ಎಲ್ಲರ ಮನೆಯಲ್ಲಿಯೂ ತುಳಸಿ ಗಿಡ ಇದ್ದೇ ಇರುತ್ತದೆ. ಪವಿತ್ರವಾದ ತುಳಸಿ ಗಿಡವನ್ನು ಪ್ರತಿನಿತ್ಯ ಪೂಜಿಸಲಾಗುತ್ತದೆ. ವಿವಾಹಿತ ಮಹಿಳೆಯರು ಸೌಭಾಗ್ಯ ಸ್ಥಿರವಾಗುವಂತೆ ತುಳಸಿಯನ್ನು ಪ್ರಾರ್ಥಿಸಿಕೊಳ್ಳುತ್ತಾರೆ. ಯಾವ ಮನೆಯಲ್ಲಿ ತುಳಸಿಯನ್ನು ಪೂಜಿಸಲಾಗುತ್ತದೆಯೋ ಆ ಮನೆಯಲ್ಲಿ ಸದಾ ಲಕ್ಷ್ಮೀ ಸಹಿತ ಶ್ರೀ ಮಹಾ ವಿಷ್ಣುವಿನ ವಾಸವಿರುತ್ತದೆ. ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ (Vastu Tips) ತುಳಸಿಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ.
ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುವಂತೆ, ನಕಾರಾತ್ಮಕ ಶಕ್ತಿ ಬಾರದಂತೆ ತಡೆಯುವ ಶಕ್ತಿ ತುಳಸಿಗೆ ಇದೆ ಎಂದು ನಂಬಲಾಗಿದೆ. ಪವಿತ್ರವಾದ ತುಳಸಿಯಲ್ಲಿ ಔಷಧೀಯ ಗುಣಗಳೂ ಸಹ ಇವೆ. ಮನೆಯ ಎದುರಿಗೆ ತುಳಸಿ ಗಿಡವನ್ನು ನೆಡುವುದರಿಂದ ಮನೆಗೆ ಒಳಿತಾಗುತ್ತದೆ. ಮನೆಯಲ್ಲಿ ದೈವೀ ಶಕ್ತಿಯ ವಾಸವಿರುತ್ತದೆ. ಜೊತೆಗೆ ನಕಾರಾತ್ಮಕ ಶಕ್ತಿಯಿಂದ ಮನೆಗೆ ರಕ್ಷಣೆ ಸಿಗುತ್ತದೆ.
ಇಂದು ನಗರಗಳಲ್ಲಿ ತುಳಸಿ ಗಿಡಗಳನ್ನು ಬೆಳೆಸಲು, ಇರಿಸಲು ಸೂಕ್ತ ಜಾಗದ ಕೊರತೆ ಇರುತ್ತದೆ. ಆದರೂ ತುಳಸಿ ಗಿಡಗಳನ್ನು ಪಾಟ್‌ನಲ್ಲಿ ಬೆಳೆಸಿ ಪೂಜಿಸಲಾಗುತ್ತದೆ. ಹೀಗೆ ಪೂಜಿಸಲ್ಪಡುವ ತುಳಸಿ ಗಿಡಗಳ ಸಮೀಪ ಕೆಲವು ವಸ್ತುಗಳನ್ನು ಇಡುವುದರಿಂದ ಮನೆಯ ನೆಮ್ಮದಿ ಹಾಳಾಗುತ್ತದೆಯಂತೆ, ಅಲ್ಲದೆ ಆರ್ಥಿಕ ಸ್ಥಿತಿಯೂ ಹದಗೆಡುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಹಾಗಾದರೆ ಯಾವ್ಯಾವ ವಸ್ತುಗಳನ್ನು ತುಳಸಿ ಗಿಡದ ಸಮೀಪ ಇರಿಸಬಾರದು ಎಂಬುದನ್ನು ನೋಡೋಣ.
