ಸೌದಿ ಅರೇಬಿಯಾದ ನೈಋತ್ಯ ಭಾಗದಲ್ಲಿ ಇಂದು ಬೆಳಗ್ಗೆ ಭಯಂಕರ ಅಪಘಾತವಾಗಿದೆ. ಹಜ್ ಯಾತ್ರಿಕರನ್ನು ಒಳಗೊಂಡಿದ್ದ ಬಸ್ ಸೇತುವೆಯೊಂದಕ್ಕೆ ಡಿಕ್ಕಿ ಹೊಡೆದು, ಪಲ್ಟಿಯಾದ ಬಳಿಕ ಬೆಂಕಿ ಹೊತ್ತಿ ಉರಿದಿದೆ. ಅದರ ಪರಿಣಾಮ 20 ಮಂದಿ ಮೃತಪಟ್ಟಿದ್ದು, 29 ಯಾತ್ರಿಕರು ಗಾಯಗೊಂಡಿದ್ದಾರೆ. ಯೆಮೆನ್ ದೇಶದ ಗಡಿಗೆ ಹೊಂದಿಕೊಂಡಿರುವ ಸೌಧಿ ಅರೇಬಿಯಾದ ಆಸಿರ್ ಪ್ರಾಂತ್ಯದ ಬಳಿ ಬಸ್ ಹೋಗುತ್ತಿತ್ತು. ಈ ಬಸ್ ತುಂಬ ಪ್ರಯಾಣಿಕರು ಇದ್ದರು. ಮಾರ್ಗಮಧ್ಯೆ ಸೇತುವೆಯೊಂದರ ಬಳಿ ಬಸ್ ಬ್ರೇಕ್ ಫೇಲ್ ಆಗಿ ಅಪಘಾತವಾಗಿದೆ. ಬಸ್ ಸುಟ್ಟು ಬೂದಿಯಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ: Youth drowned: ಕಲಬುರಗಿಗೆ ಪ್ರವಾಸಕ್ಕೆ ಬಂದಿದ್ದ ಬೀದರ್ ಯುವಕ ನೀರುಪಾಲು; ಕೊಪ್ಪಳದಲ್ಲಿ ಬಸ್ ಅಪಘಾತಕ್ಕೆ ವ್ಯಕ್ತಿ ಬಲಿ
ಮುಸ್ಲಿಂ ಜನಾಂಗದವರಿಗೆ ಈಗ ಪವಿತ್ರ ರಂಝಾನ್ ತಿಂಗಳಾಗಿದ್ದು, ವಿವಿಧ ದೇಶಗಳಿಂದ ಮೆಕ್ಕಾ-ಮದೀನಾ ಯಾತ್ರೆಗಾಗಿ ಸೌದಿ ಅರೇಬಿಯಾಕ್ಕೆ ತೆರಳಿದವರು ಇದ್ದರು. ಇದೀಗ ಮೃತಪಟ್ಟವರಲ್ಲಿ ವಿದೇಶಿ ಯಾತ್ರಿಕರೂ ಇದ್ದಾರೆ. ಆದರೆ ಇನ್ನೂ ಎಲ್ಲರ ಗುರುತೂ ಪತ್ತೆಯಾಗಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಪ್ರತಿವರ್ಷವೂ ಈ ಸಮಯದಲ್ಲಿ ಮೆಕ್ಕಾ-ಮದೀನಾಕ್ಕೆ ಭೇಟಿ ಕೊಡುವವರ ಸಂಖ್ಯೆ ಹೆಚ್ಚಿರುತ್ತದೆ. ವಾಹನ ಸಂಚಾರವೂ ಅಧಿಕವಾಗಿದ್ದು ವಿಪರೀತ ಟ್ರಾಫಿಕ್ ಜಾಮ್ ಕೂಡ ಆಗುತ್ತದೆ. ಅದರಲ್ಲೂ ಇತ್ತೀಚೆಗಿನ ವರ್ಷಗಳಲ್ಲಿ ಹಜ್ ಯಾತ್ರಿಕರ ಸಂಖ್ಯೆಯಲ್ಲೂ ಏರಿಕೆಯಾಗಿದೆ.
ಈ ಹಿಂದೆ 2019ರ ಅಕ್ಟೋಬರ್ ತಿಂಗಳಲ್ಲಿ ಕೂಡ ಇಂಥದ್ದೇ ಒಂದು ಭಯಾನಕ ಅಪಘಾತವಾಗಿತ್ತು. ಮದೀನಾದ ಬಳಿಯೇ ಬಸ್ವೊಂದು ಮತ್ತೊಂದು ಭಾರಿ ವಾಹನಕ್ಕೆ ಡಿಕ್ಕಿಯಾಗಿ 35 ಮಂದಿ ಮೃತಪಟ್ಟಿದ್ದರು. ನಾಲ್ಕು ಮಂದಿ ಗಾಯಗೊಂಡಿದ್ದರು.