ಕೊಲೊಂಬೊ: ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸ ಶುಕ್ರವಾರ ವಿಶೇಷ ಗೆಜೆಟ್ ಮೂಲಕ ಸಾರ್ವಜನಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.
ಸಾರ್ವಜನಿಕರ ಭದ್ರತೆ, ಸಾರ್ವಜನಿಕ ಆದೇಶ ರಕ್ಷಣೆ ಮತ್ತು ಜನರಿಗೆ ಅಗತ್ಯ ಸೇವೆಗಳನ್ನು ಪೂರೈಸುವ ನಿಟ್ಟಿನಲ್ಲಿ ತಕ್ಷಣಕ್ಕೆ ಕ್ರಮ ಕೈಗೊಳ್ಳಲು ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಲಾಗಿದೆ ಎಂದು ಶ್ರೀಲಂಕಾದ ಮಾಧ್ಯಮಗಳು ವರದಿ ಮಾಡಿವೆ.
ಶ್ರೀಲಂಕಾದ ಅಧ್ಯಕ್ಷರು ಕಾಯ್ದೆಯ ಮೂಲಕ ತಿದ್ದುಪಡಿ ಮಾಡಿದಂತೆ ಸಾರ್ವಜನಿಕ ಭದ್ರತಾ ಸುಗ್ರೀವಾಜ್ಞೆ ಅಧಿಕಾರದ ಅಡಿಯಲ್ಲಿ ಗೆಜೆಟ್ ಅನ್ನು ಬಿಡುಗಡೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. 1959ರ ಸಂ. 8. 1978ರ ಕಾನೂನು ಸಂಖ್ಯೆ 6 ಮತ್ತು 1988ರ ಆಕ್ಟ್, ನಂ.28 ರಡಿಯಲ್ಲಿ ಗೆಜೆಟ್ ಹೊರಡಿಸಲಾಗಿದೆ. ಇದಲ್ಲದೆ, ಶ್ರೀಲಂಕಾ ಪಶ್ಚಿಮ ಪ್ರಾಂತ್ಯದಲ್ಲಿ ಆರು ಗಂಟೆಗಳ ಕಾಲ ಪೊಲೀಸ್ ಕರ್ಫ್ಯೂ ವಿಧಿಸಲಾಗಿದೆ.
ಶ್ರೀಲಂಕಾದಲ್ಲಿ ತೀವ್ರಗೊಂಡಿರುವ ಆರ್ಥಿಕ ಬಿಕ್ಕಟ್ಟನ್ನು ಬಗೆಹರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಅಲ್ಲಿನ ಜನ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಮಿರಿಹಾನದಲ್ಲಿರುವ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರ ನಿವಾಸದ ಹೊರಗೆ ಶುಕ್ರವಾರ ಪ್ರತಿಭಟನಾಕಾರರು ಹಿಂಸಾಚಾರ ನಡೆಸಿದ್ದರು. ಘರ್ಷಣೆ ವೇಳೆ ಪತ್ರಕರ್ತರು ಸೇರಿದಂತೆ ಹತ್ತು ಮಂದಿ ಗಾಯಗೊಂಡಿದ್ದಾರೆ.
ದ್ವೀಪರಾಷ್ಟ್ರ ಶ್ರೀಲಂಕಾ ಪ್ರಸ್ತುತ ವಿದೇಶಿ ವಿನಿಮಯ ಕೊರತೆಯನ್ನು ಎದುರಿಸುತ್ತಿದೆ. ಇದು ಆಹಾರ, ಇಂಧನ, ವಿದ್ಯುತ್ ಮತ್ತು ಅನಿಲದ ಕೊರತೆಗೆ ಕಾರಣವಾಗಿದೆ. ಶ್ರೀಲಂಕಾದಲ್ಲಿ ಪ್ರತಿದಿನ ಕನಿಷ್ಠ 10 ಗಂಟೆಗಳ ಕಾಲ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಶ್ರೀಲಂಕಾದ ಕರೆನ್ಸಿ ಮಾರ್ಚ್ 8 ರಿಂದ US ಡಾಲರ್ ವಿರುದ್ಧ ಸುಮಾರು SLR 90ರಷ್ಟು ಅಪಮೌಲ್ಯಗೊಂಡಿದೆ.