Site icon Vistara News

ವಿಷ್ಣು ಸಹಸ್ರನಾಮ ಪಾರಾಯಣದಿಂದ 100 ವರ್ಷ ಆಯುಷ್ಯ, ಅದು ಹೇಗೆ?

Vishnu Sahasranama

ವಿಷ್ಣು ಸಹಸ್ರನಾಮವನ್ನು ಸ್ತೋತ್ರಗಳ ರಾಜ ಎನ್ನುತ್ತಾರೆ. ಎಲ್ಲ ರೋಗರುಜಿನಗಳಿಗೂ ಇದು ಮಹಾ ಔಷಧ ಎಂದು ಚರಕ ಸಂಹಿತೆ ಹೇಳುತ್ತದೆ. |ವಿಷ್ಣು ಸಹಸ್ರಮೂರ್ಧಾನಮ್  ಚರಾಚರ ಗುರುಂ ಹರಿಂ| ಎನ್ನುವುದೇ ಆ ಮಾತು.
ಶರಶಯ್ಯೆಯ ಮೇಲೆ ಮಲಗಿದ್ದ ಭೀಷ್ಮಾಚಾರ್ಯರನ್ನು ಧರ್ಮರಾಯ ಕೆಲವು ಪ್ರಶ್ನೆಗಳನ್ನು ಕೇಳಿದ. ಅದರಲ್ಲಿ ಒಂದು ಒಂದು: ಯಾವುದು ಶ್ರೇಷ್ಠ ಧರ್ಮ?

ಆಗ  ಭೀಷ್ಮಾಚಾರ್ಯರು ಹೇಳಿದರು: ||ಏಷಮೇ ಸರ್ವ ಧರ್ಮಾಣಾಂ ಧರ್ಮೋ s ಧಿಕ ತಮೋ ಮತ:! ಯದ್ ಭಕ್ತ್ಯಾ ಪುಂಡರೀಕಾಕ್ಷಮ್  ಸ್ತವೈರರ್ಚೇನ್ನರ: ಸದಾ|| ಎಂದರೆ ಎಲ್ಲಾ ಧರ್ಮಗಳಲ್ಲಿಯೂ ಅತೀ ಶ್ರೇಷ್ಠವೆಂದರೆ ಪುಂಡರೀಕಾಕ್ಷನಾದ  ವಿಷ್ಣುವನ್ನು ಸ್ತೋತ್ರ ಮಾಡುವುದು; ಅದರಲ್ಲೂ ಅತಿ ಮಹತ್ವವಾದುದು ವಿಷ್ಣು ಸಹಸ್ರನಾಮ ಸ್ತೋತ್ರ.

ವಿಷ್ಣು ಸಹಸ್ರನಾಮದ ಉದ್ದಕ್ಕೂ ಸುಂದರವಾದ ವಿಷ್ಣು ದೇವರ ಹೆಸರುಗಳಿವೆ. ಆ ಹೆಸರುಗಳನ್ನು ನಮ್ಮ ಮಕ್ಕಳಿಗೆ ಇಟ್ಟು ಪ್ರತೀ ನಿತ್ಯ ಮಗುವನ್ನು ಕರೆದಾಗ ಅತೀ ಸುಲಭವಾಗಿ ದೇವರ ನಾಮ ಸ್ಮರಣೆ ಮಾಡಿದಂತಾಗುತ್ತದೆ. ಇಂದು ಸಾಡೇ ಸಾತ್ ಶನಿಯ ತೊಂದರೆ ಇರುವವರಿಗೆ ಜ್ಯೋತಿಷ್ಯರು ಸೂಚಿಸುವ ಪರಿಹಾರವೇ ವಿಷ್ಣು ಸಹಸ್ರನಾಮ ಪಾರಾಯಣ. ಶನಿಯೆಂದರೆ ಎಲ್ಲರಿಗೂ ಭಯ. ಶನಿ ಗ್ರಹಕ್ಕೆ ಶ್ರೀ ವಿಷ್ಣುವೇ ದೇವತೆ. ಯಾರು ವಿಷ್ಣುವನ್ನು ಪಾರಾಯಣ ಮಾಡುತ್ತಾರೋ ಅವರನ್ನು ಎಂದಿಗೂ  ಶನಿ ಪೀಡಿಸುವುದಿಲ್ಲ.  ವಿಷ್ಣು ಸಹಸ್ರನಾಮ ಪಾರಾಯಣದಿಂದ ವಿಷ್ಣು ಸಂತೋಷಗೊಳ್ಳುವನು. ಅವನು ಸಂತೋಷಗೊಂಡ ಎಂದರೆ ಶನಿ ಸಂತೋಷಗೊಂಡನು ಎಂದು ಅರ್ಥ.

