ತೆಹ್ರಾನ್: ಇನ್ನೂ 22ರ ಹರೆಯದ, ಚೆಂದನೆಯ ಇರಾನಿ ಹುಡುಗಿ ಮಹ್ಸಾ ಅಮಿನಿ ಹಿಜಾಬ್ ಧರಿಸಿಲ್ಲ ಎಂಬ ಕಾರಣಕ್ಕೆ ಆಕೆಯನ್ನು ಇರಾನ್ ಸರ್ಕಾರದ ಭಾಗವಾಗಿರುವ ಧಾರ್ಮಿಕ ನೈತಿಕ ಪೊಲೀಸರು ಬಂಧಿಸಿದ್ದು, ನಂತರ ಪೊಲೀಸ್ ಕಸ್ಟಡಿಯಲ್ಲಿ ಇರುವಾಗಲೇ ಆಕೆ ತೀವ್ರ ಅಸ್ವಸ್ಥಗೊಂಡು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು ವಿಶ್ವಕ್ಕೇ ಗೊತ್ತಿದೆ. ಸೆಪ್ಟೆಂಬರ್ 16ರಂದು ಮಹ್ಸಾ ಮೃತಪಟ್ಟ ಲಾಗಾಯ್ತಿನಿಂದಲೂ ಇರಾನ್ನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಬುರ್ಖಾ, ಹಿಜಾಬ್ ಮತ್ತು ನೈತಿಕ ಪೊಲೀಸ್ಗಿರಿ ವಿರೋಧಿಸುತ್ತಿರುವ ಪ್ರತಿಭಟನಾಕಾರರು, ಮಹ್ಸಾ ಸಾವಿಗೆ ನ್ಯಾಯ ಕೇಳುತ್ತಿದ್ದಾರೆ. ಪೊಲೀಸರು ಹಲ್ಲೆ ನಡೆಸಿದ್ದರಿಂದಲೇ ಮಹ್ಸಾ ಸಾವನ್ನಪ್ಪಿದ್ದಾಳೆ ಎಂದು ಬಲವಾಗಿ ಪ್ರತಿಪಾದಿಸುತ್ತಿದ್ದಾರೆ. ಹಾಗೇ, ಅಲ್ಲಿನ ಸೆಕ್ಯೂರಿಟಿ ಫೋರ್ಸ್ ಸಿಬ್ಬಂದಿ ಗುಂಡಿಗೆ ಅನೇಕರು ಬಲಿಯಾಗುತ್ತಿದ್ದಾರೆ.
ಹೀಗೆ ಎರಡು ತಿಂಗಳ ಪ್ರತಿಭಟನೆ ಅವಧಿಯಲ್ಲಿ ಮಡಿದವರೆಷ್ಟು ಮಂದಿ ನಾಗರಿಕರು ಎಂಬುದನ್ನು ಇರಾನ್ ಮಾನವ ಹಕ್ಕುಗಳ ನಿರ್ದೇಶಕ ಮಹಮೂದ್ ಅಮಿರಿ-ಮೊಗದ್ದಮ್ ಹೇಳಿದ್ದಾರೆ. 47 ಮಕ್ಕಳು ಸೇರಿ ಒಟ್ಟು 378 ಮಂದಿ ಇರಾನ್ನ ಸೆಕ್ಯೂರಿಟಿ ಪಡೆಗಳ ದಬ್ಬಾಳಿಕೆಗೆ ಹತ್ಯೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಇದರಲ್ಲಿ ಇರಾನ್-ಪಾಕಿಸ್ತಾನ ಗಡಿಯಲ್ಲಿರುವ ಸಿಸ್ತಾನ್-ಬಲೂಚಿಸ್ತಾನ್ ಪ್ರಾಂತ್ಯದಲ್ಲಿ 123 ಮಂದಿ, ಕುರ್ದಿಸ್ತಾನ್ ಹಾಗೂ ತೆಹ್ರಾನ್ ಸೇರಿ 40 ಮಂದಿ ಮತ್ತು ಪಶ್ಚಿಮ ಅಜೆರ್ಬೈಜಾನ್ ಪ್ರಾಂತ್ಯದಲ್ಲಿ 39 ಮಂದಿ ಸಾವನ್ನಪ್ಪಿದ್ದಾರೆ ಎಂದೂ ಹೇಳಿದ್ದಾರೆ.
ಇನ್ನು ಮುಂದಿನ ವಾರ ಯುಎನ್ ಮಾನವ ಹಕ್ಕುಗಳ ಮಂಡಳಿ ಸಭೆ ನಡೆಯಲಿದ್ದು, ಅದರಲ್ಲಿ ಇರಾನ್ ಆಡಳಿತ ಈ ಪ್ರತಿಭಟನೆ ವಿಚಾರದಲ್ಲಿ ಸುಳ್ಳು ಹೇಳಿ, ತಾನು ಪಾರಾಗುವ ಪ್ರಯತ್ನದಲ್ಲಿದೆ. ಅದಕ್ಕಾಗಿ ಸುಳ್ಳು ಅಭಿಯಾನವನ್ನೂ ಪ್ರಾರಂಭಿಸುತ್ತಿದೆ. ಈ ಬಗ್ಗೆ ಎಚ್ಚರಿಕೆ ಇರಬೇಕು ಎಂದೂ ಮಹಮೂದ್ ಅಮಿರಿ-ಮೊಗದ್ದಮ್ ತಿಳಿಸಿದ್ದಾರೆ.
ಇದನ್ನೂ ಓದಿ: ಕೇರಳದಲ್ಲಿ ಹಿಜಾಬ್ ಸುಟ್ಟು ಹಾಕಿದ ಮುಸ್ಲಿಂ ಮಹಿಳೆಯರು, ಇರಾನ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