ʻಮನೆಯೇ ಮಂತ್ರಾಲಯ…ʼ ಎಂಬಂತೆ ಮನೆಯಲ್ಲಿಯೇ ದೇವತೆಗಳ ವಾಸ ಇರುತ್ತದೆ. ಇದರಿಂದಲೇ ಮನೆಯಲ್ಲಿ ನೆಮ್ಮದಿ, ಸುಖ ಮತ್ತು ಶಾಂತಿ ನೆಲೆಸಿರುತ್ತದೆ. ವಾಸ್ತು ಶಾಸ್ತ್ರದಲ್ಲಿ ಹೇಳುವ ಪ್ರಕಾರ ಮನೆಯ ಕೆಲವು ದಿಕ್ಕುಗಳು ಅತ್ಯಂತ ಶುಭವನ್ನು ತಂದುಕೊಡುವಂಥದ್ದಾಗಿರುತ್ತವೆ. ಹಾಗಾಗಿ ಅಂಥ ದಿಕ್ಕುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಆ ದಿಕ್ಕಿಗೆ ಸರಿಹೊಂದುವ ಕೆಲಸವನ್ನೇ ಮಾಡಬೇಕು (Vastu Tips). ಇದಕ್ಕೆ ಮೊದಲಿಗೆ ಈ ದಿಕ್ಕುಗಳ ಮಹತ್ವವನ್ನು ಅರಿತುಕೊಳ್ಳಬೇಕಿದೆ.
ಸಾಮಾನ್ಯವಾಗಿ ಮನೆಯ ವಾಸ್ತುವಿನ ಬಗ್ಗೆ ಎಲ್ಲರೂ ವಿಶೇಷವಾದ ಕಾಳಜಿಯನ್ನು ವಹಿಸುತ್ತಾರೆ. ಮನೆಯಲ್ಲಿ ಸರಿಯಾದ ವಾಸ್ತುವನ್ನು ಅಳವಡಿಸಿಕೊಳ್ಳುವುದರಿಂದ ನೆಮ್ಮದಿಯ ಜೊತೆಗೆ ಮನೆಯ ಸದಸ್ಯರಿಗೆ ಯಶಸ್ಸು ಲಭಿಸುತ್ತಾ ಹೋಗುತ್ತದೆ. ಹಾಗಾಗಿ ಮನೆಯ ಕೆಲವು ದಿಕ್ಕುಗಳು ಅಂದರೆ ಕೆಲವು ಮೂಲೆಗಳಲ್ಲಿ ಭಗವಂತನ ವಾಸವಿರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಮನೆಗೆ ಶುಭವನ್ನು ನೀಡುವ ಪ್ರಮುಖವಾದ ದಿಕ್ಕುಗಳ ಬಗ್ಗೆ ತಿಳಿದುಕೊಳ್ಳೋಣ.
ಈಶಾನ್ಯ ಮೂಲೆಯ ಮಹತ್ವ
ಪೂರ್ವ ಮತ್ತು ಉತ್ತರ ದಿಕ್ಕಿನ ಮಧ್ಯೆ ಬರುವುದೇ ಈಶಾನ್ಯ ಮೂಲೆ. ವಾಸ್ತು ಶಾಸ್ತ್ರದ ಪ್ರಕಾರ ಈ ದಿಕ್ಕು ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಹಾಗಾಗಿ ಮನೆಯ ಮತ್ತು ಕಚೇರಿಯ ಈಶಾನ್ಯ ಮೂಲೆಯನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳಬೇಕು. ಮನೆಯ ಹಳೆಯ ಸಾಮಗ್ರಿಗಳನ್ನು ಈ ಮೂಲೆಯಲ್ಲಿ ಜೋಡಿಸಿಡಬಾರದು. ಈ ಮೂಲೆ ಸ್ವಚ್ಛವಾಗಿದ್ದರೆ, ದೇವತೆಗಳ ಕೃಪೆಯಿಂದ ಮನೆಯಲ್ಲಿ ಸುಖ ಸಮೃದ್ಧಿ ನೆಲೆಸಿರುತ್ತದೆ. ಆ ಮನೆಯ ಸದಸ್ಯರು ಅಭಿವೃದ್ಧಿಯನ್ನು ಕಾಣುವಂತಾಗುತ್ತದೆ ಎಂದು ವಾಸ್ತು ಶಾಸ್ತ್ರು ಹೇಳುತ್ತದೆ.
ಮನೆಯ ಈಶಾನ್ಯ ದಿಕ್ಕಿನಲ್ಲಿ ತುಳಸಿ ಗಿಡ ಇದ್ದರೆ ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಇದರಿಂದ ಮನೆಯ ಸದಸ್ಯರಿಗೆ ಶುಭ ಉಂಟಾಗುವುದಲ್ಲದೇ, ಮನೆಯಲ್ಲಿ ಸುಖ ಸಮೃದ್ಧಿ ನೆಲೆಸಿರುತ್ತದೆ. ಅಷ್ಟೇ ಅಲ್ಲದೇ ಮನೆಗೆ ಯಾವುದೇ ರೀತಿಯ ನಕಾರಾತ್ಮಕ ಅಂಶಗಳು ಪ್ರವೇಶಿಸುವುದಿಲ್ಲ. ಮನೆಯ ಈ ದಿಕ್ಕಿನಲ್ಲಿ ಬೃಹಸ್ಪತಿ ಮತ್ತು ಬ್ರಹ್ಮದೇವರ ವಾಸವಿರುತ್ತದೆ ಎಂದು ಸಹ ವಾಸ್ತು ಶಾಸ್ತ್ರ ಹೇಳುತ್ತದೆ.
