Site icon Vistara News

Navaratri: ನವರಾತ್ರಿಯ 9ನೇ ದಿನ ಆಯುಧ ಪೂಜೆ ಮಾಡುವುದೇಕೆ?

Ayudha Puja on the 9th day of Navratri

ನವರಾತ್ರಿಯ (Navaratri) ಒಂಬತ್ತನೇ ದಿನವಾದ ಮಹಾನವಮಿಯನ್ನು ಆಯುಧ ಪೂಜೆ ಎಂದೇ ಆಚರಿಸಲಾಗುತ್ತದೆ. ಜ್ಞಾನದೇವಿ ಸರಸ್ವತಿ, ಸಂಪತ್ತಿನ ದೇವಿ ಲಕ್ಷ್ಮಿ ಮತ್ತು ಶಕ್ತಿ ಸ್ವರೂಪಿಣಿ ಅಂಬಿಕೆಯ ಆರಾಧನೆಗಳ ಜೊತೆಗೆ, ಬದುಕಿನಲ್ಲಿ ಬೇಕಾಗುವ ಎಲ್ಲಾ ಉಪಕರಣಗಳನ್ನು ಅಯುಧಗಳೆಂದೇ ತಿಳಿದು ಪೂಜೆಸಲಾಗುತ್ತದೆ. ಅಡುಗೆಮನೆಯ ಚಾಕುವಿನಿಂದ ಹಿಡಿದು ದೇಶ ಕಾಯುವ ಬಂದೂಕಿನವರೆಗೆ, ರೈತರ ನೇಗಿಲಿಂದ ಹಿಡಿದು ಕುಶಲಕರ್ಮಿಗಳ ಉಪಕರಣಗಳವರೆಗೆ, ಪೆನ್ನಿನಿಂದ ಹಿಡಿದು ಕಂಪ್ಯೂಟರ್‌ವರೆಗೆ, ಮಕ್ಕಳ ಸೈಕಲ್‌ನಿಂದ ಹಿಡಿದು ಬೃಹತ್‌ ವಾಹನಗಳವರೆಗೆ ಎಲ್ಲವೂ ಮಹಾನವಮಿಯಂದು ಪೂಜಿಸಲ್ಪಡುತ್ತವೆ.

ಈ ಪೂಜೆಗೆ ಪೌರಾಣಿಕ ಹಿನ್ನೆಲೆ ಸಾಕಷ್ಟು ದೊಡ್ಡದೇ ಇದೆ. ದ್ವಾಪರ ಯುಗದಲ್ಲಿ, ಕೌರವರೊಂದಿಗೆ ದ್ಯೂತದಲ್ಲಿ ಸೋತ ಪಾಂಡವರು 12 ವರ್ಷಗಳ ವನವಾಸಕ್ಕೆ ಈಡಾಗುತ್ತಾರೆ. ಆನಂತರ ಒಂದು ವರ್ಷಗಳ ಅಜ್ಞಾತವಾಸವನ್ನೂ ಮಾಡಬೇಕಾಗುತ್ತದೆ. ಈ ಅಜ್ಞಾತದ ದಿನಗಳನ್ನು ಅವರು ಮತ್ಸ್ಯನಗರದ ವಿರಾಟರಾಯನ ಅರಮನೆಯಲ್ಲಿ ಕಳೆಯುತ್ತಾರೆ. ಅಲ್ಲಿಗೆ ಹೋಗುವ ಮುನ್ನ, ಎಲ್ಲರೂ ತಂತಮ್ಮ ಆಯುಧಗಳನ್ನು ಶಮಿ ವೃಕ್ಷದ ಮೇಲೆ ಗುಪ್ತವಾಗಿ ಇರಿಸಿರುತ್ತಾರೆ. ಆದರೆ ಅಜ್ಞಾತ ವಾಸದ ಕೊನೆಯಲ್ಲಿ ಕೌರವರು ವಿರಾಟರಾಯನ ಗೋವುಗಳನ್ನು ಕೌರವರು ಅಪಹರಿಸುತ್ತಾರೆ. ಅದನ್ನು ಬಿಡಿಸುವುದಕ್ಕಾಗಿ, ಕೌರವರೊಂದಿಗೆ ಯುದ್ಧ ಮಾಡುವುದಕ್ಕೆ ಶಮಿ ವೃಕ್ಷದ ಮೇಲಿರಿಸಿದ್ದ ಆಯುಧಗಳನ್ನು ಅರ್ಜುನ ಕೆಳಗಿಳಿಸುತ್ತಾನೆ; ಮರಳಿ ಗಾಂಢೀವವನ್ನು ಧರಿಸುತ್ತಾರೆ. ಅದರ ಪ್ರತೀಕವಾಗಿ ರಾಜರುಗಳು ಆಯುಧ ಪೂಜೆ ಮಾಡುವ ವಾಡಿಕೆ ಹುಟ್ಟಿಕೊಂಡಿತು.

