ಮಂಗಳೂರು: ಮಂಗಳೂರು ಸಮೀಪದ ಮಳಲಿಯಲ್ಲಿ ಮಸೀದಿ ನವೀಕರಣ ಸಂದರ್ಭ ಮಂದಿರದ ಕುರುಹುಗಳು ಪತ್ತೆಯಾದ ಹಿನ್ನೆಲೆಯಲ್ಲಿ ತಾಂಬೂಲ ಪ್ರಶ್ನೆ ಕೇಳಲಾಗಿದೆ. ತಾಂಬೂಲ ಪ್ರಶ್ನೆ ಎಂದರೇನು? ವಿವರ ಇಲ್ಲಿದೆ.
ದಕ್ಷಿಣ ಕನ್ನಡದ ಮಳಲಿಯಲ್ಲಿ ಮಸೀದಿ ನವೀಕರಣದ ವೇಳೆ ಕಂಡುಬಂದ ದೇವಾಲಯದ ಕುರುಹುಗಳ ಹಿನ್ನೆಲೆಯಲ್ಲಿ, ತಾಂಬೂಲ ಪ್ರಶ್ನೆ ಕೇಳಲು ನಿರ್ಧರಿಸಲಾಗಿತ್ತು. ಮೇ 25ರಂದು ತಾಂಬೂಲ ಪ್ರಶ್ನೆ ಕೇಳಿದಾಗ, ಸ್ಥಳದಲ್ಲಿ ಹಿಂದೆ ದೇವಾಲಯ ಇದ್ದುದು ನಿಜ, ಆದರೆ ಯಾವ ದೇವಾಲಯ ಇತ್ಯಾದಿ ವಿವರಗಳನ್ನು ತಿಳಿಯಲು ಅಷ್ಟಮಂಗಲ ಪ್ರಶ್ನೆ ಕೇಳಬೇಕು ಎಂದು ಕಂಡುಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ʼತಾಂಬೂಲ ಪ್ರಶ್ನೆʼಯ ಬಗ್ಗೆ ಎಲ್ಲೆಡೆ ಕುತೂಹಲ ಮೂಡಿದೆ. ಏನಿದು? ಇದನ್ನು ಯಾವಾಗ ಆಚರಿಸಲಾಗುತ್ತದೆ?
ಪ್ರಶ್ನಕರ್ತನಿಗೆ ಪ್ರಶ್ನೆ
ತಾಂಬೂಲ ಪ್ರಶ್ನೆ ಎಂಬುದು ಹೆಚ್ಚಾಗಿ ಕೇರಳ ಸೇರಿದಂತೆ ದಕ್ಷಿಣ ಭಾರತದಲ್ಲಿ ಆಚರಿಸುವ ಒಂದು ಜ್ಯೋತಿರ್ವಿಜ್ಞಾನದ ಆಚರಣೆ. ಧಾರ್ಮಿಕ ಆಚರಣೆ, ದೈವಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಈ ವಿಧಾನದಲ್ಲಿ ಪರಿಣತ ಜ್ಯೋತಿಶ್ಶಾಸ್ತ್ರಜ್ಞರ ಮುಂದೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪ್ರಶ್ನೆ ಕೇಳಬೇಕು ಎಂದುಕೊಂಡವವನ್ನು ಇಲ್ಲಿ ʼಪ್ರಶ್ನಕರ್ತʼ ಎನ್ನಲಾಗುತ್ತದೆ.
ಸಾಮಾನ್ಯವಾಗಿ ಕುಟುಂಬದಲ್ಲಿ ತರ್ಕಕ್ಕೆ ಮೀರಿದ ಸಮಸ್ಯೆಗಳು ಉಂಟಾದಾಗ, ಧಾರ್ಮಿಕ ವಿಧಿವಿಧಾನಗಳಿಗೆ ಸಂಬಂಧಿಸಿದ ಗೊಂದಲಗಳು ಮೂಡಿದಾಗ, ದೇವಾಲಯದಂಥ ದೊಡ್ಡ ಸಂಸ್ಥೆಗಳ ಅಸ್ತಿತ್ವ ಹಾಗೂ ಆಚರಣೆಗಳಿಗೆ ಸಂಬಂಧಿಸಿ ಪ್ರಶ್ನೆ ಕೇಳುತ್ತಾರೆ. ಹೊಸದಾಗಿ ದೇವಾಲಯದ ಕುರುಹು ಸಿಕ್ಕಿದ ಸ್ಥಳದಲ್ಲಿ ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು- ಈ ಸ್ಥಳ ಹಿಂದೆ ದೇವಾಲಯವಾಗಿತ್ತೇ? ಆಗಿದ್ದರೆ ಯಾವ ದೇವಾಲಯ, ಶೈವ ದೇವಾಲಯವೇ, ವೈಷ್ಣವ ದೇವಾಲಯವೇ? ಇಲ್ಲಿ ಪಂಚಾಯತನ ಪೂಜೆಯಿತ್ತೇ? ಇಲ್ಲಿನ ಒಡೆತನದ ಮತ್ತು ಅರ್ಚಕರ ಕುಟುಂಬ ಈಗಲೂ ಇದೆಯೇ ಇತ್ಯಾದಿ.
