Site icon Vistara News

Vistara Exclusive | ಏಳುಕೊಂಡಲವಾಡನಿಗೆ ಕರ್ನಾಟಕದಲ್ಲಿದೆ ಏಳು ಕಡೆ ಆಸ್ತಿ

tirupati tirumala

ತಿರುಪತಿ: ವಿಶ್ವದ ಅತ್ಯಂತ ಶ್ರೀಮಂತ ದೇಗುಲ ಎಂಬ ಖ್ಯಾತಿಗೆ ಪಾತ್ರವಾಗಿರುವ ತಿರುಪತಿ ತಿರುಮಲ (tirupati tirumala) ವೆಂಕಟೇಶ್ವರ ದೇಗುಲದ ಆಸ್ತಿ ಎಷ್ಟು ಎಂಬುದು ಕೊನೆಗೂ ಬಹಿರಂಗಗೊಂಡಿದೆ. ಏಳುಕೊಂಡಲವಾಡ ಕರ್ನಾಟಕದಲ್ಲಿ ಏಳು ಕಡೆ ಒಟ್ಟು ಹತ್ತು ಆಸ್ತಿಯನ್ನು ಹೊಂದಿದ್ದಾನೆ.

ಈ ದೇಗುಲದ ಆಡಳಿತದ ಮಂಡಳಿ ತಿರುಮಲ ತಿರುಪತಿ ದೇವಸ್ಥಾನಮ್‌ (ಟಿಟಿಡಿ) ದೇಶಾದ್ಯಂತ ಇರುವ ಈ ದೇಗುಲದ ಆಸ್ತಿಯ ಕುರಿತು ಅಧಿಕೃತವಾಗಿ ಮಾಹಿತಿ ನೀಡಿದ್ದು, 85,705 ಕೋಟಿ ರೂ. ಮೌಲ್ಯದ ಜಾಗ, ಜಮೀನು ಹೊಂದಿರುವುದಾಗಿ ತಿಳಿಸಿದೆ. ಇದರಲ್ಲಿ ರಾಜ್ಯದಲ್ಲಿರುವ ಹತ್ತು ಆಸ್ತಿ ವಿವರಗಳು ಸೇರಿವೆ.

ರಾಜ್ಯದಲ್ಲಿ ಎಲ್ಲೆಲ್ಲಿದೆ ಆಸ್ತಿ?
೧. ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ ತಿರುಪತಿ ತಿರುಮಲ ದೇಗುಲ, ಮಾಹಿತಿ ಕೇಂದ್ರ, ಕಲ್ಯಾಣ ಮಂದಿರ ಇತ್ಯಾದಿ. ಒಟ್ಟು 1.92 ಎಕರೆ.
೨. ಬೆಂಗಳೂರಿನ ಜೀವನ್‌ಭೀಮಾ ನಗರದಲ್ಲಿ ಮನೆ. 0.02 ಎಕರೆ.
3. ಬೆಂಗಳೂರಿನ ಜೆಪಿ ನಗರದಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್‌. 0.03 ಎಕರೆ.
4. ಬೆಂಗಳೂರಿನ ನೆಲಮಂಗಲ ಸಮೀಪದ ಬಸವನಹಳ್ಳಿಯಲ್ಲಿ ನಿವೇಶನ. 0.09 ಎಕರೆ.
5. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಛತ್ರ. 1.82 ಎಕರೆ.
6. ಧಾರವಾಡ ಜಿಲ್ಲೆಯ ಗಜೇಂದ್ರಗಢದಲ್ಲಿ ಕಲ್ಯಾಣ ಮಂಟಪ. 1.13 ಎಕರೆ.
7. ಕೋಲಾರ ಜಿಲ್ಲೆಯ ಬಂಗಾರು ತಿರುಪತಿ ಕಲ್ಯಾಣ ಮಂಟಪ. 1.15 ಎಕರೆ.
8. ಕೋಲಾರ ಜಿಲ್ಲೆಯ ಚಿಂತಾಮಣಿಯಲ್ಲಿ ಕಲ್ಯಾಣ ಮಂಟಪ 1.00 ಎಕರೆ.
9. ಕೋಲಾರ ಜಿಲ್ಲೆಯ ಶ್ರೀನಿವಾಸಪುರಂ ಕಲ್ಯಾಣ ಮಂಟಪ 0.74 ಎಕರೆ.
10. ಮೈಸೂರು ಜಿಲ್ಲೆಯ ರಾಮನುಜ ರಸ್ತೆಯಲ್ಲಿ ಮನೆ 0.01 ಎಕರೆ.

ಕರ್ನಾಟಕದಲ್ಲಿರುವ ತಿಮ್ಮಪ್ಪನ ಆಸ್ತಿಯ ಚಿತ್ರಗಳು.

ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿರುವ ಆಸ್ತಿಯೇ ರಾಜ್ಯದಲ್ಲಿನ ಅತ್ಯಂತ ದೊಡ್ಡ ಆಸ್ತಿಯಾಗಿದ್ದು, 1.92 ಎಕರೆ ಜಾಗದಲ್ಲಿದೆ. ಕೋಲಾರ ಜಿಲ್ಲೆಯ ಬಂಗಾರು ತಿರುಪತಿ, ಚಿಂತಾಮಣಿ, ಶ್ರೀನಿವಾಸಪುರಂನಲ್ಲಿ ಕೇವಲ ಕಲ್ಯಾಣ ಮಂದಿರವನ್ನು ಟಿಟಿಡಿ ಹೊಂದಿದೆ. ಟಿಟಿಡಿಯ ಆಸ್ತಿ ಪಟ್ಟಿಯಲ್ಲಿರುವ ನಿವೇಶನ ಮತ್ತು ಫ್ಲಾಟ್‌ ಅನ್ನು ಭಕ್ತರು ನೀಡಿದ್ದೆನ್ನಲಾಗಿದೆ. ಆಸ್ತಿಯ ಸಂಪೂರ್ಣ ವಿವರವನ್ನು ಟಿಟಿಡಿಯ ವೆಬ್‌ಸೈಟ್‌ನಲ್ಲಿ ( https://www.tirumala.org) ಅಪ್‌ಲೋಡ್‌ ಮಾಡಲಾಗಿದೆ.

