Site icon Vistara News

ಹಿಂದು ದೇಗುಲದ ಅರ್ಚಕನ ಮನೆ ಮೇಲೆ ಗುಂಡಿನ ದಾಳಿ; ಖಲಿಸ್ತಾನಿಗಳಿಂದ ಕೃತ್ಯ?

Khalistan Flag

11 bullets fired at house of prominent Hindu temple chief's son in Canada's Surrey

ಒಟ್ಟಾವ: ಕೆನಡಾದಲ್ಲಿ ಹಿಂದು ದೇವಾಲಯಗಳ ಮೇಲೆ ದಾಳಿ, ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಖಲಿಸ್ತಾನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಭಾರತವು ಕೆನಡಾಗೆ ಆಗ್ರಹಿಸಿದ್ದಕ್ಕೆ ಪ್ರಧಾನಿ ಜಸ್ಟಿನ್‌ ಟ್ರುಡೋ ಅವರು ರಾಜತಾಂತ್ರಿಕ ಬಿಕ್ಕಟ್ಟು (India Canada Row) ಸೃಷ್ಟಿಸಿದ್ದಾರೆ. ಆದರೆ, ಕೆನಡಾದಲ್ಲಿ ಹಿಂದು ದೇವಾಲಯಗಳು, ಹಿಂದುಗಳ ಮೇಲೆ ದೌರ್ಜನ್ಯ, ದಾಳಿಗಳು ಮುಂದುವರಿದಿವೆ. ಇದಕ್ಕೆ ನಿದರ್ಶನ ಎಂಬಂತೆ ಕೆನಡಾದ ಸರ‍್ರೆಯಲ್ಲಿರುವ ಹಿಂದು ದೇವಾಲಯದ ಮುಖ್ಯ ಅರ್ಚಕರೊಬ್ಬರ ಮಗನ ಮನೆಯ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.

ಸರ‍್ರೆಯಲ್ಲಿರುವ ಹಿಂದು ದೇವಾಲಯದಲ್ಲಿ ಮುಖ್ಯ ಅರ್ಚಕರಾಗಿರುವವರ ಪುತ್ರನ ಮನೆಯ ಮೇಲೆ ದುಷ್ಕರ್ಮಿಗಳು 14 ಸುತ್ತು ಗುಂಡು ಹಾರಿಸಿದ್ದಾರೆ. ಅದೃಷ್ಟವಶಾತ್‌, ಮನೆಯಲ್ಲಿದ್ದ ಯಾರಿಗೂ ತೊಂದರೆಯಾಗಿಲ್ಲ. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ. ಲಕ್ಷ್ಮೀನಾರಾಯಣ ದೇವಾಲಯದ ಅಧ್ಯಕ್ಷರಾಗಿರುವ ಸತೀಶ್‌ ಕುಮಾರ್‌ ಅವರ ಪುತ್ರನ ಮನೆಯ ಮೇಲೆ ಡಿಸೆಂಬರ್‌ 27ರಂದು ಗುಂಡಿನ ದಾಳಿ ನಡೆದಿದೆ. ಇವರು ಪ್ರಮುಖ ಉದ್ಯಮಿಯೂ ಆಗಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಖಲಿಸ್ತಾನಿಗಳೇ ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಕಳೆದ ಆಗಸ್ಟ್‌ನಲ್ಲೂ ನಡೆದಿತ್ತು ದಾಳಿ

ಕಳೆದ ಆಗಸ್ಟ್‌ನಲ್ಲಿಯೂ ಸರ‍್ರೆಯಲ್ಲಿರುವ ಲಕ್ಷ್ಮೀನಾರಾಯಣ ದೇವಾಲಯದ ಮೇಲೆ ಖಲಿಸ್ತಾನಿ ಉಗ್ರರು ದಾಳಿ ನಡೆಸಿದ್ದರು. ಉಗ್ರರ ಕೃತ್ಯವು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. “ಜೂನ್‌ 18ರಂದು ಕೆನಡಾದಲ್ಲಿ ಹತ್ಯೆಗೀಡಾದ ಖಲಿಸ್ತಾನಿಗಳ ನಾಯಕ ಹರ್ದೀಪ್‌ ಸಿಂಗ್‌ ನಿಜ್ಜಾರ್‌ನ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ. ಇದರ ಕುರಿತು ಕೆನಡಾ ತನಿಖೆ ನಡೆಸುತ್ತದೆ” ಎಂಬ ಬರಹವುಳ್ಳ ಪೋಸ್ಟರ್‌ಅನ್ನು ದೇವಾಲಯದ ಗೇಟ್‌ಗೆ ಅಂಟಿಸಲಾಗಿತ್ತು.

ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯ

ಇದನ್ನೂ ಓದಿ: ಹಿಂದು ದೇಗುಲಗಳ ಬಗ್ಗೆ ಕೇರಳ ಸರ್ಕಾರದ ನಿರ್ಲಕ್ಷ್ಯ; ಶಬರಿಮಲೆಯಲ್ಲಿ ಸಮಸ್ಯೆಗಳ ಸರ’ಮಾಲೆ’

ಇದಕ್ಕೂ ಮೊದಲು ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಪ್ರಮುಖ ಹಿಂದು ದೇವಾಲಯವನ್ನು ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಕೆಲ ತಿಂಗಳ ಹಿಂದೆ ವಿರೂಪಗೊಳಿಸಿದ್ದರು. ದೇಗುಲದ ಗೋಡೆಗಳ ಮೇಲೆ ಭಾರತ ವಿರೋಧಿ ಬರಹಗಳನ್ನು ಬರೆಯುವ ಮೂಲಕ ಉದ್ಧಟತನದ ವರ್ತನೆ ತೋರಿದ್ದರು. ಕೃತ್ಯದ ಹಿಂದೆ ನಿಷೇಧಿತ ಭಯೋತ್ಪಾದಕ ಸಂಘಟನೆಯಾಗಿರುವ ಸಿಖ್ಸ್ ಫಾರ್ ಜಸ್ಟಿಸ್ (SFJ) ಮತ್ತು ಇತರ ಖಲಿಸ್ತಾನಿ ಗುಂಪುಗಳ ಕೈವಾಡವಿರಬಹುದು ಎಂದು ಶಂಕಿಸಲಾಗಿತ್ತು. ಎಸ್‌ಎಫ್‌ಜೆ ಸಂಘಟನೆಯು ಮಂದಿರವನ್ನು ವಿರೂಪಗೊಳಿಸಿದ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದೆ ಎಂದೂ ವರದಿಯಾಗಿದೆ. ಹಾಗೆಯೇ, ಇನ್ನೂ ಕೆಲ ತಿಂಗಳ ಹಿಂದೆ ಮಹಾತ್ಮ ಗಾಂಧೀಜಿಯವರ ಪ್ರತಿಮೆಯನ್ನು ಖಲಿಸ್ತಾನಿಗಳು ವಿರೂಪಗೊಳಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version