ಆದಿ ಗುರು ಶಂಕರಾಚಾರ್ಯರು ಜಗದ್ಗುರು ಎಂದು ಕರೆದಿರುವ, ಎಲ್ಲ ಲೋಕಗಳ ಪಿತಾಮಹ ವಿಶ್ವಕರ್ಮರ ಜಯಂತಿ (Vishwakarma Jayanti 2022) ಬಂದಿದೆ. ಜಗತ್ತಿನ ಮೊದಲ ಎಂಜಿನಿಯರ್ ವಿಶ್ವಕರ್ಮ. ನಗರಗಳು, ಅರಮನೆ, ರಥಗಳು, ಮಹಲುಗಳು, ಅಸ್ತ್ರಗಳು, ಸಾಧನಗಳು, ಸಲಕರಣೆಗಳು ಸೇರಿದಂತೆ ಈ ಜಗತ್ತಿಗೆ ಬೇಕಾದ ಎಲ್ಲವನ್ನೂ ಸೃಷ್ಟಿಸಿದ್ದು ವಿಶ್ವಕರ್ಮ.
ಯೋ ನಃ ಪಿತಾ ಜನಿತಾ ಯೋ ವಿಧಾತಾ|
ಧಾಮಾನಿ ವೇದ ಭುವನಾನಿ ವಿಶ್ವಾ||
ವಿಶ್ವಕರ್ಮನು ಕೇವಲ ಸೃಷ್ಟಿ ಮಾತ್ರ ಮಾಡಲಿಲ್ಲ. ಸೃಷ್ಟಿಯ ನಂತರ ಜಗತ್ತಿನ ಪಾಲನೆ, ಲಯವನ್ನೂ ಮಾಡವವನಾಗಿದ್ದಾನೆ. ಸಕಲಕ್ಕೂ ಆಧಾರ ಭೂತನಾಗಿದ್ದಾನೆ. ಎಲ್ಲ ದೇವತೆಗಳ ಸ್ವರೂಪವೂ ವಿಶ್ವಕರ್ಮನದ್ದೇ ಆಗಿದೆ.
ದೇವರ ದೇವನಾದ ಪರಮ ಈಶ್ವರನಾದ ವಿಶ್ವಕರ್ಮನನ್ನು ಸಾಕ್ಷಾತ್ಕರಿಸಿಕೊಂಡರೆ ಜೀವನವು ಸರ್ವ ದುಃಖಗಳಿಂದ ದೂರವಾಗಿ ಪರಮಾನಂದವನ್ನು ಹೊಂದುತ್ತದೆ. ಕನ್ಯಾಸಂಕ್ರಮಣದಂದು ಭಗವಂತನಾದ ವಿಶ್ವಕರ್ಮೇಶ್ವರನು ಋಷಿಗಳಿಗೆ ದರ್ಶನ ಕೊಟ್ಟಿದ್ದರಿಂದ ಲೋಕಕಲ್ಯಾಣಕ್ಕಾಗಿ ಅವನ ಪೂಜೆಯನ್ನು ಮಾಡುವ ರೂಢಿಯಿದೆ. ಅದುವೇ ವಿಶ್ವಕರ್ಮ ಜಯಂತಿ.
ಶಿಲ್ಪಿಗಳಲ್ಲಿ ಅಗ್ರೇಸರ
ವಿಶ್ವಕರ್ಮನನ್ನು ಪ್ರಜಾಪತಿ ಅಂದರೆ ಜನನಾಯಕ ಎಂದೂ ಕರೆಯಲಾಗುತ್ತದೆ. ಆತನು ಸ್ಥಾಪತ್ಯ ಶಾಸ್ತ್ರ, ವಾಸ್ತು ಶಾಸ್ತ್ರ, ಶಿಲ್ಪಶಾಸ್ತ್ರಗಳ ಅಧಿಪತಿ. ವಿಶ್ವಕರ್ಮ ದೇವತೆಗಳಿಗಾಗಿ ಅಮರಾವತಿಯನ್ನು, ಅಸುರರಿಗಾಗಿ ಹಿರಣ್ಯಪುರವನ್ನು, ಯಕ್ಷರಿಗಾಗಿ ಅಲಕಾಪುರಿಯನ್ನು, ಪಾಂಡವರಿಗಾಗಿ ಮಾಯಾಪುರವನ್ನು, ಕೃಷ್ಣನಿಗಾಗಿ ದ್ವಾರಕವನ್ನು ನಿರ್ಮಿಸಿದ್ದಾನೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ.