ವಿಘ್ನ ವಿನಾಶಕ ಗಣೇಶನ ಮೂರ್ತಿ ಬೇಡ
ಪುರಾಣದಲ್ಲಿರುವ ಒಂದು ಕಥೆಯ ಪ್ರಕಾರ ಒಮ್ಮೆ ನದಿಯ ತೀರದಲ್ಲಿ ಗಣಪತಿಯು ಧ್ಯಾನ ಮುದ್ರೆಯಲ್ಲಿ ಕುಳಿತು ಧ್ಯಾನ ಮಾಡುತ್ತಿರುತ್ತಾನೆ. ಆಗ ತುಳಸಿ ದೇವಿಯು ಅಲ್ಲೇ ಹೋಗುತ್ತಿರುತ್ತಾಳೆ. ಆಕೆ ಅಲ್ಲೇ ಕುಳಿತುಕೊಂಡಿರುವ ಗಣಪತಿಯನ್ನು ನೋಡಿ ಮೋಹಿತಳಾಗುತ್ತಾಳೆ. ಕೂಡಲೇ ಧ್ಯಾನದಲ್ಲಿರುವ ಗಣಪತಿಯ ಬಳಿ ತೆರಳಿ, ಅವನನ್ನು ಎಬ್ಬಿಸಿ ತನ್ನನ್ನು ಮದುವೆಯಾಗುವಂತೆ ಕೇಳುತ್ತಾಳೆ. ಗಣಪತಿಯು ತುಳಸಿಯ ಪ್ರಸ್ತಾಪವನ್ನು ನಿರಾಕರಿಸುತ್ತಾನೆ. ಇದರಿಂದ ತುಳಸಿ ದೇವಿ ಕೋಪಗೊಳ್ಳುತ್ತಾಳೆ. ಅಲ್ಲದೇ ಗಣಪತಿಗೆ ಎರಡು ಮದುವೆಯ ಶಾಪವನ್ನು ನೀಡುತ್ತಾಳೆ. ಹಾಗಾಗಿ ತುಳಸಿಯ ಬಳಿ ಗಣೇಶನ ಮೂರ್ತಿಯನ್ನು ಇಡುವುದಿಲ್ಲ. ಅಷ್ಟೇ ಅಲ್ಲದೇ ಗಣಪತಿಗೆ ತುಳಸಿಯನ್ನು ಸಹ ಅರ್ಪಿಸುವುದಿಲ್ಲ.
ಪೊರಕೆಯನ್ನು ಇಡಬೇಡಿ
ತುಳಸಿ ಗಿಡದ ಬಳಿ ಪೊರಕೆಯನ್ನು ಇಡಬಾರದು. ಮನೆಯ ಸ್ವಚ್ಛತೆಗೆ ಬಳಸುವ ವಸ್ತುವಾದ ಪೊರಕೆಯನ್ನು ಪವಿತ್ರವಾದ ತುಳಸಿ ಗಿಡದ ಬಳಿ ಇಡುವುದರಿಂದ ಮನೆಗೆ ದಾರಿದ್ರ್ಯ ಅಂಟಿಕೊಳ್ಳುತ್ತದೆ. ಹಾಗಾಗಿ ತುಳಸಿ ಗಿಡದ ಬಳಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದರ ಜೊತೆಗೆ ಯಾವುದೇ ಅಶುಭವನ್ನು ತರುವಂಥ ವಸ್ತುಗಳನ್ನು ಇಡಬಾರದು.
ಚಪ್ಪಲಿಯನ್ನು ದೂರ ಬಿಡಿ
ನಗರಗಳಲ್ಲಿ ಮನೆ ಎದುರಿಗೋ, ಹಿಂಭಾಗದಲ್ಲಿಯೋ ತುಳಸಿ ಕಟ್ಟೆ ಇದ್ದರೆ ಅದರ ಸಮೀಪವೇ ಚಪ್ಪಲಿಗಳನ್ನು ಬಿಡುವುದು, ಚಪ್ಪಲಿ ಸ್ಟ್ಯಾಂಡ್ ಇಡುವುದು ಮಾಡುತ್ತಾರೆ. ಪವಿತ್ರವಾದ ತುಳಸಿ ದೇವಿಯನ್ನು ಪ್ರತಿನಿತ್ಯ ಪೂಜಿಸಲಾಗುತ್ತದೆ. ಹಾಗಾಗಿ ತುಳಸಿ ಗಿಡದ ಹತ್ತಿರ ಚಪ್ಪಲಿಗಳನ್ನು ಇಡಬಾರದು. ಇದರಿಂದ ಲಕ್ಷ್ಮೀ ದೇವಿಯನ್ನು ಅವಮಾನಿಸಿದಂತೆ ಆಗುತ್ತದೆ. ಇದರ ಪರಿಣಾಮವಾಗಿ ಮನೆಯಲ್ಲಿ ಆರ್ಥಿಕ ನಷ್ಟ ಉಂಟಾಗುತ್ತದೆ. ತುಳಸಿ ಗಿಡದ ಬಳಿ ಶೂ ಮತ್ತು ಚಪ್ಪಲಿಯನ್ನು ಯಾವ ಕಾರಣಕ್ಕೂ ಇಡಬಾರದು.
