Site icon Vistara News

WAQF Board : ಶಿರಸಿಯಲ್ಲಿ ವಕ್ಫ್‌ ಬೋರ್ಡ್‌ಗೆ ಭಾರಿ ಮೋಸ; 250 ಕೋಟಿ ರೂ. ಆಸ್ತಿ ಇದ್ದರೂ ಬರೋದು ಚಿಲ್ಲರೆ ಆದಾಯ!

Sirsi waqf Office

ಭಾಸ್ಕರ ಆರ್ ಗೆಂಡ್ಲ, ವಿಸ್ತಾರ ನ್ಯೂಸ್‌ ಶಿರಸಿ

ಮುಸ್ಲಿಂ ಸಮುದಾಯದ (Muslim Community) ಅಭಿವೃದ್ಧಿ ಹಾಗೂ ಮಸೀದಿಗಳ ಅಭಿವೃದ್ಧಿ (Development of Mosques) ಉದ್ದೇಶದಿಂದ ವಕ್ಫ್ ಬೋರ್ಡ್ ರಚಿಸಲಾಗಿದೆ. ವಕ್ಫ್ ಆಸ್ತಿಗಳನ್ನು ಬಳಸಿಕೊಂಡು ಅದರಿಂದ ಬರುವಂತಹ ಆದಾಯವನ್ನು ಸಮುದಾಯದ ಅಭಿವೃದ್ಧಿಗೆ ಬಳಸಲಾಗುತ್ತದೆ. ಆದರೆ, ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ವಕ್ಫ್ ಬೋರ್ಡ್‌ಗೆ (WAQF Board) ಸಲ್ಲಬೇಕಾದ ಆದಾಯದಲ್ಲಿ ಭಾರೀ ಗೋಲ್ ಮಾಲ್ ಆಗ್ತಿರುವ ವಿಚಾರ ಬೆಳಕಿಗೆ ಬಂದಿದೆ. ಬಡ ಮುಸ್ಲಿಮರ ಏಳಿಗೆಗಾಗಿ ಬಳಸಬೇಕಾದ ಆದಾಯದಲ್ಲೇ ಭ್ರಷ್ಟಾಚಾರ ನಡೆಯುತ್ತಿದ್ದು, ಇಂತಹ ಗೋಲ್‌ಮಾಲ್ ವಿರುದ್ಧ ಇದೀಗ ವಕ್ಫ್ ಬೋರ್ಡ್ ಸದಸ್ಯರು ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.

ದೇಶದಲ್ಲಿ ಹೆಚ್ಚು ಆಸ್ತಿ ಹೊಂದಿರುವುದರಲ್ಲಿ ರಕ್ಷಣಾ ಇಲಾಖೆ (Defence department) ಮೊದಲ ಸ್ಥಾನದಲ್ಲಿದ್ರೆ, ಎರಡನೇ ಸ್ಥಾನದಲ್ಲಿ ರೈಲ್ವೇ ಇಲಾಖೆಯಿದೆ (Railway department). ಮೂರನೇ ಸ್ಥಾನದಲ್ಲಿರೋದೇ ವಕ್ಫ್ ಬೋರ್ಡ್‌. ಆದರೆ, ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ವಕ್ಫ್ ಬೋರ್ಡ್‌ಗೆ ಸಂಬಂಧಿಸಿದ ಆಸ್ತಿ ಹಾಗೂ ಆದಾಯದಲ್ಲಿ ಭಾರೀ ಗೋಲ್‌ಮಾಲ್ ನಡೆಯುತ್ತಿದೆ. ಶಿರಸಿ ನಗರದಲ್ಲೇ ವಕ್ಫ್‌ ಬೋರ್ಡ್‌ನಡಿ ಸುಮಾರು 11 ಎಕರೆಗಿಂತಲೂ ಹೆಚ್ಚು ಜಾಗ ಸೇರಿ ಸುಮಾರು 250 ಕೋಟಿ ರೂ. ಮೌಲ್ಯದ ಆಸ್ತಿಯಿದೆ.‌ ಇದರಲ್ಲಿ 64 ಅಂಗಡಿಗಳು, 26 ಮನೆಗಳು ಹಾಗೂ ಮೂರು ಖಾಲಿ ಜಾಗಗಳು ಈ ಬೋರ್ಡ್‌ಗೆ ಸೇರಿಕೊಂಡಿದೆ. ಆದರೆ, ಬರುವ ಆದಾಯ ಮಾತ್ರ ಚಿಲ್ಲರೆ!

