ಬೆಂಗಳೂರು: ಯುವಕರು ತಮ್ಮ ವ್ಯಕ್ತಿತ್ವದಲ್ಲಿ ಪವಿತ್ರತೆಯ ಕೆಚ್ಚನ್ನು ಬೆಳೆಸಿಕೊಳ್ಳಬೇಕು. ವ್ಯಕ್ತಿತ್ವವನ್ನು ಸಿಂಹಸದೃಶ ವಾಗಿಸಿಕೊಳ್ಳಬೇಕು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಕಾಡಿನ ರಾಜ ಸಿಂಹವಾದರೂ, ಅದಕ್ಕೆ ಎಲ್ಲ ಪ್ರಾಣಿಗಳು ಆಹಾರವಾಗುವುದು ನಿಜವಾದರೂ ಸಿಂಹ ತನ್ನ ಆಹಾರವನ್ನು ತಾನೇ ಬೇಟೆಯಾಡುತ್ತದೆ. ಹೀಗೆ ನೀವು ಕೂಡ ಸ್ವಪ್ರಯತ್ನ ಪಡಬೇಕು. ಪೌರುಷ ಬೆಳೆಸಿಕೊಳ್ಳಬೇಕು. ವ್ಯಕ್ತಿತ್ವದಲ್ಲಿ ಸ್ವಾಭಿಮಾನ ಮತ್ತು ಸ್ವಾವಲಂಬನೆಯನ್ನು ಬೆಳೆಸಿಕೊಳ್ಳಬೇಕು. ಆಗ ವೈಯುಕ್ತಿಕವಾಗಿ ನೀವೂ ಉದ್ದಾರವಾಗುತ್ತೀರಿ, ಸಮಾಜಕ್ಕೆ ಕೊಡುಗೆ ನೀಡಲೂ ಸಾಧ್ಯವಾಗುತ್ತದೆ ಎಂದು ವಿವೇಕಾನಂದರು ಹೇಳಿದ್ದಾರೆ. ಇದನ್ನು ಇಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತೀ ಹೇಳಿದ್ದಾರೆ.
ಸ್ವಾಮಿ ವಿವೇಕಾನಂದರ 160ನೇ ಜನ್ಮ ದಿನಾಚರಣೆ (Vivekananda Jayanti 2023) ಅಂಗವಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ನಿಮ್ಮ ನೆಚ್ಚಿನ ಸುದ್ದಿ ಸಂಸ್ಥೆ ವಿಸ್ತಾರ ನ್ಯೂಸ್ ಶುಕ್ರವಾರ ಏರ್ಪಡಿಸಿದ್ದ “ವಿವೇಕ ವಂದನೆʼʼ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ನಕಾರಾತ್ಮಕತೆ ಯಾವತ್ತಿಗೂ ಒಳ್ಳೆಯದಲ್ಲ. ನಕರಾತ್ಮಕ ದೃಷ್ಟಿಕೋನ ವ್ಯಕ್ತಿಯಲ್ಲಿ ವೈಯಕ್ತಿಕತೆಯನ್ನು ಅತಿಯಾಗಿ ಬೆಳೆಸುತ್ತದೆ. ವ್ಯಕ್ತಿಯ ಜೀವನ ಸ್ವಾರ್ಥ ಕೇಂದ್ರಿತವಾಗುತ್ತದೆ. ಮನುಷ್ಯ ಸ್ವಾರ್ಥಿಯಾದರೆ ಸಾಮಾಜಿಕ ಪ್ರಜ್ಞೆ ಕಡಿಮೆಯಾಗುತ್ತದೆ ಮತ್ತು ಆತ ಅತಿಯಾದ ಭಯದಲ್ಲಿ ಬದುಕುವಂತಾಗುತ್ತದೆ. ಇಂತವರ ವ್ಯಕ್ತಿತ್ವ ಮತ್ತು ಬದುಕು ವಕ್ರವಾಗಿ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಾಗದೆ ಹೋಗುತ್ತದೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಈ ಬಗ್ಗೆಯೂ ಇಂದಿನ ಯುವಕರು ಗಮನ ನೀಡಬೇಕು ಎಂದರು.
ಸೋಲಿಗೆ ಮತ್ತು ಟೀಕೆಗೆ ಹೆದರಬೇಡಿ ಎಂದು ವಿವೇಕಾನಂದರು ಹೇಳಿದ್ದಾರೆ. ನಿಮ್ಮ ವ್ಯಕ್ತಿತ್ವವನ್ನು ಎರಡು ಸಂದರ್ಭದಲ್ಲಿ ಮಾತ್ರ ಪರಾಮರ್ಶಿಸಲು ಸಾಧ್ಯ. ಒಂದು ನಿಮ್ಮಲ್ಲಿ ಏನೂ ಇಲ್ಲದಿದ್ದಾಗ ನೀವು ತೋರುವ ಸಹನೆ ಮತ್ತು ನಿಮ್ಮ ಬಳಿ ಎಲ್ಲವೂ ಇದ್ದಾಗ ನಿಮ್ಮ ನೆಡವಳಿಕೆ ನಿಮ್ಮ ವ್ಯಕ್ತಿತ್ವ ಎಂಥದ್ದು ಎಂದು ತಿಳಿಸುತ್ತದೆ ಎಂದು ಹೇಳಿದ ಸ್ವಾಮಿ ವೀರೇಶಾನಂದ ಸರಸ್ವತೀ, ಸಮಾಜಸೇವೆ ಮತ್ತು ಪರೋಪಕಾರವನ್ನು ಕೇವಲ ಧರ್ಮದ ನೆಲೆಗಟ್ಟಿನಲ್ಲಿ ಸೀಮಿತವಾಗಿ ನೋಡಬೇಡಿ. ವ್ಯಕ್ತಿಯೊಬ್ಬ ಸಮಾಜಕ್ಕೆ ಮಾಡುವ ಋಣ ಸಂದಾಯ ಎಂದು ಭಾವಿಸಿ. ನಮಗೆ ಎಲ್ಲವನ್ನೂ ನೀಡಿದ ಈ ಪ್ರಪಂಚಕ್ಕೆ ನಾವು ಕೃತಜ್ಞತೆಯಿಂದ ಮಾಡುವ ಸೇವೆ ಎಂಬ ತಿಳುವಳಿಕೆಯನ್ನು ಸ್ವಾಮಿ ವಿವೇಕಾನಂದರು ನೀಡಿದ್ದಾರೆ. ಅದನ್ನು ನಾವು ಅಳವಡಿಸಿಕೊಳ್ಳೋಣ ಎಂದರು.
