ದೀಪಾವಳಿ ಹಬ್ಬದ (Deepavali 2023) ಹೊಸಿಲಲ್ಲಿರುವಾಗ, ಅದರ ವಿಧಿವಿಧಾನಗಳ ಬಗ್ಗೆ ಅರಿತು ಆಚರಿಸುವುದು ಸೂಕ್ತ. ಸಂಭ್ರಮಿಸಲು ಪದ್ಧತಿಗಳ ಹಂಗಿಲ್ಲ ಎನ್ನುವುದು ಹೌದಾದರೂ, ವಾಡಿಕೆಯ ಕ್ರಮಗಳು ದೀಪಕ್ಕೆ ಎಣ್ಣೆ ಹಾಕಿದಂತೆ, ಖುಷಿಗೆ ನೀರೆರೆಯುವುದಾದರೆ… ಯಾಕೆ ಬೇಡ? ಎಲ್ಲಾ ಹಬ್ಬಗಳಂತೆ ದೀಪಾವಳಿಗೂ ಅದರದ್ದೇ ಆಚರಣೆಯ ಕ್ರಮಗಳಿವೆ. ಇನ್ನೇನು ಚಳಿಗಾಲ ಬಂತು ಎನ್ನುವ ಹೊತ್ತಿನಲ್ಲಿ ಎದುರಾಗುವ ಹಬ್ಬವಿದು. ಹಾಗಾಗಿ ಅಭ್ಯಂಗ ಸ್ನಾನ ಈ ಹಬ್ಬದ ಒಂದು ಮುಖ್ಯ ಭಾಗ.
ನೀರು ತುಂಬುವ ಹಬ್ಬ, ಗಂಗೆ ತುಂಬುವ ಹಬ್ಬ ಎಂದೇ ನಾಡಿನೆಲ್ಲೆಡೆ ಕರೆಸಿಕೊಳ್ಳುತ್ತದೆ ದೀಪಾವಳಿಯ ಆರಂಭದ ದಿನ. ಅಂದರೆ, ನರಕ ಚತುರ್ದಶಿಯ ಹಿಂದಿನ ದಿನ, ಮನೆಯಲ್ಲಿ ನೀರು ತುಂಬಿಸಿಡುವ ಪರಿಕರಗಳನ್ನೆಲ್ಲಾ ತೊಳೆದು ಶುಚಿ ಮಾಡಿ, ಅದರಲ್ಲಿ ಹೊಸ ನೀರು ತುಂಬಲಾಗುತ್ತದೆ. ಹಿಂದಿನ ಕಾಲದಲ್ಲಿ ಮನೆಯ ಬಾವಿ, ನೀರು ತುಂಬುವ ಬಿಂದಿಗೆ, ಹಂಡೆಗಳಿಗೂ ಸುಣ್ಣ, ಕೆಮ್ಮಣ್ಣು ಬಳಿದು ಪೂಜಿಸಲಾಗುತ್ತಿತ್ತು. ಇವಕ್ಕೆಲ್ಲಾ ರಂಗಿನ ರಂಗೋಲಿ ಮತ್ತು ಹೂವುಗಳ ಅಲಂಕಾರವೂ ಸಲ್ಲುತ್ತಿತ್ತು. ಈಗಲೂ ಕೆಲವೆಡೆ ಹಂಡೆಗಳಿಗೆ ಮಾವಿನ ತೋರಣವನ್ನು ಕಟ್ಟಲಾಗುತ್ತದೆ. ಈ ಇಡೀ ಪ್ರಕ್ರಿಯೆಯನ್ನು ವಾಡಿಕೆಯಲ್ಲಿ ಗಂಗೆ ತುಂಬುವುದು ಎಂದು ಕರೆಯಲಾಗುತ್ತದೆ.
