* ರಾಧಿಕಾ ವಿಟ್ಲ
೧೦೫ ದಿನಗಳ ಕಾಲ ತಾಲಿಬಾನಿಗರ ಹಿಡಿತದಲ್ಲಿದ್ದು ಈಗಷ್ಟೇ ಹೊರಬಂದ ಮಾನವತಾವಾದಿ ಸಫಿ ರೌಫ್ ಅವರು ತಮ್ಮ ತಾಲಿಬಾನಿನ ದಿನಗಳನ್ನು ಟೆಡ್ ಟಾಕ್‌ನಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಮೂಲತಃ ಅಫ್ಘನ್ ನಿರಾಶ್ರಿತರಾಗಿ ಸದ್ಯ ಅಮೆರಿಕದಲ್ಲಿ ನೆಲೆಸಿರುವ ಅಫ್ಘನ್ ಅಮೆರಿಕನ್ ಸಫಿ, ತಾಲಿಬಾನಿಗರ ಮುಷ್ಟಿಯಿಂದ ಹೊರಬಂದಿದ್ದು ತನ್ನ ಅದೃಷ್ಟ ಎಂದಿದ್ದಾರೆ. ತನ್ನ ಬಿಡುಗಡೆಗೆ ಶ್ರಮಿಸಿದ ಅಮೆರಿಕ ಸರ್ಕಾರಕ್ಕೂ ಧನ್ಯವಾದ ಅರ್ಪಿಸಿದ್ದಾರೆ. ಸಫಿ ಅವರು ತಮ್ಮ ಸೇವೆಗೆ ೨೦೨೧ ವಾಷಿಂಗ್ಟನೇನಿಯನ್ ಆಫ್ ದಿ ಈಯರ್ ಪ್ರಶಸ್ತಿಗೂ ಭಾಜನರಾಗಿದ್ದು, ʻಹ್ಯೂಮನ್ ಫಸ್ಟ್ ಕೊಯಲಿಷನ್ʼ ಎಂಬ ಸಂಸ್ಥೆಯ ಮೂಲಕ ಅಫ್ಘನ್ ನಿರಾಶ್ರಿತರ ಪರವಾಗಿ ಕೆಲಸ ಮಾಡುತ್ತಿದ್ದಾರೆ.
28ರ ಹರೆಯದ ಸಫ್ ಬಿಚ್ಚಿಟ್ಟ ಅನುಭವಗಳನ್ನು ಅವರ ಮಾತುಗಳಲ್ಲೇ ಕೇಳಿ:
“ನನಗಾಗ ಐದು ವರ್ಷವಷ್ಟೆ. ಪಾಕಿಸ್ತಾನದ ಪೇಶಾವರದ ಶಿಬಿರದಲ್ಲಿ ಅಫ್ಘನ್ ನಿರಾಶ್ರಿತನಾಗಿಬಿಟ್ಟಿದ್ದೆ. ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿ ತಂದು ಕೊಡುವ ಬಟ್ಟೆಗಳನ್ನು ಹಾಕಿಕೊಂಡು, ಅದರಲ್ಲಿರುವ ಅಮೆರಿಕದ ಲಾಂಛನದ ಗುರುತನ್ನು ನೋಡಿ ಅಮೆರಿಕದ ಕನಸು ಕಾಣುತ್ತಿದ್ದೆ. ನಿರಾಶ್ರಿತನಾಗಿದ್ದಿದರಿಂದ ಆಗ ನನ್ನದು ಎಂದು ಹೇಳಿಕೊಳ್ಳಲು ನನಗಾವ ದೇಶವೂ ಇರಲಿಲ್ಲ. ಹಾಗೆಯೇ ಯಾವ ಹಕ್ಕುಗಳೂ ಇರಲಿಲ್ಲ. ಹಕ್ಕುಗಳೇ ಇಲ್ಲದಿದ್ದ ಮೇಲೆ ಸ್ವರವಾದರೂ ಎಲ್ಲಿದ್ದೀತು? ನನಗಾಗ ನನ್ನ ಪರವಾಗಿ ನನ್ನ ಜೊತೆಗೆ ಗಟ್ಟಿಯಾಗಿ ನಿಲ್ಲಬಹುದಾದ ಜೀವದ ಅಗತ್ಯವಿತ್ತು ಅಷ್ಟೇ.
