Site icon Vistara News

Wall Clock Vastu : ಮನೆಯಲ್ಲಿ ಗಡಿಯಾರ ಯಾವ ದಿಕ್ಕಿನಲ್ಲಿಟ್ಟರೆ ಶುಭ, ಯಾವ ದಿಕ್ಕಿನಲ್ಲಿದ್ದರೆ ಅಶುಭ?

Wall Clock Vastu

Wall Clock Vastu

ಸಮಯವನ್ನು ತಿಳಿಸುವ ಗಡಿಯಾರಕ್ಕೆ ಎಲ್ಲರ ಮನೆಯಲ್ಲೂ ಒಂದು ಜಾಗವಿರುತ್ತದೆ. ಮನೆಯ ಅಂದ ಮತ್ತು ಅನುಕೂಲತೆಗೆ ತಕ್ಕಂತೆ ಎಲ್ಲಿ ಬೇಕೋ ಅಲ್ಲಿ ಗಡಿಯಾರವನ್ನು ಇರಿಸಲಾಗುತ್ತದೆ. ಹೀಗೆ ಗಡಿಯಾರವನ್ನು ಗೋಡೆಗೆ ನೇತು ಹಾಕುವ ಅಥವಾ ಟೇಬಲ್‌ ಮೇಲೆ ಇಡುವ ಸಂದರ್ಭದಲ್ಲಿ ಬಹುತೇಕರು ದಿಕ್ಕಿನ ಬಗ್ಗೆ ಯೋಚಿಸುವುದಿಲ್ಲ. ಆದರೆ ತಪ್ಪು ದಿಕ್ಕಿನಲ್ಲಿ ಗಡಿಯಾರವನ್ನು ಇಡುವುದರಿಂದ ವಾಸ್ತು ದೋಷ ಉಂಟಾಗುತ್ತದೆ ಎಂದು ವಾಸ್ತು ಶಾಸ್ತ್ರ (Wall Clock Vastu) ಹೇಳುತ್ತದೆ.

ವಾಸ್ತು ಪ್ರಕಾರ ಮನೆಯಲ್ಲಿ ಗಡಿಯಾರವನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಮಾತ್ರ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚುತ್ತದೆ. ಅಷ್ಟೇ ಅಲ್ಲದೆ ಮನೆಯಲ್ಲಿ ಸುಖ- ಸೌಭಾಗ್ಯ ಮತ್ತು ಸಮೃದ್ಧಿ ನೆಲೆಸುತ್ತದೆ. ಚಿಕ್ಕ ಪುಟ್ಟ ವಾಸ್ತು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮನೆಯ ವಸ್ತುಗಳು ವಾಸ್ತು ಪ್ರಕಾರವೇ ಇರುವಂತೆ ನೋಡಿಕೊಂಡರೆ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ. ಹಾಗಾಗಿ ವಾಸ್ತು ಪ್ರಕಾರ ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಶುಭ ಎಂಬುದನ್ನು ತಿಳಿಯೋಣ.

ಈ ದಿಕ್ಕಿನಲ್ಲಿ ಗಡಿಯಾರ ಬೇಡ!

ವಾಸ್ತು ಶಾಸ್ತ್ರದ ಪ್ರಕಾರ ಸರಿಯಾದ ದಿಕ್ಕಿನಲ್ಲಿ ಗಡಿಯಾರವನ್ನು ಇಡುವುದರಿಂದ ಉತ್ತಮ ಪರಿಣಾಮಗಳು ಉಂಟಾಗುತ್ತವೆಯೋ ಹಾಗೆಯೇ ತಪ್ಪು ದಿಕ್ಕಿನಲ್ಲಿ ಇಟ್ಟಾಗ ಅದರ ನಕಾರಾತ್ಮಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ವಾಸ್ತು ಶಾಸ್ತ್ರದ ಅನುಸಾರ ಮನೆಯ ದಕ್ಷಿಣ ದಿಕ್ಕಿನ ಗೋಡೆ ಅಥವಾ ಮೇಜಿನ ಮೇಲೆ ಗಡಿಯಾರವನ್ನು ಇಡುವುದರಿಂದ ಮನೆಯ ಮುಖ್ಯಸ್ಥರ ಸ್ವಾಸ್ಥ್ಯ ಹದಗೆಡುತ್ತದೆ. ಜೊತೆಗೆ ಬಾಗಿಲಿನ ಮೇಲ್ಬಾಗದ ಗೋಡೆಯಲ್ಲಿ ಸಹ ಗಡಿಯಾರವನ್ನು ಇಡುವುದು ಅಶುಭವೆಂದೇ ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿ ಮಾನಸಿಕ ಕಿರಿಕಿರಿ ಹೆಚ್ಚುತ್ತದೆ.