ಶಮೀ ಹಂಚುವುದೇಕೆ?

ಸಂಪತ್ತು ಹೆಚ್ಚಾಗಲೆಂದು ಹಾರೈಸಿ ಈ ದಿನಗಳಲ್ಲಿ ಶಮೀ ವೃಕ್ಷ ಅಥವಾ ಬನ್ನಿ ಮರದ ಎಲೆಗಳನ್ನು ಬಂಧು-ಬಾಂಧವರಲ್ಲಿ ಹಂಚಿಕೊಳ್ಳುವ ಪದ್ಧತಿಯೂ ಇದೆ. ಈ ಕ್ರಮದ ಹಿಂದೊಂದು ಆಸಕ್ತಿಕರವಾದ ಪೌರಾಣಿಕ ಕಥೆಯಿದೆ. ತ್ರೇತಾಯುಗದಲ್ಲಿ ಅಯೋಧ್ಯೆಯಲ್ಲಿ ರಘು ರಾಜನಾಗಿ ಆಳುತ್ತಿದ್ದ ದಿನಗಳವು. ವರಂತನು ಎಂಬ ಗುರುವಿನಲ್ಲಿ ಕೌತ್ಸ ಎಂಬ ವಟುವು ವಿದ್ಯಾಭ್ಯಾಸ ಮಾಡುತ್ತಿದ್ದ. ಹಲವಾರು ವರ್ಷಗಳ ಕಲಿಕೆಯ ನಂತರ, ವಿದ್ಯಾಭ್ಯಾಸ ಮುಗಿದಿದ್ದಾಗಿ ಶಿಷ್ಯನಿಗೆ ಗುರುವು ತಿಳಿಸಿದ. ಹೊರಡುವ ಮುನ್ನ ತಮಗೆ ಗುರುದಕ್ಷಿಣೆಯಾಗಿ ಏನನ್ನು ನೀಡಬೇಕು ಎಂದು ಶಿಷ್ಯ ಕೇಳಿದ.

