ಬೀಜಿಂಗ್: ಚೀನಾದ ಮತ್ತೊಂದು ರಾಕೆಟ್ (Chinese Rocket) ಬಾಹ್ಯಾಕಾಶದಲ್ಲಿ ನಿಯಂತ್ರಣ ತಪ್ಪಿದ್ದು, ಭೂಮಿಗೆ ಅಪ್ಪಳಿಸಲಿರುವ ಕಾರಣ ಜಗತ್ತಿನ ಹಲವೆಡೆ ಆತಂಕ ಸೃಷ್ಟಿಯಾಗಿದೆ. ಕಳೆದ ಅಕ್ಟೋಬರ್ 31ರಂದು ಚೀನಾ ಉಡಾವಣೆ ಮಾಡಿದ ಲಾಂಗ್ ಮಾರ್ಚ್ 5ಬಿ ರಾಕೆಟ್ ಭೂಮಿಗೆ ಅಪ್ಪಳಿಸಲಿದೆ. ಕಳೆದ ಎರಡು ವರ್ಷಗಳಲ್ಲಿ ಬಾಹ್ಯಾಕಾಶದಲ್ಲಿ ನಿಯಂತ್ರಣ ತಪ್ಪಿ ಭೂಮಿಗೆ ಅಪ್ಪಳಿಸುತ್ತಿರುವ ನಾಲ್ಕನೇ ರಾಕೆಟ್ ಇದಾಗಿದೆ. ಹಾಗಾಗಿ, ವಿಶ್ವದ ಮಟ್ಟದಲ್ಲಿ ಕಮ್ಯುನಿಸ್ಟ್ ರಾಷ್ಟ್ರಕ್ಕೆ ಮುಖಭಂಗವಾದಂತಾಗಿದೆ.
ರಾಕೆಟ್ ಗಾತ್ರ ಸೃಷ್ಟಿಸಿದೆ ಆತಂಕ
ಲಾಂಗ್ ಮಾರ್ಚ್ 5ಬಿ ರಾಕೆಟ್ ಬೃಹತ್ ಗಾತ್ರ ಹೊಂದಿರುವ ಕಾರಣ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಆತಂಕ ಸೃಷ್ಟಿಸಿದೆ. ರಾಕೆಟ್ 22,500 ಕೆಜಿ (22.5 ಮೆಟ್ರಿಕ್ ಟನ್) ತೂಕ ಹೊಂದಿದೆ. ಇದು ಸುಮಾರು 10 ಮಹಡಿ ಕಟ್ಟಡದಷ್ಟು ಗಾತ್ರ ಹೊಂದಿರುವುದರಿಂದ ಆತಂಕ ಹೆಚ್ಚಾಗುವಂತೆ ಮಾಡಿದೆ. ಇಷ್ಟು ಗಾತ್ರದ ರಾಕೆಟ್ ಬಿದ್ದರೆ ಸಾವಿರಾರು ಜನರ ಪ್ರಾಣಕ್ಕೆ ಕುತ್ತು ಬರಲಿದೆ ಎಂದೇ ಹೇಳಲಾಗುತ್ತಿದೆ.
ಎಲ್ಲಿ, ಯಾವಾಗ ಬೀಳಲಿದೆ?
ಬಾಹ್ಯಾಕಾಶದಲ್ಲಿ ರಾಕೆಟ್ ನಿಯಂತ್ರಣ ತಪ್ಪಿದೆ ಎಂಬ ಮಾಹಿತಿಯಷ್ಟೇ ಲಭ್ಯವಾಗಿದ್ದು, ಇದು ಯಾವ ರಾಷ್ಟ್ರದಲ್ಲಿ ಬೀಳಲಿದೆ ಎಂಬ ಕುರಿತು ತಿಳಿದುಬಂದಿಲ್ಲ. ಹಾಗಾಗಿಯೇ ಆತಂಕ ಹೆಚ್ಚಾಗಿದೆ. ಇದರ ಭೀತಿಯಿಂದಾಗಿ ಸ್ಪೇನ್‌ನಲ್ಲಿ ಹತ್ತಾರು ವಿಮಾನ ನಿಲ್ದಾಣಗಳನ್ನು ಸ್ಥಗಿತಗೊಳಿಸಲಾಗಿದೆ. ಹಾಗೆಯೇ, ಇದು ಯಾವ ಕ್ಷಣದಲ್ಲಿ ಬೇಕಾದರೂ ಭೂಮಿಗೆ ಅಪ್ಪಳಿಸಬಹುದು, ಇಂತಹದ್ದೇ ಸಮಯದಲ್ಲಿ ಅಪ್ಪಳಿಸಲಿದೆ ಎಂಬ ಕುರಿತು ಮಾಹಿತಿ ತಿಳಿದುಬಂದಿಲ್ಲ.
ಇದನ್ನೂ ಓದಿ | ರಾಕೆಟ್ ಉಡಾಯಿಸುವಷ್ಟು ಶಕ್ತಿಶಾಲಿ ಜೈವಿಕ ಇಂಧನ ಬ್ಯಾಕ್ಟೀರಿಯಾದಿಂದ ಸೃಷ್ಟಿ