Site icon Vistara News

Ram Mandir: ಮಂದಿರ ಕನಸು ನನಸು; ಪೇಟ ತೊಟ್ಟು 500 ವರ್ಷಗಳ ಶಪಥ ಕೈಬಿಟ್ಟ ಠಾಕೂರರು!

Suryavanshi Thakurs

Who Are Suryavanshi Thakurs Of Ayodhya Who Mortgaged Turbans For Ram Mandir 500 Years Ago

ಅಯೋಧ್ಯೆ: ಜನವರಿ 22ರಂದು ರಾಮಮಂದಿರದ (Ram Mandir) ಗರ್ಭಗುಡಿಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ಮೂಲಕ ದೇಶದ ಕೋಟ್ಯಂತರ ಹಿಂದುಗಳ ಕನಸು ನನಸಾಗಲಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಮಮಂದಿರವನ್ನು ಉದ್ಘಾಟಿಸಲಿದ್ದಾರೆ. ಈಗ ರಾಮಮಂದಿರದ ಕನಸು ನನಸಾಗುತ್ತಿರುವ ಕಾರಣ ಲಕ್ಷಾಂತರ ಜನ ತಮ್ಮ ಶಪಥಗಳನ್ನು ಕೈಬಿಡುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಅಯೋಧ್ಯೆಯ ಸೂರ್ಯವಂಶಿ ಠಾಕೂರರು (Suryavanshi Thakurs) ರಾಮಮಂದಿರ ಕನಸು ನನಸಾಗುತ್ತಿರುವ ಕಾರಣ 500 ವರ್ಷಗಳ ಹಿಂದಿನ ಶಪಥವನ್ನು ಕೈಬಿಟ್ಟಿದ್ದಾರೆ.

ಹೌದು, ಅಯೋಧ್ಯೆ ಜಿಲ್ಲೆಯ ಸರೈರಸಿ ಗ್ರಾಮದ ಸೂರ್ಯವಂಶಿ ಠಾಕೂರರು 500 ವರ್ಷದ ಶಪಥವನ್ನು ಕೈಬಿಟ್ಟಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವವರೆಗೂ ಸಾಂಪ್ರದಾಯಿಕ ಪೇಟವನ್ನು (Turban) ಧರಿಸುವುದಿಲ್ಲ ಎಂದು ಇವರ ಪೂರ್ವಜರು ಶಪಥ ಮಾಡಿದ್ದರು. ಪೂರ್ವಜರ ಶಪಥವನ್ನು ಅವರ ನಂತರದ ಪೀಳಿಗೆಯವರು ಕೂಡ ನಿಷ್ಠೆಯಿಂದ ಪಾಲನೆ ಮಾಡಿಕೊಂಡಿದ್ದರು. ಆದರೀಗ, ರಾಮಮಂದಿರ ನಿರ್ಮಾಣವಾಗಿರುವ ಕಾರಣ ಸೂರ್ಯವಂಶಿ ಠಾಕೂರರು ರುಮಾಲು ಧರಿಸುವ ಮೂಲಕ ಶಪಥವನ್ನು ಕೈಬಿಟ್ಟಿದ್ದಾರೆ. ಇಡೀ ಕುಟುಂಬ ಈಗ ಸಂತಸದಲ್ಲಿ ತೇಲಾಡುತ್ತಿದೆ.

ಯಾರಿವರು ಸೂರ್ಯವಂಶಿ ಠಾಕೂರರು?

ರಜಪೂತರಲ್ಲಿ ಸೂರ್ಯವಂಶಿ ಹಾಗೂ ಚಂದ್ರವಂಶಿ ಎಂಬ ಎರಡು ವಿಭಾಗಗಳಿವೆ. ಸೂರ್ಯವಂಶಿ ಠಾಕೂರರು ಭಗವಾನ್‌ ರಾಮನ ವಂಶಸ್ಥರು ಎಂದು ನಂಬುತ್ತಾರೆ. ಇನ್ನು ಚಂದ್ರವಂಶಿ ಸಮುದಾಯದವರು ಮಹಾಭಾರತದ ಕೃಷ್ಣನ ವಂಶದವರು ಎಂಬ ನಂಬಿಕೆ ಇದೆ. ಈ ಸೂರ್ಯವಂಶಿ ಠಾಕೂರರು ರಾಮನ ಆರಾಧಕರಾಗಿದ್ದಾರೆ. ಅಯೋಧ್ಯೆಯ ಸರೈರಸಿ ಗ್ರಾಮದ ಠಾಕೂರರು ಕೂಡ ರಾಮನನ್ನು ಆರಾಧಿಸುತ್ತಾರೆ. ಇವರು ತಮ್ಮ ಪುರಾತನ ಸಂಪ್ರದಾಯದಂತೆ ರುಮಾಲು ಧರಿಸುತ್ತಾರೆ. ಆದರೆ, ರಾಮಮಂದಿರ ನಿರ್ಮಾಣ ಆಗುವವರೆಗೆ ರುಮಾಲು ಧರಿಸುವುದಿಲ್ಲ ಎಂದು ಇವರು ಶಪಥ ಕೈಗೊಂಡಿದ್ದರು. ಈಗ ಅವರ ಕನಸು ನನಸಾಗಿದೆ.

ಇದನ್ನೂ ಓದಿ: ರಾಮಮಂದಿರ ಧಾರ್ಮಿಕ ವಿಧಿವಿಧಾನಗಳಿಗೆ ಅನಿಲ್‌ ಮಿಶ್ರಾ ಪ್ರಧಾನ ಯಜಮಾನ; ಯಾರಿವರು?

ಅಯೋಧ್ಯೆಯಲ್ಲಿ ಹೈ ಸೆಕ್ಯುರಿಟಿ

ರಾಮಮಂದಿರ ಲೋಕಾರ್ಪಣೆಯ ದಿನ ಉತ್ತರ ಪ್ರದೇಶ ಪೊಲೀಸರು ಹಾಗೂ ಪ್ಯಾರಾ ಮಿಲಿಟರಿ ಸಿಬ್ಬಂದಿ ಸೇರಿ ಒಟ್ಟು 11 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಇದರ ಜತೆಗೆ ಹೆಚ್ಚಿನ ನಿಗಾ ಇರಿಸಲು, ಪ್ರತಿಯೊಂದು ಚಲನವಲನಗಳನ್ನು ಗಮನಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ. ರಾಮಮಂದಿರ ಆವರಣಕ್ಕೆ ಪದೇಪದೆ ಬರುವವರು, ಹಾಗೆ ಬರುವವರ ಚಲನವಲನ, ಯಾವುದೇ ಶಂಕಾಸ್ಪದ ವರ್ತನೆ ಕಂಡುಬಂದರೆ ಕೂಡಲೇ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಸ್ವಯಂಚಾಲಿತವಾಗಿ ಅಲರ್ಟ್‌ ನೀಡುತ್ತದೆ. ಅದರಂತೆ ಭದ್ರತಾ ಸಿಬ್ಬಂದಿಯು ಕಾರ್ಯಪ್ರವೃತ್ತರಾಗುತ್ತಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version