ಪುಣ್ಯಕ್ಕೆ ನನಗೆ ಅಗತ್ಯವಾಗಿ ಬೇಕಿದ್ದ ಇಂಥ ಬೆಂಬಲ ನನ್ನ ಹೆತ್ತವರಿಂದ ಸಿಕ್ಕಿತ್ತು. ಅವರು ನನಗಿಂತ ನಾಲ್ಕು ವರ್ಷ ಮೊದಲೇ ಅಮೆರಿಕದ ಕನಸು ನನಸಾಗಿಸಿಕೊಂಡರು. ನನ್ನನ್ನೂ ಅವರ ಜೊತೆ ಕರೆದುಕೊಂಡು ಹೋಗಲು ರಾತ್ರಿ ಹಗಲು ಶತಾಯಗತಾಯ ಪ್ರಯತ್ನಿಸಿದರು. ಕೊನೆಗೂ ನಾಲ್ಕು ವರ್ಷಗಳ ನಂತರ ಅವರ ಪ್ರಯತ್ನಕ್ಕೆ ಫಲ ಸಿಕ್ಕಿತ್ತು. ಪೇಶಾವರದ ನಿರಾಶ್ರಿತರ ಶಿಬಿರದಿಂದ ನಾನು ಅಮೆರಿಕಾಗೆ ಹಾರಿದೆ. ಇದು ನನ್ನ ಜೀವನವನ್ನೇ ಬದಲಿಸಿತು.
ನಿಜವಾಗಿ ನೋಡಿದರೆ ನನ್ನ ಕನಸುಗಳೆಲ್ಲವೂ ನನಸಾಗಿದೆ. ಆಸೆಪಟ್ಟಿದ್ದು, ಅಂದುಕೊಂಡದ್ದನ್ನು ಮಾಡಲು ಪ್ರಯತ್ನಿಸಿ ಸಫಲತೆಯನ್ನೂ ಸಾಧಿಸಿದ್ದೇನೆ. ಅಲ್ಲಿಯೇ ವೈದ್ಯನಾಗಬೇಕೆಂದು ಮೆಡಿಕಲ್ ಸ್ಕೂಲ್ ದಾಖಲಾದರೂ ಮದ್ಯದಲ್ಲೇ ಅದಕ್ಕೊಂದು ಬ್ರೇಕ್ ಕೊಟ್ಟು, ʻಹ್ಯೂಮನ್ ಫಸ್ಟ್ ಕೊಯಲಿಶನ್ʼ ಎಂದ ಸಂಸ್ಥೆಯೊಂದನ್ನು ಹುಟ್ಟುಹಾಕಿದೆ. ಇದು ಅಫ್ಘಾನೀಯರಿಗೆ ನೆರವಿನ ಹಸ್ತ ಚಾಚುವ ಸಂಸ್ಥೆ.
ಇದನ್ನೂ ಓದಿ | Life tips: ಅಂದುಕೊಂಡದ್ದನ್ನು ಮಾಡಲಾಗದಿದ್ದರೆ ನೀವು ಹೀಗಿದ್ದೀರಿ!
ನನ್ನ ಬದುಕಿನ ಸುಮಾರು ೧೭ ವರ್ಷಗಳ ಕಾಲ ನಿರಾಶ್ರಿತನಾಗಿ ದೇಶವಿಲ್ಲದೆ ಕಳೆದ ನಾನು, ನನ್ನಂಥವರ ಪರವಾಗಿ ದುಡಿಯಬೇಕೆಂದು ನನ್ನ ಆತ್ಮಸಾಕ್ಷಿ ಪ್ರೇರೇಪಿಸುತ್ತಿತ್ತು. ಅದಕ್ಕಾಗಿಯೇ ವೈದ್ಯ ಶಿಕ್ಷಣ ಅರ್ಧಕ್ಕೇ ಬಿಟ್ಟು ಈ ಕೆಲಸಕ್ಕೆ ಧುಮುಕಿದೆ. ನನ್ನ ಹಾಗೆ ಮೊದಲು ಧ್ವನಿಯಿಲ್ಲದೆ ಕೂತವರಿಗೆ ಧ್ವನಿಯಾಗಬೇಕೆಂದು ಹೊರಟೆ. ಅವರಿಗೆ ಆಹಾರ, ಔಷಧಿ, ಆಸರೆ ಎಲ್ಲವನ್ನೂ ಕೊಡಿಸಿದೆ. ಈ ಉದ್ದೇಶದಿಂದ ಹಲವಾರು ಬಾರಿ ಕಾಬೂಲ್‌ಗೆ ಬಂದು ಹೋಗಿ ಮಾಡುತ್ತಿದ್ದೆ. ಇದಕ್ಕೆ ಆಗೆಲ್ಲ ತಾಲಿಬಾನಿನ ಆಶೀರ್ವಾದವೂ ಇತ್ತು.
