ವಾಸ್ತು ಶಾಸ್ತ್ರದಲ್ಲಿ ಮನೆಯ ಪ್ರತಿ ಮೂಲೆಗೂ ಪ್ರಾಶಸ್ತ್ಯವನ್ನು ನೀಡಲಾಗುತ್ತದೆ. ಮನೆ ನಿರ್ಮಾಣದ ಸಮಯದಲ್ಲೂ ವಾಸ್ತು ತಜ್ಞರು ಮನೆಯ ಅಡಿಪಾಯದಿಂದ ಆರಂಭಿಸಿ, ಮನೆಯ ಗೋಡೆ, ಬಾಗಿಲು ಮತ್ತು ಕಿಟಕಿಗೆ ಸಂಬಂಧಿಸಿದ ವಾಸ್ತು ನಿಯಮಗಳನ್ನು (Vastu Tips) ತಿಳಿಸುತ್ತಾರೆ.
ಮನೆಯನ್ನು ಸರಿಯಾದ ದಿಕ್ಕಿನಲ್ಲಿ ನಿರ್ಮಿಸಿದಂತೆಯೇ, ಮನೆಯ ಉತ್ತಮ ಗಾಳಿ ಮತ್ತು ಬೆಳಕಿಗೆ ಅವಶ್ಯಕವಾಗಿರುವ ಬಾಗಿಲು ಮತ್ತು ಕಿಟಕಿಗಳನ್ನು ಸರಿಯಾದ ದಿಕ್ಕಿನಲ್ಲಿ ವಾಸ್ತು ಪ್ರಕಾರ ನಿರ್ಮಿಸುವುದು ಸಹ ಅಷ್ಟೇ ಮುಖ್ಯವಾಗುತ್ತದೆ. ಮನೆಯ ಬಾಗಿಲು ಮತ್ತು ಕಿಟಕಿಗಳು ಸರಿಯಾದ ದಿಕ್ಕಿನಲ್ಲಿ ಇಲ್ಲದೇ ಇದ್ದರೆ ಅದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ.
ಮನೆಯ ಕಿಟಕಿ ವಾಸ್ತು ಪ್ರಕಾರ ಇದ್ದದ್ದೇ ಆದರೆ ಇದರಿಂದ ಮನೆಗೆ ಸುಖ, ಸಮೃದ್ಧಿ ಮತ್ತು ಸೌಭಾಗ್ಯವು ಅವುಗಳ ಮೂಲಕ ಪ್ರವೇಶಿಸುತ್ತದೆ. ಸಕಾರಾತ್ಮಕ ಶಕ್ತಿಯ ಹರಿವು ಕಿಟಕಿಗಳ ಮೂಲಕವೇ ಆಗುತ್ತದೆ. ಕುಟುಂಬದ ಸದಸ್ಯರಲ್ಲಿ ಉತ್ತಮ ಬಾಂಧವ್ಯ ಏರ್ಪಡುವಂತೆ ಮಾಡುತ್ತವೆ. ಹಾಗಾಗಿ ಮನೆಯ ಕಿಟಕಿಗೆ ಸಂಬಂಧಿಸಿದಂತೆ ಇರುವ ವಾಸ್ತು ನಿಯಮಗಳನ್ನು ತಿಳಿಯೋಣ.
