Site icon Vistara News

ಅಯೋಧ್ಯೆಯ ರಾಮ ಮಂದಿರದ ಗರ್ಭ ಗೃಹಕ್ಕೆ ಜೂನ್‌ 1 ರಂದು ಸಿಎಂ ಯೋಗಿ ಆದಿತ್ಯನಾಥ್ ಶಿಲಾನ್ಯಾಸ

ram temple

ಲಖನೌ: ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿ ಎರಡು ವರ್ಷಗಳ ಬಳಿಕ, ದೇವಾಲಯದ ಗರ್ಭಗೃಹಕ್ಕೆ ಶಿಲಾನ್ಯಾಸವನ್ನು ಜೂನ್‌ 1 ರಂದು ಸಿಎಂ ಯೋಗಿ ಆದಿತ್ಯನಾಥ್‌ ಅವರು ನೆರವೇರಿಸಲಿದ್ದಾರೆ. ಮಂದಿರ ನಿರ್ಮಾಣದ ಸಲುವಾಗಿ ಕೆತ್ತಿರುವ ಮೊದಲ ಶಿಲೆಯನ್ನು ಅಳವಡಿಸಲಾಗುವುದು.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಹಿರಿಯ ಪದಾಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ ಗರ್ಭಗೃಹ ನಿರ್ಮಾಣದ ಕಾಮಗಾರಿ ಆರಂಭವಾಗಲಿದೆ. ಗರ್ಭಗೃಹದಲ್ಲಿ ರಾಮ ಲಲ್ಲಾ ಮತ್ತು ಸೋದರರಾದ ಲಕ್ಷ್ಮಣ, ಭರತ ಮತ್ತು ಶತ್ರುಘ್ನರ ವಿಗ್ರಹ ಪ್ರತಿಷ್ಠಾಪನೆಯಾಗಲಿದೆ. ದೇವಾಲಯದ ಅಡಿಪಾಯದ ಕಾಮಗಾರಿ ಪೂರ್ಣವಾಗಿದೆ. 11 ಮಂದಿ ಪುರೋಹಿತರು ಸರ್ವಾರ್ಥ ಸಿದ್ಧಿ ಯೋಗದ ದಿನವಾದ ಜೂನ್‌ 1ಕ್ಕೆ ಕೈಂಕರ್ಯಗಳನ್ನು ನೆರವೇರಿಸಲಿದ್ದಾರೆ. ಬೆಳಗ್ಗೆ 9 ಗಂಟೆಯಿಂದ 11 ಗಂಟೆಯ ತನಕ ಹೋಮ-ಹವನ ಮುಂತಾದ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ.

ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ 2023ರ ಡಿಸೆಂಬರ್‌ ಒಳಗಾಗಿ ರಾಮ ಮಂದಿರವನ್ನು ಪೂರ್ಣಗೊಳಿಸಲು ಕಾಲಮಿತಿಯನ್ನು ಅಂದಾಜಿಸಿದೆ. 2024ರ ಸಂಕ್ರಾಂತಿ ವೇಳೆಗೆ ರಾಮ ಲಲ್ಲಾನ ವಿಗ್ರಹ ಪ್ರತಿಷ್ಠಾಪನೆ ನಿರೀಕ್ಷಿಸಲಾಗಿದೆ. ಈ ಅಂದಾಜಿನ ಪ್ರಕಾರ, 2024 ರ ಹೈ ವೋಲ್ಟೇಜ್ ಸಾರ್ವತ್ರಿಕ ಚುನಾವಣೆಗೆ ಕೆಲ ತಿಂಗಳಿರುವಾಗ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ಅಸ್ತಿತ್ವಕ್ಕೆ ಬರಲಿದೆ. ಅಯೋಧ್ಯೆಯ ರಾಮ ಜನ್ಮಭೂಮಿ ಆಂದೋಲನದಲ್ಲಿ ಮುಂಚೂಣಿಯಲ್ಲಿದ್ದ ಬಿಜೆಪಿಗೆ ರಾಮ ಮಂದಿರ ನಿರ್ಮಾಣ ನೆರವೇರಿದಾಗ ಕೊಟ್ಟ ಭರವಸೆಯನ್ನು ಈಡೇರಿಸಿದಂತಾಗಲಿದೆ. ಸಾರ್ವತ್ರಿಕ ಚುನಾವಣೆ ವೇಳೆ ಇದು ಪಕ್ಷಕ್ಕೆ ವರದಾನವಾಗುವ ನಿರೀಕ್ಷೆ ಇದೆ.