ಎರಡು ಮಸೀದಿಗಳ ಆದಾಯದಲ್ಲಿ ಗೋಲ್‌ಮಾಲ್‌!

ಶಿರಸಿ ಪಟ್ಟಣದ ಸುಲ್ತಾನಿ ಮತ್ತು ಮದೀನಾ ಮಸೀದಿ ವಕ್ಫ್‌ ಬೋರ್ಡ್‌ನಡಿ ಬರುತ್ತಿವೆ. ಈ ಮಸೀದಿಗೆ ದೊರೆಯಬೇಕಾಗಿದ್ದ ಆದಾಯದಲ್ಲೇ ಗೋಲ್‌ಮಾಲ್ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಶಿರಸಿಯಲ್ಲಿ ವಕ್ಫ್ ಅಸ್ತಿ ಮೇಲೆ ಮರ್ಕಝ್ ಎಂಬ ಸ್ವಯಂ ಘೋಷಿತ ಸಮಿತಿ ಅಧಿಕಾರ ಚಲಾಯಿಸುತ್ತಿದ್ದು, ಶಿರಸಿ ಪಟ್ಟಣದ ಪ್ರಮುಖ ಸ್ಥಳದಲ್ಲಿರುವ ಅಂಗಡಿಗಳು, ಹೋಟೆಲ್‌ಗಳು, ಮನೆಗಳ ಬಾಡಿಗೆ ಹಣದಲ್ಲಾಗ್ತಿರುವ ಭಾರೀ ಮೋಸಕ್ಕೆ ಈ ಸ್ವಯಂ ಘೋಷಿತ ಸಮಿತಿ ಸಾಥ್ ನೀಡುತ್ತಿದೆ.

ಶಿರಸಿಯ ಮಸೀದಿ

ಮೋಸ ನಡೆಯುವುದು ಹೇಗೆ?

ವಕ್ಫ್‌ ಬೋರ್ಡ್‌ಗೆ ಹೇಗೆ ಮೋಸ ನಡೆಯುತ್ತದೆ ಎಂದು ನೋಡುವುದಾದರೆ, ವಕ್ಫ್ ಜಾಗದಲ್ಲಿ ಇರುವ ಅಂಗಡಿಗಳನ್ನು ಏಲಂ ಮಾಡಲಾಗುತ್ತದೆ. ಈ ಏಲಂನಲ್ಲಿ ಅಂಗಡಿ, ಹೋಟೆಲ್‌ಗಳನ್ನು ಅತಿ ಕಡಿಮೆ ಬಾಡಿಗೆಗೆ ಏಲಂ ಮಾಡಲಾಗುತ್ತದೆ. ಕೇವಲ 40 ರೂ., 50 ರೂ., 100ರೂ., 200ರೂ. ಬಾಡಿಗೆಗೆ ಏಲಂ ಮಾಡಲಾಗುತ್ತದೆ. ಇದರ ಆದಾಯ ವಕ್ಫ್‌ ಬೋರ್ಡ್‌ಗೆ ಬರುತ್ತದೆ.

ಹೀಗೆ ಮಸೀದಿಗೆ ಸೇರಿದ ಜಾಗಗಳನ್ನು ಕಡಿಮೆ ಬಾಡಿಗೆಗೆ ಪಡೆಯುವ ವ್ಯಕ್ತಿಗಳು ಇದೇ ಅಂಗಡಿಗಳನ್ನು ಸಬ್ ಲೀಸ್‌ಗೆ ನೀಡಿ 35,000ರೂ.ನಿಂದ 40,000ರೂ.ವರೆಗೆ ಬಾಡಿಗೆ ಪಡೆದು ಭರ್ಜರಿ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ.!