ಸಮಯ ತೋರಿಸದೇ ಹಾಳಾಗಿರುವ ಗಡಿಯಾರವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಇದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತವೆ. ಸರಿ ಪಡಿಸಬಹುದಾದ ಗಡಿಯಾರವಾಗಿದ್ದರೆ ಬೇಗ ಸರಿ ಮಾಡಿ ಇಟ್ಟುಕೊಳ್ಳಬೇಕು. ಹಾಗಾಗಿ ಹಾಳಾಗಿರುವ, ಸಮಯವನ್ನು ಸರಿಯಾಗಿ ತೋರಿಸದ ಮತ್ತು ಒಡೆದಿರುವ ಗಡಿಯಾರಗಳಿಂದ ವಾಸ್ತು ದೋಷ ಉಂಟಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಗಾಢ ಬಣ್ಣಗಳಾದ ಕಪ್ಪು, ನೀಲಿ ಬಣ್ಣದ ಗಡಿಯಾರಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಈ ಬಣ್ಣಗಳು ನಕಾರಾತ್ಮಕತೆಯನ್ನು ಹೆಚ್ಚಿಸುವ ಕಾರ್ಯ ಮಾಡುತ್ತವೆ.

ಗಡಿಯಾರ ಹೀಗಿದ್ದರೆ ಶುಭ

ವಾಸ್ತು ಶಾಸ್ತ್ರದ ಪ್ರಕಾರ ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಗಡಿಯಾರ ಇಡುವುದು ಶುಭ. ಈ ದಿಕ್ಕುಗಳಲ್ಲಿ ಸಾತ್ವಿಕ ಶಕ್ತಿಯ ಹರಿವು ಹೆಚ್ಚಾಗಿ ಇರುತ್ತದೆ. ಹಾಗಾಗಿ ಮನೆಯಲ್ಲಿ ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿಯೇ ಗಡಿಯಾರವನ್ನು ಇಟ್ಟುಕೊಳ್ಳಬೇಕು. ಗೋಡೆಗೆ ಪೆಂಡೂಲಮ್ ಗಡಿಯಾರವನ್ನು ಹಾಕುವುದು ಇನ್ನೂ ಉತ್ತಮ ಎಂದು ವಾಸ್ತು ಶಾಸ್ತ್ರ ತಿಳಿಸುತ್ತದೆ.

ಮನೆಯಲ್ಲಿ ಗಡಿಯಾರ ಇಡುವ ದಿಕ್ಕಿನ ಬಗ್ಗೆ ಗಮನಹರಿಸಿದಂತೆಯೇ ಗಡಿಯಾರದ ಆಕಾರದ ಬಗ್ಗೆಯೂ ವಿಶೇಷ ಗಮನ ನೀಡಬೇಕಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ವೃತ್ತಾಕಾರ, ಚೌಕದ ಆಕಾರ ಮತ್ತು ಮೊಟ್ಟೆ ಆಕಾರದ ಗಡಿಯಾರಗಳು ಶುಭ. ಜೊತೆಗೆ ಎಂಟು ಅಥವಾ ಆರು ಮೂಲೆಯ ಗಡಿಯಾರ ಸಹ ಶುಭವೆಂದೇ ಹೇಳಲಾಗುತ್ತದೆ. ಇದರಿಂದ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಹಾಗೆಯೇ ಮೊನಚಾದ ಮೂಲೆಗಳನ್ನು ಹೊಂದಿರುವ ಗಡಿಯಾರ ಮನೆಗೆ ಒಳ್ಳೆಯದಲ್ಲ.

ಇನ್ನೊಂದು ಮುಖ್ಯ ಅಂಶವೆಂದರೆ ಗೋಡೆ ಗಡಿಯಾರದ ಸಮಯವು ನೈಜ ಸಮಯಕ್ಕಿಂತ ಹಿಂದಿರಬಾರದು. ಮುಂದಿದ್ದರೆ ಒಳ್ಳೆಯದು. ವಾಸ್ತು ಶಾಸ್ತ್ರದಲ್ಲಿ ತಿಳಿಸಿದ ಈ ರೀತಿಯ ಚಿಕ್ಕ, ಪುಟ್ಟ ಬದಲಾವಣೆಗಳು ಮನೆಯ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯಕವಾಗುತ್ತದೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಇದನ್ನೂ ಓದಿ: Astro Tips : ಎಂದು ಉಗುರು ಕತ್ತರಿಸಿದರೆ ಶುಭ? ಯಾವಾಗ ಕತ್ತರಿಸಿದರೆ ಧನ ಲಾಭ?

Exit mobile version