72 ಅಕ್ಷರ, 72 ಸಾವಿರ ನಾಡಿ
ಮನುಷ್ಯನ  ಸಾಮಾನ್ಯ ಜೀವಿತ ಅವಧಿ 100  ವರ್ಷ. ವಿಷ್ಣು ಸಹಸ್ರನಾಮದ ಪ್ರತೀ ಸ್ತೋತ್ರದಲ್ಲಿ 72 ಅಕ್ಷರಗಳಿವೆ. ಒಂದು ಸಾವಿರ ಸ್ತೋತ್ರಗಳಲ್ಲಿ 72 ಸಾವಿರ ಅಕ್ಷರಗಳು.  ನಮ್ಮ ದೇಹದಲ್ಲಿ 72 ಸಾವಿರ ನಾಡಿಗಳಿವೆ. ನಮ್ಮ ಆರೋಗ್ಯ ಈ ನಾಡಿಗಳ ಮೇಲೆ ಅವಲಂಬಿತವಾಗಿದೆ. ಎಂದರೆ ಪ್ರತಿ ನಿತ್ಯ ವಿಷ್ಣು ಸಹಸ್ರನಾಮವನ್ನು ಭಕ್ತಿಯಿಂದ ಜಪಿಸುವವರಿಗೆ ನಿರಂತರ ಆರೋಗ್ಯ ಹಾಗೂ 100 ವರ್ಷ ಪೂರ್ಣಾಯುಷ್ಯ ಲಭಿಸುತ್ತದೆ.

ಅವಶ್ಯಕತೆಗೆ ತಕ್ಕಂತೆ ಸ್ತೋತ್ರ

ವಿಷ್ಣು ಸಹಸ್ರನಾಮದಲ್ಲಿನ 31ನೇ ಮಂತ್ರವನ್ನು ಸಂಜೀವಿನಿ ಮಂತ್ರ  ಎನ್ನುತ್ತಾರೆ. ಇದು ಹೀಗಿದೆ:
|ಅಮ್ರ್ತಾಂಷೂದ್ಭವೋ ಭಾನುಃ ಶಶಬಿಂಧುಃ ಸುರೇಶ್ವರಃ|
|ಔಷಧಮ್ ಜಗತಃ ಸೇತುಃ ಸತ್ಯ ಧರ್ಮ ಪರಾಕ್ರಮಃ|
ಈ ಶ್ಲೋಕವನ್ನು ಪ್ರತಿನಿತ್ಯ  108 ಬಾರಿ ಮತ್ತು ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಹನ್ನೊಂದು ಬಾರಿ ಹೇಳುವುದರಿಂದ  ಸಾಯುವ ಹಂತಕ್ಕೆ ಹೋದವರೂ ಕೂಡಾ ಬದುಕಿ ಬರುತ್ತಾರೆ  ಎಂಬ ನಂಬಿಕೆ ಇದೆ. ಇಲ್ಲಿರುವ 108 ಶ್ಲೋಕಗಳು 27 ನಕ್ಷತ್ರದ 4 ಪಾದಗಳಿಗೆ ಹಂಚಿಕೆಯಾಗಿದೆ, ಯಾವ ನಕ್ಷತ್ರದ ಯಾವ ಪಾದದವರು ಯಾವ ಶ್ಲೋಕ ಹೇಳಬೇಕು ಎಂದು ನಿರ್ಧರಿಸಲಾಗಿದೆ.