ವಕ್ಫ್ ಆದಾಯಕ್ಕೆ ಮೋಸ ಮಾಡುವುದರಲ್ಲಿ ಮಸೀದಿಯ ಸ್ವಯಂ ಘೋಷಿತ ಸಮಿತಿ ಹಾಗೂ ಕೆಲವು ಅಂಗಡಿ ಮಾಲಕರು ಶಾಮೀಲಾಗಿದ್ದು, ಇವರೆಲ್ಲಾ ಸೇರಿ ವಕ್ಫ್ ಬೋರ್ಡ್‌ಗೆ ಸಲ್ಲಬೇಕಾದ ಹಣದ ಗೋಲ್ ಮಾಲ್ ಮಾಡುತ್ತಿರುವುದಾಗಿ ವಕ್ಪ್ ಬೋರ್ಡ್ ಸದಸ್ಯರು ಕೇಂದ್ರ ಹಾಗೂ ರಾಜ್ಯ ಸಚಿವರು, ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಈ ಮೂಲಕ ವಕ್ಫ್ ಬೋರ್ಡ್‌ಗೆ ಆಗಿರುವ ಮೋಸವನ್ನು ಉತ್ತರಕನ್ನಡ ಜಿಲ್ಲೆಯ ವಕ್ಫ್ ಬೋರ್ಡ್ ಚೇರ್‌ಮ್ಯಾನ್ ಹಾಗೂ ಸದಸ್ಯರು ಬಯಲು ಮಾಡಿದ್ದಾರೆ.

ವಕ್ಫ್‌ ಬೋರ್ಡ್‌ ಅಧೀನದಲ್ಲಿರುವ ಆಸ್ತಿಗಳು- ಪ್ರಾತಿನಿಧಿಕ ಚಿತ್ರ

ಆಡಿಟ್‌ ರಿಪೋರ್ಟ್‌ನಲ್ಲಿ ಬಯಲಾದ ಹಗರಣ

ಇನ್ನು 2017-18ರಿಂದ 2021-22ರವರೆಗೆ ವಕ್ಫ್ ಬೋರ್ಡ್ ಮಾಡಿದ ಆಡಿಟ್ ರಿಪೋರ್ಟ್‌ನಲ್ಲಿ ಮಸೀದಿ ನೇಮಿಸಿದ್ದ ಹಿಂದಿನ ಆಡಳಿತಾಧಿಕಾರಿ ಸುಮಾರು 3ರಿಂದ 4 ಕೋಟಿ ರೂ. ವಕ್ಫ್ ಹಣವನ್ನು ಮಿಸ್ ಪ್ಲೇಸ್ ಮಾಡಿರುವ ವಿಚಾರ ಕೂಡಾ ಆಡಿಟ್ ರಿಪೋರ್ಟ್‌ನಲ್ಲಿ ಬಯಲಾಗಿದೆ. ಇದರ ಜತೆ ಸುಲ್ತಾನಿ ಮತ್ತು ಮದೀನಾ ಮಸೀದಿಯಿಂದ ರಾಜ್ಯ ವಕ್ಫ್ ಬೋರ್ಡ್‌ಗೆ ಪ್ರತೀ ವರ್ಷ ಶೇ. 7ರಂತೆ ಪಾವತಿಸುವ ಸುಮಾರು 2 ಲಕ್ಷ ರೂ.ಗಿಂತಲೂ ಮಿಕ್ಕಿ ಪಾವತಿ ಹಣ ಬಾಕಿಯಿರೋದು ಕೂಡಾ ತಿಳಿದುಬಂದಿದೆ. ಅಂದಹಾಗೆ, ವಕ್ಫ್‌ನಡಿಯಲ್ಲಿರುವ ಸ್ಥಳಗಳಲ್ಲಿ ಟೆಂಡರ್ ಮೂಲಕ ಬಾಡಿಗೆಗಳನ್ನು ನೀಡಿದಲ್ಲಿ ಸುಲ್ತಾನಿ ಹಾಗೂ ಮದೀನಾ ಮಸೀದಿಗೆ ಬರೋಬ್ಬರಿ 40 ಲಕ್ಷ ರೂ.ನಿಂದ 50ಲಕ್ಷ ರೂ.ವರೆಗೆ ಆದಾಯ ದೊರೆಯಲಿದೆ.

