ನಾವು ಪಡುವ ಶ್ರಮಕ್ಕೆ ತಕ್ಕ ಫಲ ಸಿಗಬೇಕೆಂದು ಎಲ್ಲರೂ ಬಯಸುತ್ತಾರೆ. ಎಷ್ಟೇ ದುಡಿದರೂ ಕೆಲವೊಮ್ಮೆ ಕೈಯಲ್ಲಿ ದುಡ್ಡು ನಿಲ್ಲುವುದಿಲ್ಲ. ಸಂಪಾದನೆ ಚೆನ್ನಾಗಿಯೇ ಇದ್ದರೂ, ಗಳಿಸಿದ ಹಣ ಯಾವುದೋ ಕಾರಣಕ್ಕೆ ಖರ್ಚಾಗಿ ಹೋಗಿರುತ್ತದೆ. ಈ ರೀತಿಯ ಆರ್ಥಿಕ ತೊಂದರೆಗೆ ವಾಸ್ತು ದೋಷ ಸಹ ಕಾರಣವಾಗಿರಬಹುದು.
ವಾಸ್ತು ತಜ್ಞರ ಪ್ರಕಾರ ಮನೆಯಲ್ಲಿ ವಾಸ್ತುವಿಗೆ ಸಂಬಂಧಿಸಿದ ಕೆಲವು ದೋಷಗಳು ಅಥವಾ ವಸ್ತುಗಳಿಂದ ಹಣದ ತೊಂದರೆ ಉಂಟಾಗುತ್ತದೆ. ಈ ರೀತಿಯ ವಾಸ್ತು ಸಮಸ್ಯೆ ಇದ್ದಾಗ ಹಣ ಉಳಿಸುವುದು ಕನಸಿನ ಮಾತಾಗುತ್ತದೆ. ಹಾಗಾಗಿ ಮನೆಯಲ್ಲಿ ಧನಲಕ್ಷ್ಮೀಯು ಸದಾ ನೆಲೆಸಿರುವಂತೆ ಮಾಡಲು ವಾಸ್ತು ಶಾಸ್ತ್ರದಲ್ಲಿ ತಿಳಿಸಿರುವ ಕೆಲ ಸರಳ ಪರಿಹಾರದ (Vastu Tips) ಬಗ್ಗೆ ತಿಳಿಯೋಣ.
ನೈಋತ್ಯ ದಿಕ್ಕು ಕುಬೇರ ಸ್ಥಾನ
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ನೈಋತ್ಯ ಭಾಗವನ್ನು ಕುಬೇರನ ಸ್ಥಾನವೆಂದು ಹೇಳಲಾಗುತ್ತದೆ. ಈ ಭಾಗದಲ್ಲಿ ಹಣ ಇರಿಸುವ ಲಾಕರ್‌ಗಳನ್ನು ಇಡಬಹುದು. ಇದು ಸಾಧ್ಯವಾಗದೇ ಇದ್ದರೆ ದಕ್ಷಿಣದ ಗೋಡೆಯಲ್ಲಿ ಉತ್ತರಕ್ಕೆ ಎದುರಾಗಿ ಲಾಕರ್ ಅನ್ನು ಇರಿಸುವುದು ಸಹ ಅದೃಷ್ಟವನ್ನು ತರುತ್ತದೆ. ಲಾಕರ್‌ನ ಬಾಗಿಲು ಉತ್ತರಕ್ಕೆ ತೆರೆಯಬೇಕು, ಇದು ವಾಸ್ತು ಪ್ರಕಾರ ಕುಬೇರನ (ಸಂಪತ್ತಿನ ದೇವರು) ದಿಕ್ಕು. ಹಣವನ್ನು ತಿಜೋರಿಯ ಮಧ್ಯ ಭಾಗದಲ್ಲಿ ಅಥವಾ ಮೇಲಿನ ಭಾಗದಲ್ಲಿ ಇಡಬೇಕೆಂದು ಮತ್ತು ತಿಜೋರಿಯ ಕೆಳಭಾಗದಲ್ಲಿ ಹಣ ಇಡಬಾರದೆಂದು ಶಾಸ್ತ್ರ ಹೇಳುತ್ತದೆ.