ಮುಂಜಾನೆ ಸ್ನಾನ
ಮಾರನೇದಿನ, ಚತುರ್ದಶಿಯಂದು ಮನೆಮಂದಿಗೆಲ್ಲಾ ಮುಂಜಾನೆಯೆ ಎಣ್ಣೆ ಸ್ನಾನ. ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ಹದವಾಗಿ ಬಿಸಿ ಮಾಡಿ, ಅದನ್ನು ತಲೆ-ಮೈಗೆಲ್ಲಾ ಒತ್ತಲಾಗುತ್ತದೆ. ಮನೆಯಲ್ಲಿ ಪುಟ್ಟ ಮಕ್ಕಳಿದ್ದರೆ ತಪ್ಪದೆ ಅಭ್ಯಂಜನ ಮಾಡಿಸಲಾಗುತ್ತದೆ. ಹಿಂದಿನ ದಿನವೇ ಹಂಡೆಗೆ ತುಂಬಿಸಿದ್ದ ನೀರಿಗೆ ಕೆಲವು ಔಷಧೀಯ ಸೊಪ್ಪುಗಳನ್ನು ಹಾಕುವ ಕ್ರಮವೂ ಇದೆ. ಚರ್ಮದ ಆರೋಗ್ಯ ಸುಧಾರಿಸಲಿ ಎನ್ನುವ ಉದ್ದೇಶ ಇದರ ಹಿಂದಿನದ್ದು. ತೈಲ ಲೇಪದ ಕೆಲ ಸಮಯದ ನಂತರ ಎಲ್ಲರಿಗೂ ಬಿಸಿ ಬಿಸಿ ನೀರಿನ ಅಭಿಷೇಕ. ಆಗಷ್ಟೇ ಆರಂಭವಾಗುತ್ತಿರುವ ಸಣ್ಣ ಚಳಿಯಲ್ಲಿ ಬಿಮ್ಮಗೆ ಎಣ್ಣೆ-ನೀರು ಹಾಕಿಕೊಳ್ಳುವುದು ಯಾರಿಗೆ ಬೇಡ?
ಲಕ್ಷ್ಮೀ ಪೂಜೆ
ಮಾರನೇ ದಿನ ಲಕ್ಷ್ಮೀ ಪೂಜೆ. ಸಮುದ್ರಮಥನದ ಕಾಲದಲ್ಲಿ ಉದ್ಭವಿಸಿದವಳು ಈ ಸಂಪತ್ತಿನ ದೇವತೆ. ಅವಳೊಂದಿಗೆ ಹುಟ್ಟಿ ಬಂದ ಚಂದ್ರ, ಕಾಮಧೇನು, ಐರಾವತ, ಕಲ್ಪವೃಕ್ಷ ಮುಂತಾದ ಎಲ್ಲಾ ಸುವಸ್ತುಗಳಿಗೂ ಸಾಂಕೇತಿಕವಾಗಿ ಪೂಜೆ ಸಲ್ಲಿಸಲಾಗುತ್ತದೆ. ಕಲಶದೊಂದಿಗೆ ಈ ಎಲ್ಲ ವಸ್ತುಗಳನ್ನು ಸಂಕೇತಿಸುವಂಥವನ್ನು ಇರಿಸಿ ಪೂಜಿಸಲಾಗುತ್ತದೆ. ಉದ್ದಿಮೆಗಳು, ವ್ಯಾಪಾರ-ವಹಿವಾಟುಗಳು, ಅಂಗಡಿ ಮುಂಗಟ್ಟುಗಳಲ್ಲಿ ಈ ದಿನ ಪೂಜೆದ ಸಡಗರ. ಮನೆಯಲ್ಲಿನ ಸುವಸ್ತುಗಳೆಲ್ಲಾ ವೃದ್ಧಿಯಾಗಲಿ ಮತ್ತು ಎಲ್ಲರಿಗೂ ಉತ್ತರೋತ್ತರ ಅಭಿವೃದ್ಧಿಯಾಗಲಿ ಎನ್ನುವ ಆಶಯ ಈ ಪೂಜೆಯ ಹಿಂದಿನದ್ದು.
