ಹಬ್ಬಗಳೆಂದರೆ ಪೂಜೆ, (Deepavali 2023) ಪುನಸ್ಕಾರ, ಪಾಯಸ, ಹೋಳಿಗೆಗಳು ಹೇಗೋ, ಕೆಲವು ಪದ್ಧತಿಗಳೂ ಹಾಗೆಯೆ. ಶಿವರಾತ್ರಿಯೆಂದರೆ ನೆನಪಾಗುವುದು ಜಾಗರಣೆ; ಯುಗಾದಿಯೆಂದರೆ ಬೇವು-ಬೆಲ್ಲ; ಹಾಗೆಯೇ ನರಕ ಚತುರ್ದಶಿ ಎಂದರೆ ಒಂದೊಳ್ಳೆಯ ಅಭ್ಯಂಜನ. ಹಿಂದಿನಿಂದ ಹಿಡಿದು ತೀರ ಇತ್ತೀಚಿನವರೆಗೂ ದೀಪಾವಳಿಯ ಚತುರ್ದಶಿಯಂದು ಅಭ್ಯಂಗ ಸ್ನಾನದ ಕ್ರಮ ಎಲ್ಲೆಡೆ ಪ್ರಚಲಿತದಲ್ಲಿದೆ. ಇನ್ನೇನು ಚಳಿಗಾಲ ಆರಂಭವಾಗುತ್ತದೆ ಎನ್ನುವ ಹೊತ್ತಿನಲ್ಲಿ ನಸುಕಿಗೆದ್ದು, ಹಿಂದಿನ ದಿನ ಹಂಡೆಯನ್ನು ತೊಳೆದು ಶುಚಿ ಮಾಡಿ ತುಂಬಿಸಿಟ್ಟಿದ್ದ ಬಿಸಿ ನೀರನ್ನು ಎರೆದುಕೊಳ್ಳುವ ಕ್ರಮ ಚಾಲ್ತಿಯಲ್ಲಿದೆ. ಇದಕ್ಕೂ ಮೊದಲೊಂದು ತೈಲ ಲೇಪನ ಆಗಬೇಕಲ್ಲ.
ಅಭ್ಯಂಗದಿಂದ ಆರೋಗ್ಯ ವೃದ್ಧಿ
ʻಅಭ್ಯಂಗಂ ಆಚರೇತ್ ನಿತ್ಯಂ ಸ ಜರಾಶ್ರಮ ವಾತಹಾ…ʼ ಎಂದು ಶ್ಲೋಕವೊಂದು ಹೇಳುತ್ತದೆ. ಅಂದರೆ ಅಭ್ಯಂಗವನ್ನು ನಿತ್ಯವೂ ಆಚರಿಸುವುದರಿಂದ ಮುಪ್ಪನ್ನು ಮುಂದೂಡಬಹುದು ಎನ್ನುವ ಅರ್ಥವಿಲ್ಲಿದೆ. ಮುಪ್ಪನ್ನು ತಡೆಯಲಂತೂ ಅಸಾಧ್ಯ. ಆದರೆ ಸರಿಯಾದ ಕ್ರಮದಲ್ಲಿ ಜೀವನವನ್ನು ಇರಿಸಿಕೊಂಡರೆ, ವಯಸ್ಸಾಗುವುದನ್ನು ಕೆಲಕಾಲ ಮುಂದೂಡಬಹುದು. ಅಂದರೆ ಕಾಲಕ್ರಮಣಿಕೆಯಲ್ಲಿ (ಕ್ರೊನೊಲಾಜಿಕಲ್) ಆಗುವ ಪ್ರಯಕ್ಕಿಂತ, ದೇಹದ ಕೋಶಗಳಿಗೆ (ಬಯಲಾಜಿಕಲ್) ಆಗುವ ಪ್ರಾಯ ಭಿನ್ನವೇ ಆಗಿರಬಹುದು. ಹುಟ್ಟಿದಾಗಿನಿಂದ ಈವರೆಗಿನ ಪ್ರಾಯದ ಕಾಲಮಾನವನ್ನು ಬದಲಿಸಲು ಸಾಧ್ಯವಿಲ್ಲ. ಆದರೆ ದೇಹದ ಕೋಶಗಳಿಗೆ ಆಗುವ ಪ್ರಾಯದಲ್ಲಿ ವ್ಯತ್ಯಾಸ ಇರಬಹುದು. ಇದನ್ನು ಅವಲಂಬಿಸಿಯೇ ನಮ್ಮ ಆರೋಗ್ಯ-ಅನಾರೋಗ್ಯ ನಿರ್ಧಾರವಾಗುವುದು.