ಈ ವಸ್ತುಗಳನ್ನು ತಿಜೋರಿಯಲ್ಲಿಡಿ
ವಾಸ್ತು ಶಾಸ್ತ್ರದ ಪ್ರಕಾರ ತಿಜೋರಿಯಲ್ಲಿ ಶುಭವನ್ನು ನೀಡುವಂತಹ ಯಂತ್ರಗಳಾದ ವೃದ್ಧಿ ಯಂತ್ರ, ಮಹಾಲಕ್ಷ್ಮೀ ಯಂತ್ರ ಇತ್ಯಾದಿ ಲಕ್ಷ್ಮೀಗೆ ಸಂಬಂಧಿಸಿದ ಯಂತ್ರಗಳನ್ನು ಇಡಬೇಕೆಂದು, ಇದರಿಂದ ಖಜಾನೆ ಬರಿದಾಗುವುದಿಲ್ಲ ವೆಂದು ಶಾಸ್ತ್ರ ಹೇಳುತ್ತದೆ.
ಮಹಾಲಕ್ಷ್ಮೀ ಮತ್ತು ಕುಬೇರ ಮೂರ್ತಿ
ಹಣ ಮನೆಗೆ ಬರುತ್ತಿದ್ದಂತೆಯೇ ಖಾಲಿಯಾಗುತ್ತಿದೆ ಎಂದಾದರೆ, ಇಲ್ಲವೇ ಎಷ್ಟೇ ಪ್ರಯತ್ನಿಸಿದರೂ ಹಣ ಉಳಿತಾಯ ಮಾಡಲು ಆಗುತ್ತಿಲ್ಲವೆಂದಾದರೆ, ಮನೆಯ ದೇವರ ಕೋಣೆಯಲ್ಲಿ ಸಂಪತ್ತಿನ ಅಧಿ ದೇವತೆಯಾಗಿರುವ ಲಕ್ಷ್ಮೀಯನ್ನು ಮತ್ತು ಸಂಪತ್ತಿಗೆ ಒಡೆಯನಾಗಿರುವ ಕುಬೇರ ದೇವರ ಪ್ರತಿಮೆಯನ್ನು ಇಡಬೇಕೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಜೊತೆಗೆ ಅದಕ್ಕೆ ಪ್ರತಿನಿತ್ಯ ಪೂಜೆ ಮಾಡಬೇಕು. ಇದರಿಂದ ಆರ್ಥಿಕ ಲಾಭ ಉಂಟಾಗುತ್ತದೆ.
ಪಾತ್ರೆ ತೊಳೆಯದೇ ಇಡುವುದು ಅಶುಭ
ಮನೆಯಲ್ಲಿ ರಾತ್ರಿ ಸಮಯದಲ್ಲಿ ಊಟ ಮಾಡಿದ ತಟ್ಟೆ, ಅಡುಗೆ ಮಾಡಿದ ಪಾತ್ರೆಗಳನ್ನು ತೊಳೆಯದೇ ಹಾಗೇಯೇ ಬಿಟ್ಟು ಮಲಗುವುದು ಅಶುಭವೆಂದು ಶಾಸ್ತ್ರ ಹೇಳುತ್ತದೆ. ಎಂಜಲು ಪಾತ್ರೆಗಳನ್ನು ತಕ್ಷಣಕ್ಕೆ ತೊಳೆದಿಡುವುದು ಶುಭ ಮತ್ತು ಇದರಿಂದ ವಾಸ್ತು ದೋಷ ಉಂಟಾಗುವುದಿಲ್ಲ. ಎಂಜಲು ಪಾತ್ರೆಗಳನ್ನು ಹಾಗೇಯೇ ಬಿಟ್ಟು ಮಲಗಿದರೆ ಅಂಥ ಮನೆಯಲ್ಲಿ ಲಕ್ಷ್ಮೀ ನೆಲೆಸುವುದಿಲ್ಲ, ಹಾಗಾಗಿ ಪಾತ್ರೆಗಳನ್ನು ಶುಚಿಗೊಳಿಸಿ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ನೆಮ್ಮದಿ ಮತ್ತು ಸಂಪತ್ತು ನೆಲೆಸುತ್ತದೆ.