ಕಿಟಕಿ ಕೂರಿಸಲು ಈ ದಿಕ್ಕುಗಳು ಉತ್ತಮ
ಸರಿಯಾದ ರೀತಿಯಲ್ಲಿ ಮನೆಯನ್ನು ನಿರ್ಮಿಸುವಾಗ ಕಿಟಕಿಗಳನ್ನು ಸಹ ಸರಿಯಾದ ದಿಕ್ಕಿನಲ್ಲಿ ಇಡುವುದು ಉತ್ತಮ. ಕಿಟಕಿಗಳನ್ನು ಪೂರ್ವ, ಪಶ್ಚಿಮ ಮತ್ತು ಉತ್ತರ ದಿಕ್ಕಿನಲ್ಲಿ ನಿರ್ಮಿಸಬಹುದಾಗಿದೆ. ಈ ದಿಕ್ಕುಗಳು ಕಿಟಕಿ ಇಡಲು ಅತ್ಯಂತ ಶುಭವೆಂದು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಅದರಲ್ಲೂ ಮನೆಯ ಪೂರ್ವ ದಿಕ್ಕಿಗೆ ಹೆಚ್ಚಿನ ಕಿಟಕಿಗಳಿದ್ದರೆ ಉತ್ತಮ. ಸೂರ್ಯೋದಯದ ಮೊದಲ ಕಿರಣಗಳು ಮನೆಯೊಳಗೆ ಪ್ರವೇಶಿಸುವಂತೆ ಕಿಟಕಿ ಅಥವಾ ಬಾಗಿಲು ಇದ್ದರೆ ಅತ್ಯಂತ ಉತ್ತಮ. ಪೂರ್ವ ದಿಕ್ಕಿಗೆ ನಿರ್ಮಿಸಿದ ಕಿಟಕಿಯಿಂದ ಬರುವ ಗಾಳಿಯ ಮೂಲಕ ಮನೆಗೆ ಸುಖ ಮತ್ತು ಸೌಭಾಗ್ಯ ಬರುತ್ತದೆ.
ಉತ್ತರ ದಿಕ್ಕಿನಲ್ಲಿ ಕಿಟಕಿ ಇರುವುದರಿಂದ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ. ಉತ್ತರ ದಿಕ್ಕಿನಲ್ಲಿರುವ ಕಿಟಕಿಗಳು ಲಾಭವನ್ನು ತಂದುಕೊಡುತ್ತವೆ ಎಂದು ಹೇಳಲಾಗುತ್ತದೆ. ಹಾಗಾಗಿ ಉತ್ತರ ದಿಕ್ಕಿಗೆ ಹೆಚ್ಚು ಕಿಟಕಿಗಳಿದ್ದರೆ ಉತ್ತಮ. ಹಾಗೂ ಈ ಕಿಟಕಿಗಳು ಸದಾ ತೆರೆದುಕೊಂಡಿದ್ದರೆ ಶುಭ.
ಸರಿಯಾದ ಆಕಾರ ಮತ್ತು ಸಂಖ್ಯೆ
ಮನೆಯಲ್ಲಿ ಕಿಟಕಿಗಳು ಸರಿಯಾದ ದಿಕ್ಕಿನಲ್ಲಿ ಇರುವುದಲ್ಲದೇ ಅವುಗಳ ಆಕಾರವು ಸರಿಯಾಗಿಯೇ ಇರಬೇಕು. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕಿಟಕಿಗಳು ಸಮ ಸಂಖ್ಯೆಯಲ್ಲಿರಬೇಕು. ಅಂದರೆ 2, 4, 6, 8 ಹೀಗೆ ಸಮ ಸಂಖ್ಯೆಯಲ್ಲಿದ್ದರೆ ಉತ್ತಮ. ವಿಷಮ ಸಂಖ್ಯೆಯ ಕಿಟಕಿಗಳು ಮನೆಗೆ ಉತ್ತಮವಲ್ಲ.
ಮನೆಯ ಬಾಗಿಲುಗಳ ಪಕ್ಕದಲ್ಲಿ ಎರಡೂ ಪಕ್ಕಗಳಲ್ಲಿ ಕಿಟಿಕಿಯನ್ನು ನಿರ್ಮಿಸುವುದರಿಂದ ಶುಭ ಫಲಗಳು ಪ್ರಾಪ್ತವಾಗುತ್ತವೆ. ಈ ಕಿಟಕಿಗಳಿಂದ ಸಕಾರಾತ್ಮಕ ಶಕ್ತಿ ಹೆಚ್ಚು ಪ್ರವಹಿಸುತ್ತವೆ.
ಈ ದಿಕ್ಕಿಗೆ ಕಿಟಕಿ ಇರಿಸಬೇಡಿ!