ಶಿವಲಿಂಗವನ್ನೂ ಇಡಬಾರದು!
ವಾಸ್ತು ಶಾಸ್ತ್ರದ ಪ್ರಕಾರ ಶಿವಲಿಂಗವನ್ನು ತುಳಸಿ ಗಿಡದ ಬಳಿ ಇಡುವುದು ನಿಷಿದ್ಧವಾಗಿದೆ. ತುಳಸಿಯು ವಿಷ್ಣುವಿಗೆ ಪ್ರಿಯವಾದ ಪವಿತ್ರ ವಸ್ತುವಾಗಿದೆ. ತುಳಸಿಯನ್ನು ವಿಷ್ಣುಪತ್ನಿಯ ರೂಪದಲ್ಲಿ ಸಹ ಪೂಜಿಸಲಾಗುತ್ತದೆ. ಹಾಗಾಗಿ ತುಳಸಿಯನ್ನು ಶಿವನಿಗೆ ಅರ್ಪಿಸುವುದಿಲ್ಲ. ಜೊತೆಗೆ ತುಳಸಿಯ ಬಳಿ ಶಿವಲಿಂಗವನ್ನು ಸಹ ಇಡುವುದಿಲ್ಲ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ತುಳಸಿಗಿಡದ ಸುತ್ತ ಕಸ ಹಾಕಬೇಡಿ
ಪೂಜಿಸಲ್ಪಡುವ ದೇವರು, ದೇವರ ಸಾಮಗ್ರಿಗಳನ್ನು ಇಡುವ ಜಾಗವನ್ನು ಸ್ವಚ್ಛವಾಗಿ, ಶುದ್ಧವಾಗಿ ಇಟ್ಟುಕೊಳ್ಳುತ್ತೇವೆ. ಹಾಗೆಯೇ ತುಳಸಿ ಗಿಡವನ್ನು ಇಟ್ಟಿರುವ ಜಾಗವನ್ನೂ ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ಕಟ್ಟೆಯ ಬಳಿ ಕಸವನ್ನು ಹಾಕಬಾರದು ಅಥವಾ ಕಸ ಹಾಕುವ ಬುಟ್ಟಿಯನ್ನು ಇಡಬಾರದು. ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡದ ಬಳಿ ಕಸ ಮತ್ತು ಕೊಳಕನ್ನು ಹಾಕುವುದರಿಂದ ಮನೆಯ ಆರ್ಥಿಕ ಸ್ಥಿತಿ ಹದಗೆಡುತ್ತದೆ. ಹಾಗಾಗಿ ದೇವರ ಮನೆ ಎಷ್ಟು ಶುಚಿಯಾಗಿರುತ್ತದೆಯೋ, ತುಳಸಿ ಗಿಡದ ಸುತ್ತಲಿನ ಜಾಗವನ್ನು ಸಹ ಅಷ್ಟೇ ಶುಚಿಯಾಗಿ, ಶುದ್ಧವಾಗಿ ಇಟ್ಟುಕೊಳ್ಳಬೇಕು. ಇದರಿಂದ ಮನೆಯಲ್ಲಿ ನೆಮ್ಮದಿ ನೆಲೆಸುವುದಲ್ಲದೇ, ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ.
ಇದನ್ನೂ ಓದಿ : Vastu Tips : ಕಚೇರಿಯ ವಾಸ್ತು ಹೀಗಿದ್ದರೆ ಯಶಸ್ಸು ಖಚಿತವಂತೆ!