ಮನೆ ಸ್ವಚ್ಛವಾಗಿರಲಿ
ಸ್ವಚ್ಛತೆ ಇದ್ದರೆ ಮಾತ್ರ ಲಕ್ಷ್ಮೀ ವಾಸ ಮಾಡುತ್ತಾಳೆ. ಎಲ್ಲಿ ಕೊಳಕು, ಕೆಟ್ಟದ್ದು ಇರುತ್ತದೆಯೋ ಅಲ್ಲಿ ಲಕ್ಷ್ಮೀ ನೆಲೆಸುವುದಿಲ್ಲ. ಹಾಗಾಗಿ ಮನೆಯನ್ನು ಯಾವಾಗಲೂ ಶುಚಿಯಾಗಿಟ್ಟುಕೊಂಡಿರಬೇಕು. ಮನೆಯ ಈಶಾನ್ಯ ಭಾಗದಲ್ಲಿ ಯಾವುದೇ ಕಸ ಮತ್ತು ಬೇಡದ ವಸ್ತುಗಳನ್ನು ಇಡಬಾರದು. ಇದು ದೇವರ ಕೋಣೆಯ ಸ್ಥಾನವೆಂದು ಹೇಳಲಾಗುತ್ತದೆ.
ದಕ್ಷಿಣಾವರ್ತಿ ಶಂಖ ಮನೆಯಲ್ಲಿರಲಿ
ಹಣಕ್ಕೆ ಸಂಬಂಧಿಸಿದ ಸಮಸ್ಯೆ ಕಾಡುತ್ತಿದ್ದರೆ, ದೇವರ ಕೋಣೆಯಲ್ಲಿ ದಕ್ಷಿಣಾವರ್ತಿ ಶಂಖವನ್ನು ಇಟ್ಟುಕೊಳ್ಳಬೇಕು. ಅಷ್ಟೇ ಅಲ್ಲದೆ ಅದಕ್ಕೆ ಪೂಜೆಯನ್ನು ಮಾಡಿ ಅದನ್ನು ಊದಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಲಕ್ಷ್ಮೀ ನೆಲೆಸುತ್ತಾಳೆ ಹಾಗೂ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ.
ಒಣಗಿದ ಹೂವು ತೆಗೆಯಿರಿ
ವಾಸ್ತು ಶಾಸ್ತ್ರದ ಪ್ರಕಾರ ದೇವರ ಕೋಣೆಯಲ್ಲಿ ಒಣಗಿದ ಹೂವು ಅಥವಾ ಹೂವಿನ ಮಾಲೆಯನ್ನು ಇಡಬಾರದು. ಒಣಗಿದ ಅಥವಾ ಕೊಳೆತ ಹೂಗಳನ್ನು ಆ ಕೂಡಲೇ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಅವುಗಳನ್ನು ಹಾಗೆಯೇ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ದಾರಿದ್ರ್ಯ ಬರುತ್ತದೆ.
ಚಪ್ಪಲಿಯನ್ನು ಸರಿಯಾಗಿಡಿ
ಮನೆಯ ಮುಂಬಾಗಿಲಿನಲ್ಲಿ ಚಪ್ಪಲಿಗಳನ್ನು ಅಡ್ಡಾದಿಡ್ಡಿಯಾಗಿ ಬಿಡುವುದು, ಮನೆಯವರ ಚಪ್ಪಲಿಗಳ ರಾಶಿ ಹಾಕುವುದು ಕೂಡ ದಾರಿದ್ರ್ಯಕ್ಕೆ ಕಾರಣವಾಗಬಹುದು. ಹೀಗಾಗಿನ ಮನೆಯ ಮುಂಭಾಗದಲ್ಲಿ ಚಪ್ಪಲಿಗಳನ್ನು ಸರಿಯಾ ದ ರೀತಿಯಲ್ಲಿ ಜೋಡಿಸಿಡುವುದು ಕೂಡ ಅವಶ್ಯಕ.
ಇದನ್ನೂ ಓದಿ | Weekly Horoscope | ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?