ಕಂಗಾಲಾದ ಶಿಷ್ಯ

ಹಾಗೆ ಯಾವುದೇ ನಿರೀಕ್ಷೆಯನ್ನು ಇರಿಸಿಕೊಳ್ಳದೇ ತಾನು ವಿದ್ಯೆಯನ್ನು ನೀಡಿದ್ದಾಗಿ ಹೇಳಿದ ಗುರುವು ದಕ್ಷಿಣೆಯನ್ನು ನಿರಾಕರಿಸುತ್ತಾನೆ. ಆದರೆ ಗುರುದಕ್ಷಿಣೆ ನೀಡದಿದ್ದರೆ ವಿದ್ಯೆ ದಕ್ಕುವುದಿಲ್ಲ ಎಂಬ ಮಾತಿದೆ, ಹಾಗಾಗಿ ತಾನು ಏನನ್ನಾದರೂ ಕೊಡಲೇಬೇಕು, ತಾವೂ ಸ್ವೀಕರಿಸಬೇಕು ಎಂದು ಶಿಷ್ಯ ಹಠ ಹಿಡಿಯುತ್ತಾನೆ. ಈತನನ್ನು ಪರೀಕ್ಷಿಸಬೇಕೆಂದು ನಿಶ್ಚಯಿಸಿದ ಗುರುವು, ತನಗೆ 14 ಸಾವಿರ ಬಂಗಾರದ ನಾಣ್ಯಗಳು ಬೇಕು ಎಂದು ತಿಳಿಸುತ್ತಾನೆ. ಇಂಥ ಭಾರೀ ದಕ್ಷಿಣೆಯ ನಿರೀಕ್ಷೆ ಇಲ್ಲದ ಶಿಷ್ಯ ಈಗ ಕಂಗಾಲಾಗುತ್ತಾನೆ. ಆದರೆ ತನ್ನದೇ ಒತ್ತಾಯದಿಂದ ಗುರುವಿನ ಬಾಯಲ್ಲಿ ದಕ್ಷಿಣೆಯೇನು ಎಂಬುದೀಗ ಬಂದಾಗಿದೆ. ಸಲ್ಲಿಸುವುದು ಶಿಷ್ಯನಾಗಿ ತನ್ನ ಕರ್ತವ್ಯ. ಆದರೆ ಅಷ್ಟೊಂದು ಸಂಪತ್ತು ಇಲ್ಲವಲ್ಲ ಎಂದು ಚಿಂತಿಸಿ ರಾಜಾ ರಘುವಿನ ಬಳಿಗೆ ತೆರಳುತ್ತಾನೆ. ಆದರೆ ಆಗಷ್ಟೇ ದೊಡ್ಡ ಯಾಗವನ್ನು ಮಾಡಿ, ಎಲ್ಲವನ್ನೂ ದಾನ ಮಾಡಿದ್ದ ರಘುವಿನಲ್ಲಿ ಅಷ್ಟೊಂದು ಸ್ವರ್ಣ ನಾಣ್ಯಗಳು ಇರುವುದಿಲ್ಲ.

14 ಸಾವಿರ ಬಂಗಾರದ ಎಲೆ

ತನಗೆ ಪ್ರಿಯವಾದ ಶಮೀ ವೃಕ್ಷದ ಕೆಳಗೆ ನಿಂತು ಕಾಯುವಂತೆ ಶಿಷ್ಯನಿಗೆ ರಾಜ ಸೂಚಿಸುತ್ತಾನೆ. ಸಂಪತ್ತಿನ ಅಧೀಶ ಕುಬೇರನನ್ನು ಪ್ರಾರ್ಥಿಸಿದ ರಾಜ ತನ್ನ ಬೇಡಿಕೆಯನ್ನು ಮುಂದಿಡುತ್ತಾನೆ. ಕುಬೇರ ಇದಕ್ಕೆ ಅಸ್ತು ಎನ್ನುತ್ತಾನೆ. ಶಮೀ ವೃಕ್ಷದ ಕೆಳಗೆ ಕಾಯುತ್ತಿದ್ದ ಕೌತ್ಸನಿಗೆ, ಗಾಳಿಯಲ್ಲಿ ತೂಗಿದ ಮರದಿಂದ ಒಂದೊಂದು ಎಲೆಗಳು ಉದುರುವುದು ಕಾಣಿಸುತ್ತವೆ. ನೋಡಿದರೆ ಅವು ಬಂಗಾರದ ಎಲೆಗಳು! ಹೀಗೆ ಉದುರಿದ ಎಲೆಗಳನ್ನೆಲ್ಲಾ ಸಂಗ್ರಹಿಸಿ, 14 ಸಾವಿರ ಎಲೆಗಳನ್ನು ಕೌತ್ಸ ತನ್ನ ಗುರುವಿಗೆ ಸಲ್ಲಿಸುತ್ತಾನೆ. ಈ ಹಿನ್ನೆಲೆಯಲ್ಲಿ ಸಂಪತ್ತು ವೃದ್ಧಿಯಾಗಲಿ ಎಂದು ಹಾರೈಸಿ ಶಮೀ ಅಥವಾ ಬನ್ನಿ ಮರದ ಎಲೆಗಳನ್ನು ಹಂಚುವ ಸಂಪ್ರದಾಯ ಬೆಳೆದಿದೆ.

ಇದನ್ನೂ ಓದಿ: Navaratri: ಇಲ್ಲಿವೆ, ನವದುರ್ಗೆಯರು ಅಸುರರನ್ನು ಕೊಂದ ಕುತೂಹಲಕರ ಕತೆಗಳು!

Exit mobile version