ಈ ತಾಂಬೂಲ ಪ್ರಶ್ನೆಯು ಫಲ ಜ್ಯೋತಿಷ್ಯದ ಒಂದು ಮುಖ್ಯ ಅಂಗವೂ ಹೌದು. ಇಲ್ಲಿ ಪ್ರಶ್ನೆ ಕೇಳುವ ಸಂದರ್ಭದಲ್ಲಿ ಪ್ರಶ್ನೆ ಮಾಡಿದ ಸಮಯ, ಪ್ರಶ್ನೆಕರ್ತನ ಸ್ವರೂಪ, ವರ್ತನೆಗಳು, ಕಂಡುಬಂದ ನಿಮಿತ್ತಗಳು, ಇತ್ಯಾದಿಗಳ ಆಧಾರದ ಮೇಲೆ ಸಮಸ್ತ ಪ್ರಶ್ನೆಗಳ ಯಥಾರ್ಥ ಫಲ ಹೇಳಲಾಗುತ್ತದೆ.
ಜ್ಯೋತಿಷ್ಯಶಾಸ್ತ್ರಜ್ಞರು, ಪ್ರಶ್ನೆಕರ್ತನಿಗೆ ವೀಳ್ಯದೆಲೆಗಳನ್ನು ಕೊಡಲು ಹೇಳುತ್ತಾರೆ. ಆತನು ಕೊಡುವ ತಾಂಬೂಲದ ಎಲೆಗಳ ಸಹಾಯದಿಂದ ತನ್ವಾದಿ ದ್ವಾದಶ ಭಾವಗಳ ಸಮಸ್ತ ಶುಭಾ ಶುಭಫಲಗಳನ್ನು ಹೇಳಲಾಗುತ್ತದೆ. ಪೂರ್ವಾಹ್ನ ಮತ್ತು ಅಪರಾಹ್ನದ ಸಮಯದಲ್ಲಿ ಪ್ರಶ್ನೆಕರ್ತನು ನೀಡುವ ವೀಳ್ಯದೆಲೆಗಳನ್ನು ಮೇಲಿನಿಂದ ಕೆಳಕ್ಕೆ ಮತ್ತು ಕೆಳಗಿನಿಂದ ಮೇಲಕ್ಕೆ ಎಣಿಸಿ ಲಗ್ನಾದಿ ಹನ್ನೆರಡು ಭಾವಗಳ ಕಲ್ಪನೆ ಮಾಡಲಾಗುತ್ತದೆ. ಲಗ್ನಭಾವ, ಧನಭಾವ, ಸಹಜಭಾವ, ವ್ಯಯಭಾವ ಹೀಗೆ ಹನ್ನೆರಡು ಎಲೆಗಳಿಗೂ ಒಂದೊಂದು ಭಾವವಿರುತ್ತದೆ.
ಎತ್ತಿಕೊಟ್ಟ ಎಲೆಯು ಬಾಡಿದ್ದರೆ, ಹರಿದಿದ್ದರೆ, ಛಿದ್ರವಾಗಿದ್ದರೆ ಆ ಭಾವದ ಫಲಗಳು ಅಶುಭವೆಂದು ತಿಳಿಯಲಾಗುತ್ತದೆ. ಎಲೆಯು ಚೆನ್ನಾಗಿದ್ದು, ಹಸಿರಿನಿಂದ ನಳನಳಿಸುತ್ತಿದ್ದರೆ ಆ ಭಾವದ ಫಲ ಶುಭಕರ ಹಾಗೂ ವೃದ್ಧಿಕರವಾಗಿರುತ್ತದೆ.
