ತ ಲೈಟ್‌ಗಳು

ಕತ್ತಲೆ ಅಥವಾ ತುಂಬಾ ಮಂದ ಬೆಳಕಿನ ಬಾಲ್ಕನಿಯಲ್ಲಿ ಕುಳಿತುಕೊಳ್ಳುವುದು ನಕಾರಾತ್ಮಕತೆಗೆ ಕಾರಣವಾಗಬಹುದು ಎಂದು ವಾಸ್ತು ತಜ್ಞರು ಹೇಳುತ್ತಾರೆ. ನಿಮ್ಮ ಬಾಲ್ಕನಿಗೆ ತುಂಬಾ ತೀಕ್ಷ್ಣ ಬೆಳಕನ್ನು ನೀಡದ ಲೈಟ್‌ಗಳನ್ನು ಆರಿಸಿ.

ಯಾವ ಬಣ್ಣ ಸೂಕ್ತ?

ಬಾಲ್ಕನಿ ಮನೆಯ ಒಂದು ಪ್ರಮುಖ ಸ್ಥಳವಾಗಿ ಪರಿಗಣಿಸಲ್ಪಡುತ್ತದೆ. ಅಲ್ಲಿ ನಿಮ್ಮ ಮನಸ್ಸು ವಿಶ್ರಾಂತಿ ಪಡೆಯಲು ಬಯಸುತ್ತದೆ. ಬಾಲ್ಕನಿ ದಣಿದ ದೇಹಕ್ಕೆ ನೆಮ್ಮದಿ ಒದಗಿಸುತ್ತದೆ. ಹೀಗಾಗಿ ಗೋಡೆಗಳಿಗೆ ಮೇಲೆ ಗಾಢ ಬಣ್ಣವನ್ನು ಬಳಿಯಬೇಡಿ. ವಾಸ್ತು ಪ್ರಕಾರ, ಬಿಳಿ, ನೀಲಿ ಮತ್ತು ತಿಳಿ ಗುಲಾಬಿಯಂತಹ ಶಾಂತ ಬಣ್ಣಗಳು ನಿಮ್ಮ ಬಾಲ್ಕನಿಗೆ ಸೂಕ್ತ.

Exit mobile version