ಭಗವಾನ್ ವಿಷ್ಣುವಿಗಾಗಿ ಸುದರ್ಶನ ಚಕ್ರವನ್ನು, ಇಂದ್ರನಿಗಾಗಿ ವಜ್ರಾಯುಧವನ್ನು ನಿರ್ಮಿಸಿಕೊಟ್ಟವನೂ ವಿಶ್ವಕರ್ಮನೇ. ಭೂಲೋಕದ ಜನರ ಕಲ್ಯಾಣಕ್ಕಾಗಿ ವಿಶ್ವಕರ್ಮನು ನೇಗಿಲನ್ನು ತಯಾರಿಸಿ, ರೈತರಿಗೆ ನೀಡಿದನೆಂದು ಪುರಾಣಗಳಲ್ಲಿ ಹೇಳಲಾಗಿದೆ. ಹೀಗಾಗಿ ಇಂದು ನಾವು ಸೇವಿಸುವ ಆಹಾರಕ್ಕೆಲ್ಲಾ ಕಾರಣೀಕರ್ತ ವಿಶ್ವಕರ್ಮ.
ದೇಶಾದ್ಯಂತ ಆಚರಣೆ
ವಿಶ್ವಕರ್ಮ ಜಯಂತಿ ಈಗ ರಾಷ್ಟ್ರೀಯ ಹಬ್ಬವಾಗಿದೆ. ಬಹಳ ಹಿಂದಿನಿಂದಲೂ ವಿಶ್ವಕರ್ಮ ಜಯಂತಿಯಂದು ವಿಶ್ವಕರ್ಮ ಪೂಜೆ, ವಿಶ್ವಕರ್ಮ ಯಜ್ಞ, ವಿಶ್ವಕರ್ಮ ಮೂರ್ತಿಯ ಉತ್ಸವಗಳನ್ನು ನಡೆಸಿಕೊಂಡು ಬರಲಾಗುತ್ತಿತ್ತು. ಈಗ ಜಯಂತಿಯನ್ನು ಎಲ್ಲೆಡೆ ಸಂಭ್ರಮದಿಂದ ನಾನಾ ರೂಪದಲ್ಲಿ ಆಚರಿಸಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ, ಉತ್ತರ ಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ, ತ್ರಿಪುರ, ಅಸ್ಸಾಂ, ಬಿಹಾರ, ಒಡಿಶಾ, ಜಾರ್ಖಂಡ್, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಪಂಜಾಬ್ ಮತ್ತಿತರ ರಾಜ್ಯಗಳಲ್ಲಿ ಜೋರಾಗಿ ನಡೆಯುತ್ತದೆ. ನೆರೆಯ ನೇಪಾಳದಲ್ಲಿಯೂ ವಿಶ್ವಕರ್ಮನನ್ನು ಆರಾಧಿಸುವವರು ಇದ್ದಾರೆ.
ಪಶ್ಚಿಮ ಬಂಗಾಳದಲ್ಲಿ ವಿಶ್ವಕರ್ಮನ ಆರಾಧನೆ ವಿಶೇಷವಾಗಿರುತ್ತದೆ. ಅಲ್ಲಿ ವಿಶ್ವಕರ್ಮನ ಮೂರ್ತಿಯನ್ನು ರೂಪಿಸಿ, ಪೂಜಿಸುತ್ತಾರೆ. ಇಲ್ಲಿ ವಿಶ್ವಕರ್ಮನ ಮೂರ್ತಿಯು ಆನೆಯ ಮೇಲೆ ಕುಳಿತಿರುವಂತೆ ರೂಪಿಸಲಾಗಿರುತ್ತದೆ. ಆತನ ಮುಖ ಬ್ರಹ್ಮನನ್ನು ಹೋಲುವಂತಿರುತ್ತದೆ.
ಎಂದು ಆಚರಣೆ? ಪೂಜೆ ಯಾವಾಗ?
