ಕೊಚ್ಚಿ: ಮೇಲಿರುವ ಚಿತ್ರದಲ್ಲಿ ಇರುವ ವ್ಯಕ್ತಿ ʼಅವಳುʼ ಅಲ್ಲ, ʼಅವನುʼ ಎಂದರೆ ನಿಮಗೆ ಅಚ್ಚರಿಯಾಗಬಹುದು. ಹೌದು, ಈತ ಪುರುಷ. ಮಹಿಳೆಯಂತೆ ರೂಪಾಂತರ ಮಾಡಿಕೊಳ್ಳುವ ಉತ್ಸವದಲ್ಲಿ ಈಕೆಗೆ, ಕ್ಷಮಿಸಿ, ಈತನಿಗೆ ಮೊದಲ ಬಹುಮಾನ ದೊರೆತಿದೆ. ಈ ಫೋಟೋವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ; ನೆಟಿಜನ್‌ಗಳು ಇದನ್ನು ನೋಡಿ ತಬ್ಬಿಬ್ಬಾಗಿದ್ದಾರೆ.
ಇದ್ಯಾವ ಉತ್ಸವ ಎಂದು ಕೇಳುತ್ತೀರಾ? ಈ ವಿಶಿಷ್ಟ ಉತ್ಸವ ನಡೆಯುವುದು ಕೇರಳದಲ್ಲಿ. ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆಯುವ ʼಕೊಟ್ಟಕುಳಂಗರ ಚಾಮಾಯವಿಲಿಕ್ಕುʼ ಉತ್ಸವದಲ್ಲಿ ಇಂಥದೊಂದು ಸಂಪ್ರದಾಯವಿದೆ. ಮಾರ್ಚ್ ಉತ್ತರಾರ್ಧದಲ್ಲಿ, ಮಲಯಾಳದ ಮೀನ ಮಾಸದ 10-11ನೇ ದಿನದಲ್ಲಿ ಇದು ನಡೆಯುತ್ತದೆ. ಇಲ್ಲಿನ ದೇವಿ ದೇವಸ್ಥಾನದಲ್ಲಿ ಈ ಉತ್ಸವ ನಡೆಯುತ್ತದೆ.
ಈ ಉತ್ಸವದಲ್ಲಿ ಈ ವರ್ಷ ನಡೆದ ಮಹಿಳಾ ಮೇಕಪ್ ಸ್ಪರ್ಧೆಯಲ್ಲಿ ಸ್ತ್ರೀಯಂತೆ ವೇಷ ಧರಿಸಿ ಮೊದಲ ಬಹುಮಾನ ಗೆದ್ದವನೀತ. ಈತನ ಫೋಟೋ ಹಾಗೂ ಉತ್ಸವದ ಬಗ್ಗೆ ಅನಂತ್ ರೂಪಂಗುಡಿ ಎಂಬ ರೈಲ್ವೇಸ್ ಅಧಿಕಾರಿ ಟ್ವೀಟ್ ಮಾಡಿದ್ದಾರೆ. ಅದೀಗ ವೈರಲ್ ಆಗಿದ್ದಾರೆ.
ಜಾತ್ರೆಯ ಇನ್ನಷ್ಟು ದೃಶ್ಯಗಳು ಇಲ್ಲಿವೆ:
ಇದೊಂದು ಬೆಳಕಿನ ಉತ್ಸವ. ಇಲ್ಲಿ ಸ್ತ್ರೀಯರಂತೆ ಮೇಕಪ್ ಮಾಡಿ, ಸೀರೆ ಧರಿಸಿ, ಆಭರಣ ತೊಟ್ಟ ಪುರುಷರು ಕೈಯಲ್ಲಿ ಹಣತೆಗಳನ್ನು ಹಿಡಿದು ಮೆರವಣಿಗೆ ಹೋಗುತ್ತಾರೆ. ಈ ಹಣತೆಗಳನ್ನು ʼಚಾಮಾಯವಿಳಕ್ಕುʼ ಎನ್ನುತ್ತಾರೆ. ಇಲ್ಲಿ ಟ್ರಾನ್ಸ್‌ಜೆಂಡರ್ ಸಮುದಾಯದ ಬಹಳ ಮಂದಿಯೂ ಭಾಗವಹಿಸುತ್ತಾರೆ. ಈ ಉತ್ಸವದಲ್ಲಿ ಈ ಸಮುದಾಯ ತನ್ನ ಗುರುತನ್ನು ಕಂಡುಕೊಂಡಿದೆ.