ಬೀಜಿಂಗ್: ಇದೇನಿದ್ದರೂ ಇಂಟರ್‌ನೆಟ್ ಹಾಗೂ ಸ್ಮಾರ್ಟ್‌ಫೋನ್‌ಗಳ ಕಾಲ. ಪುಟ್ಟ ಮಕ್ಕಳಿಂದ ಹಿಡಿದು ಯುವಕರವರೆಗೆ ಎಲ್ಲರ ಕೈಯಲ್ಲೂ ಸ್ಮಾರ್ಟ್‌ಫೋನ್‌ಗಳು ರಾರಾಜಿಸುತ್ತಿವೆ. ನಮಗೆ ಅನ್ನ, ಗಾಳಿ, ನೀರು ಹೇಗೆ ಮೂಲಭೂತ ಅವಶ್ಯಕತೆಯಾಗಿದೆಯೋ, ಮೊಬೈಲ್ ಕೂಡ ಮೂಲಭೂತ ಅವಶ್ಯಕತೆಯಾಗಿದೆ. ಅದರಲ್ಲೂ, ಮಕ್ಕಳಿಗಂತೂ ಸ್ಮಾರ್ಟ್‌ಫೋನ್ ಇಲ್ಲದೆ, ಮೊಬೈಲ್ ಗೇಮ್ಸ್ ಇಲ್ಲದೆ ಒಂದು ತುತ್ತು ಅನ್ನವೂ ಸೇರುವುದಿಲ್ಲ. ಹೀಗೆ, ಚೀನಾದಲ್ಲಿ 13 ವರ್ಷದ ಬಾಲಕಿಯೊಬ್ಬಳು ಮೊಬೈಲ್ ಗೇಮ್ಸ್‌ಗಾಗಿ 52 ಲಕ್ಷ ರೂಪಾಯಿ (4,49,500 Yuan) ವ್ಯಯಿಸಿದ್ದು, (Viral News) ಆಕೆಯ ತಾಯಿ ಬ್ಯಾಂಕ್ ಖಾತೆಯಲ್ಲಿ ಕೇವಲ 5 ರೂಪಾಯಿ ಉಳಿದಾಗಲೇ ಮಗಳು ಮಾಡಿದ ಉಪಟಳ ಗೊತ್ತಾಗಿದೆ.
ಕಳೆದ ನಾಲ್ಕು ತಿಂಗಳಿಂದ ಬಾಲಕಿಯು ಮೊಬೈಲ್‌ಗೆ ಅಡಿಕ್ಟ್ ಆಗಿದ್ದಾಳೆ. ಆಕೆಯ ತಾಯಿ ನೋಡಿದರೂ ಗದರಿ ಸುಮ್ಮನಾಗಿದ್ದಾರೆ. ಆದರೆ, ಶಾಲೆಯಲ್ಲಿ ಕೂತಾಗಲೂ ಬಾಲಕಿಯು ಮೊಬೈಲ್‌ನಲ್ಲೇ ಮಗ್ನಳಾಗಿರುವುದನ್ನು ಕಂಡ ಆಕೆಯ ಟೀಚರ್ ಪರಿಶೀಲನೆ ನಡೆಸಿದ್ದಾರೆ. ಆಗ, ಬಾಲಕಿಯು ಮೊಬೈಲ್ ಗೇಮ್ಸ್‌ಗೆ ಅಡಿಕ್ಟ್ ಆಗಿರುವುದು ಗೊತ್ತಾಗಿದೆ. ಕೂಡಲೇ ಟೀಚರ್ ಬಾಲಕಿಯ ತಾಯಿಗೆ ಮಾಹಿತಿ ನೀಡಿದ್ದು, ಆಕೆಯ ತಾಯಿಯು ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಆಘಾತ ಕಾದಿದೆ. ಅಕೌಂಟ್‌ನಲ್ಲಿ ಕೇವಲ ಐದು ರೂಪಾಯಿ ಉಳಿದಿದ್ದನ್ನು ನೋಡಿ ಆಘಾತವಾಗಿದೆ. ಕೊನೆಗೆ, ಬಾಲಕಿಯನ್ನು ಕೇಳಿದಾಗ ಹಣ ಖರ್ಚು ಮಾಡಿರುವ ಕುರಿತು ವಿವರಿಸಿದ್ದಾಳೆ.