ಸ್ವಾಮಿ ವಿವೇಕಾನಂದರು ನಮ್ಮ ನಾಡಿನಲ್ಲಿ ಓಡಾಡಿದ್ದಾರೆ. ಈ ಪುಣ್ಯದ ನೆಲೆಯನ್ನು ಇನ್ನಷ್ಟು ಪುಣ್ಯವಾಗಿಸಿದ್ದಾರೆ. ಮೈಸೂರು ಮಹಾರಾಜರ ಅತಿಥಿಯಾಗಿದ್ದರು. ಬೆಂಗಳೂರಿನ ಟಾಟಾ ಇನ್‌ಸ್ಟಿಟ್ಯೂಟ್ ಪ್ರಾರಂಭವಾಗಲು ನೂರಕ್ಕೆ ನೂರರಷ್ಟು ಪ್ರೇರಣೆ ನೀಡಿದ್ದರು ಎಂದು ವಿವರಿಸಿದ ಸ್ವಾಮಿ ವೀರೇಶಾನಂದ ಸರಸ್ವತೀ ಅವರು, ರಾಮಕೃಷ್ಣ-ವಿವೇಕಾನಂದರ ಆಂದೋಲನ ಸಮುದ್ರದೋಪಾದಿಯಲ್ಲಿ ನಡೆಯುತ್ತದೆ. ಇದಕ್ಕೆ ಮೈಸೂರು ರಾಜ್ಯದ ಕೊಡುಗೆ ದೊಡ್ಡದಾಗಿರುತ್ತದೆ ಎಂದು ಸ್ವಾಮಿ ವಿವೇಕಾನಂದರೇ ಹೇಳಿದ್ದರು. ಅದನ್ನು ನಾವೆಲ್ಲರೂ ನಿಜವಾಗಿಸಬೇಕಾಗಿದೆ ಎಂದರು.
ಮೈಸೂರಿನ ಮಹಾರಾಜರಿಗೆ ಪತ್ರ ಬರೆದಿದ್ದ ಸ್ವಾಮಿ ವಿವೇಕಾನಂದರು ಪತ್ರದಲ್ಲಿ ಹೀಗೆ ಹೇಳಿದ್ದರು. “ಮೈಡಿಯರ್ ಮಹಾರಾಜ, ಜೀವನ ಅಶಾಶ್ವತವಾದದು. ನಮ್ಮ ಬದುಕಿನಲ್ಲಿನ ಸುಖಗಳು ಅತ್ಯಂತ ತಾತ್ಕಾಲಿಕವಾದದು. ಯಾರೂ ಇತರರಿಗೆ ಬದುಕುತ್ತಾರೆಯೋ ಅವರದೇ ಜೀವನ, ಉಳಿದವರು ಬದುಕಿದ್ದರು ಸತ್ತಂತೆʼʼ ಎಂದು. ಹೀಗೆ ಹೇಳುವ ಮೂಲಕ ಸ್ವಾಮಿ ವಿವೇಕಾನಂದರು ನಮ್ಮೆಲ್ಲರ ಬದುಕಿಗೆ ವಿಸ್ತಾರವಾದ ಭಾಷ್ಯ ಬರೆದಿದ್ದಾರೆ ಎಂದು ಸ್ವಾಮಿ ವೀರೇಶಾನಂದ ಸರಸ್ವತೀ ಅವರು ವಿವರಿಸಿದರು.
ಮಕ್ಕಳನ್ನು ಹುರಿದುಂಬಿಸುತ್ತಾ, ವಿವೇಕಾನಂದರ ವ್ಯಕ್ತಿತ್ವದ ಪರಿಚಯವನ್ನು ಅವರಿಗೆ ಮಾಡಿಕೊಟ್ಟ ಸ್ವಾಮಿ ವೀರೇಶಾನಂದ ಸರಸ್ವತೀ ಅವರು, ವಿವೇಕಾನಂದರು ಜಗತ್ತಿನಲ್ಲಿ ಹೇಗೆ ಸಂಚಲನಕ್ಕೆ ಕಾರಣರಾಗಿ, ನಮಗೆಲ್ಲಾ ಆದರ್ಶರಾಗಿದ್ದಾರೆ ಎಂಬುದನ್ನೂ ವಿವರಿಸಿದರು. ಈ ರೀತಿಯ ಕಾರ್ಯಕ್ರಮವನ್ನು ಏರ್ಪಡಿಸಿದ ವಿಸ್ತಾರ ನ್ಯೂಸ್‌ನ ಕುರಿತು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು.
ಇದನ್ನೂ ಓದಿ | Vivekananda Jayanti | ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವ ವಿಸ್ತಾರ ನ್ಯೂಸ್ ಅಭಿಯಾನ ಶ್ಲಾಘನೀಯ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್