Site icon Vistara News

ಚೀನಾದಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ʼಸ್ಫೋಟಕʼ ಏರಿಕೆ, ಲಾಕ್‌ಡೌನ್

covid china

ಬೀಜಿಂಗ್:‌ ಚೀನಾದ ರಾಜಧಾನಿ ಬೀಜಿಂಗ್‌ನ ಒಂದು ಬಾರ್‌ನಿಂದ ಆರಂಭವಾಗಿರುವ ಹೊಸ ಕೋವಿಡ್‌ ಸೋಂಕುಗಳ ಕ್ಲಸ್ಟರ್‌, ಹೆಚ್ಚು ಸ್ಫೋಟಕವಾಗಿ ಹಬ್ಬುತ್ತಿದೆ ಎಂದು ಚೀನಾ ಸರ್ಕಾರ ಎಚ್ಚರಿಸಿದೆ.

ವಾಣಿಜ್ಯ ಕೇಂದ್ರ ಶಾಂಘಾಯ್‌ನಲ್ಲಿ ಕೂಡ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ಏರುತ್ತಿದ್ದು, ಸಾಮೂಹಿಕ ಪರೀಕ್ಷೆಯನ್ನು ಸರ್ಕಾರ ಪ್ರಾರಂಭಿಸಿದೆ.

ಗುರುವಾರದಿಂದ ಬೀಜಿಂಗ್‌ನಲ್ಲಿ ಕೆಲವು ಬಗೆಯ ಕೋವಿಡ್‌ ನಿರ್ಬಂಧಗಳನ್ನು ಮತ್ತೆ ವಿಧಿಸಲಾಗಿದೆ. ಚಾಯಾಂಗ್ ಸೇರಿದಂತೆ ಎರಡು ಜಿಲ್ಲೆಗಳಲ್ಲಿ ನೈಟ್‌ಲೈಫ್‌, ಶಾಪಿಂಗ್ ಮತ್ತು ರಾಯಭಾರ ಕಚೇರಿಗಳಿರುವ ರಸ್ತೆಗಳನ್ನು, ಮನರಂಜನಾ ಸ್ಥಳಗಳನ್ನು ಮುಚ್ಚಲಾಗಿದೆ. .

ಜಾಗತಿಕ ಮಾನದಂಡಗಳ ಪ್ರಕಾರ ಚೀನಾದ ಸೋಂಕಿನ ಪ್ರಮಾಣ ಕಡಿಮೆಯಿದ್ದರೂ, ಶೂನ್ಯ ಕೋವಿಡ್‌ ನೀತಿಯತ್ತ ಚೀನಾ ಶಿಸ್ತಿನ ಹೆಜ್ಜೆ ಇಟ್ಟಿದೆ. ಇಲ್ಲಿಯವರೆಗೆ 140 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಸಂಭವಿಸಿದ ಕೋವಿಡ್‌ ಸಾವುಗಳ ಅಧಿಕೃತ ಸಂಖ್ಯೆ 5,226 ಮಾತ್ರ.

ಬೀಜಿಂಗ್‌ನಲ್ಲಿ ಇತ್ತೀಚೆಗೆ ಹಬ್ಬುತ್ತಿರುವ ಪ್ರಕರಣಗಳು ಹೆವನ್ ಸೂಪರ್‌ಮಾರ್ಕೆಟ್ ಬಾರ್‌ಗೆ ತಳುಕು ಹಾಕಿಕೊಂಡಿವೆ. ಶುಕ್ರವಾರ ನಗರದಲ್ಲಿ ಪತ್ತೆಯಾದ ಎಲ್ಲಾ 61 ಹೊಸ ಪ್ರಕರಣಗಳು ಬಾರ್‌ಗೆ ಲಿಂಕ್‌ ಹೊಂದಿವೆ. ಇವುಗಳ ಹರಡುವಿಕೆಯ ವಿನ್ಯಾಸ ಹೆಚ್ಚು ಸ್ಫೋಟಕವಾಗಿದೆ. ಆದರೆ ಇದು ಹೊಸ ಮ್ಯುಟೇಶನ್‌ ಎಂದು ಹೇಳಲಾಗುವುದಿಲ್ಲ ಎಂದು ಬೀಜಿಂಗ್‌ ಆಡಳಿತಾಧಿಕಾರಿಗಳು ಹೇಳಿದ್ದಾರೆ.

ಏಪ್ರಿಲ್‌ನಲ್ಲಿ ವಿಧಿಸಲಾದ ಕೋವಿಡ್‌ ನಿರ್ಬಂಧಗಳನ್ನು ಎರಡು ವಾರಗಳ ಹಿಂದೆ ಸಡಿಲಿಸಲಾಗಿತ್ತು. ಈಗ ಮತ್ತೆ ರಾಜಧಾನಿಯ ಅನೇಕ ಭಾಗಗಳನ್ನು ಲಾಕ್‌ಡೌನ್‌ಗೆ ಒಳಪಡಿಸಲಾಗಿದೆ, ನಿವಾಸಿಗಳು ಮನೆಯಲ್ಲಿಯೇ ಇರಲು ಹೇಳಲಾಗಿದೆ. ಶಾಂಘಾಯ್‌ನ ಎಲ್ಲ ನಿವಾಸಿಗಳಿಗೂ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ.

ಒಟ್ಟಾರೆಯಾಗಿ ಚೀನಾದಲ್ಲಿ ಜೂನ್ 10ರಂದು 210 ಹೊಸ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ. ಒಟ್ಟಾರೆಯಾಗಿ ಚೀನಾದಲ್ಲಿ ಇದುವರೆಗಿನ ಸೋಂಕಿತರ ಸಂಖ್ಯೆ 2,24,659 ಆಗಿದೆ.

ಇದನ್ನೂ ಓದಿ: Covid alert | ರಾಜ್ಯದಲ್ಲಿ ಕೋವಿಡ್‌ ದಿಢೀರ್‌ ಏರಿಕೆ: ಮಾಸ್ಕ್‌ ಕಡ್ಡಾಯ, ಹಲವು ಕಠಿಣ ಕ್ರಮ ಘೋಷಣೆ

Exit mobile version