ಹೈದರಾಬಾದ್: ವಾರಾಣಸಿಯ ಜ್ಞಾನವಾಪಿ ಮಸೀದಿ ಆವರಣದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂಬ ಸುದ್ದಿಯ ಬೆನ್ನಿಗೇ ರಾಜ್ಯದ ಎಲ್ಲ ಮಸೀದಿಗಳನ್ನು ಒಡೆದು ಅದರಲ್ಲಿ ಶಿವಲಿಂಗ ಕಂಡುಬಂದರೆ ಹಿಂದೂಗಳಿಗೆ ಹಸ್ತಾಂತರ ಮಾಡಲಾಗುವುದು ಎಂದು ತೆಲಂಗಾಣ ಬಿಜೆಪಿ ಅಧ್ಯಕ್ಷ ಹಾಗೂ ಸಂಸದ ಬಂಡಿ ಸಂಜಯ್ ಕುಮಾರ್ ಹೇಳಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಮದರಸಾಗಳು ಬಾಂಬ್ ಸ್ಫೋಟಕ್ಕೆ ತರಬೇತಿ ನೀಡುವ ತಾಣಗಳಾಗಿ ಪರಿವರ್ತನೆ ಹೊಂದಿವೆ ಎಂದು ಆರೋಪಿಸಿರುವ ತೆಲಂಗಾಣ ಬಿಜೆಪಿ ನಾಯಕ ಇವುಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರಿಗೆ ನೀಡಲಾಗಿರುವ ಎಲ್ಲ ಮೀಸಲಾತಿ ಸವಲತ್ತುಗಳನ್ನು ರದ್ದುಪಡಿಸಿ ಅದನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಇತರರಿಗೆ ಹಂಚಲಾಗುವುದು ಎಂದು ಹೇಳಿದ್ದಾರೆ ಸಂಜಯ್ ಕುಮಾರ್.
ಇದನ್ನೂ ಓದಿ| ಪಂಜಾಬಲ್ಲೂ ಮಂದಿರ-ಮಸೀದಿ ವಿವಾದ, ಮುಸ್ಲಿಂ ಸಮುದಾಯದಿಂದ ತೀವ್ರ ಆಕ್ಷೇಪ
ಲವ್ ಜಿಹಾದ್ ತಡೆಯುತ್ತೇವೆ
ಲವ್ ಜಿಹಾದ್ ವ್ಯೂಹದಲ್ಲಿ ನಮ್ಮ ಸಹೋದರಿಯರನ್ನು ಸಿಲುಕಿಸಿದರೆ, ಅವರಿಗೆ ಮೋಸ ಮಾಡಿದರೆ ನಾವು ಯಾವತ್ತೂ ಸುಮ್ಮನೆ ಕೂರಲ್ಲ. ಬಡವರು ತಮ್ಮ ಧರ್ಮ ಬದಲಾಯಿಸುವಂತೆ ಒತ್ತಡ ಹೇರಿದರೆ ಹಿಂದೂ ಸಮಾಜವೂ ಸಹಿಸಲ್ಲ, ಬಂಡಿ ಸಂಜಯ್ ಕುಮಾರ್ ಅಂತೂ ಸಹಿಸೋದೇ ಇಲ್ಲ ಎಂದಿರುವ ಸಂಜಯ್, ಲವ್ ಜಿಹಾದ್ ಮಾಡಿದರೆ ಲಾಠಿ ರುಚಿ ತೋರಿಸ್ತೀವಿ ಎಂದು ಗುಡುಗಿದ್ದಾರೆ. ಅವರು ಹನುಮಾನ್ ಜಯಂತಿ ಅಂಗವಾಗಿ ಕರೀಮ್ ನಗರದಲ್ಲಿ ಆಯೋಜಿಸಿದ ಹಿಂದೂ ಏಕ್ತಾ ಯಾತ್ರೆಯಲ್ಲಿ ಈ ರೀತಿ ಆವೇಶಭರಿತ ಭಾಷಣ ಮಾಡಿದರು.
ರಜಾಕರ್ ಫೈಲ್ಸ್ ತೆಗೀತೀವಿ
ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಉಲ್ಲೇಖಿಸಿದ ಸಂಜಯ್ ತೆಲಂಗಾಣದಲ್ಲಿ ರಜಾಕರ್ ಫೈಲ್ಸ್ ತೆರೆಯುವ ಕಾಲ ಬರಲಿದೆ ಎಂದರು. ನಿಜಾಮರ ಕಾಲದಲ್ಲಿ ಹಿಂದೂ ಸಮಾಜದ ಮೇಲೆ ನಡೆದಿರುವ ದೌರ್ಜನ್ಯದ ಕಥೆಗಳನ್ನು ನಾವು ಸುಳ್ಳು ಜಾತ್ಯತೀತವಾದಿಗಳಿಗೆ ತೋರಿಸಬೇಕಾಗಿದೆ ಎಂದು ಹೇಳಿದರು.
ಶಿವಲಿಂಗಕ್ಕೆ ಹುಡುಕ್ತೀವಿ
ಜ್ಞಾನವಾಪಿ ಮಸೀದಿ ಆವರಣದಲ್ಲಿ ನಡೆದ ಸರ್ವೆ ವೇಳೆ ಶಿವಲಿಂಗ ಪತ್ತೆಯಾಗಿದೆ ಎಂಬುದನ್ನು ಉಲ್ಲೇಖಿಸಿದ ಸಂಜಯ್, ತೆಲಂಗಾಣದಲ್ಲಿರುವ ಮಸೀದಿಗಳನ್ನು ಅಗೆದು ಅದರೊಳಗೆ ಶಿವಲಿಂಗ ಪತ್ತೆಯಾದರೆ, ಶಿವನಿಗೆ ಸಂಬಂಧಿಸಿದ ಏನಾದರೂ ವಿವರ ಸಿಕ್ಕರೆ ಪ್ರದೇಶವನ್ನು ಹಿಂದೂಗಳಿಗೆ ಹಸ್ತಾಂತರ ಮಾಡಲಾಗುವುದು ಎಂದು ಹೇಳಿದರು.
ಸಂಜಯ್ ಕುಮಾರ್ ಪ್ರಖರ ಹಿಂದೂವಾದಿಯಾಗಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ಕರೀಮ್ ನಗರ್ ಕ್ಷೇತ್ರದಿಂದ ಗೆದ್ದಿದ್ದರು. ಹಿಂದೆಯೂ ಹಲವು ಬಾರಿ ಆಕ್ಷೇಪಾರ್ಹ ಬೆಂಕಿ ಭಾಷಣಗಳ ಮೂಲಕ ಗಮನ ಸೆಳೆದಿದ್ದರು. ಇದನ್ನೂ ಓದಿ| ಜ್ಞಾನವಾಪಿ ಮಸೀದಿ: ಮುಂದಿನ ವಿಚಾರಣೆ ದಿನಾಂಕ ನಾಳೆ ಫಿಕ್ಸ್, ರದ್ದಾಗುತ್ತಾ ಪೂಜಾ ಸ್ಥಳಗಳ ಕಾಯಿದೆ?