ಹಾಸನ: ಒಂದು ವರ್ಷದ ಬಳಿಕ ಮತ್ತೆ ದರ್ಶನ ನೀಡುತ್ತಿರುವ ಹಾಸನದ ಶ್ರೀ ಹಾಸನಾಂಬೆ ದೇವಿ ಭಕ್ತರಲ್ಲಿ ವಿಶೇಷ ಅನುಭೂತಿಗಳನ್ನು ಸೃಷ್ಟಿಸುತ್ತಿರುವುದು ಕಂಡುಬರುತ್ತಿದೆ. ಹಾಸನಾಂಬೆ ದೇವಿಯನ್ನು ಕಾಣಲು ಎಲ್ಲೆಲ್ಲಿಂದಲೋ ಜನರು ಬರುತ್ತಿದ್ದಾರೆ. ಅಂಗಗಳ ವೈಕಲ್ಯವುಳ್ಳವರು, ರೋಗಿಗಳು ಕೂಡಾ ದೇವಿಯನ್ನು ಕಂಡು ಪುನೀತರಾಗುವ ಆಸೆ ವ್ಯಕ್ತಪಡಿಸುತ್ತಿರುವುದು ಕಾಣುತ್ತಿದೆ. ಇದೇ ಸಂದರ್ಭದಲ್ಲಿ ಕೆಲವರು ಭಾವಾವೇಶಕ್ಕೆ ಒಳಗಾಗುವುದೂ ಇದೆ.
ಮಂಗಳವಾರ ಅಂತಹುದೇ ಒಂದು ಘಟನೆ ನಡೆಯಿತು. ಹಾಸನಾಂಬೆ ದೇವಿ ದರ್ಶನಕ್ಕೆ ಬಂದಿದ್ದ ಮಹಿಳೆಯೊಬ್ಬರು ದೇವಸ್ಥಾನದ ಗರ್ಭಗುಡಿಯಲ್ಲಿ ವಿರಾಜಮಾನಳಾದ ದೇವಿಯನ್ನು ಕಾಣುತ್ತಿದ್ದಂತೆಯೇ ಒಮ್ಮೆಲೇ ಭಾವಾವೇಶಕ್ಕೆ ಒಳಗಾದರು. ಒಮ್ಮೆಲೇ ಕಿರುಚಾಡಿದ ಆಕೆ ದೇವರು ಮೈಮೇಲೆ ಬಂದಂತೆ ವರ್ತಿಸಿದರು.
ಸರತಿ ಸಾಲಿನಿಂದ ಏಕಾಏಕಿ ದೇವಿ ದರ್ಶನಕ್ಕೆ ನುಗ್ಗಿ ಬಂದಿದ್ದ ಅವರು ಹಾಸನಾಂಬೆ ದೇವಿ ಕಾಣುತ್ತಲೇ ಜೋರಾಗಿ ಕಿರುಚಿದರು. ಕೂಡಲೇ ಆಕೆಯ ಪತಿ ಮತ್ತು ಪೊಲೀಸರು ಆಕೆಯನ್ನು ಹಿಡಿದುಕೊಂಡರು. ಆದರೆ, ಆವೇಶಕ್ಕೆ ಒಳಗಾಗಿದ್ದಂತಿದ್ದ ಆಕೆಯನ್ನು ನಿಯಂತ್ರಿಸುವುದು ಕಷ್ಟವಾಯಿತು. ಬಳಿಕ ಹಣೆಗೆ ದೇವಿಯ ಕುಂಕುಮ ಹಚ್ಚುತ್ತಿದ್ದಂತೆಯೇ ಆಕೆ ಶಾಂತಳಾದಳು ಎಂದು ತಿಳಿದುಬಂದಿದೆ. ಬಳಿಕ ಪತಿ ಆಕೆಯನ್ನು ಕರೆದೊಯ್ದರು.
ಸಾಮಾನ್ಯವಾಗಿ ಅತೀವವಾಗ ಭಕ್ತಿ, ಭಾವಾವೇಶ ಇರುವವರಿಗೆ ದೇವಸ್ಥಾನದ ಅಂಗಳದಲ್ಲಿ, ದೇವರ ದರ್ಶನ, ಅಥವಾ ಮಂತ್ರ-ಘಂಟಾಘೋಷಗಳ ನಡುವೆ ಪೂಜೆ ನಡೆಯುವ ವೇಳೆ ಈ ರೀತಿ ಆಗುತ್ತದೆ. ನಂತರ ಸ್ವಲ್ಪ ಹೊತ್ತಿನಲ್ಲಿ ಅವರು ಸರಿ ಹೋಗುತ್ತಾರೆ. ಆದರೆ, ಈ ರೀತಿ ನಡೆಯುವಾಗ ಅವರಿಗೆ ಅವರ ಪರಿವೆ ಇಲ್ಲದೇ ಇರುವುದರಿಂದ ಅವರನ್ನು ಯಾರಾದರೂ ಹಿಡಿದುಕೊಳ್ಳುವುದು ಉತ್ತಮ ಎಂಬ ಅಭಿಪ್ರಾಯವಿದೆ.