ಈಶಾನ್ಯ ದಿಕ್ಕು ಅತ್ಯಂತ ಪವಿತ್ರ
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಈಶಾನ್ಯ ದಿಕ್ಕು ಅತ್ಯಂತ ಪವಿತ್ರವಾದ ಸ್ಥಳವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಈ ಜಾಗದಲ್ಲಿ ಯಾವುದೇ ಕಾರಣಕ್ಕೂ ಅಡುಗೆ ಮನೆ ಅಥವಾ ಸ್ನಾನ ಗೃಹವನ್ನು ನಿರ್ಮಿಸಬಾರದು. ಹಳೇ ಅಥವಾ ಹಾಳಾಗಿರುವ ವಸ್ತುಗಳನ್ನು ಇಡಲು ಈ ಜಾಗವನ್ನು ಬಳಸಬಾರದು. ಇದರಿಂದ ಮನೆಯ ಸದಸ್ಯರ ಉನ್ನತಿಗೆ ಅಡ್ಡಿ ಉಂಟಾಗುತ್ತದೆ. ಹಾಗಾಗಿ ಮನೆಯ ಈಶಾನ್ಯ ಮೂಲೆಯು ದೇವರನ್ನು ಪ್ರತಿಷ್ಠಾಪಿಸಲು ಅತ್ಯಂತ ಪ್ರಶಸ್ತವಾದ ದಿಕ್ಕಾಗಿದೆ. ಜೊತೆಗೆ ಧಾರ್ಮಿಕ ಕಾರ್ಯಗಳಿಗೆ ಈ ಸ್ಥಳ ಅತ್ಯಂತ ಪ್ರಶಸ್ತವಾಗಿರುತ್ತದೆ.
ಪ್ರತಿನಿತ್ಯ ಬೆಳಗ್ಗೆ ಎದ್ದ ತಕ್ಷಣ ಈಶಾನ್ಯ ಮೂಲೆಯಲ್ಲಿ ಕೆಲವು ಸಮಯ ಇದ್ದರೆ ಮನಸ್ಸಿಗೆ ನಕಾರಾತ್ಮಕ ಚಿಂತನೆಗಳು ಬರುವುದು ಕಡಿಮೆಯಾಗುತ್ತದೆ. ಅಲ್ಲದೆ, ಶರೀರ ಹಾಗೂ ಮನಸ್ಸು ಸ್ವಾಸ್ಥ್ಯವಾಗಿರುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.
ಸಕಾರಾತ್ಮಕತೆಗೆ ಪೂರ್ವ ದಿಕ್ಕು
ಮನೆಗೆ ಸಕಾರಾತ್ಮಕತೆಯನ್ನು ಕೊಡುವ ದಿಕ್ಕು ಪೂರ್ವ ದಿಕ್ಕು. ಮನೆಯ ಮುಖ್ಯದ್ವಾರ ಈ ದಿಕ್ಕಿಗಿದ್ದರೆ ಅತ್ಯಂತ ಶುಭ. ಸೂರ್ಯದೇವನ ದಿಕ್ಕಾಗಿರುವ ಪೂರ್ವ ದಿಕ್ಕನ್ನು ವಾಸ್ತು ಶಾಸ್ತ್ರದಲ್ಲಿ ಲಕ್ಷ್ಮೀದೇವಿಯ ದಿಕ್ಕು ಎಂದು ಸಹ ಕರೆಯುತ್ತಾರೆ. ಶಾಸ್ತ್ರಗಳಲ್ಲಿ ಎಲ್ಲ ಶುಭಕ್ಕೂ ಪೂರ್ವ ದಿಕ್ಕು ಅತ್ಯಂತ ಪ್ರಶಸ್ತವೆಂದು ಉಲ್ಲೇಖಿಸುತ್ತಾರೆ. ಪೂರ್ವಾಭಿಮುಖವಾಗಿ ಕುಳಿತು ಮಾಡುವ ದೇವರ ಧ್ಯಾನಕ್ಕೆ ಅತ್ಯಂತ ಮಹತ್ವವಿದೆ. ಹಾಗಾಗಿ ಮನೆಯ ಪೂರ್ವ ದಿಕ್ಕು ಯಾವಾಗಲೂ ಸ್ವಚ್ಛವಾಗಿರಬೇಕು. ಇದರಿಂದ ಮನೆಯ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. ಜೊತೆಗೆ ಮನೆಯ ಸದಸ್ಯರ ಆದಾಯ ಹೆಚ್ಚುತ್ತದೆ. ಹಾಗಾಗಿ ಶುಭ ದಿಕ್ಕುಗಳಲ್ಲಿ ಪೂರ್ವ ದಿಕ್ಕು ಸಹ ಒಂದಾಗಿದೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಬ್ರಹ್ಮ ಸ್ಥಾನದ ಬಗ್ಗೆ ಗೊತ್ತೇ?
ಯಾವುದೇ ಕೋಣೆಯ ಮಧ್ಯದ ಭಾಗವನ್ನು ಬ್ರಹ್ಮ ಸ್ಥಾನವೆಂದು ಕರೆಯುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮಧ್ಯ ಭಾಗವನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳಬೇಕು. ಇದರಿಂದ ಮನೆಯ ಸದಸ್ಯರ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ. ಮನೆಯ ಅಭಿವೃದ್ಧಿಗೆ ಇದು ಪೂರಕವಾಗುತ್ತದೆ. ಜೊತೆಗೆ ಮನೆಯ ಸದಸ್ಯರ ಆರೋಗ್ಯ ಸಹ ಉತ್ತಮವಾಗಿರುತ್ತದೆ.
ಇದನ್ನೂ ಓದಿ : Vastu Tips: ಈ ಐದು ವಸ್ತುಗಳನ್ನು ತುಳಸಿ ಗಿಡದ ಬಳಿ ಇಡಲೇ ಬೇಡಿ!