ಇದನ್ನೂ ಓದಿ: ಮಳಲಿ ಮಸೀದಿಯಲ್ಲಿ ದೈವೀ ಶಕ್ತಿ ಇರುವುದು ನಿಜ: ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ್
ಪ್ರಶ್ನೆಕರ್ತನು ನೀಡಿದ ಎಲೆಗಳ ಸಂಖ್ಯೆಯನ್ನು ಎರಡರಿಂದ ಗುಣಿಸಿ, ಐದರಿಂದ ಭಾಗಿಸಿ, ಒಂದು ಕೂಡಿಸಿ, ಪುನಃ ಏಳರಿಂದ ಭಾಗಿಸಲಾಗುತ್ತದೆ. ಶೇಷ 1 ಉಳಿದರೆ ಸೂರ್ಯ, 2 ಉಳಿದರೆ ಚಂದ್ರ, 3 ಉಳಿದರೆ ಶನಿ ಗ್ರಹದ ಉದಯವಾಗಿದೆ ಎಂದು ತಿಳಿಯಲಾಗುತ್ತದೆ. ಆಯಾ ಗ್ರಹವು ಯಾವ ರಾಶಿಯಲ್ಲಿರುವುದೋ ಆ ರಾಶಿಯನ್ನು ಪ್ರಶ್ನೆ ಲಗ್ನವೆಂದು ತಿಳಿಯಲಾಗುತ್ತದೆ. ಸೂರ್ಯನು ಉದಯವಾದರೆ ದುಃಖ, ಚಂದ್ರನಿಂದ ಸುಖ, ಮಂಗಲ ಕಲಹ, ಬುಧ-ಗುರುವಿನಿಂದ ಧನ, ಶುಕ್ರನಿಂದ ಇಷ್ಟಾರ್ಥಸಿದ್ಧಿ, ಶನಿಯಿಂದ ಮೃತ್ಯು ಸಂಕಲ್ಪಗಳು ಕಾಣುತ್ತವೆ.
ಈ ತಾಂಬೂಲಪ್ರಶ್ನೆಯನ್ನು ಸಾಮಾನ್ಯವಾಗಿ ದಕ್ಷಿಣ ಕನ್ನಡದ ನುರಿತ ಅಥವಾ ಕೇರಳದಿಂದ ಕರೆತಂದ ಜ್ಯೋತಿಶ್ಶಾಸ್ತ್ರಜ್ಞರು ನಡೆಸಿಕೊಡುತ್ತಾರೆ. ಸ್ಥಳದಲ್ಲಿ ದೈವೀಸಾನ್ನಿಧ್ಯಕ್ಕೆ ಸಲ್ಲಬೇಕಾದ ಪೂಜಾವಿಧಾನ, ಧಾರ್ಮಿಕ ಸೇವೆಗಳ ಕ್ರಮ, ಯಾರು ನಡೆಸಿಕೊಡಬೇಕು ಇತ್ಯಾದಿ ಇನ್ನಷ್ಟು ವಿಚಾರ ವಿಮರ್ಶೆಗಳನ್ನು ನಡೆಸಿ ಆ ಬಗ್ಗೆ ಇತ್ಯರ್ಥಕ್ಕೆ ಬರಲು ಇದಕ್ಕಿಂತಲೂ ಹೆಚ್ಚು ಕಠಿಣವಾದ, ಇನ್ನಷ್ಟು ಆಳವಾದ ಪ್ರಶ್ನೆಗಳನ್ನು ಇಟ್ಟು ಉತ್ತರಗಳನ್ನು ಕಂಡುಕೊಳ್ಳಬಲ್ಲ ಅಷ್ಟಮಂಗಲ ಪ್ರಶ್ನೆಯನ್ನು ನೆರವೇರಿಸಲಾಗುತ್ತದೆ. ಅದು ಕೂಡ ಜ್ಯೋತಿರ್ವಿಜ್ಞಾನದ ಇನ್ನೊಂದು ಮುಂದುವರಿದ ಆಚರಣೆ.
ಇದನ್ನೂ ಓದಿ: ಮಳಲಿ ಮಸೀದಿ-ಮಂದಿರ ವಿವಾದ: ಕೇಶವ ಕೃಪಾದ ನಿರ್ಧಾರವೇ ಅಂತಿಮ ಎಂದು ಗೇಲಿ ಮಾಡಿದ ಕುಮಾರಸ್ವಾಮಿ