ಜಕಾರ್ತ: ಇಂಡೊನೇಷ್ಯಾದಲ್ಲಿ ಲೀಗ್ ಫುಟ್ಬಾಲ್ ಪಂದ್ಯವೊಂದರ ವೇಳೆ ಭುಗಿಲೆದ್ದ ಭಾರಿ ( Indonesia football riot) ಹಿಂಸಾಚಾರ ಮತ್ತು ಕಾಲ್ತುಳಿತಕ್ಕೆ ೧೩೦ ಮಂದಿ ಸಾವಿಗೀಡಾಗಿದ್ದಾರೆ. ವಿಶ್ವದ ಸ್ಟೇಡಿಯಂಗಳಲ್ಲೇ ನಡೆದ ಕರಾಳ ದುರಂತಗಳಲ್ಲಿ ಇದೂ ಒಂದಾಗಿದೆ.
ಪಂದ್ಯವನ್ನು ಸೋತ ತಂಡದ ಉದ್ರಿಕ್ತ ಅಭಿಮಾನಿಗಳು ಮೈದಾನಕ್ಕೆ ನುಗ್ಗಿ ಪಿಚ್ ಅನ್ನು ಹಾನಿ ಮಾಡಿದರು. ಬಳಿಕ ಉಂಟಾದ ಹಿಂಸಾಚಾರ ನಿಯಂತ್ರಿಸಲು ಪೊಲೀಸರು ಆಶ್ರುವಾಯು ಸಿಡಿಸಿದರು. ಆಗ ಸ್ಟೇಡಿಯಂನಲ್ಲಿದ್ದವರಿಗೆ ಉಸಿರಾಟದ ಸಮಸ್ಯೆ ಜತೆಗೆ ಕಾಲ್ತುಳಿತಕ್ಕೆ ಸಿಲುಕಿ ಕನಿಷ್ಠ 130 ಜನ ಸಾವಿಗೀಡಾದರು. 180 ಮಂದಿ ಗಾಯಗೊಂಡರು. ಇಂಡೊನೇಷ್ಯಾದ ಪೂರ್ವ ಜಾವಾದ ಪ್ರಾಂತ್ಯದಲ್ಲಿ ಈ ದುರ್ಘಟನೆ ನಡೆದಿದೆ.
ಆಗಿದ್ದೇನು?
ಪೂರ್ವ ಜಾವಾದ ಮಲಾಂಗ್ ಎಂಬಲ್ಲಿನ ಕಂಜುರುಹಾನ್ ಸ್ಟೇಡಿಯಂನಲ್ಲಿ ಅರೆಮಾ ಮತ್ತು ಪರ್ಸೆಬಯಾ ಸುರಬಯಾ ತಂಡಗಳ ನಡುವೆ ಫುಟ್ಬಾಲ್ ಪಂದ್ಯ ನಡೆದಿತ್ತು. ಪಂದ್ಯವನ್ನು ಪರ್ಸೆಬಯಾ ಸುರಬಯಾ ತಂಡ 3-2 ಗೋಲುಗಳ ಅಂತರದಿಂದ ಗೆದ್ದಿತು. ಇದರ ಬೆನ್ನಲ್ಲೇ ಅರೆಮಾ ತಂಡದ ಅಭಿಮಾನಿಗಳು ರೊಚ್ಚಿಗೆದ್ದು ಮೈದಾನಕ್ಕೆ ನುಗ್ಗಿ ದಾಂಧಲೆ ಎಬ್ಬಿಸಿದರು. ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಪೊಲೀಸರು ಘರ್ಷಣೆಯನ್ನು ನಿಯಂತ್ರಿಸಲು ಆಶ್ರುವಾಯು ಸಿಡಿಸಿದರು. ಆಗ ಆಮ್ಲಜನಕದ ಕೊರತೆಯಾಗಿ ಉಸಿರಾಟದ ಸಮಸ್ಯೆ ಉಂಟಾಗಿದ್ದರಿಂದ ಪ್ರೇಕ್ಷಕರು ಆತಂಕಗೊಂಡು ಸ್ಟೇಡಿಯಂನಿಂದ ಹೊರಗೆ ಹೋಗಲು ಯತ್ನಿಸಿದರು. ಸ್ಟೇಡಿಯಂನಿಂದ ಹೊರಗೆ ಹೋಗಲು ಇದ್ದ ಒಂದೇ ಗೇಟ್‌ನಲ್ಲಿ ನೂಕುನುಗ್ಗಲು ಸಂಭವಿಸಿತು. ಈ ಕಾಲ್ತುಳಿತಕ್ಕೆ ನೂರಾರು ಮಂದಿ ಪ್ರಾಣ ಕಳೆದುಕೊಂಡರು. 34 ಮಂದಿ ಸ್ಟೇಡಿಯಂನಲ್ಲಿ ಸಾವಿಗೀಡಾದರೆ, ಉಳಿದವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಸ್ಟೇಡಿಯಂನ ಸಾಮರ್ಥ್ಯಕ್ಕಿಂತಲೂ ಹೆಚ್ಚು ಮಂದಿ ಪ್ರೇಕ್ಷಕರು ಆಗಮಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಟೇಡಿಯಂನ ಸಾಮರ್ಥ್ಯ 38,000 ಜನರಿಗೆ ಆಗುವಷ್ಟು ಇತ್ತು. ಆದರೆ 42,000 ಟಿಕೆಟ್‌ಗಳು ಮಾರಾಟವಾಗಿತ್ತು. ಹಿಂಸಾಚಾರದಲ್ಲಿ 13 ವಾಹನಗಳು ಮತ್ತು 10 ಪೊಲೀಸ್ ಕಾರುಗಳು ಹಾನಿಗೀಡಾಗಿವೆ. ದುರ್ಘಟನೆಯ ಹಿನ್ನೆಲೆಯಲ್ಲಿ ಇಂಡೊನೇಷ್ಯಾ ಲೀಗ್ ಫುಟ್ಬಾಲ್ ಪಂದ್ಯಗಳನ್ನು ಒಂದು ವಾರ ನಿಷೇಧಿಸಲಾಗಿದೆ. ಇಂಡೊನೇಷ್ಯನ್ ಫುಟ್ಬಾಲ್ ಅಸೋಸಿಯೇಶನ್ ತನಿಖೆ ನಡೆಸಲಿದೆ.
೧೯೬೪ರಲ್ಲಿ ಪೆರು-ಅರ್ಜೆಂಟೀನಾ ನಡುವಣ ಒಲಿಂಪಿಕ್ ಫುಟ್ಬಾಲ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ನಡೆದ ಹಿಂಸಾಚಾರದಲ್ಲಿ 320 ಮಂದಿ ಸಾವಿಗೀಡಾಗಿದ್ದರು.