ಬಲೀಂದ್ರನ ಪೂಜೆ
ಕಡೆಯ ದಿನ ಬಲೀಂದ್ರನ ಪೂಜೆ. ಕೆಲವೆಡೆ ಸಾಂಕೇತಿಕವಾಗಿ ಮಹಾಬಲಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಅಂದು ಗೋವುಗಳಿಗೂ ಪೂಜೆ. ವರ್ಷವಿಡೀ ನಮ್ಮನ್ನು ಸಾಕಿ, ಸಲಹುವ ಗೋವುಗಳಿಗೆ ಅಂದು ಚೆನ್ನಾಗಿ ಮೈ ತೊಳೆದು, ಸುಣ್ಣ, ಕೆಮ್ಮಣ್ಣುಗಳಿಂದ ಚಿತ್ರ ಬರೆದು, ಹೂ ಮಾಲೆಗಳಿಂದ ಸಿಂಗರಿಸುವ ಪದ್ಧತಿ ಕೆಲವೆಡೆಗಳಲ್ಲಿ ಇದೆ. ದೊಡ್ಡ ಎತ್ತುಗಳಿದ್ದರೆ ಅವುಗಳ ಕೋಡುಗಳಿಗೆಲ್ಲಾ ಬಣ್ಣ ಹಚ್ಚಿ ಅಲಂಕರಿಸಲಾಗುತ್ತದೆ. ಅಂದು ರಾಸುಗಳಿಗೆ ಹಲವು ಬಗೆಯ ನೈವೇದ್ಯಗಳನ್ನಿತ್ತು ಪೂಜಿಸಲಾಗುತ್ತದೆ. ಉತ್ತರಭಾರತದ ಕೆಲವೆಡೆಗಳಲ್ಲಿ ಆ ದಿನ ಗೋವರ್ಧನ ಪೂಜೆ ಮಾಡುವ ಕ್ರಮವಿದೆ.
ಕಿಚ್ಚು ಹಾಯಿಸುವಿಕೆ
ಸಂಕ್ರಾಂತಿಯಲ್ಲಿ ಕಿಚ್ಚು ಹಾಯಿಸುವಂತೆಯೇ, ದೀಪಾವಳಿಯಲ್ಲೂ ರಾಸುಗಳನ್ನು ಕಿಚ್ಚು ಹಾಯಿಸುವ ಪದ್ಧತಿ ಕೆಲವು ಕಡೆಗಳಲ್ಲಿದೆ. ಅಂದು ಊರಿನ ಜನರೆಲ್ಲ ಒಂದೆಡೆ ಸೇರಿ, ಅವರವರ ಹಟ್ಟಿಯ ಸದಸ್ಯರನ್ನು ಅಲಂಕರಿಸಿ ಊರ ಬಯಲಿಗೆ ಕರೆ ತರುತ್ತಾರೆ. ಅಲ್ಲಿ ಊರಿನ ಉತ್ಸಾಹಿಗಳ ಸಾಹಸ ಕಾರ್ಯಕ್ರಮಗಳಿಗೂ ಅವಕಾಶವಿದೆ. ಕಿಚ್ಚು ಹಾಯಿಸುವುದು, ಭಾರ ಎತ್ತುವುದು ಮುಂತಾದ ಉಪಕ್ರಮಗಳ ಮೂಲಕ, ದೀಪಾವಳಿಯೆನ್ನುವ ಹಬ್ಬ ಊರನ್ನೆಲ್ಲ ಬೆಳಗಿ, ಸಮಷ್ಟಿ ಪ್ರಜ್ಞೆಗೂ ನಾಂದಿ ಹಾಡುತ್ತದೆ. ಎಲ್ಲ ಮುಗಿಸಿ, ರಾತ್ರಿ ಪೂಜೆಯ ನಂತರ ಬಲಿಯನ್ನು ಮರಳಿ ಪಾತಾಳಕ್ಕೆ ಕಳಿಸಿದರೆ- ಇನ್ನು ಮುಂದಿನ ವರ್ಷಕ್ಕೆ ಅವನ ಆಗಮನ!
ಇದನ್ನೂ ಓದಿ: Deepavali 2023: ದೀಪಾವಳಿಯಂದು ಯಾವಾಗ ದೀಪ ಬೆಳಗಬೇಕು? ಇಲ್ಲಿದೆ ಮಾಹಿತಿ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