52 ಲಕ್ಷ ರೂ. ಹೇಗೆ ಖರ್ಚಾಯಿತು?
ಕಳೆದ ನಾಲ್ಕು ತಿಂಗಳಿಂದಲೂ ಬಾಲಕಿಯು ಮೊಬೈಲ್ ಗೇಮ್ಸ್‌ಗಳಲ್ಲಿಯೇ ಮಗ್ನಳಾಗಿದ್ದಾಳೆ. ಅಲ್ಲದೆ, ತನ್ನ 10 ಕ್ಲಾಸ್‌ಮೇಟ್‌ಗಳಿಗಾಗಿಯೂ ಮೊಬೈಲ್ ಗೇಮ್ಸ್ ಖರೀದಿಸಿದ್ದಾಳೆ. 13 ಲಕ್ಷ ರೂಪಾಯಿಯನ್ನು ಮೊಬೈಲ್ ಗೇಮ್ಸ್ ಖರೀದಿಸಲು ವ್ಯಯಿಸಿದರೆ, 24 ಲಕ್ಷ ರೂಪಾಯಿಯನ್ನು ಇನ್-ಗೇಮ್ ಖರೀದಿಗೆ ಖರ್ಚು ಮಾಡಿದ್ದಾಳೆ. ತನ್ನ ಮೊಬೈಲ್ ಅಲ್ಲದೆ, ತನ್ನ 10 ಗೆಳತಿಯರಿಗೂ ಮೊಬೈಲ್ ಗೇಮ್ಸ್ ಖರೀದಿಸಲು 11 ಲಕ್ಷ ರೂಪಾಯಿ ವ್ಯಯಿಸಿದ್ದಾಳೆ. ಹೀಗೆ, ನಾಲ್ಕು ತಿಂಗಳಲ್ಲಿ ಬರೋಬ್ಬರಿ 52 ಲಕ್ಷ ರೂಪಾಯಿಯನ್ನು ಮೊಬೈಲ್ ಗೇಮ್ಸ್‌ಗಾಗಿಯೇ ವ್ಯಯಿಸಿದ್ದಾಳೆ ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: Adipurush Movie: ತಿರುಪತಿ ದೇವಸ್ಥಾನದಲ್ಲೇ ಕೃತಿ ಸನೂನ್‌ಗೆ ಕಿಸ್ ಮಾಡಿದ ನಿರ್ದೇಶಕ; ವಿಡಿಯೊ ವೈರಲ್!
ತನ್ನ ತಾಯಿಯು ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಬಳಸಿ ಹೇಗೆ ಮೊಬೈಲ್‌ನಲ್ಲಿ ಬಿಲ್ ಪಾವತಿಸುತ್ತಾರೆ ಎಂಬುದನ್ನು ಬಾಲಕಿಯು ನೋಡಿದ್ದಾಳೆ. ಹಾಗೆಯೇ, ಪಾಸ್‌ವರ್ಡ್ ಕೂಡ ತಿಳಿದುಕೊಂಡಿದ್ದಾಳೆ. ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಬಳಸಿ ಮೊಬೈಲ್ ಗೇಮ್ಸ್ ಖರೀದಿಸುವುದನ್ನೇ ರೂಢಿ ಮಾಡಿಕೊಂಡಿದ್ದಾಳೆ. ಕೊನೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾಳೆ. ಇದರಿಂದಾಗಿ ಆಘಾತಕ್ಕೀಡಾಗಿರುವ ಬಾಲಕಿಯ ತಾಯಿಯು ಯಾವುದೇ ಕಾರಣಕ್ಕೂ ಮಗಳಿಗೆ ಮೊಬೈಲ್ ಕೊಡದಿರಲು ತೀರ್ಮಾನಿಸಿದ್ದಾರಂತೆ. ನೀವು ಕೂಡ ನಿಮ್ಮ ಮಕ್ಕಳು ಮೊಬೈಲ್‌ಅನ್ನು ಅತಿಯಾಗಿ ಬಳಸುತ್ತಿದ್ದರೆ ಹುಷಾರಾಗಿರಿ.