ಅಂಕಾರ: ಪ್ರಬಲ ಭೂಕಂಪದಿಂದ (Turkey Earthquake) ಟರ್ಕಿ ಹಾಗೂ ಸಿರಿಯಾ ಈಗ ಮಸಣದಂತಾಗಿವೆ. ಇದುವರೆಗೆ ಮೃತಪಟ್ಟವರ ಸಂಖ್ಯೆ ೨೮ ಸಾವಿರ ದಾಟಿದೆ. ನೂರಾರು ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿದವರ ರಕ್ಷಣೆ ಕಾರ್ಯ ಮುಂದುವರಿದಿದೆ. ಆದಾಗ್ಯೂ, ಹಲವಾರು ಗಂಟೆಗಳ ಕಾಲ ಅವಶೇಷಗಳ ಅಡಿ ಸಿಲುಕಿದ ಕೆಲವೇ ಕೆಲವರು ಬದುಕುಳಿದಿದ್ದಾರೆ. ಇದೇ ರೀತಿ, ಅವಶೇಷಗಳ ಅಡಿಯಲ್ಲಿ ಐದು ದಿನ ಅಂದರೆ ೧೨೮ ಗಂಟೆ ಇದ್ದ ಎರಡು ತಿಂಗಳ ಹಸುಗೂಸೊಂದು ಪವಾಡಸದೃಶವಾಗಿ ಬದುಕುಳಿದಿದೆ.
“ಟರ್ಕಿಯ ಹತಾಯ್‌ನ ಕಟ್ಟಡದ ಅವಶೇಷಗಳಿಂದ ಶನಿವಾರ ಮಗುವನ್ನು ರಕ್ಷಿಸಲಾಗಿದೆ. ಅದು ಬದುಕುಳಿದಿದ್ದು, ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಗುವಿನ ತಂದೆ-ತಾಯಿ ಯಾರು ಸೇರಿ ವಿವಿಧ ಮಾಹಿತಿ ಲಭ್ಯವಾಗಿಲ್ಲ. ಆದರೆ, ತಾಯಿಯ ಹಾಲು ಇಲ್ಲದೆ ಮಗು ಐದು ದಿನ ಬದುಕುಳಿದಿದ್ದು ಎಲ್ಲರಿಗೂ ಅಚ್ಚರಿ ತಂದಿದೆ.
ಹತಾಯ್ ಪ್ರಾಂತ್ಯದ ಅಂಕಾಯ ಜಿಲ್ಲೆಯಲ್ಲೂ ಅವಶೇಷಗಳ ಅಡಿಯಲ್ಲೇ ೧೪೦ ಗಂಟೆಗಳಿಂದ ಇದ್ದ ೭ ತಿಂಗಳ ಮಗುವೊಂದನ್ನು ಸಿಬ್ಬಂದಿಯು ರಕ್ಷಿಸಿದ್ದಾರೆ. ಹೀಗೆ, ಗರ್ಭಿಣಿಯರು, ವಯಸ್ಸಾದವರು, ಮಕ್ಕಳನ್ನು ಅವಶೇಷಗಳಿಂದ ಹೊರತೆಗೆಯಲಾಗುತ್ತಿದೆ. ಆದರೆ, ಬದುಕುಳಿದವರ ಸಂಖ್ಯೆ ತುಂಬ ಕಡಿಮೆ ಇದೆ.
ಇದನ್ನೂ ಓದಿ: Earthquake In Turkey: ಟರ್ಕಿ ಭೂಕಂಪದಲ್ಲಿ ಬೆಂಗಳೂರು ಮೂಲದ ಟೆಕ್ಕಿ ಸಾವು, ಅವಶೇಷಗಳ ಅಡಿಯಲ್ಲಿ ಶವ ಪತ್ತೆ