ಯಾರು ಯಾವುದನ್ನು ಹೇಳಬಹುದು?

1.ವಿದ್ಯಾರ್ಥಿಗಳು ತಮ್ಮ ಉತ್ತಮ ವಿದ್ಯೆಗಾಗಿ ಹೇಳಬೇಕಾದ 14ನೇ ಶ್ಲೋಕ:
|ಸರ್ವಗಸ್ಸರ್ವವಿದ್ಭಾನುಃ ವಿಷ್ವಕ್ಸೇನೋ ಜನಾರ್ಧನ|
|ವೇದೋ ವೇದ ವಿದವ್ಯಂಗೋ  ವೇದಾಂಗೋ ವೇದವಿತ್ ಕವಿಃ|

2. ನಮ್ಮ ಎಲ್ಲಾ ಸಂಕಲ್ಪಗಳೂ ಸಿದ್ಧಿಸಬೇಕಾದರೆ, ಆಸೆಗಳು ಈಡೇರಬೇಕಾದರೆ 27 ನೇ ಶ್ಲೋಕ
|ಅಸಂಖ್ಯೇಯೋ s ಪ್ರಮೇಯಾತ್ಮ ವಿಶಿಷ್ಟಃ ಶಿಷ್ಟ ಕೃಚ್ಚುಚಿಃ|
|ಸಿದ್ಧಾರ್ಥಃ ಸಿದ್ಧ ಸಂಕಲ್ಪಃ ಸಿದ್ಧಿದಃ ಸಿದ್ಧಿ ಸಾಧನಃ|

3.ಸಂಪತ್ತು ಹಣ ಬೇಕೆನ್ನುವವರು, ಬಡತನದ ಬೇಗೆಯಿಂದ ಬೆಂದವರು, ಒಳ್ಳೆಯ  ವಧು /ವರ ಬೇಕು ಎನ್ನುವವರು ಈ 65ನೇ ಶ್ಲೋಕವನ್ನು ಹೇಳಬೇಕು.
|ಶ್ರೀದಃ ಶ್ರೀಶಃ ಶ್ರೀನಿವಾಸಃ ಶ್ರೀನಿಧಿಃ ಶ್ರೀ ವಿಭಾವನಃ|
|ಶ್ರೀಧರಃ ಶ್ರೀಕರಃ ಶ್ರೇಯಃ ಶ್ರೀಮಾನ್ ಲೋಕತ್ರಯಾಶ್ರಯಃ|

4. ಮದುವೆ ಬಹಳ ಒಳ್ಳೆಯ ರೀತಿಯಲ್ಲಿ ಆಗಬೇಕು ಎನ್ನುವುದಕ್ಕೆ 32ನೇ ಶ್ಲೋಕ  ಹೇಳಬೇಕು.
|ಭೂತ ಭವ್ಯ ಭವನ್ನಾಥಃ  ಪವನಃ ಪಾವನೋ sನಲಃ
|ಕಾಮಹಾ ಕಾಮಕೃತ್ ಕಾಂತಃ ಕಾಮಃ ಕಾಮಪ್ರದಃ ಪ್ರಭುಃ|

5. ಒಳ್ಳೆಯವರ ಸಂಘ ಗೆಳೆತನ ನಮಗೆ ಆಗಲಿ ಎಂದು ಹೇಳುವ 93ನೇ ಶ್ಲೋಕ.
|ಸತ್ವವಾನ್ ಸಾತ್ವಿಕಃ ಸತ್ಯಃ ಸತ್ಯ ಧರ್ಮ ಪರಾಯಣಃ|
|ಅಭಿಪ್ರಾಯಃ ಪ್ರಿಯಾರ್ಹೋsರ್ಹಃ ಪ್ರಿಯಕೃತ್ ಪ್ರೀತಿ ವರ್ಧನಃ|

