ವಾಷಿಂಗ್ಟನ್, ಅಮೆರಿಕ: ಒಂದು ವೇಳೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದರೆ, ಅಮೆರಿಕನ್ನು ದ್ವೇಷಿಸುವ ರಾಷ್ಟ್ರಗಳಿಗೆ ನೀಡಲಾಗುತ್ತಿರುವ ಪ್ರತಿ ಪೈಸೆಯನ್ನು ತಡೆ ಹಿಡಿಯಲಾಗುವುದು. ಅನುದಾನ ಸ್ಥಗಿತ ರಾಷ್ಟ್ರಗಳ ಪಟ್ಟಿಯಲ್ಲಿ ಚೀನಾ, ಪಾಕಿಸ್ತಾನ ಮತ್ತು ಇತರ ಎದುರಾಳಿ ರಾಷ್ಟ್ರಗಳು ಇರಲಿವೆ. ಏಕೆಂದರೆ ಬಲಿಷ್ಠ ಅಮೆರಿಕವು ಕೆಟ್ಟ ರಾಷ್ಟ್ರಗಳಿಗೆ ಹಣವನ್ನು ನೀಡುವುದಿಲ್ಲ ಎಂದು ಅಮೆರಿಕದ ಗ್ರ್ಯಾಂಡ್ ಓಲ್ಡ್ ಪಾರ್ಟಿ ಎನಿಸಿರುವ ರಿಪಬ್ಲಿಕ್ ಪಾರ್ಟಿಯ ನಾಯಕಿ ಹಾಗೂ ಅಮೆರಿಕ ಅಧ್ಯಕ್ಷ ಅಭ್ಯರ್ಥಿಯಾಗಲಿರುವ, ಭಾರತೀಯ ಮೂಲದ ನಿಕ್ಕಿ ಹ್ಯಾಲೆ (Nikki Haley) ಹೇಳಿದ್ದಾರೆ(2024 United States elections:).
ನಮ್ಮನ್ನು(ಅಮೆರಿಕ) ದ್ವೇಷಿಸುವ ರಾಷ್ಟ್ರಗಳಿಗೆ ನೀಡಲಾಗುತ್ತಿರುವ ಪ್ರತಿ ಪೈಸೆಯನ್ನು ತಡೆ ಹಿಡಿಯಲಾಗುವುದು. ಶಕ್ತಿ ಶಾಲಿ ಅಮೆರಿಕವು ಕೆಟ್ಟ ವ್ಯಕ್ತಿಗಳಿಗೆ ಹಣ ನೀಡುವುದಿಲ್ಲ. ಹೆಮ್ಮೆಯ ಅಮೆರಿಕ ತನ್ನ ಜನರ ಕಠಿಣ ಪರಿಶ್ರಮದ ಹಣವನ್ನು ಪೋಲು ಮಾಡುವುದಿಲ್ಲ. ನಮ್ಮ ನಂಬಿಕೆಗೆ ಅರ್ಹರಾದ ನಾಯಕರು ಮಾತ್ರ ನಮ್ಮ ಶತ್ರುಗಳನ್ನು ಎದುರಿಸುತ್ತಾರೆ ಮತ್ತು ನಮ್ಮ ಸ್ನೇಹಿತರ ಪಕ್ಕದಲ್ಲಿರುತ್ತಾರೆ ಎಂದು ನಿಕ್ಕಿ ಹ್ಯಾಲೆ ಅವರು ನ್ಯೂಯಾರ್ಕ್ ಪೋಸ್ಟ್ ಪತ್ರಿಕೆಗೆ ಬರೆದ ಅಂಕಣದಲ್ಲಿ ತಿಳಿಸಿದ್ದಾರೆ. ವಿಶ್ವ ಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿಯಾಗಿದ್ದ ನಿಕ್ಕಿ ಹ್ಯಾಲೆ ಅವರು ರಿಪಬ್ಲಿಕ್ ಪಾರ್ಟಿಯಿಂದ ಮುಂದಿನ ವರ್ಷ ನಡೆಯಲಿರುವ ಅಮೆರಿಕ ಅಧ್ಯಕ್ಷ ಎಲೆಕ್ಷನ್‌ಗೆ ಸ್ಪರ್ಧಿಸುವ ನಿರ್ಧಾರ ಮಾಡಿದ್ದಾರೆ.
ಅಮೆರಿಕ ಕಳೆದ ವರ್ಷ 46 ಬಿಲಿಯನ್ ಡಾಲರ್ ಹಣವನ್ನು ವಿದೇಶಗಳಿಗೆ ಅನುದಾನ ನೀಡಿದೆ. ಇದು ಈವರೆಗೆ ಯಾವುದೇ ದೇಶ ನೀಡಿದ ಅತ್ಯಧಿಕ ಮೊತ್ತವಾಗಿದೆ. ಈ ಹಣ ಎಲ್ಲಿಗೆ ಹೋಗುತ್ತಿದೆ ಮತ್ತು ಯಾತಕ್ಕಾಗಿ ಬಳಕೆಯಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ತೆರಿಗೆದಾರರಿಗೆ ಇದೆ. ಆದರೆ, ಈ ಮಾಹಿತಿ ಗೊತ್ತಾದರೆ, ಅವರಿಗೆ ಶಾಕ್ ಆಗಲಿದೆ. ಯಾಕೆಂದರೆ, ಈ ಎಲ್ಲ ಹಣವು ಅಮೆರಿಕವನ್ನು ದ್ವೇಷಿಸುವ ರಾಷ್ಟ್ರಗಳಿಗೆ ಹೋಗುತ್ತಿದೆ ಎಂದು ನಿಕ್ಕಿ ಹ್ಯಾಲೆ ಅವರು ತಮ್ಮ ಲೇಖನದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Nikki Haley: ಅಧ್ಯಕ್ಷೀಯ ಚುನಾವಣೆಯಲ್ಲಿ ನಾನೇ ರಿಪಬ್ಲಿಕನ್ ಅಭ್ಯರ್ಥಿ, ಟ್ರಂಪ್‌ಗೆ ಭಾರತ ಮೂಲದ ನಿಕ್ಕಿ ಹ್ಯಾಲೆ ಸವಾಲು
2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗಾಗಿ ರಿಪಬ್ಲಿಕ್ ಪಾರ್ಟಿಯ ನಿಕ್ಕಿ 15 ರಂದು ತಮ್ಮ ಪ್ರಚಾರವನ್ನು ಆರಂಭಿಸಿದ್ದಾರೆ. ಬ್ಯಾಲೆಟ್ ಬಾಕ್ಸ್‌ನಲ್ಲಿ ಗೆಲ್ಲಬಹುದಾದ ರಿಪಬ್ಲಿಕನ್ ನಾಯಕರ “ಹೊಸ ತಲೆಮಾರಿನ” ಭಾಗವಾಗಿ ಮತದಾರರಿಗೆ ತನ್ನನ್ನು ತಾನು ಪರಿಚಯಿಸಿಕೊಂಡರು. ಈ ಮೂಲಕ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರಿಗೂ ಅವರು ತೀವ್ರ ಸ್ಪರ್ಧೆಯನ್ನು ಒಡ್ಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.