ಹೀಗೆ ಮುಪ್ಪನ್ನು ಮುಂದೂಡುವ ಕೌಶಲ್ಯ ಅಭ್ಯಂಗಕ್ಕಿದೆ ಎನ್ನುತ್ತದೆ ಆಯುರ್ವೇದ ಶಾಸ್ತ್ರ. ಶರೀರದ ಸುಸ್ತು ನಿವಾರಣೆ ಮಾಡಿ, ವಾತರೋಗಗಳನ್ನೂ ನಿಯಂತ್ರಣಕ್ಕೆ ತರುತ್ತದೆ ಅಭ್ಯಂಗ. ಕಣ್ತುಂಬಾ ನಿದ್ದೆ, ಚರ್ಮಕ್ಕೆ ಕಾಂತಿ, ದೇಹಕ್ಕೆ ಬಲ, ದೃಷ್ಟಿಗೆ ರಕ್ಷಣೆ, ಮನಸ್ಸಿಗೆ ಶಾಂತಿ, ಒತ್ತಡ ನಿವಾರಣೆ, ಮನೋಲ್ಲಾಸ- ಇವೆಲ್ಲದರ ಫಲವಾಗಿ ದೀರ್ಘಾಯಸ್ಸು. ಜೊತೆಗೆ ದೇಹದೆಲ್ಲೆಡೆ ರಕ್ತ ಸಂಚಾರವೂ ಹೆಚ್ಚಿ, ಅಂಗಾಂಗಗಳ ಕ್ಷಮತೆ ವೃದ್ಧಿಸುತ್ತದೆ. ಎಣ್ಣೆ ಸ್ನಾನಕ್ಕೆ ಇದಕ್ಕಿಂತ ಬೇರೆ ಲಾಭ ಬೇಕೆ?
ಅಭ್ಯಂಗ ಸ್ನಾನ ಹಿನ್ನೆಲೆ ಏನು?
ಅದರಲ್ಲೂ ನರಕ ಚತುರ್ದಶಿಯಂದು ಅಭ್ಯಂಗ ಮಾಡುವ ಕ್ರಮಕ್ಕೆ ಸಾಕಷ್ಟು ಬಲವಾದ ಹಿನ್ನೆಲೆಯೇ ಇದೆ. ಶ್ರಮ ಜೀವಿಗಳಿಗೆ ಸುಗ್ಗಿ ಮುಗಿಯುವ ಸಮಯವಿದು. ಮೈಕೈಯೆಲ್ಲಾ ನೋವಾಗಿರುವ ಈ ಸಮಯದಲ್ಲಿ ದಿವಿನಾದ ಅಭ್ಯಂಗ ಸ್ನಾನವೊಂದು ಮೈಕೈ ನೋವನ್ನೆಲ್ಲಾ ನಿವಾರಿಸಬಲ್ಲದು. ಸೂಕ್ಷ್ಮ ತರಚು ಗಾಯಗಳು, ಚರ್ಮದ ತುರಿಕೆ ಇತ್ಯಾದಿಗಳನ್ನು ಶಮನ ಮಾಡಬಲ್ಲದು. ಮಳೆಗಾಲ ಈಗಷ್ಟೇ ಮುಗಿದಿರುವುದರಿಂದ, ಮೈಕೈ ನೋವಿನ ಸಮಸ್ಯೆಗಳನ್ನು ಈಗಲೇ ಕಡಿಮೆ ಮಾಡಿಕೊಳ್ಳುವುದು ಜಾಣತನ. ಇನ್ನು ಮುಂದಿರುವುದು ಚಳಿಗಾಲವಾದ್ದರಿಂದ, ದೇಹದ ಕೀಲುಗಳಿಗೆ, ಮಾಂಸಖಂಡಗಳಿಗೆ, ಚರ್ಮಕ್ಕೆ ಈ ಆರೈಕೆ ಅಗತ್ಯವಾಗಿ ಬೇಕು.
