ಅಮೆರಿಕಾ: ಅತೀ ಅಪರೂಪದ ಅಮೆರಿಕಾದ 10 ಸಾವಿರ ಡಾಲರ್(ಭಾರತೀಯ ಕರೆನ್ಸಿ ಪ್ರಕಾರ ಸುಮಾರು 8 ಲಕ್ಷ ರೂ.) ಮುಖ ಬೆಲೆಯ ನೋಟೊಂದು ಹರಾಜಿನಲ್ಲಿ 480,000 ಡಾಲರ್(ಭಾರತೀಯ ಕರೆನ್ಸಿ ಪ್ರಕಾರ ಸುಮಾರು 3.9 ಕೋಟಿ ರೂ.)ಗೆ ಮಾರಾಟವಾಗಿ ಅಚ್ಚರಿ ಮೂಡಿಸಿದೆ. ಡಲ್ಲಾಸ್ ಮೂಲದ ಹರಾಜು ಕಂಪೆನಿ ಹೆರಿಟೇಜ್ ಆಕ್ಷನ್ಸ್(Heritage Auctions) ಭಾರೀ ಮೊತ್ತಕ್ಕೆ ಈ ನೋಟನ್ನು ಖರೀದಿಸಿದೆ. ಪೇಪರ್ ಮನಿ ಗ್ಯಾರಂಟಿ(PMG) ಈ ನೋಟನ್ನು ಪ್ರಮಾಣೀಕರಿಸಿದೆ.
1934ರಲ್ಲಿ ಫೆಡರಲ್ ರಿಸರ್ವ್ ಈ ನೋಟನ್ನು ವಿಶಿಷ್ಟ ಕಾಗದ ಬಳಸಿ ತಯಾರಿಸಿತ್ತು. ಈ ನೋಟಿನಲ್ಲಿ ಅಂದಿನ ಅಮೆರಿಕಾ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರ ಖಜಾನೆ ಕಾರ್ಯದರ್ಶಿ ಸಾಲ್ಮನ್ ಪಿ. ಚೇಸ್ ಅವರ ಚಿತ್ರವಿದೆ. ಈ ನೋಟು ಮಹಾ ಆರ್ಥಿಕ ಹಿಂಜರಿತ ಕಾಲಕ್ಕೆ(Great Depression)ಸೇರಿದ್ದು ಎನ್ನುವುದು ವಿಶೇಷ.
ಹೆರಿಟೇಜ್ ಆಕ್ಷನ್ಸ್ ಕಂಪೆನಿಯ ಉಪಾಧ್ಯಕ್ಷ ಡಸ್ಟಿನ್ ಜಾನ್‌ಸ್ಟನ್ ಮಾತನಾಡಿ, “ದೊಡ್ಡ ಮುಖಬೆಲೆಯ ನೋಟುಗಳು ಯಾವಾಗಲೂ ಎಲ್ಲಾ ಹಂತದ ಸಂಗ್ರಾಹಕರ ಗಮನ ಸೆಳೆಯುತ್ತವೆ” ಎಂದಿದ್ದಾರೆ. ಸದ್ಯ ಈ ನೋಟು ಆಕರ್ಷಣೆಯ ಕೇಂದ್ರಬಿಂದು ಆಗಲಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
1934ರ 10,000 ಡಾಲರ್ ನೋಟು ಈ ಹಿಂದೆ 2020ರ ಸೆಪ್ಟೆಂಬರ್ ನಲ್ಲಿ 384,000 ಡಾಲರ್(ಭಾರತೀಯ ಕರೆನ್ಸಿ ಪ್ರಕಾರ ಸುಮಾರು 3 ಕೋಟಿ ರೂ.) ಮೊತ್ತಕ್ಕೆ ಮಾರಾಟವಾಗಿತ್ತು ಎಂದು ಹರಾಜು ಸಂಸ್ಥೆಯ ವಕ್ತಾರರು ಹೇಳಿದ್ದಾರೆ. ಆದಾಗ್ಯೂ, ಹೆರಿಟೇಜ್ ಆಕ್ಷನ್ಸ್ ಪ್ರಕಾರ, ಹರಾಜು ಮಾಡಲಾದ ಈ ನಿರ್ದಿಷ್ಟ ನೋಟು ಎಂದಿಗೂ ಚಲಾವಣೆಯಲ್ಲಿರಲಿಲ್ಲ.