ಹಿಂದೂ ಪಂಚಾಗದ ಪ್ರಕಾರ ಸೂರ್ಯ ಸಿಂಹ ರಾಶಿಯನ್ನು ಬಿಟ್ಟು ಕನ್ಯಾರಾಶಿಯನ್ನು ಪ್ರವೇಶಿಸಿದಾಗ ಅಂದರೆ ಕನ್ಯಾ ಸಂಕ್ರಾಂತಿಯಂದು ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಸೆಪ್ಟೆಂಬರ್ 17 ರಂದು ಆಚರಣೆ ನಡೆಯಲಿದೆ.
ಈ ದಿನದಂದು ಬೆಳಗ್ಗೆ ವಿಶ್ವಕರ್ಮನ ವಿಗ್ರಹ, ಫೋಟೊ ಇಟ್ಟು ಪೂಜೆ ಮಾಡಲಾಗುತ್ತದೆ. ನಮ್ಮ ರಾಜ್ಯದಲ್ಲಿ ವಿಶೇಷವಾಗಿ ಮನು, ಮಯ, ತ್ವಷ್ಟ ಶಿಲ್ಪಿ ಮತ್ತು ದೈವಜ್ಞರು ಪಂಚಮುಖದ ವಿರಾಟ್ ವಿಶ್ವಕರ್ಮನ ಚಿತ್ರಪಟವನ್ನು ಪೂಜಿಸಲಾಗುತ್ತದೆ. ಅಲ್ಲದೆ, ವಿಶ್ವಕರ್ಮ ಯಜ್ಞವನ್ನು ನೆರವೇರಿಸಲಾಗುತ್ತದೆ. ವ್ಯಾಪಾರದ ಜಾಗದಲ್ಲಿ, ಕಾರ್ಖಾನೆಗಳಲ್ಲಿ ವಿಶೇಷವಾಗಿ ವಿಶ್ವಕರ್ಮನ ಪೂಜೆ ನಡೆಯುತ್ತದೆ.
ಸೆಪ್ಟೆಂಬರ್ 17 ರಂದು ವಿಶ್ವಕರ್ಮ ಪೂಜೆ ಮಾಡಲು ಬೆಳಿಗ್ಗೆ 7.35 ರಿಂದ 09.10ರವರೆಗೆ ಶುಭ ಸಮಯ ವಾಗಿರುತ್ತದೆ. ಮಧ್ಯಾಹ್ನ 1.45 ರಿಂದ 3.20ರವರಗೂ ಪೂಜೆ ಮಾಡಬಹುದು. ಆಗಲೂ ಸಾಧ್ಯವಾಗದೇ ಇದ್ದಲ್ಲಿ, ಮಧ್ಯಾಹ್ನ 3.20ರಿಂದ ಸಂಜೆ 4.53ರವರೆಗೆ ಪೂಜೆ ಮಾಡಲು ಒಳ್ಳೆಯ ಸಮಯವಿರುತ್ತದೆ ಎಂದು ಪಂಚಾಂಗ ಕರ್ತರು ತಿಳಿಸಿದ್ದಾರೆ. ಅಂದು ನೀವು ಕೂಡ ವಿಶ್ವಕರ್ಮನನ್ನು ಪೂಜಿಸಬಹುದು.
ವಿಶ್ವಕರ್ಮನನ್ನು ಪೂಜಿಸಿದ ನಂತರ ಈ ಕೆಳಗಿನಂತೆ ಪ್ರಾರ್ಥಿಸಲಾಗುತ್ತದೆ.
ವಂದೇ ಶ್ರೀ ವಿಶ್ವಕರ್ಮಾಣಂ ವಾಂಛಿತಾರ್ಥ ಪ್ರದಾಯಕಂ|
ಯಸ್ಯ ಸ್ಮರಣಮಾತ್ರೇಣ ವಿಘ್ನಾ ದೂರಾ ಭವಂತಿ ಹಿ||
ಇದನ್ನೂ ಓದಿ | ರಾಜ ಮಾರ್ಗ | ಅವರು ಹೋರಾಡಿದ್ದು ಅಸಮಾನತೆ ವಿರುದ್ಧ, ಪ್ರತಿಪಾದಿಸಿದ್ದು ಆತ್ಮೋದ್ಧಾರ, ಆತ್ಮವಿಶ್ವಾಸದ ಮಂತ್ರ