6. ನಮ್ಮ ಜೀವನದಲ್ಲಿ ಪದೇಪದೆ ಕಾಡುವ ಭಯ, ಆತಂಕ, ಆಪತ್ತು ಇವುಗಳಿಂದ ಹೊರಬರಲು ಹೇಳುವ ಶ್ಲೋಕ 89ನೇ ಶ್ಲೋಕ.
|ಸಹಸ್ರಾರ್ಚಿಃ ಸಪ್ತಜಿಹ್ವಃ ಸಪ್ತೈಧಾಃ ಸಪ್ತವಾಹನಃ|
|ಅಮೂರ್ತಿರನಘೋsಚಿಂತ್ಯೋ  ಭಯಕೃದ್ ಭಯ ನಾಶನಃ|

7.ನಿದ್ದೆಯ ಸಮಸ್ಯೆ ಇರುವವರು ದುಃಸ್ವಪ್ನ ನಾಶಕ್ಕಾಗಿ ಸುಖ ನಿದ್ರೆಗಾಗಿ 99 ನೇ ಶ್ಲೋಕ
|ಉತ್ತಾರಣೋ ದುಷ್ಕೃತಿಹಾ ಪುಣ್ಯೋ ದುಃಸ್ವಪ್ನ  ನಾಶನಃ|
|ವೀರಹಾ ರಕ್ಷಣಃ ಸಂತೋ ಜೀವನ: ಪರ್ಯವಸ್ಥಿತಃ|

8. ಮಕ್ಕಳಿಗೆ ಗಣಿತ, ವಿಜ್ಞಾನ, ಕಂಪ್ಯೂಟರ್, ಸೂಕ್ಷ್ಮ ಬುದ್ಧಿಗಾಗಿ ಹೇಳಬೇಕಾದ ಶ್ಲೋಕ 19ನೇಯದ್ದು.
|ಮಹಾಬುದ್ಧಿರ್ಮಹಾವೀ ರ್ಯೋ  ಮಹಾ ಶಕ್ತಿರ್ಮಹಾದ್ಯುತಿಃ|
|ಅನಿರ್ದೇಷ್ಯವಪುಃ ಶ್ರೀಮಾನ್  ಅಮೇಯಾತ್ಮಾ ಮಹಾದ್ರಿದೃಕ್|

9. ಎಲ್ಲವೂ ಒಳ್ಳೆಯದಾಗಲಿ ಎಂಬುವುದಕ್ಕಾಗಿ ಹೇಳುವ 96ನೇ ಶ್ಲೋಕ.
|ಸನಾತ್ ಸನಾತನತಮಃ ಕಪಿಲಃ ಕಪಿರವ್ಯಯಃ|
|ಸ್ವಸ್ತಿದಃ ಸ್ವಸ್ತಿಕೃತ್  ಸ್ವಸ್ತಿಃ ಸ್ವಸ್ತಿಭುಕ್  ಸ್ವಸ್ತಿ ದಕ್ಷಿಣಃ|

10. ಉತ್ತಮ ಸಂತಾನ ಲಾಭಕ್ಕಾಗಿ 84ನೇ ಶ್ಲೋಕ
|ಶುಭಾಂಗೋ ಲೋಕಸಾರಂಗಃ ಸುತಂತುಸ್ತಂತು ವರ್ಧನಃ|
|ಇಂದ್ರ ಕರ್ಮಾ ಮಹಾ ಕರ್ಮಾ ಕೃತ ಕರ್ಮಾ ಕೃತಾಗಮಃ|