ಕೇಂದ್ರ ಸಚಿವರು, ರಾಜ್ಯ ಸಚಿವರಿಗೂ ದೂರು

ವಕ್ಫ್ ಬೋರ್ಡ್‌ಗೆ ಉತ್ತಮ ಆದಾಯ ದೊರಕಿದಲ್ಲಿ ಹಲವು ಮಸೀದಿಗಳು, ಮುಸ್ಲಿಂ ಸಮುದಾಯದ ಜ‌ನರ ಅಭಿವೃದ್ಧಿ ಮಾತ್ರವಲ್ಲದೇ, ಶಿಕ್ಷಣಕ್ಕಾಗಿ ಕಾಲೇಜುಗಳ ನಿರ್ಮಾಣ ಕೂಡಾ ಸಾಧ್ಯವಾಗಲಿದೆ. ವಕ್ಫ್ ಆಸ್ತಿಯಲ್ಲಾಗುತ್ತಿರುವ ಮೋಸದ ಬಗ್ಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಸೆಂಟ್ರಲ್ ವಕ್ಫ್ ಕಮಿಷನ್ ಹಾಗೂ ರಾಜ್ಯ ವಕ್ಫ್ ಮಂಡಳಿಯ ಸಿಇಒಗೂ ಪತ್ರ ಬರೆದಿರುವ ವಕ್ಫ್ ಬೋರ್ಡ್ ಚೇರ್‌ಮ್ಯಾನ್ ಹಾಗೂ ಸದಸ್ಯರು ಈ ಸಂಬಂಧ ಕೋರ್ಟ್ ಮೆಟ್ಟಿಲೇರಲು ಕೂಡಾ ನಿರ್ಧರಿಸಿದ್ದಾರೆ. ಇನ್ನು ವಕ್ಫ್ ಸಚಿವ ಜಮೀರ್ ಅಹ್ಮದ್ ಉತ್ತರಕನ್ನಡ ಜಿಲ್ಲೆಗೆ ಭೇಟಿ ನೀಡಿ ಈ ಸಮಸ್ಯೆ ಬಗೆಹರಿಸುವಂತೆ ಬೋರ್ಡ್ ಸದಸ್ಯರು ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ ಮುಸ್ಲಿಂ ಸಮುದಾಯದ ಹಾಗೂ ಮಸೀದಿಗಳ ಅಭಿವೃದ್ಧಿಗಾಗಿರುವ ವಕ್ಫ್ ಬೋರ್ಡ್‌ನ ಆಸ್ತಿ ಹಾಗೂ ಆದಾಯವನ್ನು ಕೆಲವರು ತಮ್ಮ ಸ್ವಾರ್ಥಕ್ಕಾಗಿ ಬಳಸುತ್ತಿರುವುದು ವಿಪರ್ಯಾಸ. ವಕ್ಫ್ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಮುಸ್ಲಿಂ ಸಮುದಾಯಕ್ಕೆ ನ್ಯಾಯ ಒದಗಿಸಬೇಕಿದೆ.

ಮೋಸಕ್ಕೆ ಸ್ವಯಂಘೋಷಿತ ಸಮಿತಿಯೇ ಹೊಣೆ

ವಕ್ಫ್ ಅಸ್ತಿ ಮೇಲೆ ಮರ್ಕಝ್ ಎಂಬ ಸ್ವಯಂ ಘೋಷಿತ ಸಮಿತಿ ಅಧಿಕಾರ ಚಲಾಯಿಸುತ್ತಿದ್ದು, ನಗರದ ಪ್ರಮುಖ ಸ್ಥಳದಲ್ಲಿರುವ ಅಂಗಡಿಗಳು, ಹೋಟೆಲ್‌ಗಳು, ಮನೆಗಳ ಬಾಡಿಗೆ ಹಣದಲ್ಲಾಗುತ್ತಿರುವ ಭಾರೀ ಮೋಸಕ್ಕೆ ಈ ಸ್ವಯಂ ಘೋಷಿತ ಸಮಿತಿ ಸಾಥ್ ನೀಡುತ್ತಿದೆ. ಈ ಬಗ್ಗೆ ವಕ್ಫ್ ಸಚಿವರಾದ ಜಮೀರ್ ಅಹ್ಮದ್ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಕ್ಫ್ ಬೋರ್ಡ್ ಚೇರ್‌ಮ್ಯಾನ್ ಅನೀಸ್ ತಹಶೀಲ್ದಾರ್ ಒತ್ತಾಯಿಸಿದ್ದಾರೆ.

Exit mobile version