Site icon Vistara News

ತೈವಾನ್‌ ವಾಯು ವಲಯಕ್ಕೆ ಚೀನಾದ 21 ಯುದ್ಧ ವಿಮಾನಗಳ ಅತಿಕ್ರಮಣ

nancy pelosi

ತೈಪೆ: ಅಮೆರಿಕದ ಜನಪ್ರತಿನಿಧಿ ಸಭೆಯ (House of Representatives) ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಅವರು ತೈವಾನ್‌ಗೆ ಮಂಗಳವಾರ ರಾತ್ರಿ ಭೇಟಿ ನೀಡಿದ್ದಾರೆ. ಇದೇ ಕಾರಣಕ್ಕೆ ಚೀನಾ ಕಿಡಿ ಕಾರಿದೆ. ಮಾತ್ರವಲ್ಲದೆ ಚೀನಾದ ೨1 ಮಿಲಿಟರಿ ವಿಮಾನಗಳು ತನ್ನ ವಾಯು ವಲಯವನ್ನು ಅತಿಕ್ರಮಿಸಿ ಹಾರಾಟ ನಡೆಸಿವೆ ಎಂದು ತೈವಾನ್‌ ತಿಳಿಸಿದೆ. ಈ ನಡುವೆ ಉತ್ತರಕೊರಿಯಾ ಕೂಡ ಪೆಲೋಸಿ ಆಗಮನವನ್ನು ಖಂಡಿಸಿದೆ.

ಕಳೆದ ೨೫ ವರ್ಷಗಳಲ್ಲಿ ಮೊದಲ ಬಾರಿಗೆ ಅಮೆರಿಕದ ಉನ್ನತ ಮಟ್ಟದ ಪ್ರತಿನಿಧಿಯೊಬ್ಬರು ತೈವಾನ್‌ಗೆ ಭೇಟಿ ನೀಡಿದಂತಾಗಿದೆ. ಆದರೆ ಈ ಭೇಟಿಗೆ ಚೀನಾ ಕೆರಳಿದೆ. ಇದರಿಂದ ತೈವಾನ್‌ನಲ್ಲಿ ಶಾಂತಿ ಸ್ಥಾಪನೆಗೆ ಧಕ್ಕೆಯಾಗಲಿದೆ ಎಂದಿದೆ. ಬೀಜಿಂಗ್‌ನಲ್ಲಿ ಅಮೆರಿಕದ ರಾಯಭಾರಿಗೆ ಚೀನಾ ಸಮನ್ಸ್‌ ಜಾರಿಗೊಳಿಸಿದೆ. ಆದರೆ ತೈವಾನ್‌ ಜತೆ ಅಮೆರಿಕದ ಮೈತ್ರಿ ಮತ್ತು ಬದ್ಧತೆಯನ್ನು ದೃಢಪಡಿಸಲು ಈ ಭೇಟಿಯ ಅಗತ್ಯ ಇತ್ತು. ವಿಶ್ವಾದ್ಯಂತ ಪ್ರಜಾಪ್ರಭುತ್ವ ವ್ಯವಸ್ಥೆಯ ರಕ್ಷಣೆಗೆ ಅಮೆರಿಕ ಬದ್ಧವಾಗಿದೆ ಎಂದು ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಹೇಳಿದ್ದಾರೆ.

ಪೆಲೋಸಿ ವಿರುದ್ಧ ಚೀನಾ ಸಿಟ್ಟೇಕೆ?: ಮೊದಲಿನಿಂದಲೂ ನ್ಯಾನ್ಸಿ ಪೆಲೋಸಿ ಅವರು ಚೀನಾ ವಿರುದ್ಧ ನಿಲುವನ್ನು ಹೊಂದಿದ್ದರು. ಚೀನಾ ಒಲಿಂಪಿಕ್ಸ್‌ ಆಯೋಜಿಸುವುದನ್ನು ವಿರೋಧಿಸಿದ್ದರು. ಚೀನಾ ವಿರುದ್ಧ ಕಠಿಣ ವ್ಯಾಪಾರ ನೀತಿಯನ್ನು ಬೆಂಬಲಿಸಿದ್ದರು. ಚೀನಾದಲ್ಲಿ ರಾಜಕೀಯ ಖೈದಿಯಾಗಿದ್ದ ಲೇಖಕ, ಚಿಂತಕ ಲಿಯು ಕ್ಸಿಯಾಬೊಗೆ ನೊಬೆಲ್‌ ಬಹುಮಾನವನ್ನು ನೀಡಿದಾಗ, ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಪೆಲೋಸಿ ಅವರು ಹೋಗಿದ್ದರು. ಚೀನಾದಲ್ಲಿ ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿದೆ ಎಂಬುದು ಪೆಲೋಸಿ ಅವರ ಗಂಭೀರ ಆರೋಪ.

ತೈವಾನ್‌ ನನ್ನದೇ ಎಂದ ಚೀನಾ: ಸ್ವಯಮಾಡಳಿಯ, ಪ್ರಜಾಪ್ರಭುತ್ವ ಮಾದರಿಯ ತೈವಾನ್‌ ತನ್ನ ಭೂಭೂಗವಾಗಿದ್ದು, ದ್ವೀಪ ರಾಷ್ಟ್ರವನ್ನು ಅಗತ್ಯ ಇದ್ದರೆ ಮುಂದೊಂದು ದಿನ ವಶಪಡಿಸಿಕೊಳ್ಳುವುದಾಗಿ ಚೀನಾ ಬೆದರಿಕೆ ಒಡ್ಡಿದೆ.

Exit mobile version