ಯಾವ ಎಣ್ಣೆ?
ಅಭ್ಯಂಗಕ್ಕೆ ಸಾಮಾನ್ಯವಾಗಿ ಎಳ್ಳೆಣ್ಣೆಯೇ ಶ್ರೇಷ್ಠ. ಕೊಬ್ಬರಿ ಎಣ್ಣೆಯನ್ನೂ ಬಳಸುವ ಕ್ರಮ ಕೆಲವೆಡೆಗಳಲ್ಲಿ ಇದೆ. ಎಳ್ಳೆಣ್ಣೆಯು ಪ್ರಬಲವಾದ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಜೀವಕೋಶಗಳಿಗೆ ಮುಪ್ಪಡರುವುದನ್ನು ತಡೆಯಲು ಇದು ಉತ್ತಮ ಮಾರ್ಗವಾಗಿದೆ. ಈ ಎಣ್ಣೆಯನ್ನು ನೇರವಾಗಿ ಬಿಸಿ ಮಾಡದೆ, ಬಿಸಿ ನೀರಿನಲ್ಲಿ ಇಟ್ಟು ಬೆಚ್ಚಗೆ ಮಾಡಬೇಕು. ಇದನ್ನು ಎದೆ, ಹೊಟ್ಟೆ, ಬೆನ್ನು ಹಾಗೂ ಕೀಲಿನ ಭಾಗಗಳಿಗೆ ವೃತ್ತಾಕಾರದಲ್ಲಿ ತಿಕ್ಕಬೇಕು. ಉಳಿದೆಡೆಗಳಲ್ಲಿ, ಚರ್ಮದ ಮೇಲಿನ ಕೂದಲು ಯಾವ ದಿಕ್ಕಿಗೆ ಇದೆಯೋ ಆ ದಿಕ್ಕೇ ನೀವಬೇಕು. ಉದಾ, ಕಾಲುಗಳಿಗೆ ಮೇಲಿಂದ ಕೆಳಗೆ ತಿಕ್ಕುವುದು ಸೂಕ್ತ. ತಲೆ, ಕಿವಿ ಮತ್ತು ಪಾದಗಳಿಗೆ ವಿಶೇಷವಾಗಿ ಎಣ್ಣೆ ಮಸಾಜ್ ಮಾಡುವುದು ಒಳ್ಳೆಯದು.
ಎಣ್ಣೆ ಹಾಕಿ ತಿಕ್ಕುವುದೆಂದರೆ ಬೆವರು ಕಿತ್ತು ಬರುವಂತಲ್ಲ, ನವಿರಾದ ಮರ್ದನವದು. ತಲೆಗೆ ಎಣ್ಣೆ ತಿಕ್ಕುವಾಗಲೂ ಕೂದಲ ಬುಡಗಳಿಗೆ ಲಘುವಾದ ಒತ್ತಡವನ್ನಷ್ಟೇ ಹಾಕಬೇಕು. ಕೂದಲು ಕಿತ್ತು ಬರುವಂತೆ ಉಜ್ಜುವುದಲ್ಲ. ಹಾಗೆಯೇ ಅಂಗಾಲಿಗೂ ನವಿರಾಗಿ ನೀವಿದರೆ ಸಾಕಾಗುತ್ತದೆ. ಹೀಗೆ ಎಣ್ಣೆ ಹಚ್ಚಿ ತಾಸುಗಟ್ಟಲೆ ಒಣಗಬೇಕೆಂದಿಲ್ಲ. 15 ನಿಮಿಷ ಬಿಟ್ಟು ಹದವಾದ ಬಿಸಿ ನೀರಲ್ಲಿ ಸ್ನಾನ ಮಾಡಿದರೆ, ಅಭ್ಯಂಗ ಪರಿಪೂರ್ಣ.
ಇದನ್ನೂ ಓದಿ: Deepavali 2023: ಭಾರತ ಮಾತ್ರವಲ್ಲ, ಈ ದೇಶಗಳಲ್ಲೂ ದೀಪಾವಳಿ ಸಂಭ್ರಮ ಜೋರು!
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