ಮನೆಯ ದಕ್ಷಿಣ ದಿಕ್ಕಿಗೆ ಕಿಟಕಿಯನ್ನು ನಿರ್ಮಿಸಬಾರದು. ದಕ್ಷಿಣ ದಿಕ್ಕನ್ನು ಯಮನ ದಿಕ್ಕು ಎಂದು ಹೇಳಲಾಗುತ್ತದೆ. ಹಾಗಾಗಿ ಈ ದಿಕ್ಕಿಗಿರುವ ಕಿಟಕಿಗಳು ರೋಗ ಮತ್ತು ಶೋಕವನ್ನು ತರುತ್ತವೆ ಎಂಬ ನಂಬಿಕೆ ಇದೆ. ಈ ದಿಕ್ಕಿನಲ್ಲಿ ಕಿಟಕಿ ಇದ್ದದ್ದೇ ಆದರೆ ಅದನ್ನು ಯಾವಾಗಲೂ ಮುಚ್ಚಿಡುವುದು ಉತ್ತಮ. ಇಲ್ಲವೇ ದಪ್ಪವಾದ ಪರದೆಯನ್ನು ಹಾಕಿಡುವುದು ಉತ್ತಮ.
ನೈಋತ್ಯ ಮೂಲೆಯಲ್ಲಿ ಕಿಟಕಿ ಇರುವುದು ಸಹ ಉತ್ತಮವಲ್ಲ. ನೈಋತ್ಯ ಮೂಲೆಯ ಅಧಿಪತಿ ರಾಹು ಮತ್ತು ಕೇತು ಆಗಿರುವುದರಿಂದ ಈ ದಿಕ್ಕಿನಲ್ಲಿ ಕಿಟಕಿ ನಿರ್ಮಿಸುವುದು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ.
ಕಿಟಕಿ ಹೀಗಿದ್ದರೆ ಒಳ್ಳೆಯದು
ಮನೆಯ ಕಿಟಕಿಗಳನ್ನು ಬಳ್ಳಿ ಅಥವಾ ಚಿಕ್ಕ ಗಿಡಗಳಿಂದ ಸಿಂಗರಿಸಿಡಬಹುದಾಗಿದೆ. ಇಲ್ಲವೇ ಕಿಟಕಿಗಳ ಮೇಲೆ ರಂಗೋಲಿ ಅಥವಾ ಇನ್ನಿತರ ಚಿತ್ತಾರಗಳನ್ನು ಬಿಡಿಸುವುದು ಉತ್ತಮ. ಕಿಟಕಿಗಳಿಗೆ ಉತ್ತಮವಾದ ಮತ್ತು ಕಣ್ಣಿಗೆ ಶಾಂತತೆಯನ್ನು ನೀಡುವ ಪರದೆಗಳನ್ನು ಬಳಸುವುದು ಉತ್ತಮ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಎರಡು ಬಾಗಿಲಿನ ಕಿಟಕಿ ಇದ್ದರೆ ಒಳ್ಳೆಯದು. ಅದರಲ್ಲೂ ಕಿಟಕಿ ಬಾಗಿಲುಗಳು ಒಳಮುಖವಾಗಿ ತೆರೆದುಕೊಂಡರೆ ಉತ್ತಮವೆಂದು ಹೇಳಲಾಗುತ್ತದೆ. ಕಿಟಕಿಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕಿಟಕಿ ಹಾಳಾಗಿದ್ದರೆ ಅಥವಾ ಒಡೆದಿದ್ದರೆ ಅದನ್ನು ತಕ್ಷಣವೇ ಸರಿ ಪಡಿಸಿಕೊಳ್ಳಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.
ಇದನ್ನೂ ಓದಿ : Vastu Tips: ಈ ಅಭ್ಯಾಸಗಳು ದಾರಿದ್ರ್ಯಕ್ಕೆ ದಾರಿ, ಇವುಗಳಿಂದ ದೂರವಿರಿ!