೨೦೨೧ ಡಿಸೆಂಬರ್‌ವರೆಗೆ ಎಲ್ಲವೂ ಸರಿಯಾಗಿತ್ತು. ಡಿಸೆಂಬರ್ ೧೮, ೨೦೨೧ರಂದು ಬೆಳಗ್ಗೆ ನನ್ನನ್ನು ಇದ್ದಕ್ಕಿದ್ದಂತೆ ತಾಲೀಬಾನಿಗಳು ತಮ್ಮ ವಶಕ್ಕೆ ಪಡೆದರು. ತಾಲೀಬಾನಿನ ಪ್ರಧಾನ ನಿರ್ದೇಶಕರೊಬ್ಬರು ಮುಖ್ಯ ಕಚೇರಿಯ ಕಡೆಗೆ ಕರೆದೊಯ್ಯಲಾಗುತ್ತಿದೆ ಅನ್ನೋದು ಬಿಟ್ಟರೆ ನನಗೇನು ನಡೆಯುತ್ತಿದೆ ಅರ್ಥವಾಗಲಿಲ್ಲ.
ಕೆಲವು ಪ್ರಶ್ನೆಗಳಿಗೆ ಉತ್ತರ ಪಡೆದು ನಾನು ತಂಗಿದ್ದ ಹೋಟೆಲ್‌ಗೆ ಬಿಟ್ಟುಬಿಡಲಾಗುವುದು ಎಂದು ಹೇಳಿದರೂ ಕೆಲವು ಗಂಟೆಗಳ ನಂತರ ನನ್ನನ್ನು ಕೆಳಮಹಿಡಿಯ ಕೋಣೆಯೊಂದಕ್ಕೆ ತಳ್ಳಿದರು. ನನ್ನಂತೆ ಅಲ್ಲಿ ಕೂತಿದ್ದ ಮೂವರ ಜೊತೆಗೆ ಕೋಣೆ ಹಂಚಿಕೊಂಡು, ದಿಂಬು, ಹೊದಿಕೆಗಳಿಲ್ಲದೆ, ಕನಿಷ್ಟ ಸೂರ್ಯನ ಬೆಳಕೂ ಕಾಣದ ಆ ಕತ್ತಲೆ ಕೋಣೆಯಲ್ಲಿ ಬಿದ್ದಿರಬೇಕಾಗಿತ್ತು. ಹೊರಜಗತ್ತಿನ ಸಂಪರ್ಕವೇ ಇಲ್ಲದ ಆ ಕೋಣೆಯಲ್ಲಿ ಥರಗುಟ್ಟುವ ಅಫ್ಘನ್ ಚಳಿಯಲ್ಲಿ ೧೦೫ ದಿನ ಬದುಕಿದೆ!