ಇದನ್ನೂ ಓದಿ: Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?
ಬ್ಯಾಂಕ್‌ಗಳ ವ್ಯವಹಾರಗಳಿಗೆ ಬಳಕೆ
ಮ್ಯೂಸಿಯಂ ಆಫ್ ಅಮೆರಿಕನ್ ಫೈನಾನ್ಸ್ ಪ್ರಕಾರ, 10,000 ಡಾಲರ್ ನೋಟು, ಸಾರ್ವಜನಿಕವಾಗಿ ಚಲಾವಣೆಯಾದ ಅತಿ ಹೆಚ್ಚು ಮೌಲ್ಯದ ಯುಎಸ್ ಕರೆನ್ಸಿಯಾಗಿದೆ. ವುಡ್ರೊ ವಿಲ್ಸನ್ ಅವರ ಭಾವಚಿತ್ರವನ್ನು ಹೊಂದಿರುವ 100,000 ಡಾಲರ್ ನೋಟು ಅನ್ನು ಮುದ್ರಿಸಲಾಗಿದ್ದರೂ, ಇದು ದೈನಂದಿನ ವಹಿವಾಟುಗಳಲ್ಲಿ ಬಳಸುವ ಬದಲು ಫೆಡರಲ್ ರಿಸರ್ವ್ ಬ್ಯಾಂಕ್‌ಗಳ ನಡುವೆ ಹಣವನ್ನು ವರ್ಗಾಯಿಸುವ ಉದ್ದೇಶ ಹೊಂದಿತ್ತು. 100 ಡಾಲರ್ ನೋಟು 1969ರಿಂದೀಚೆಗೆ ಅಮೆರಿಕದಲ್ಲಿ ಮುದ್ರಿಸಲಾದ ಅತಿ ದೊಡ್ಡ ನೋಟು ಎನಿಸಿಕೊಂಡಿದೆ. ಬಳಕೆಯ ಕೊರತೆಯಿಂದಾಗಿ 1969ರಲ್ಲಿ 500 ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಕರೆನ್ಸಿ ನೋಟುಗಳ ಮುದ್ರಣಗಳನ್ನು ನಿಲ್ಲಿಸಲಾಗಿತ್ತು.
ಭಾರೀ ಮೊತ್ತಕ್ಕೆ ಮಾರಾಟವಾದ ಚಿನ್ನದ ನಾಣ್ಯ
ಇದೇ ವೇಳೆ ಅಪರೂಪದ 1899ರ 20 ಡಾಲರ್ ಚಿನ್ನದ ನಾಣ್ಯ ಗುರುವಾರ ನಡೆದ ಹರಾಜಿನಲ್ಲಿ ಇದು 468,000 ( ಭಾರತೀಯ ಕರೆನ್ಸಿ ಪ್ರಕಾರ ಸುಮಾರು 3.89 ಕೋಟಿ ರೂ.) ಮೌಲ್ಯಕ್ಕೆ ಮಾರಾಟವಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಈ ರೀತಿಯ 84 ನಾಣ್ಯಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದ್ದು, ಕೇವಲ 30 ನಾಣ್ಯಗಳು ಮಾತ್ರ ಇನ್ನೂ ಚಲಾವಣೆಯಲ್ಲಿವೆ ಎಂದು ಹರಾಜು ಸಂಸ್ಥೆ ತಿಳಿಸಿದೆ.