ಸುಪ್ರೀಂಕೋರ್ಟ್‌ 2019ರ ನವೆಂಬರ್‌ ನಲ್ಲಿ ರಾಮ ಮಂದಿರದ ಪರವಾಗಿ ತೀರ್ಪು ನೀಡಿದ ಬಳಿಕ 5 ತಿಂಗಳೊಳಗೆ ದೇವಾಲಯ ನಿರ್ಮಾಣವಾಗುವ ಸ್ಥಳದ ಸಮೀಪ ತಾತ್ಕಾಲಿಕ ಮಂದಿರವನ್ನು 2020ರ ಮಾರ್ಚ್‌ನಲ್ಲಿ ನಿರ್ಮಿಸಲಾಗಿತ್ತು. ಯೋಗಿ ಆದಿತ್ಯನಾಥ್‌ ಅವರು ರಾಮಲಲ್ಲಾನ ವಿಗ್ರಹವನ್ನು ಈ ತಾತ್ಕಾಲಿಕ ಮಂದಿರಕ್ಕೆ ಕೊಂಡೊಯ್ದಿದ್ದರು. ಗರ್ಭಗೃಹದ ಜಾಗದಲ್ಲಿ ಕೇಸರಿ ಧ್ವಜವನ್ನು ಅಳವಡಿಸಲಾಗಿದೆ. ಎಂಜಿನಿಯರಿಂಗ್‌ ಕಾಮಗಾರಿ ನಡೆಯುವ ಸ್ಥಳದಲ್ಲಿ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿದೆ.

ದೇವಾಲಯ ನಿರ್ಮಾಣದಲ್ಲಿ ರಾಜಸ್ಥಾನದ ಮಕ್ರಾನಾದಿಂದ ಬಿಳಿ ಬಣ್ಣದ ಮಾರ್ಬಲ್‌ ಅನ್ನು ಬಳಸಲಾಗುತ್ತಿದೆ. ಪ್ರಧಾನವಾದ ಭಾಗವನ್ನು ರಾಜಸ್ಥಾನದ ಭಾರತ್‌ಪುರ್‌ ಜಿಲ್ಲೆಯ ಬನ್ಸಿ ಪಹಾರ್‌ ಪುರ್‌ ನಿಂದ ತರಿಸಿದ ಗುಲಾಬಿ ಬಣ್ಣದ ಶಿಲೆಯಲ್ಲಿ ನಿರ್ಮಿಸಲಾಗುತ್ತದೆ. ಈಗಾಗಲೇ ಕೆತ್ತಿರುವ 4.7 ಲಕ್ಷ ಕ್ಯೂಬಿಕ್‌ ಅಡಿಯಷ್ಟು ಕೆತ್ತಿರುವ ಕಲ್ಲುಗಳನ್ನು ದೇವಾಲಯ ಕಟ್ಟಲು ಬಳಸಲಾಗುತ್ತದೆ.

ಇಟ್ಟಿಗೆಗಳ ಬಳಕೆ

1990ರಲ್ಲಿ ದೇಶದ 3.5ಲಕ್ಷ ಗ್ರಾಮಗಳಿಂದ ರಾಮ ಶಿಲೆ ಗಳನ್ನು (ಇಟ್ಟಿಗೆಗಳು) ಸಂಗ್ರಹಿಸಲಾಗಿತ್ತು. ಇವುಗಳನ್ನೂ ದೇವಾಲಯ ನಿರ್ಮಾಣದಲ್ಲಿ ಬಳಸಲಾಗುತ್ತಿದೆ. ರಾಮ್‌ ಘಾಟ್‌ ಕಾರ್ಯಾಗಾರದಲ್ಲಿ ಈ ಇಟ್ಟಿಗೆಗಳನ್ನು ಇಡಲಾಗಿತ್ತು.

ರಾಮ ಮಂದಿರಕ್ಕೆ 2020ರ ಆಗಸ್ಟ್‌ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸವನ್ನು ನೆರವೇರಿಸಿದ್ದರು. ದೇವಾಲಯದ ಆವರಣದಲ್ಲಿ ಸೂರ್ಯ, ಗಣೇಶ, ಶಿವ, ದುರ್ಗಾ, ವಿಷ್ಣು ಮತ್ತು ಬ್ರಹ್ಮ ದೇವರ ದೇವಾಲಯಗಳೂ ನಿರ್ಮಾಣವಾಗಲಿದೆ.

ಭಾರತದ ಇತಿಹಾಸದಲ್ಲಿ ಅಯೋಧ್ಯೆಯ ರಾಮಮಂದಿರ ವಿವಾದಕ್ಕೆ ಸುದೀರ್ಘ ಇತಿಹಾಸ ಇದೆ. ರಾಮನ ಜನ್ಮಸ್ಥಳದಲ್ಲಿ, ಮೊಘಲರ ಆಳ್ವಿಕೆಯ ಕಾಲದಲ್ಲಿ (1528-29) ರಾಮ ಮಂದಿರವನ್ನು ಕೆಡಹಿ ಬಾಬ್ರಿ ಮಸೀದಿಯನ್ನು ನಿರ್ಮಿಸಲಾಯಿತು. ಅಲ್ಲಿಂದ ಶುರುವಾದ ವಿವಾದ ಇತ್ಯರ್ಥವಾಗಲು 5 ಶತಮಾನ ತಗುಲಿತು.

Exit mobile version