ಈ ೧೦೫ ದಿನಗಳಲ್ಲಿ ಪ್ರತಿದಿನವೂ ಯಾವುದೇ ಕ್ಷಣದಲ್ಲೂ ನನ್ನನ್ಜು ಮೇಲೆ ಕರೆದುಕೊಂಡು ಹೋಗಿ ಗುಂಡಿಕ್ಕಬಹುದು ಎಂಬ ಭಯ ಕಾಡುತ್ತಲೇ ಇತ್ತು. ನಾನು ಯಾವುದೇ ತಪ್ಪು ಮಾಡದಿದ್ದರೂ ಎಂಟು ದಿನ ಉಪವಾಸ ಮುಷ್ಕರ ಮಾಡಿದ ನನ್ನನ್ನು ೪೫ನೇ ದಿನ ಹಿಗ್ಗಾಮುಗ್ಗ ಥಳಿಸಿ ಚಿತ್ರಹಿಂಸೆ ಕೊಡಲಾಯ್ತು. ಆದರೂ ನಾನು ಅದೃಷ್ಟವಂತನೇ ಅನ್ನೋದು ಸಾಬೀತಾಯ್ತು.
ನನಗೆ ಬೆಂಬಲಿಗರು ಅನೇಕ ಮಂದಿ ಇದ್ದರೂ, ನನಗೆ ನನ್ನದು ಅನ್ನುವ ದೇಶವಿತ್ತು. ಅಮೆರಿಕ ಸರ್ಕಾರ ನನ್ನ ರಕ್ಷಣೆಗೆ ಮುಂದಾಯಿತು. ನನ್ನ ನೋವಿಗೆ ನನ್ನ ಹಕ್ಕುಗಳಿಗೆ ಧ್ವನಿಯಾಯಿತು. ಅಂತಿಮವಾಗಿ ಇತ್ತೀಚೆಗಷ್ಟೆ ನಾನು ಹೊರಬಂದೆ” ಎಂದು ತನ್ನ ಕತೆಯನ್ನು ಬಿಚ್ಚಿಟ್ಟಿದ್ದಾರೆ.
ಬಿಡುಗಡೆ ಕ್ಷಣಗಳನ್ನು ಮೆಲುಕು ಹಾಕುತ್ತಾ, “ನನ್ನ ಬಿಡುಗಡೆಯ ದಿನದ ಸಂಭ್ರಮವನ್ನು ಪದಗಳಲ್ಲಿ ವಿವರಿಸಲಾರೆ. ನಾನು ೧೦೫ ದಿನಗಳ ನಂತರ ಆ ಕತ್ತಲ ಕೋಣೆಯಿಂದ ಹೊರಬಂದು ಬೆಳಕು ನೋಡಿದ್ದೇ ಒಂದು ಅಮೋಘ ಅನುಭವ. ನಾನು ಆಕಾಶ ನೋಡಿದ್ದೆ. ಆ ಜೈಲಿನಿಂದ ಹೊರಬಂದು ಕಾರು ಹತ್ತಿ ಕಾಬೂಲ್ ನಗರದ ಹಾದಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ವಿಮಾನ ಹತ್ತುವಾಗ ಸಿಕ್ಕಾಗಿನ ಸ್ವಾತಂತ್ರ್ಯವನ್ನು ಪದಗಳಲ್ಲಿ ಹಿಡಿದಿಡುವುದು ಕಷ್ಟ.
ಆದರೆ ಖಂಡಿತ ನಾನೊಬ್ಬ ಅದೃಷ್ಟವಂತ ಅನಿಸುತ್ತಿದೆ. ನನಗೀಗ ಮತ್ತೆ ಧ್ವನಿ ಸಿಕ್ಕಿದೆ. ನಾನೀಗ ಮತ್ತೆ ನನ್ನ ಕೆಲಸಕ್ಕೆ ಮರಳಬಹುದು. ಯಾಕೆಂದರೆ ಅಲ್ಲಿವ ವಾಸ್ತವದ ಇನ್ನೂ ಸ್ಪಷ್ಟ ಕಲ್ಪನೆ ನನಗೆ ಸಿಕ್ಕಿದೆ. ದನಿಯಿಲ್ಲದವರಿಗೆ ದನಿಯಾಗಿ, ನಿರಾಶ್ರಿತರಿಗೆ ಶಾಶ್ವತ ಮನೆ ಸಿಗುವತ್ತ ನಾನೀಗ ಕೆಲಸ ಮಾಡಬೇಕಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ | Adventures Overland | ಬಸ್ಸಲ್ಲಿ ಊರಿಗ್ಯಾಕೆ ಹೋಗುವಿರಿ? ಲಂಡನ್ನಿಗೇ ಹೋಗಿ!