11. ಶತ್ರುಗಳು ಹೊರಗೂ ಒಳಗೂ ಇರುತ್ತಾರೆ. ಅವರಿಂದ ರಕ್ಷಣೆಗಾಗಿ 88ನೇ ಶ್ಲೋಕ
|ಸುಲಭಃ ಸುವೃತಃ ಸಿದ್ಧಃ ಶತ್ರು ಜಿಚ್ಚತ್ರು ತಾಪನಃ|
|ನ್ಯಗ್ರೋಧೋದುಂಬರೋs ಶ್ವಥಶ್ ಚಾಣೂರಾಂದ್ರ ನಿಷೂದನಃ|

12. ನಮಗೆ ವಯಸ್ಸಾದ ಮೇಲೆ ಇನ್ನೊಬ್ಬರಿಗೆ ಹೊರೆಯಾಗಬಾರದು ದೇವಾ ಎಂದು ಪ್ರಾರ್ಥಿಸುವ ಶ್ಲೋಕಗಳು
|ಸದ್ಗತಿಃ ಸತ್ಕೃತಿಃ ಸತ್ತಾ ಸದ್ಭೂತಿಃ ಸತ್ಪರಾಯಣಃ|
|ಶೂರಸೇನೋ ಯದುಶ್ರೇಷ್ಠಃ ಸನ್ನಿವಾಸಃ ಸು ಯಾಮುನಃ|
|ವೈಕುಂಠಃ ಪುರುಷಃ ಪ್ರಾಣಃ ಪ್ರಾಣದಃ ಪ್ರಣವಃ ಪೃಥುಃ|
|ಹಿರಣ್ಯಗರ್ಭಃ ಶತ್ರುಘ್ನೋ ವ್ಯಾಪ್ತೋ ವಾಯುರಧೋಕ್ಷಜಃ|
|ಭಾರಭೃತ್ ಕತಿತೋ ಯೋಗೀ ಯೋಗೀಶಃ sಸರ್ವ ಕಾಮದಃ|
|ಆಶ್ರಮಃ ಶ್ರಮಣಃ ಕ್ಷಾಮಃ ಸುಪರ್ಣೋ ವಾಯುವಾಹನಃ|

13. ಪ್ರತೀ ಮನೆಯಲ್ಲಿ ಮನೆಯ ಸದಸ್ಯರ ಜೊತೆಗೆ ಅಕಾರಣವಾಗಿ ಸಣ್ಣ ಪುಟ್ಟ ಜಗಳ ನಡೆಯುತ್ತಲೇ ಇರುತ್ತದೆ. ಅದರ ನಿವಾರಣೆಗಾಗಿ ಈ ಶ್ಲೋಕ. ಅಂದರೆ, ಇದು ಎಲ್ಲರೂ ಹೇಳಬೇಕಾದ ಶ್ಲೋಕ.

|ಶಾಂತಾಕಾರಮ್ ಭುಜಗ ಶಯನಮ್ ಪದ್ಮನಾಭಮ್ ಸುರೇಶಮ್|
|ವಿಶ್ವಾಧಾರಮ್ ಗಗನ ಸದೃಶಮ್ ಮೇಘವರ್ಣಮ್ ಶುಭಾಂಗಮ್|
|ಲಕ್ಷ್ಮೀಕಾಂತಮ್ ಕಮಲ ನಯನಮ್ ಯೋಗಿಹೃದ್ಧ್ಯಾನ ಗಮ್ಯಮ್|
|ವಂದೇ ವಿಷ್ಣುಮ್ ಭವ ಭಯಹರಮ್ ಸರ್ವ ಲೋಕೈಕ ನಾಥಮ್|

ಲೇಖನ: ಶ್ರೀ ಸುಬ್ರಹ್ಮಣ್ಯ ಆಚಾರ್ಯರು, ಜೋತಿಷಿಗಳು

ಇದನ್ನೂ ಓದಿ | ಭಾವಾಶ್ರಿತ ಗ್ರಹಫಲ | ಚಂದ್ರನು ನೀಡುವ ಫಲಗಳೇನು?

Exit mobile version