ದೇಶದ ವಿವಿಧ ಕಡೆ 7,123 ಎಕರೆ ಜಾಗ
ದೇಶದ ವಿವಿಧ ಕಡೆ 7,123 ಎಕರೆ ಜಾಗವನ್ನು ಟಿಟಿಡಿ ಹೊಂದಿದ್ದು, ಒಟ್ಟಾರೆ 960 ಸ್ಥಿರಾಸ್ತಿಗಳಿವೆ. ತಿರುಮಲ ತಿರುಪತಿ ದೇವಸ್ಥಾನಮ್‌ (ಟಿಟಿಡಿ) ಅಧ್ಯಕ್ಷ ಸುಬ್ಬಾರೆಡ್ಡಿಯವರೇ ಈ ಕುರಿತು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಈ ಕುರಿತು ಅವರು ಶ್ವೇತ ಪತ್ರವನ್ನು ಹೊರಡಿಸಿದ್ದಾರೆ.

ದೇಗುಲದ ಆಡಳಿತದಲ್ಲಿ ಪಾರದರ್ಶಕತೆ ತರಲು 2020ರಲ್ಲೇ ದೇಗುಲದ ಆಸ್ತಿ ಕುರಿತು ಶ್ವೇತಪತ್ರ ಹೊರಡಿಸಲು ಟಿಟಿಡಿ ನಿರ್ಧರಿಸಿತ್ತು. ಆದರೆ ಕೋವಿಡ್‌ ಮತ್ತಿತರ ಕಾರಣಗಳಿಂದ ಆಸ್ತಿ ಸಮೀಕ್ಷೆ ನಡೆಸಲು ಸಾಧ್ಯವಾಗಿರಲಿಲ್ಲ. ಈಗ ಸಮೀಕ್ಷೆ ಪೂರ್ಣಗೊಂಡಿರುವುದರಿಂದ ಅಸ್ತಿಯ ಕುರಿತು ಅಧಿಕೃತವಾಗಿ ಮಾಹಿತಿ ಲಭ್ಯವಾಗಿದೆ.

ಒಟ್ಟಾರೆ ದೇಗುಲದ ಹೆಸರಿನಲ್ಲಿ 8088.89 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ 1128 ಸ್ಥರಾಸ್ತಿಗಳಿದ್ದವು. ಆದರೆ ಕೆಲ ಸಣ್ಣಪುಟ್ಟ ಆಸ್ತಿಗಳ ನಿರ್ವಹಣೆ ಕಾರ್ಯಸಾಧುವಲ್ಲ ಎಂಬ ಕಾರಣಕ್ಕೆ 1974 ರಿಂದ 2014ರ ಅವಧಿಯಲ್ಲಿ 293 ಎಕರೆ ಪ್ರದೇಶದಲ್ಲಿನ 61 ಆಸ್ತಿಗಳನ್ನು ಹರಾಜು ಹಾಕಲಾಗಿದೆ. ಒಟ್ಟಾರೆ ಈ ಅವಧಿಯಲ್ಲಿ 113 ಆಸ್ತಿಗಳನ್ನು ಕೈ ಬಿಡಲಾಗಿದೆ. ಆದರೆ 2014ರ ನಂತರ ಯಾವುದೇ ಆಸ್ತಿಯನ್ನು ಟಿಟಿಡಿಯು ಕೈ ಬಿಟ್ಟಿಲ್ಲ ಎಂದು ಸುಬ್ಬಾರೆಡ್ಡಿ ವಿವರಿಸಿದ್ದಾರೆ.

ಟಿಟಿಯು ಸದ್ಯ ಸ್ಥಿರಾಸ್ತಿಯ ಬಗ್ಗೆ ಮಾತ್ರ ಮಾಹಿತಿ ನೀಡಿದೆ. ಚರಾಸ್ತಿಯ ಬಗ್ಗೆ ವಿವರ ನೀಡಿಲ್ಲ. ಆದರೆ ಬ್ಯಾಂಕ್‌ಗಳಲ್ಲಿ ಟಿಟಿಡಿ 14 ಸಾವಿರ ಕೋಟಿ ರೂ. ನಿಶ್ಚಿತ ಠೇವಣಿ ಹೊಂದಿದೆ. ತಿಮ್ಮಪ್ಪನ ಭಂಡಾರದಲ್ಲಿ 14ಟನ್‌ ಕೇಜಿ ಚಿನ್ನ ಇದೆ ಎಂದು ಹೇಳಲಾಗಿದೆ. ಇದರಿಂದಾಗಿಯೇ ಇದು ಪ್ರಪಂಚದಲ್ಲಿಯೇ ಅತ್ಯಂತ ಶ್ರೀಮಂತ ದೇಗುಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದನ್ನೂ ಓದಿ | Tirupati Darshan | ತಿರುಪತಿಯಲ್ಲಿ ದೇವರ ದರ್ಶನಕ್ಕೆ ಇನ್ನು ಗಂಟೆಗಟ್ಟಲೆ ಕಾಯಬೇಕಿಲ್ಲ, ಟಿಟಿಡಿ ಹೊಸ ಯೋಜನೆ ಏನು?

Exit mobile version